ಮೈಸೂರು : ಕೆಲ ದಿನಗಳ ಹಿಂದೆ ಬೆಂಕಿಗೆ ಆಹುತಿಯಾಗಿದ್ದ ಮೈಸೂರಿನ ರಾಜೀವ್ ನಗರದಲ್ಲಿರುವ ಪುಸ್ತಕ ಪ್ರೇಮಿ ಸೈಯದ್ ಇಸಾಕ್ ಅವರ ಗ್ರಂಥಾಲಯದ ಮರು ನಿರ್ಮಾಣಕ್ಕೆ ದಾನಿಗಳಿಂದ ಸಂಗ್ರಹವಾಗಿದ್ದ 28 ಲಕ್ಷ ರೂಪಾಯಿಯನ್ನು ದಾನಿಗಳಿಗೆ ವಾಪಾಸ್ ನೀಡಲು ನಿರ್ಧಾರಿಸಲಾಗಿದೆ.
ಕಿಡಿಗೇಡಿಗಳಿಂದ ಗ್ರಂಥಾಲಯ ಸುಟ್ಟು ಹೋದ ದಿನವೇ ಸಾರ್ವಜನಿಕರಿಂದ ಭಾರೀ ಆಕ್ರೋಶ ಕೇಳಿ ಬಂದಿತ್ತು. ಎಲ್ಲೆಡೆಯಿಂದ ಜನ ಪುಸ್ತಕ ಪ್ರೇಮಿಯ ನೆರವಿಗೆ ಧಾವಿಸಿದ್ದರು. ಅದೇ ದಿನ ಇನ್ಫೋಸಿಸ್ ಕಂಪೆನಿಯಲ್ಲಿ ಸಾಫ್ಟ್ ವೇರ್ ಎಂಜಿನಿಯರ್ ಆಗಿರುವ ಫತೇನ್ ಮಿಸ್ಬಾ ಎಂಬುವವರು, ಸೈಯದ್ ಅವರ ನೆರವಿಗಾಗಿ ‘ಕೆಟ್ಟೊ’ ಎಂಬ ವೆಬ್ ತಾಣದಲ್ಲಿ ಕ್ರೌಡ್ ಫಂಡಿಂಗ್ ನ್ನು ಪ್ರಾರಂಭಿಸಿದ್ದರು. ಫತೇನ್ ಅವರ ಅಭಿಯಾನಕ್ಕೆ ದೇಶ – ವಿದೇಶಗಳಿಂದ ಸುಮಾರು 1,800 ಕ್ಕೂ ಅಧಿಕ ಮಂದಿ ಕೈ ಜೋಡಿಸಿ ದೇಣಿಗೆ ನೀಡಿ, 28 ಲಕ್ಷದ್ದಷ್ಟು ಹಣ ಜಮೆ ಆಗಿತ್ತು.
ಇದನ್ನೂ ಓದಿ : ಚಿತ್ರರಂಗದ ಕಾರ್ಮಿಕರಿಗೆ ‘ಉಚಿತ ಕೋವಿಡ್ ಲಸಿಕೆ ಅಭಿಯಾನ’ ಪ್ರಾರಂಭಿಸಿದ ನಟ ಚಿರಂಜೀವಿ
ಈ ಘಟನೆ ಬೆಳಕಿಗೆ ಬರುತ್ತಿದ್ದಂತೆ ಮೈಸೂರಿನ ಪಾಲಿಕೆ ಸೇರಿದಂತೆ ಸ್ಥಳೀಯ ಇಲಾಖೆ ಗ್ರಂಥಾಲಯವನ್ನು ಮರು ನಿರ್ಮಿಸುವ ಹೊಣೆಯನ್ನು ಗ್ರಂಥಾಲಯ ಸಮಿತಿಗೆ ನೀಡಿತ್ತು. ಸರ್ಕಾರವೇ ಖುದ್ದಾಗಿ ಗ್ರಂಥಾಲಯವನ್ನು ಮರು ನಿರ್ಮಿಸುವ ಮಾತು ಕೊಟ್ಟ ಮೇಲೆ ಸಂಗ್ರಹವಾದ ದೇಣಿಗೆ ಬಗ್ಗೆ ಸಾರ್ವಜನಿಕ ವಲಯದಲ್ಲಿ ಹಲವು ಚರ್ಚೆಗಳು ಎದ್ದವು. ಈ ಕಾರಣಕ್ಕೆ ಫಂಡ್ ರೈಸ್ ಆರಂಭಿಸಿದ್ದ ಫತೇನ್ ಮಿಸ್ಬಾ ಸರ್ಕಾರ ಜವಾಬ್ದಾರಿ ವಹಿಸಿಕೊಂಡಿರುವಾಗ ಸಾರ್ವಜನಿಕರಿಂದ ಸಂಗ್ರಹವಾದ ದೇಣಿಗೆಯನ್ನು ವಾಪಾಸ್ ನೀಡಲು ನಿರ್ಧಾರಿಸಿದ್ದಾರೆ.
ಫಂಡ್ ರೈಸ್ ಆರಂಭಿಸಿದ್ದ ಕೆಲವೇ ದಿನಗಳೊಳಗೆ ಸುಮಾರು 28 ಲಕ್ಷ ರೂಪಾಯಿ ದೇಣಿಗೆ ಸಂಗ್ರಹವಾಗಿತ್ತು. ಸಾರ್ವಜನಿಕ ಅಭಿಪ್ರಾಯವನ್ನು ಗೌರವಿಸಿ ಈ ನಿರ್ಧಾರವನ್ನು ಕೈಗೊಳ್ಳುತ್ತಿದ್ದೇನೆ ಎನ್ನುತ್ತಾರೆ ಫತೇನ್ ಮಿಸ್ಬಾ.