Advertisement

ಜೆಡಿಎಸ್‌ ಚೆಕ್‌ವೆುಟ್‌ಗೆ ಬಿಜೆಪಿ ಕಂಗಾಲು, ಕಾಂಗ್ರೆಸ್‌ಗೆ ಮುಜುಗರ

06:35 PM Feb 25, 2021 | Team Udayavani |

ಮೈಸೂರು: ಪ್ರತಿಷ್ಠೆಗೆ ಬಿದ್ದ ಮೂರು ಪ್ರಮುಖ ಪಕ್ಷಗಳ ರಾಜಕೀಯ ಮೇಲಾಟಗಳ ನಡುವೆಯೇ ಸಾಂಸ್ಕೃತಿಕ ನಗರಿ ಮೈಸೂರಿನ 23ನೇ ಮೇಯರ್‌ ಸ್ಥಾನ ಗಿಟ್ಟಿಸಿಕೊಳ್ಳುವಲ್ಲಿ ಜೆಡಿಎಸ್‌ ಯಶಸ್ವಿ ಯಾದರೆ, ಅಧಿಕಾರದಿಂದ ಬಿಜೆಪಿ ದೂರವಿಡುವ ಕಾಂಗ್ರೆಸ್‌ ಪ್ರಯತ್ನ ಕೈಗೂಡಿತು.

Advertisement

ಒಟ್ಟು 73 ಸಂಖ್ಯಾ ಬಲದ ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಹಾಗೂ ಉಪಮೇಯರ್‌ ಸ್ಥಾನ ಪಡೆಯಲು 37 ಮತ ಪಡೆಯ ಬೇಕಿದ್ದು, ವಿವಿಧ ಕಸರತ್ತುಗಳ ನಡುವೆಯೇ ಜಾ.ದಳ ಪಕ್ಷದ ರುಕ್ಮಿಣಿ ಮಾದೇಗೌಡ ಅವರು 43 ಮತ ಪಡೆದು ಮೇಯರ್‌ ಆಗಿ ಹಾಗೂ ಕಾಂಗ್ರೆಸ್‌ ಪಕ್ಷದ ಅನ್ವರ್‌ ಬೇಗ್‌ 43 ಮತ ಪಡೆದು ಉಪಮೇಯರ್‌ ಆಗಿ ಆಯ್ಕೆಯಾದರು. ಪ್ರಾದೇಶಿಕ ಪಕ್ಷವೆನಿಸಿಕೊಂಡ ಜಾ.ದಳ ನೀಡಿದ ಚೆಕ್‌ವೆುಟ್‌ಗೆ ರಾಷ್ಟ್ರೀಯ ಪಕ್ಷವಾದ ಬಿಜೆಪಿ ಭ್ರಮನಿರಶನಗೊಂಡಿದ್ದು, ಕಳೆದ 24 ತಾಸುಗಳ ಕಾಲ ನಡೆಸಿದ ಇನ್ನಿಲ್ಲದ ಕಸರತ್ತು ಕೈಗೂಡಲಿಲ್ಲ.

ರಾಜ್ಯಮಟ್ಟದಲ್ಲಿ ಅಂದರೆ ವಿಧಾನ ಪರಿಷತ್‌ನಲ್ಲಿ ಬಿಜೆಪಿ ಜೊತೆ ಮೈತ್ರಿ ಮಾಡಿ ಕೊಂಡು ಸಭಾಪತಿ ಸ್ಥಾನ ಪಡೆದ್ದ ಜೆಡಿಎಸ್‌ ಮೈಸೂರು ಪಾಲಿಕೆಯಲ್ಲೂ ಇದೇ ಮೈತ್ರಿ ಮುಂದುವರಿಯಲಿದೆ ಎಂದೇ ಭಾವಿ ಸಲಾಗಿತ್ತು. ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ- ಸಿದ್ದರಾಮಯ್ಯ ಜಗಲ್‌ಬಂಧಿಯನ್ನು ನೋಡಿದರೆ ಪಾಲಿಕೆಯಲ್ಲಿ ಬಿಜೆಪಿ-ದಳ ಮೈತ್ರಿ ಖಚತ ಎನ್ನುವಂತಿತ್ತು. ಮಂಗಳವಾರ ಸಂಜೆಯವರೆಗೆ ಕುಮಾರಸ್ವಾಮಿ ಅವರು ಕಾಂಗ್ರೆಸ್‌ ವಿರುದ್ಧ ಆಡಿದ ಮಾತುಗಳು ಬಿಜೆಪಿ ಜೊತೆ ಸಖ್ಯ ಬೆಳಸುವಂತೆ ಕಂಡು ಬಂದಿತ್ತು. ಆದರೆ, ಕಡೆ ಗಳಿಗೆಯಲ್ಲಿ ತನ್ನ ವರಸೆಯನ್ನು ಬದಲಿಸಿಕೊಂಡ ಜೆಡಿಎಸ್‌ ಇತ್ತ ಬಿಜೆಪಿಗೂ ಭ್ರಮನಿರಸನ ವನ್ನುಂಟು ಮಾಡಿದರೆ ಅತ್ತ ಸಿದ್ದರಾಮಯ್ಯ ತವರಿ ನಲ್ಲೇ ಮೇಯರ್‌ ಪಟ್ಟ ಗಿಟ್ಟಿಸಿಕೊಂಡು ಕಾಂಗ್ರೆಸ್‌ಗೆ ಇರುಸು ಮುರಿಸು ಆಗುವಂತೆ ಮಾಡಿದೆ. ಮೊದಲ ಒಪ್ಪಂದದ ಪ್ರಕಾರ ಕಾಂಗ್ರೆಸ್‌ಗೆ ಮೇಯರ್‌ ಪಟ್ಟ ಸಿಗಬೇಕಿತ್ತು. ಆದರೆ, ಆ ಗದ್ದುಗೆಯನ್ನು ತನ್ನ ವಶಕ್ಕೆ ಪಡೆದ ಜೆಡಿಎಸ್‌, ಸಿದ್ದು ಬಣಕ್ಕೆ ಪರೋಕ್ಷ ಸಂದೇಶ ನೀಡಿದೆ.

ಮೇಯರ್‌ ಸ್ಥಾನ ಹೋದರೂ ಪರವಾಗಿಲ್ಲ, ಪಾಲಿಕೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರ ವಿಡಬೇಕು ಎಂಬ ಸ್ಥಳೀಯ ಕೆಲ ಕಾಂಗ್ರೆಸ್‌ ಮುಖಂಡರ ಧೋರಣೆ ಯಿಂದ ಮೇಯರ್‌ ಸ್ಥಾನವನ್ನು ಅಲಂಕರಿಸಲೇ ಬೇಕೆಂಬ ಹಠಕ್ಕೆ ಬಿದ್ದಿದ್ದ ಬಿಜೆಪಿಗೆ ಮುಖಭಂಗ ಅನುಭವಿಸಿದ್ದಲ್ಲದೇ, ಜೆಡಿಎಸ್‌ ಜಾಡು ಹಿಡಿಯುವಲ್ಲಿಯೂ ವಿಫ‌ಲವಾಗಿದೆ.  ಶತಾಯಗತಾಯ ಮೇಯರ್‌ ಸ್ಥಾನ ಅಲಂಕರಿಸಲೇಬೇಕೆಂಬ ಹಿನ್ನೆಲೆಯಲ್ಲಿ ಕಳೆದ ಮೂರು ದಿನಗಳಿಂದ ಜಿಲ್ಲಾ ಉಸ್ತುವಾರಿ ಸಚಿವ ಎಸ್‌.ಟಿ. ಸೋಮಶೇಖರ್‌ ಅವರು ಜಾ.ದಳ ಮುಖಂಡರೊಂದಿಗೆ ಮೇಲಿಂದ ಮೇಲೆ ಸಭೆ ನಡೆಸಿದರಾದರೂ ಅದ್ಯಾವುದೂ ಕೈಹಿಡಿಯಲಿಲ್ಲ.

ಜೆಡಿಎಸ್‌-ಕಾಂಗ್ರೆಸ್‌ ಎರಡೂ ಪಕ್ಷಗಳೂ ಮೈತ್ರಿ ಮುಂದುವರಿಸಲು ತೆರೆಮರೆಯಲ್ಲಿ ಒಪ್ಪಂದ ಮಾಡಿಕೊಂಡು ಎರಡೂ ಪಕ್ಷಗಳಿಂದ ಮೇಯರ್‌ -ಉಪ ಮೇಯರ್‌ಗೆ ನಾಮಪತ್ರ ಸಲ್ಲಿಸಿ ಬಿಜೆಪಿಗೆ ದಿಕ್ಕುತಪ್ಪಿಸಿದ್ದು ಒಂದೆಡೆಯಾದರೆ, ಚುನಾವಣೆಗೂ ಮುನ್ನ ಎಚ್‌.ಡಿ. ಕುಮಾರಸ್ವಾಮಿ ಕೂಡ ಕಾಂಗ್ರೆಸ್‌ ವಿರುದ್ಧ ಬಹಿರಂಗವಾಗಿ ಹೇಳಿಕೆ ನೀಡಿದ್ದನ್ನೇ ಆಧಾರವಾಗಿಟ್ಟುಕೊಂಡ ಬಿಜೆಪಿ ಜೆಡಿಎಸ್‌ ಬೆಂಬಲ ಸಿಗಲಿದೆ ಎಂಬ ಭಾವಿಸಿತ್ತು. ಆದರೆ ಜೆಡಿಎಸ್‌ ಮುಖಂಡರು ಕಾಂಗ್ರೆಸ್‌ ಬೆಂಬಲಿ ಸುತ್ತಿರುವ ಬಗ್ಗೆ ಒಂದಿಷ್ಟೂ ಸುಳಿವು ಸಿಗದೆ ಮುಖಭಂಗ ಅನುಭವಿಸಿತು. ಕಾಂಗ್ರೆಸ್‌ನ ಪ್ರಮುಖರು ತಮ್ಮೊಂದಿಗೆ ಚರ್ಚಿಸಿಲ್ಲವೆಂಬ ಮಾಜಿ ಸಿಎಂ ಕುಮಾರಸ್ವಾಮಿ ಅವರ ಹೇಳಿಕೆ ಹಿನ್ನೆಲೆಯಲ್ಲಿ ಅತಿಯಾದ ಆಶಾಭಾವನೆ ಹೊಂದಿದ್ದ ಬಿಜೆಪಿ ಕಡೇ ಗಳಿಗೆಯಲ್ಲಿ ಮೈಮರೆತ ಪರಿಣಾಮ ಅದರ ಲಾಭವನ್ನು

Advertisement

ಅಂತಿಮ ಕ್ಷಣದಲ್ಲಿ ಕಾಂಗ್ರೆಸ್‌ ಪಡೆಯುವ ಮೂಲಕ ಬಿಜೆಪಿಗೆ ಮರ್ಮಾಘಾತ ನೀಡಿತು. ತಟಸ್ಥರಾದ ಸಿದ್ದು ಆಪ್ತರು: ಮೇಯರ್‌ ಆಯ್ಕೆ ವೇಳೆ ಜೆಡಿಎಸ್‌ ಮತ್ತು ಕಾಂಗ್ರೆಸ್‌ನ ಸದಸ್ಯರು ಒಪ್ಪಂದದಂತೆ ರುಕ್ಮಣಿ ಅವರಿಗೆ ಕೈ ಎತ್ತುವ ಮೂಲಕ ಮತ ನೀಡಿದರು. ಈ ವೇಳೆ ಸಿದ್ದು ಆಪ್ತರಾದ ಆಯುಬ್‌ಖಾನ್‌ ಹಾಗೂ ಆರೀಪ್‌ ಹುಸೇನ್‌ ಕೈ ಎತ್ತದೆ ತಟಸ್ಥವಾಗಿ ಉಳಿಯುವ ಮೂಲಕ ಶಾಸಕ ತನ್ವೀರ್‌ ಸೇಠ್ ನಿರ್ಧಾರಕ್ಕೆ ನೇರವಾಗಿಯೇ ಅಸಮಾಧಾನ ವ್ಯಕ್ತಪಡಿಸಿದರು.

ತವರಲ್ಲೇ ಸಿದ್ದುಗೆ ಮುಖಭಂಗ..!

ಪಾಲಿಕೆಯಲ್ಲಿ ಜೆಡಿಎಸ್‌ನೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಆಸಕ್ತಿ ವಹಿಸಿರಲಿಲ್ಲ. ಕೆಲ ದಿನಗಳ ಹಿಂದೆ ಮೈಸೂರಿಗೆ ಆಗಮಿಸಿದ್ದ ಅವರು, ಮೈತ್ರಿ ವಿಚಾರವಾಗಿ ಜೆಡಿಎಸ್‌ ತಾನಾಗಿಯೇ ಬಂದು ನಮಗೆ ಮೇಯರ್‌ ಸ್ಥಾನ ಬಿಟ್ಟುಕೊಡುವುದಾದರೆ ಮಾತ್ರ ಮೈತ್ರಿ ಮುಂದುವರಿಸಿ ಎಂದು ಪಕ್ಷದ ಮುಖಂಡರಿಗೆ ಸೂಚನೆ ನೀಡಿದ್ದರು. ಆದರೆ ಸಿದ್ದರಾಮಯ್ಯನವರ ಮಾತನ್ನು ಬದಿಗಿಟ್ಟು ಅಕಾಡಕ್ಕಿಳಿದ ಶಾಸಕ ತನ್ವೀರ್‌ ಸೇs…, ಮೇಯರ್‌ ಪಟ್ಟ ಕೈತಪ್ಪಿದರೂ ಪಾಲಿಕೆಯಲ್ಲಿ ಬಿಜೆಪಿಯನ್ನು ಅಧಿಕಾರದಿಂದ ದೂರವಿಡುವಲ್ಲಿ ಯಶಸ್ವಿಯಾದರು. ಈ ಬೆಳವಣಿಗೆಯಿಂದ ವಿಪಕ್ಷ ನಾಯಕ ಸಿದ್ದರಾಮಯ್ಯನಿಗೆ ತವರು ನೆಲದಲ್ಲೇ ಮುಖಭಂಗವಾದರೆ, ಕಾಂಗ್ರೆಸ್‌ನ ಸ್ಥಳೀಯ ಮುಖಂಡರು ತನ್ವೀರ್‌ ನಿರ್ಧಾರಕ್ಕೆ ಬೇಸರಗೊಂಡಿದ್ದಾರೆ.

ಸತೀಶ್‌ ದೇಪುರ

 

Advertisement

Udayavani is now on Telegram. Click here to join our channel and stay updated with the latest news.

Next