Advertisement

ಮೈಸೂರಲ್ಲಿ ಅರೆ ಸೇನಾಪಡೆ ಯೋಧರ ಗಸ್ತು

01:01 PM Apr 16, 2018 | |

ಮೈಸೂರು: ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡಿರುವ ಹಿನ್ನೆಲೆಯಲ್ಲಿ ಕಣಕ್ಕಿಳಿಯುವ ಅಭ್ಯರ್ಥಿಗಳ ಮತಬೇಟೆ ಜೋರಾಗಿದ್ದು, ಅದರ ಬೆನ್ನಲ್ಲೆ ಚುನಾವಣಾ ಭದ್ರತೆಗೆಂದು ಆಗಮಿಸಿರುವ ಅರೆ ಸೇನಾಪಡೆಯ ಯೋಧರು ಮೈಸೂರು ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿ ಭಾನುವಾರ ಪಥ ಸಂಚಲನ ನಡೆಸಿದರು.

Advertisement

ಚುನಾವಣೆ ಸಂದರ್ಭದಲ್ಲಿ ಮತದಾರರಿಗೆ ಬೆದರಿಸಿ, ವಿವಿಧ ಆಮಿಷವೊಡ್ಡುವ ಸಾಧ್ಯತೆ ಹಿನ್ನೆಲೆಯಲ್ಲಿ ಹಲವು ಕ್ಷೇತ್ರಗಳಲ್ಲಿ ಪಥ ಸಂಚಲನ ನಡೆಸಿದ ಅರೆ ಸೇನಾಪಡೆ ಯೋಧರು, ಮತದಾರರೇ ನಿಮ್ಮೊಂದಿಗೆ ನಾವಿದ್ದೇವೆ ಎಂಬ ಸಂದೇಶ ಸಾರಿದರು. ನಗರದ ಚಾಮರಾಜ ಕ್ಷೇತ್ರದಿಂದ ಆರಂಭಗೊಂಡ ಪಥ ಸಂಚಲನ, ಕೆ.ಆರ್‌.ಕ್ಷೇತ್ರ, ಎನ್‌.ಆರ್‌.ಕ್ಷೇತ್ರ ವ್ಯಾಪ್ತಿಯ ಹಲವು ಬಡಾವಣೆಗಳಲ್ಲಿ ಸಂಚರಿಸಿತು.

ಸ್ಥಳೀಯ ಪೊಲೀಸ್‌ ಠಾಣೆಯ ಗರುಡ, ಪಿಸಿಆರ್‌ ಹಾಗೂ ನಗರ ಪೊಲೀಸ್‌ ಇಲಾಖೆಯ ವಜ್ರ ವಾಹನದ ಬೆಂಗಾವಲಿನಲ್ಲಿ ಸಂಚರಿಸಿದ ಪಥ ಸಂಚಲನದಲ್ಲಿ, ಬಿಎಸ್‌ಎಫ್, ಸಶಸ್ತ್ರ ಸೀಮಾ ಬಲ್‌(ಎಸ್‌ಎಸ್‌ಬಿ), ಇಂಡೋ-ಟಿಬೆಟಿಯನ್‌ ಬಾರ್ಡರ್‌ ಪೊಲೀಸ್‌(ಐಟಿಬಿಪಿ), ರ್ಯಾಪಿಡ್‌ ಆಕ್ಷನ್‌ ಪೋರ್ಸ್‌(ಆರ್‌ಎಎಪ್‌) ಸಿಬ್ಬಂದಿ ತಮ್ಮ ವಾಹನಗಳಲ್ಲಿ ಕುಳಿತು ವಿವಿಧ ರಸ್ತೆಗಳಲ್ಲಿ ಸಂಚರಿಸಿದರು.

ಮಾರ್ಗದುದ್ದಕ್ಕೂ ಸ್ಥಳೀಯ ಪೊಲೀಸ್‌ ಠಾಣೆಗಳಿಗೆ ತೆರಳಿ ಮತದಾರರ ಪಟ್ಟಿ, ಸಂಖ್ಯೆ, ಮತಗಟ್ಟೆಗಳ ಸಂಖ್ಯೆಯ ಬಗ್ಗೆ ಮಾಹಿತಿ ಸಂಗ್ರಹಿಸಿದರು. ನಗರದ ಚಾಮರಾಜ ಜೋಡಿ ರಸ್ತೆ, ನಜರ್‌ಬಾದ್‌, ಟೆರೆಷಿಯನ್‌ ಕಾಲೇಜು, ಅಗ್ರಹಾರ, ಲಕ್ಷ್ಮೀಪುರಂ, ಕುವೆಂಪುನಗರ, ಪಡುವಾರಹಳ್ಳಿ, ಒಂಟಿಕೊಪ್ಪಲ್‌, ಜಯಲಕ್ಷ್ಮೀಪುರಂ, ಗೋಕುಲಂ, ವಿಜಯನಗರ, ಹಿನಕಲ್‌, ಇಲವಾಲ ಸೇರಿದಂತೆ ವಿವಿಧೆಡೆ ಸಂಚರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next