Advertisement

ದಸರಾ ಹಬ್ಬದ ವೇಳೆಗೆ ರಸ್ತೆ ಗುಂಡಿ ಮುಚ್ಚಿ

01:41 PM Sep 13, 2022 | Team Udayavani |

ಮೈಸೂರು: ನಾಡಹಬ್ಬ ಮೈಸೂರು ದಸರಾ ಆರಂಭಕ್ಕೂ ಮುನ್ನವೇ ರಸ್ತೆ ಗುಂಡಿಗಳನ್ನು ಮುಚ್ಚುವಂತೆ ನಗರ ಪಾಲಿಕೆ ಅಧಿಕಾರಿಗಳಿಗೆ ಮೇಯರ್‌ ಶಿವಕುಮಾರ್‌ ಸೂಚಿಸಿದರು.

Advertisement

ಮೇಯರ್‌ ಆಗಿ ಅಧಿಕಾರ ವಹಿಸಿಕೊಂಡ ಬಳಿಕ ಸೋಮವಾರ ಅಧಿಕಾರಿಗಳ ಮೊದಲ ಸಭೆ ನಡೆಸಿ ಮಾತನಾಡಿದ ಅವರು, ನಗರದ ಬಹುತೇಕ ರಸ್ತೆಗಳು ಗುಂಡಿ ಬಿದ್ದಿವೆ. ಕೆಲವು ಕಡೆ ಶಾಸಕರ ಅನುದಾನಿಂದ ಕಾಮಗಾರಿ ಆರಂಭವಾಗಿವೆ. ನವೆಂಬರ್‌ವರೆಗೆ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ತಿಂಗಳ ಕೊನೇ ವಾರದಲ್ಲಿ ದಸರಾ ಆರಂಭಗೊಳ್ಳಲಿದೆ. ಹಾಳಾಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸುವ ಸವಾಲು ನಮ್ಮ ಮೇಲಿದೆ. ತಕ್ಷಣಕ್ಕೆ ದಸರಾ ಆರಂಭಕ್ಕೂ ಮುನ್ನವೇ ಗುಂಡಿ ಮುಚ್ಚಲು ಕ್ರಮವಹಿಸಬೇಕು ಎಂದು ಹೇಳಿದರು. ಈ ಸಂಬಂಧ ಪ್ರತಿಕ್ರಿಯಿಸಿದ ಸಿವಿಲ್‌ ಎಂಜಿನಿಯರ್‌ ವಿಭಾಗದ ಅಧಿಕಾರಿ ಮೂರ್‍ನಾಲ್ಕು ದಿನಗಳು ಮಳೆ ಬರುವುದಿಲ್ಲ ಎಂಬ ಮಾಹಿತಿ ಇದೆ. ಅಷ್ಟರಲ್ಲಿ ಗುಂಡಿಗಳನ್ನು ಮುಚ್ಚಲು ಕ್ರಮವಹಿಸಿದ್ದೇವೆ ಎಂದು ವಿವರಿಸಿದರು.

ವೈನ್‌ ಸ್ಟೋರ್‌ ತೆರವುಗೊಳಿಸಿ: ಚಾಮರಾಜ ಜೋಡಿ ರಸ್ತೆಯಲ್ಲಿ ನಗರ ಪಾಲಿಕೆ ನಡೆಸುತ್ತಿರುವ ಅಂಬಳೆ ಅಣ್ಣಯ್ಯ ವಿದ್ಯಾರ್ಥಿನಿಯರ ನಿಲಯದಲ್ಲಿ 45 ವಿದ್ಯಾರ್ಥಿನಿಯರಿದ್ದಾರೆ. 19 ಮಳಿಗೆಗಳಿದ್ದು, ಮಾಸಿಕ 26,250 ಬಾಡಿಗೆ ಪಾವತಿಸುತ್ತಿದ್ದಾರೆ ಎಂದು ಅಧಿಕಾರಿ ಮಾಹಿತಿ ನೀಡಿದರು.

ಹಾಸ್ಟೆಲ್‌ ಮುಂಭಾಗದಲ್ಲಿ ಮದ್ಯದಂಗಡಿ ಇರುವುದ ರಿಂದ ವಿದ್ಯಾರ್ಥಿನಿಯರಿಗೆ ಸಮಸ್ಯೆಯಾಗು ತ್ತಿದೆ. ಆ ಮಳಿಗೆಯಿಂದ ಮದ್ಯದಂಗಡಿ ತೆರವು ಮಾಡುವಂತೆ ಅಧಿಕಾರಿಗಳಿಗೆ ಸೂಚಿಸಿದರು. ಇದಕ್ಕೆ ಪ್ರತಿಕ್ರಿಯಿ ಸಿದ ಅಧಿಕಾರಿಗಳು ಮದ್ಯದಂಗಡಿ ತೆರವು ಪ್ರಕರಣ 2 ವರ್ಷ ಗಳಿಂದ ನ್ಯಾಯಾಲಯದಲ್ಲಿದೆ ಎಂದು ಹೇಳಿದರು.

ಮಳಿಗೆಗಳಿಂದ 50 ಲಕ್ಷ ಬಾಡಿಗೆ: ನಗರ ಪಾಲಿಕೆ ವ್ಯಾಪ್ತಿಯಲ್ಲಿರುವ ವಿವಿಧ ಮಾರುಕಟ್ಟೆಗಳ 2,111 ಮಳಿಗೆಗಳಿಂದ ಒಟ್ಟು 50 ಲಕ್ಷ ಬಾಡಿಗೆ ಬರುತ್ತಿದೆ. ಚಾಮರಾಜ ಮತ್ತು ಕಾಳಿದಾಸ ರಸ್ತೆಯಲ್ಲಿ ಮತ್ತಷ್ಟು ಮಳಿಗೆಗಳನ್ನು ನಿರ್ಮಿಸಿ ಹೆಚ್ಚು ಬಾಡಿಗೆ ಸಂಗ್ರಹಿ ಸಬೇಕು ಎಂದು ಶಿವಕುಮಾರ್‌ ಸಲಹೆ ನೀಡಿದರು.

Advertisement

ಜಾಹೀರಾತು ನಿಯಮ ಪಾಲಿಸಿ: ಪಾಲಿಕೆ ವಿರುದ್ಧವಾಗಿಯೇ ನ್ಯಾಯಾಲಯಕ್ಕೆ ಹೋಗುವ ಜಾಹೀರಾತು ಸಂಸ್ಥೆಗಳಿಗೆ ಮತ್ತೆ ಜಾಹೀರಾತು ನೀಡುವುದು ಬೇಡ. ಇವರಿಂದ ದಂಡ ಸಮೇತ ಜಾಹೀರಾತು ಹಣ ವಸೂಲಿ ಮಾಡಬೇಕು. ಪಾಲಿಕೆ ವಿರುದ್ಧ ಹೋಗುವವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕು. ಈ ಬಗ್ಗೆ ಕೌನ್ಸಿಲ್‌ನಲ್ಲಿ ಚರ್ಚೆಯಾಗಿರುವುದನ್ನು ಅಧಿಕಾರಿಗಳು ಗಮನಹರಿಸಬೇಕು ಎಂದು ತಿಳಿಸಿದರು. ಮಾಲ್‌ ಆಫ್ ಮೈಸೂರು ಕಟ್ಟಡದ ತುಂಬ ಜಾಹೀರಾತು ಫ‌ಲಕಗಳನ್ನು ಹಾಕಲಾಗಿದೆ. ಅಧಿಕಾರಿಗಳು ಪರಿಶೀಲಿಸಿ ತೆರವು ಮಾಡಬೇಕು. ಮಾಲ್‌ ಆಫ್ ಮೈಸೂರು ಹೆಸರು ಮಾತ್ರ ಇರಬೇಕು. ಉಳಿದ ಜಾಹೀರಾತು ಫ‌ಲಕಗಳಿದ್ದರೆ ಶುಲ್ಕ ಸಂಗ್ರಹಿಸಬೇಕು. ನಾವೇ ಪ್ರಶ್ನೆ ಮಾಡದಿದ್ದರೆ ಕೇಳುವವರು ಯಾರು? ಎಂದು ಪ್ರಶ್ನಿಸಿದರು.

ಟ್ರೇಡರ್ ಮಾಹಿತಿಗೆ ವಾರದ ಗಡುವು: ನಗರ ಪಾಲಿಕೆ ವ್ಯಾಪ್ತಿಯಲ್ಲಿ 44 ಸಾವಿರ ಟ್ರೇಡರ್ ನೋಂದಣಿ ಮಾಡಿಸಿರುವುದಾಗಿ ಮಾಹಿತಿ ಇದೆ. ಇತ್ತೀಚೆಗೆ ನಡೆದ ನಗರ ಸರ್ವೇಯಲ್ಲಿ 20 ಸಾವಿರ ಟ್ರೇಡರ್ ಇದ್ದಾರೆ. ಈಗ ವಾರ್ಡ್‌ಗಳಲ್ಲಿ ಬೀದಿವಾರು ಸರ್ವೇ ಮಾಡಿದ್ದೇವೆ ಎಂದು ಅಧಿಕಾರಿ ಮಾಹಿತಿ ನೀಡಿದರು. ನಗರದ ಪ್ರದೇಶ ವ್ಯಾಪ್ತಿಯಲ್ಲಿರುವ ಟ್ರೇಡರ್ಗಳ ಬಗ್ಗೆ ನಿಖರವಾದ ಮಾಹಿತಿ ಇಲ್ಲ. 2008ರಿಂದಲೂ ಈ ವಿಚಾರ ಪ್ರಸ್ತಾಪವಾಗುತ್ತಿದೆ. ಸಮರ್ಪಕ ಮಾಹಿತಿಯೇ ಇಲ್ಲದಿದ್ದರೆ ಕೆಲಸ ಮಾಡುವುದು ಹೇಗೆ? ವಾರದೊಳಗೆ ವಾರ್ಡ್‌ವಾರು, ವಲಯವಾರು ಮಾಹಿತಿ ಕೊಡುವಂತೆ ಮೇಯರ್‌ ಸೂಚಿಸಿದರು.

ಮೇಯರ್‌ ಮನೆ ದುರಸ್ತಿಪಡಿಸಿ: ಪಾರಂಪರಿಕ ನಗರಿ, ಸ್ವಚ್ಛ ನಗರಿ ಬಿರುದು ಮೈಸೂರಿಗೆ ಮೇಯರ್‌ ಆಗುವ ಮಹಾಪೌರರ ಮನೆ ಒಳಗಡೆ ಕಾಲಿಡಲು ಆಗುವುದಿಲ್ಲ. ಶೀಘ್ರ ಕ್ರಿಯಾಯೋಜನೆ ಸಿದ್ಧಪಡಿಸಿ ಕಾಮಗಾರಿಗೆ ಚಾಲನೆ ಕೊಡಿಸುವಂತೆ ಪಾಲಿಕೆ ಆಯುಕ್ತರಿಗೆ ಸೂಚಿಸಿದರು. ಹಾಗೆಯೇ ನಾಲ್ವಡಿ ಕೃಷ್ಣರಾಜ ಒಡೆಯರ್‌ ಜಯಂತಿ ಆಚರಣೆಗೆ ದಿನಾಂಕ ನಿಗದಿಪಡಿಸುವಂತೆ ಹೇಳಿದರು. ಉಪಮೇಯರ್‌ ಡಾ.ಜಿ.ರೂಪಾ, ನಗರ ಪಾಲಿಕೆ ಆಯುಕ್ತ ಜಿ.ಲಕ್ಷ್ಮೀಕಾಂತರೆಡ್ಡಿ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next