ಹುಣಸೂರು: ತಂಬಾಕಿಗೆ ಉತ್ತಮ ಬೆಲೆ ಜೊತೆಗೆ ದಂಡವನ್ನು ಶೇ.5ಕ್ಕೆ ಇಳಿಸಲು ಕ್ರಮ, ಬೆಂಗಳೂರಿನ ತಂಬಾಕು ಮಂಡಳಿ ಹರಾಜು ನಿರ್ದೇಶಕರ ಕಚೇರಿ ಮೈಸೂರಿಗೂ, ಪ್ರಾದೇಶಿಕ ನಿರ್ದೇಶಕರ ಕಚೇರಿಯನ್ನು ಹುಣಸೂರಿಗೆ ಸ್ಥಳಾಂತರಿಸಲು ಹಾಗೂ ಕನ್ನಡಿಗ ನಿರ್ದೇಶಕರ ನೇಮಕಕ್ಕೆ ಕ್ರಮವಹಿಸಲು ಸಭೆಯಲ್ಲಿ ನಿರ್ಣಯ ಕೈಗೊಂಡರು.
ತಂಬಾಕು ಮಂಡಳಿ ಅಧ್ಯಕ್ಷ ರಘುನಾಥಬಾಬುರ ಅಧ್ಯಕ್ಷತೆಯಲ್ಲಿ ತಾಲೂಕಿನ ಕಟ್ಟೆಮಳಲವಾಡಿಯ ತಂಬಾಕು ಹರಾಜು ಮಾರುಕಟ್ಟೆಯಲ್ಲಿ ನಡೆದ ತಂಬಾಕು ಬೆಳೆಗಾರರ ಸಭೆಯಲ್ಲಿ ಮಾತನಾಡಿದ ಅವರು ಎಲ್ಲ ಬೆಳೆಗಳು ಕೈಕೊಟ್ಟಿದ್ದು, ತಂಬಾಕು ಬೆಳೆ ಮಾತ್ರ ಕೈ ಹಿಡಿಯಲಿದೆ. ಕಳೆದ ವರ್ಷ ಶೇ.80ರಷ್ಟು ಕಡಿಮೆ ದರ್ಜೆಯ ತಂಬಾಕಿತ್ತು, ಈ ಬಾರಿ ಉತ್ತಮ ಗುಣಮಟ್ಟದ ತಂಬಾಕು ಉತ್ಪಾದನೆಯಾಗಿದೆ ಎಂಬ ಮಾಹಿತಿ ಇದೆ. ಉತ್ಪಾದನಾ ವೆಚ್ಚ ಹೆಚ್ಚುತ್ತಿದೆ ಎಂಬ ಅರಿವಿದೆ. ಅ.30ರಂದು ಟ್ರೇರ‍್ಸ್ ಸಭೆ ನಡೆಸಿ. ಉತ್ತಮ ಸರಾಸರಿ ಬೆಲೆ ಕೊಡಿಸಲು ಸೂಚಿಸುವೆ.
ಅನಧಿಕೃತ ಬೆಳೆಗಾರರಿಗೆ ವಿಧಿಸುತ್ತಿರುವ ಶೇ.10ರಷ್ಟಿದ್ದು, ಶೇ.5ಕ್ಕೆ ಇಳಿಸಲಾಗುವುದು. ತಿಂಗಳಿಗೊಮ್ಮೆ ವಾರವಿಡೀ ಇಲ್ಲೇ ಇದ್ದು, ಮಾರುಕಟ್ಟೆಯ ಸ್ಥಿತಿಗತಿಯನ್ನು ಪರಿಶೀಲಿಸುವೆ. ಬೆಳೆಗಾರರ ಬೇಡಿಕೆಯಂತೆ ಸ್ಪಂದಿಸದ ಹರಾಜು ನಿರ್ದೇಶಕಿಯ ವರ್ಗಾವಣೆ ಹಾಗೂ ಕನ್ನಡದ ನಿರ್ದೇಶಕರ ನೇಮಕದ ಜವಾಬ್ದಾರಿಯನ್ನು ಸಂಸದರಿಗೆ ವಹಿಸಿದ್ದು. ಸಬ್ಸಿಡಿ ದರದಲ್ಲಿ ಊಟ ನೀಡಲು ಕ್ರಮವಹಿಸಲಾಗುವುದೆಂದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಬೆಲೆ ಏರಿಳಿತದಿಂದ ತಂಬಾಕು ಬೆಳೆಗಾರ ಸಂಕಷ್ಟದಲ್ಲಿದ್ದಾನೆ. ಉತ್ತಮ ಬೆಲೆ ಕೊಡಿಸಲು ಮಂಡಳಿಯೇ ಹೆಚ್ಚಿನ ಜವಾಬ್ದಾರಿ ಹೊರಬೇಕು. ಮಾರುಕಟ್ಟೆಯ ಸಮಸ್ತ ಸಮಸ್ಯೆಗಳ ಅರಿವಿರುವುದು ಮಾರುಕಟ್ಟೆ ಅಧಿಕಾರಿಗಳಿಗೆ ಮಾತ್ರ ತಿಳಿದಿರುತ್ತದೆ. ಆದರೆ ಯಾರೊಬ್ಬರೂ ಬಾಯಿ ಬಿಡುತ್ತಿಲ್ಲ. ಇವರು ಬೆಳೆಗಾರರ ಪರ ನಿಲ್ಲುವ ತನಕ ಸಮಸ್ಯೆ ಇದ್ದದ್ದೆ. ಇದಕ್ಕಾಗಿ ವಿದೇಶಿ ಕಂಪನಿಗಳು ಮಾರುಕಟ್ಟೆಯಲ್ಲಿ ನೇರ ಪ್ರವೇಶ ಮಾಡುವಂತೆ ಕ್ರಮವಹಿಸಬೇಕು. ಶುದ್ದ ಕುಡಿಯುವ ನೀರಿನಂತ ಮೂಲಭೂತ ಸೌಲಭ್ಯ ಒದಗಿಸಲು ಆಗುತ್ತಿಲ್ಲ. ಘಟಕ ಸ್ಥಾಪಿಸಲು ಶಾಸಕರ ನಿಧಿಯಿಂದ 5ಲಕ್ಷ ರೂ. ನೀಡಿ ನಾಲ್ಕು ವರ್ಷವಾಗಿದ್ದರೂ ಇನ್ನೂ ಅಳವಡಿಸಿಲ್ಲವೆಂದು, ಕನಿಷ್ಟ ಬೆಳೆಗಾರರು ನೀಡುವ ತೆರಿಗೆ ಹಣದಲ್ಲೇ ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ ಕಡಿಮೆ ದರದಲ್ಲಿ ಊಟ ನೀಡುವ ಸೌಲಭ್ಯ ಕಲ್ಪಿಸಬೇಕೆನ್ನುವ ಇರಾದೆ ಮಂಡಳಿಗಿಲ್ಲವೆ ಎಂದು ಆಕ್ರೋಶ ವ್ಯಕ್ತಪಡಿಸಿ. ಹರಾಜು ನಿರ್ದೇಶಕಿಯನ್ನು ವರ್ಗಾವಣೆಗೊಳಿಸಿ ಆ ಸ್ಥಾನಕ್ಕೆ ತಾಯಿ ಹೃದಯದ ರೈತಪರವಾದ ಕನ್ನಡಿಗ ಅಧಿಕಾರಿಯನ್ನು ನೇಮಿಸಲು ಕ್ರಮವಹಿಸಬೇಕು. ಜೊತೆಗೆ ಪ್ರತಿವರ್ಷ ಮಂಡಳಿಯ ಎಲ್ಲ ವ್ಯವಹಾರದ ಲೆಕ್ಕಪತ್ರದ ಬಗ್ಗೆ ಶ್ವೇತಪತ್ರ ಹೊರಡಿಸಿ. ಪ್ರತಿ ಮಾರುಕಟ್ಟೆಯಲ್ಲೂ ಪ್ರದರ್ಶಿಸಬೇಕು. ದಂಡ ಹಾಕುವುದನ್ನು ನಿಲ್ಲಿಸಬೇಕೆಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು.
ಶಾಸಕ ಸಾ.ರಾ.ಮಹೇಶ್ ಮಾತನಾಡಿ ಮಂಡಳಿ ಅಧಿಕಾರಿಗಳು ಸ್ಥಳೀಯ ಶಾಸಕರನ್ನು ನಿರ್ಲಕ್ಷಿಸುತ್ತೀರಾ. ಕನಿಷ್ಟ ಸಭೆಗೂ ಆಹ್ವಾನಿಸಲ್ಲ. ಮಂಡಳಿಯ ನಿರ್ಧಾರಗಳಲ್ಲಿ ಸಂಸದರ ಪಾತ್ರ ಹೆಚ್ಚಿದೆ. ಇಲ್ಲಿನ ಸಂಸದರು ಸ್ಪಂದಿಸುತ್ತಿದ್ದರೆ, ಸಂಸದೆ ಸುಮಲತಾ ಮಾತ್ರ ತಲೆ ಕೆಡಿಸಿಕೊಂಡಿಲ್ಲ. ಐಟಿಸಿ ಕಂಪನಿಯು ಇತರೆ ಸಣ್ಣಪುಟ್ಟ ಕಂಪನಿಗಳನ್ನು ನಿಯಂತ್ರಣದಲ್ಲಿಟ್ಟುಕೊಂಡು ದೊಡ್ಡಪ್ಪನಂತೆ ವರ್ತಿಸುವುದು ಬಿಟ್ಟು. ತಂಬಾಕಿಗೆ ಉತ್ತಮ ಬೆಲೆ ಕೊಡಿಸುವಲ್ಲಿ ಪ್ರಮುಖ ಪಾತ್ರವಹಿಸಬೇಕೆಂದರು.
ಇದನ್ನೂ ಓದಿ:Breaking News : ಬೆಳಗಾವಿಯಲ್ಲಿ ದುರಂತ : ಮನೆ ಕುಸಿದು 7 ಜನ ದುರ್ಮರಣ
ಸಂಸದ ಪ್ರತಾಪಸಿಂಹ ಮಾತನಾಡಿ ಮಂಡಳಿ ಅಧ್ಯಕ್ಷರು, ನನ್ನ ಗಮನಕ್ಕೂ ತಾರದೆ ಅಧಿಕಾರಿಗಳು ಕಂಪಲಾಪುರ ಮಾರುಕಟ್ಟೆ ಬಂದ್ ಮಾಡಿದ್ದಾರೆಂದು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿ, ಕೆ.ಆರ್.ನಗರ ತಾಲೂಕಿನ ಬೆಳೆಗಾರರ ಬೇಡಿಕೆಯಂತೆ ಪಕ್ಕದ ಚಿಲ್ಕುಂದ ಮಾರುಕಟ್ಟೆಯಲ್ಲೇ ಮಾರಾಟ ಮಾಡಲು ಅವಕಾಶ ಕಲ್ಪಿಸಲು ಅಧ್ಯಕ್ಷರು ಒಪ್ಪಿದ್ದಾರೆ. ರೈತ ವಿರೋಧಿ ಹರಾಜು ನಿರ್ದೇಶಕಿಯನ್ನು ಶೀಘ್ರದಲ್ಲೇ ವರ್ಗಾಯಿಸಲಾಗುವುದು. ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ ಸಬ್ಸಿಡಿ ರೂಪದಲ್ಲಿ ಊಟ ನೀಡುವ ವ್ಯವಸ್ಥೆ ಜಾರಿಗೆ ತರಲಾಗುವುದು. ತಾವು ಸಂಸದನಾದ ನಂತರ ನೆನೆಗುದಿಗೆ ಬಿದ್ದಿದ್ದ ಲೈಸನ್ಸ್ ರಿನೀವಲ್ ಮಾಡಿಸಲಾಗಿದೆ. ರಸಗೊಬ್ಬರ ಪೂರೈಕೆಗೆ ಕ್ರಮವಹಿಸಿದ್ದೇನೆ. ದಂಡ ಕಡಿಮೆ ಮಾಡಿಸಿದ್ದೇನೆಂದರು.
ಐ.ಟಿ.ಸಿ.ಕಂಪನಿಯ ಲೀಫ್ ಮ್ಯಾನೆಜರ್ ಶ್ರೀನಿವಾಸ್ ಮಾತನಾಡಿ ತಂಬಾಕು ಬೆಳೆಗಾರರ ಸಮಸ್ಯೆ ಅರಿವಿದ್ದು, ಇಲ್ಲಿನ ತಂಬಾಕಿಗೆ ಸಾಕಷ್ಟು ಬೇಡಿಕೆ ಇದ್ದು. ಶೇ.೫೦ರಷ್ಟು ತಂಬಾಕನ್ನು ಐಟಿಸಿಯೇ ಖರೀದಿಸಲಿದೆ. ಇತರೆ ಕಂಪನಿಗಳ ಜೊತೆಯೂ ಚರ್ಚಿಸಿ ಉತ್ತಮ ಬೆಲೆಕೊಡಿಸಲು ಮುಂದಾಗುತ್ತೇನೆಂದರು.
ಸಭೆಯಲ್ಲಿ ರೈತ ಮುಖಂಡರಾದ ನಾಗರಾಜಪ್ಪ, ವಕೀಲಮೂರ್ತಿ, ಚಂದ್ರೇಗೌಡ, ಎಚ್.ಡಿ.ಕೋಟೆಯ ಬಸವರಾಜು, ಜಗದೀಶ್, ಚನ್ನೇಗೌಡ, ಅಶೋಕ, ಗೋವಿಂದಯ್ಯ, ನಂಜುಂಡೇಗೌಡ, ಸೀರೇನಹಳ್ಳಿಬಸವರಾಜೇಗೌಡ, ಶೃಂಗಾರ್, ಮೋದೂರುಮಹೇಶ್, ಪ್ರಭಾಕರ್, ಆಂಜನೇಯ, ಶ್ರೀಧರ್ ಸೇರಿದಂತೆ ಅನೇಕರು ಸಂಬಾಕು ಸಮಸ್ಯೆಗಳ ಬಗ್ಗೆ ಪ್ರತಿಬಿಂಬಿಸಿ ಉತ್ತಮ ಬೆಲೆ ನೀಡುವಂತೆ ಕೋರಿದರು.
ಸಭೆಯಲ್ಲಿ ಆರ್.ಎಂ.ಓ.ಮಾರಣ್ಣ, ಹರಾಜು ಅಧೀಕ್ಷಕರಾದ ವಿಜಯಕುಮಾರ್, ಸವಿತಾ ಸೇರಿದಂತೆ ಮಂಡಳಿಯ ಅಧಿಕಾರಿಗಳು ಸಿಬ್ಬಂದಿಗಳು ಹಾಗೂ ಸಾವಿರಕ್ಕೂ ಹೆಚ್ಚು ಬೆಳೆಗಾರರು ಭಾಗವಹಿಸಿದ್ದರು.