ಮೈಸೂರು: ರಾಜ್ಯದ ಪ್ರತಿಷ್ಠಿತ ಕಣಗಳಲ್ಲಿ ಒಂದಾದ ಹಾಗೂ ಹಲವು ರಾಜಕೀಯ ಏರಿಳಿತ ಕಂಡಿರುವ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದಲ್ಲಿ ಸಾಂಪ್ರದಾಯಿಕ ಎದುರಾಳಿಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಮತ್ತೆ ಮುಖಾಮುಖಿಯಾಗಿದ್ದು, ಎರಡೂ ಪಕ್ಷಗಳಿಂದ ಕಣದಲ್ಲಿರುವ ಅಭ್ಯರ್ಥಿಗಳು ಲೋಕ ಚುನಾವಣೆಗೆ ಹೊಸಬರಾಗಿರುವುದು ವಿಶೇಷ.
Advertisement
ಕಳೆದೆರಡು ದಶಕಗಳಿಂದ ಪ್ರಬಲವಾಗಿ ಬೇರೂರಿರುವ ಬಿಜೆಪಿಯನ್ನು ಈ ಬಾರಿ ಮಣಿಸಲು ಕಾಂಗ್ರೆಸ್ ಇನ್ನಿಲ್ಲದ ಕಸರತ್ತು ನಡೆಸಿದ್ದು, ಸ್ವತಃ ಮುಖ್ಯಮಂತ್ರಿ ಸಿದ್ದರಾಮಯ್ಯ ಅಖಾಡಕ್ಕೆ ಧುಮುಕಿದ್ದಾರೆ. ಕಳೆದ ಚುನಾವಣೆಯಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ವರ್ಸಸ್ ಬಿಜೆಪಿ ನಡುವೆ ನೇರ ಹಣಾಹಣಿ ಏರ್ಪಟ್ಟಿತ್ತು. ಆದರೆ, ಬದಲಾದ ರಾಜಕೀಯ ಸನ್ನಿವೇಶ ಹಿನ್ನೆಲೆ ಬಿಜೆಪಿ-ಜೆಡಿಎಸ್ ಮೈತ್ರಿ ಮತ್ತು ಕಾಂಗ್ರೆಸ್ ನಡುವೆ ಸ್ಪರ್ಧೆ ಏರ್ಪಟ್ಟಿದೆ. ಈ ಎರಡೂ ಪಕ್ಷಗಳ ಅಭ್ಯರ್ಥಿಗಳು ಲೋಕ ಚುನಾವಣೆಗೆ ಹೊಸ ಮುಖ.
Related Articles
Advertisement
ಕಾಂಗ್ರೆಸ್ ತಂತ್ರಕ್ಕೆ ಬಿಜೆಪಿ ಪ್ರತಿತಂತ್ರ: ಇತ್ತ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ಹೆಣೆದಿರುವ ಬಿಜೆಪಿಯೂ ರಾಜ್ಯ ನಾಯಕರಾದಮೈತ್ರಿ ಪಕ್ಷದ ಎಚ್.ಡಿ. ಕುಮಾರಸ್ವಾಮಿ, ಮಾಜಿ ಸಚಿವ ಸಿ.ಟಿ. ರವಿ, ಡಾ.ಸಿ.ಎನ್. ಅಶ್ವತ್ಥ ನಾರಾ ಯಣ್ ಅವರನ್ನು ಕ್ಷೇತ್ರಕ್ಕೆ ಕರೆಯಿಸಿ ನಾವು ಒಕ್ಕಲಿಗರ ವಿರೋಧಿಯಲ್ಲ ಎಂಬ ಸಂದೇಶ ನೀಡಿದೆ. ಜತೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಕ್ಷೇತ್ರದ ಪೂರ್ಣ ಚಟುವಟಿಕೆಯನ್ನು ತಮ್ಮ ಕಣ್ಗಾವಲಿನಲ್ಲಿಟ್ಟುಕೊಂಡಿದ್ದಾರೆ. ಇದರೊಂದಿಗೆ ಕಾರ್ಯಕರ್ತರಿಗೆ ಮತ್ತಷ್ಟು ಪುಷ್ಠಿ
ತುಂಬಲು ಪ್ರಧಾನಿ ನರೇಂದ್ರ ಮೋದಿ ಅವರ ಬೃಹತ್ ಸಮಾವೇಶಕ್ಕೆ ವೇದಿಕೆ ಸಜ್ಜುಗೊಳಿಸ ಲಾಗಿದೆ. ಟೆಲಿಕಾಲರ್ ಮೊರೆ ಹೋದ ಕಾಂಗ್ರೆಸ್: ತನ್ನ ಅಭ್ಯರ್ಥಿಯ ಗೆಲುವಿಗಾಗಿ ತಂತ್ರಜ್ಞಾನದ ಮೊರೆ ಹೋಗಿರುವ ಕಾಂಗ್ರೆಸ್ ಇದೇ ಮೊದಲ ಬಾರಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಟೆಲಿಕಾಲರ್ ಮೂಲಕ ಮತ ಯಾಚನೆ ಶುರು ಮಾಡಿದ್ದಾರೆ. ಕ್ಷೇತ್ರದ ಎಲ್ಲಾ ಮತದಾರರಿಗೆ ಪಕ್ಷದ ಅಭ್ಯರ್ಥಿ ಮತ್ತು ಮುಖ್ಯಮಂತ್ರಿಗಳಿಬ್ಬರೂ ಮುದ್ರಿತ ಧ್ವನಿಯಲ್ಲಿ ತಮ್ಮ ಸರ್ಕಾರದ ಗ್ಯಾರಂಟಿ
ಯೋಜನೆಗಳ ಬಗ್ಗೆ ಮಾಹಿತಿ ನೀಡುವ ಮೂಲಕ ಮತ ಯಾಚನೆಗೆ ಇಳಿದಿದ್ದಾರೆ. ಪ್ರಸಾದ್ ನಿವೃತ್ತಿಯ ಪರಿಣಾಮವೇನು: ಹಳೇ ಮೈಸೂರು ಭಾಗದಲ್ಲಿ ಪ್ರಭಾವಿ ದಲಿತ ನಾಯಕರೆನಿಸಿಕೊಂಡಿರುವ ಬಿಜೆಪಿ ಸಂಸದ ವಿ. ಶ್ರೀನಿವಾಸ ಪ್ರಸಾದ್ ಚುನಾವಣೆ ಹೊತ್ತಿನಲ್ಲಿಯೇ ಸಕ್ರಿಯ ಚುನಾವಣಾ ರಾಜಕಾರಣಕ್ಕೆ ನಿವೃತ್ತಿ ಘೋಷಣೆ ಮಾಡಿದ್ದಾರೆ. ಇದರಿಂದ ಮೈಸೂರು-ಕೊಡಗು ಹಾಗೂ ಚಾಮರಾಜ ನಗರ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿಗೆ ದಲಿತ ಮತಗಳು
ಯಾವ ಪ್ರಮಾಣದಲ್ಲಿ ಕೈ ಹಿಡಿಯಲಿವೆ ಎಂಬುದನ್ನು ಮುಂದೆ ನೋಡಬೇಕಿದೆ. ಅಲ್ಲದೇ, ಪ್ರಸಾದ್ ಅವರನ್ನು ಹೊರತುಪಡಿಸಿ,
ಅವರ ಅಳಿಯಂದಿರು ಮತ್ತು ಬೆಂಬಲಿಗರು ಕಾಂಗ್ರೆಸ್ ಸೇರ್ಪಡೆಯಾಗಿರುವುದು ಆ ಪಕ್ಷಕ್ಕೆ ಎಷ್ಟು ಬಲ ತುಂಬಲಿದೆ ಎನ್ನುವುದು
ಕ್ಷೇತ್ರದ ಜನರನ್ನು ಕುತೂಹಲಕ್ಕೆ ದೂಡಿದೆ. ರಂಗೇರಲಿದೆ ಚುನಾವಣಾ ಕಣ: ಇದೀಗ ಮೈಸೂರು-ಕೊಡಗು ಲೋಕಸಭಾ ಕ್ಷೇತ್ರ ಚುನಾವಣಾ ಕಣ ರಂಗೇರಿದ್ದು, ಪ್ರಮುಖ
ಎರಡು ಪಕ್ಷಗಳ ನಾಯಕರು ಹಾಗೂ ಅಭ್ಯರ್ಥಿಗಳು ಕ್ಷೇತ್ರದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ. ಸತತ ಎರಡು ಬಾರಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ಗೆದ್ದಿರುವುದರಿಂದ ಕ್ಷೇತ್ರ ಉಳಿಸಿಕೊಳ್ಳಲು ಬಿಜೆಪಿ ನಾಯಕರು ಹೋರಾಟ ನಡೆಸುತ್ತಿದ್ದಾರೆ. ಇವರಿಗೆ ಜೆಡಿಎಸ್ ನಾಯಕರು ಮತ್ತು ಕಾರ್ಯಕರ್ತರು ಕೂಡ ಸಾಥ್ ನೀಡುತ್ತಿದ್ದಾರೆ. ಇತ್ತ ಮುಖ್ಯಮಂತ್ರಿ ಸಿದ್ದರಾಮಯ್ಯ ಚುನಾವಣೆಯನ್ನು ಪ್ರತಿಷ್ಠೆಯಾಗಿ ಸ್ಪೀಕರಿಸಿದ್ದು, ಶತಾಯ ಗತಾಯ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸಲೇ ಬೇಕು ಎಂಬ ಪಣತೊಟ್ಟಿದ್ದಾರೆ. ಈ ಸಂಬಂಧ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ
ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಇಬ್ಬರು ಒಟ್ಟಿಗೆ ಏ.13 ಮತ್ತು 14 ರಂದು ಕಾಂಗ್ರೆಸ್ ಅಭ್ಯರ್ಥಿ ಪರ ಪ್ರಚಾರ ನಡೆಸಲಿದ್ದಾರೆ. ಅವರಿಗೆ ಸಚಿವರಾದ ಕೆ.ವೆಂಕಟೇಶ್, ಡಾ.ಎಚ್. ಸಿ.ಮಹದೇವಪ್ಪ ಹಾಗೂ ಕಾಂಗ್ರೆಸ್ ಸ್ಥಳೀಯ ಶಾಸಕರು ಸಾಥ್ ನೀಡಲಿದ್ದಾರೆ. ಇನ್ನು ಬಿಜೆಪಿ ಅಭ್ಯರ್ಥಿ ಪರ ಭಾನುವಾರ ಪ್ರಧಾನಿ ನರೇಂದ ಮೋದಿ ಪ್ರಚಾರ ನಡೆಸಲಿದ್ದಾರೆ. ಅವರಿಗೆ ಮಾಜಿ ಮುಖ್ಯಮಂತ್ರಿಗಳಾದ ಬಿ.ಎಸ್ .ಯಡಿಯೂರಪ್ಪ, ಎಚ್.ಡಿ. ಕುಮಾರಸ್ವಾಮಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ,
ಶಾಸಕ ಜಿ.ಟಿ.ದೇವೇಗೌಡ ಸೇರಿದಂತೆ ಮೈತ್ರಿ ಪಕ್ಷಗಳ ಸ್ಥಳೀಯ ನಾಯಕರು ಸಾಥ್ ನೀಡಲಿದ್ದಾರೆ. ■ ಸತೀಶ್ ದೇಪುರ