Advertisement

ಬಂದ್ ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರೀಯೆ: ಮಾರುಕಟ್ಟೆಗಳನ್ನು ಮುಚ್ಚಿಸಿದ ಪ್ರತಿಭಟನಾಕಾರರು

12:56 PM Dec 08, 2020 | sudhir |

ಮೈಸೂರು: ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಳ್ಳುವಂತೆ ಆಗ್ರಹಿಸಿ ರೈತರು ನಡೆಸುತ್ತಿರುವ ಭಾರತ್‌ ಬಂದ್‌ಗೆ ಮೈಸೂರಿನಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಬಂದ್‌ಗೆ ಹಲವು ಸಂಘಟನೆಗಳು ಸಂಪೂರ್ಣ ಹಾಗೂ ಕೆಲ ಸಂಘಟನೆಗಳು ನೈತಿಕ ಬೆಂಬಲ ವ್ಯಕ್ತಪಡಿಸಿವೆ.

Advertisement

ನಗರದಲ್ಲಿ ಇಂದು (ಮಂಗಳವಾರ) ಬೆಳಗ್ಗೆ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ರೈತರು ರಸ್ತೆಗಿಳಿದು ಪ್ರತಿಭಟನೆ ನಡೆಸಿದರು. ಆದರೆ, ಮೈಸೂರು ಗ್ರಾಮಾಂತರ ಬಸ್‌ ನಿಲ್ದಾಣದಲ್ಲಿ ಬಸ್‌ಗಳು ಸಂಚಾರ ಆರಂಭಿಸಿದ್ದವು. ಇದೇ ಭಾಗದಲ್ಲಿ ಪೊಲೀಸ್‌ ಬಿಗಿ ಬಂದೋಬಸ್ತ್‌ ನಿಯೋಜಿಸಲಾಗಿತ್ತು.

ಕೆಲಹೊತ್ತಿನ ನಂತರ ರೈತರು ವಿವಿಧ ಸಂಘಟನೆಗಳ ಬೆಂಬಲದೊಂದಿಗೆ ಬೀದಿಗಳಿದು ಪ್ರತಿಭಟನೆ ನಡೆಸಲು ಮುಂದಾದರು. ಅಲ್ಲದೇ, ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ಹೊರಟು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಬೆಳಗ್ಗೆ ದೇವರಾಜ ಮಾರುಕಟ್ಟೆ, ಸಂತೆಪೇಟೆ ಮಾರುಕಟ್ಟೆಗಳು ತೆರೆದಿದ್ದವು. ಜನರು ಸಹ ವ್ಯಾಪಾರ ಚಟುವಟಿಕೆ ನಡೆಸಿದರು. ನಂತರ ರೈತರು ಪ್ರತಿಭಟನೆ ನಡೆಸಿ, ತೆರೆದಿದ್ದ ಮಾರುಕಟ್ಟೆ, ಅಂಗಡಿ ಮುಂಗಟ್ಟುಗಳನ್ನು ಬಲವಂತವಾಗಿ ಮುಚ್ಚಿಸಿದರು.

ಪ್ರತಿಭಟನೆ ವೇಳೆ ರೈತರು ಇರ್ವಿನ್ ರಸ್ತೆ, ಅಶೋಕ ರಸ್ತೆ ಮೂಲಕ ಟೌನ್‌ಹಾಲ್‌ಗೆ ಮೆರವಣಿಗೆ ಹೊರಟರು. ಈ ಮಾರ್ಗಗಳಲ್ಲಿ ತೆರೆದಿದ್ದ ಅಂಗಡಿ-ಮುಂಗಟ್ಟುಗಳನ್ನು ಮುಚ್ಚಿಸಿದರು. ದೇವರಾಜ ಮಾರುಕಟ್ಟೆಗೂ ಲಗ್ಗೆಯಿಟ್ಟ ರೈತರು ಬಂದ್‌ ಮಾಡಿಸಿದರು.

Advertisement

ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದಿಂದ ಮೆರವಣಿಗೆ ಹೊರಟ ರೈತರು ನಗರದ ಪ್ರಮುಖ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದರು.

ಇದನ್ನೂ ಓದಿ:ಯೋಗಾ ನಿರೋಗ : ಪ್ರತಿ ನಿತ್ಯ ಉತ್ಕಟಾಸನ ಮಾಡುವುದರಿಂದ ಆಗುವ ಪ್ರಯೋಜನಗಳೇನು ?

ಬಂದ್‌ ಹಿನ್ನೆಲೆಯಲ್ಲಿ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಬಸ್‌ಗಳ ಮಾರ್ಗಗಳಲ್ಲಿ ಬದಲಾವಣೆಯಾಗಿದೆ. ಅಲ್ಲದೇ, ಚಾಮರಾಜನಗರ, ನಂಜನಗೂಡು, ಕೆ.ಆರ್.ನಗರ, ಹುಣಸೂರು ಕಡೆಗಳಿಗೆ ಬಸ್‌ಗಳ ಸಂಚಾರ ಎಂದಿನಂತಿದೆ.

ರೈತರ ಹೋರಾಟಕ್ಕೆ ಬೆಂಬಲ ಸೂಚಿಸುವಂತೆ RKS ಸಂಘಟನೆಯವರು ಬಸ್ ನಿಲ್ದಾಣದಲ್ಲಿ ಕರಪತ್ರ ಹಂಚಿದರು. ರೈತರ ಬೇಡಿಕೆಗಳಿರುವ ಕರಪತ್ರಗಳನ್ನು ಹಂಚಿ ಬೆಂಬಲ ಸೂಚಿಸುವಂತೆ ಮನವಿ ಮಾಡಿದರು.

ಕಾರ್ಮಿಕ ದಲಿತ ಐಕ್ಯ ಹೋರಾಟ ಸಮಿತಿ, ಪ್ರಗತಿಪರರ ಒಕ್ಕೂಟ, ಕನ್ನಡ ಪರ ಸಂಘಟನೆಗಳು, ಕಬ್ಬು ಬೆಳೆಗಾರರ ಸಂಘ, ಎಪಿಎಂಸಿ ಮಂಡಿ ಮಾಲೀಕರ ಸಂಘ, ರೈತ ಸಂಘಟನೆಗಳು, ಸಿಪಿಐ, ಸಿಪಿಐಎಂ, ಎಐಟಿಯುಸಿ ಸೇರಿದಂತೆ ವಿವಿಧ ಕಾರ್ಮಿಕ ಸಂಘಟನೆಗಳು, ಜಿಲ್ಲಾ ಕಾಂಗ್ರೆಸ್‌ ಘಟಕ, ಮೈಸೂರು-ಚಾಮರಾಜನಗರ ಒಕ್ಕಲಿಗ ಸಂಘ ಮೊದಲಾದ ಸಂಘಟನೆಗಳು ಭಾರತ್‌ ಬಂದ್‌ಗೆ ಸಂಪೂರ್ಣ ಬೆಂಬಲ ಸೂಚಿಸಿವೆ.

ಹೋಟೆಲ್‌ ಮಾಲೀಕರ ಸಂಘ, ಟ್ಯಾಕ್ಸಿ, ಆಟೋ ಚಾಲಕರ ಸಂಘ, ಮಾರುಕಟ್ಟೆ ವ್ಯಾಪಾರಿಗಳ ಸಂಘ ನೈತಿಕ ಬೆಂಬಲ ಸೂಚಿಸಿವೆ.

ರೈತರು ಹೆಚ್ಚಿನ ಸಂಖ್ಯೆಯಲ್ಲಿ ಜಮಾವಣೆಗೊಂಡು ಭಾರೀ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಯತ್ತ ತೆರಳುತ್ತಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next