Advertisement

ಪ್ರೀತಿಯ ಚಂಪಾ ಅವರಿಗೆ ಮೈಸೂರು ಬರೆದ ಪತ್ರ

03:28 PM Dec 02, 2017 | |

ಪ್ರಿಯ ಚಂಪಾರವರೇ,
“ನುಡಿ ಜಾತ್ರಿ ಮುಗಿಸಿ ಹೊಂಟ್ರೇನು? ಮತ್ತೆ ಅದೇ ನಗು ಹೊತ್ತು ಇಲ್ಲಿಗೆ ವಾಪಸು ಬನÅಲಾ…’. 83ನೇ ಕನ್ನಡ ಸಾಹಿತ್ಯ ಸಮ್ಮೇಳನ ಮುಗಿಸಿ, ನೀವು ಇಲ್ಲಿ ಹೆಜ್ಜೆ ಉಳಿಸಿ ಹೋದ ಮೇಲೂ, ಚಂಪಾ ಎಂಬ ಚಂದಮಾಮ ನನ್ನೆದೆಯ ನಭದಲ್ಲಿ ಅದೇ ನಗುವಿನ ಬೆಳದಿಂಗಳು ಹಬ್ಬಿಸಿದಂತೆ ಪುಳಕಗೊಳ್ಳುತ್ತಿರುವೆ. ದಸರಾ ಆನೆಗಳು ಓಡಾಡುವ ಈ ನೆಲದಲ್ಲಿ, ಅಳಿಸಲಾಗದಂಥ ಐತಿಹಾಸಿಕ ರುಜು ಗೀಚಿದ ನಿಮ್ಮನ್ನು ನಾ ಮರೆಯುವುದೆಂತು? ನೀವು ಇದ್ದ ಮೂರೂ ದಿನ ಹೇಮಂತ ಚಳಿಯಿತ್ತು; ನಾ ಕಂಪಿಸಲಿಲ್ಲ. ಇಳೆ ತುಂಬಾ ಇಬ್ಬನಿಯಿತ್ತು; ಆ ತೇವ ನನ್ನ ಹೃದಯದಲ್ಲಿ ಕೂರಲಿಲ್ಲ. ಕಾರಣ, ನಿಮ್ಮ ಮಾತಿನ ಬಿಸಿಗೆ ಕರಗಿದ್ದು, ಇಲ್ಲಿನ ಪ್ರಕೃತಿಯ ಶಕ್ತಿಕಣ, ಬಿಸಿಯೇರಿದ್ದು, ನನ್ನ ಒಡಲ ಕಣ.

Advertisement

ನನ್ನ ಆಂತರ್ಯದಲ್ಲಿ ಸೂಜಿಗಲ್ಲ ಸೊಬಗಿದೆ. ಮೈಸೂರಿಗೆ ಯಾರೇ ಬಂದರೂ, ಈ ನಗರಿಯನ್ನು ಬಿಟ್ಟುಹೋಗುವಾಗ ಅವರಿಗೊಂದು ವಿರಹ ಕಾಡುತ್ತದೆ. ಇನ್ನಷ್ಟು ದಿನ ಇಲ್ಲೇ ಇದ್ದುಬಿಡೋಣವೆಂಬ ವ್ಯಾಮೋಹ ಅವರೊಳಗೆ ವ್ಯಾಪಿಸುತ್ತದೆ. ಈ ಸೆಳೆತವನ್ನು “ತಿಂಗಳಾಯಿತೇ?’ ಎಂಬ ಕೆಎಸ್‌ನ ಪದ್ಯದ ಮೂಲಕ ನಿಮಗೆ ಹೇಳಬಯಸುವೆ. ಇದನ್ನು ನೀವು ಕೇಳಿದ್ದೀರಿ ಕೂಡ… 

ಹೊಸದಾಗಿ ಮದುವೆಯಾದ ಕವಿ, ಕೆಲಸ ನಿಮಿತ್ತ ಮನೆಯಿಂದ ಹೊರಡುವಾಗ, “ತಿಂಗಳು ಬಿಟ್ಟು ಬರುತ್ತೇನೆ’ ಎನ್ನುತ್ತಾನೆ. ಪತ್ನಿಯನ್ನು ಬಿಟ್ಟು ಹೋಗಲು ಅವನಿಗೆ ಮನಸ್ಸಾಗದು. ಭಾರದ ಹೆಜ್ಜೆ ಇಡುತ್ತಾ, ಹೆಂಡತಿಯ ಮುದ್ದು ಮೋರೆಯನ್ನು ಹತ್ತಾರು ಬಾರಿ ನೋಡುತ್ತಾ ಹೊರಡುವ ಅವನ ಹೃದಯದಲ್ಲಿ ವಿರಹದ ಬಿಸಿಲು. “ಕೆನ್ನೆ ಕೆಂಪಾಗಿರಲು ಸಂಜೆ ಮುಗಿಲಂತೆ… ಮನಸ್ಸು ಬಾರದು ನನಗೆ ಅಡಿಯನಿಡೆ ಮುಂದೆ’ ಎನ್ನುತ್ತಾ ಬೀದಿ ಕೊನೆಗೊಳ್ಳುವವರೆಗೂ ನೋಡುತ್ತಾನೆ. ದಾರಿಯಲ್ಲಿ ಕಂಡೊಬ್ಬ ಹಣ್ಣು ಮಾರುವವ, “ಬಂಡಿ ಹೊರಟು ಹೋಯಿತು’ ಎಂದಾಗ, ಕವಿ ಅಪಾರ ಖುಷಿಯಲ್ಲಿ ಮನೆಗೆ ಮರಳುತ್ತಾನೆ. ಬಾಗಿಲು ತೆರೆದ ಪತ್ನಿ, “ಅಷ್ಟು ಬೇಗ ತಿಂಗಳಾಯಿತೆ?’ ಎಂದು ಕೇಳುವ ದೃಶ್ಯಕಾವ್ಯ ಈ ಹೊತ್ತಿನಲ್ಲಿ ಕಣ್ಣೊಳಗೆ ತೇಲುತಲಿದೆ. ಪ್ರೇಮಕವಿ ಇದನ್ನು ಬರೆದಾಗ ನನ್ನ ನೆಲದಲ್ಲೇ ನಡೆದಾಡುತ್ತಿದ್ದರು. ಮೈಸೂರಿನಿಂದ ಯಾರೇ “ಹೊರಡುತ್ತೀನಿ’ ಎನ್ನುವವರ ಹಾಡು- ಪಾಡೂ ಈ ಪದ್ಯದಂತೆಯೇ ಆಗಿಹೋಗಿದೆ.

ನನ್ನ ಸೌಂದರ್ಯದ ಈ ಮೋಹಪಾಶಕ್ಕೆ, ಬೆನ್ನು ಮಾಡಿ ಹೋಗಲು ಯಾರಿಗೂ ಮನಸ್ಸಾಗುವುದಿಲ್ಲ. ಪಕ್ಕದ ದೇವನೂರಿನ ಮಲ್ಲಪ್ಪನಿಂದ, ದೂರ ದೇಶದ ಬಿಳಿತೊಗಲಿನ ಪ್ರವಾಸಿಗನ ತನಕ ಮೈಸೂರನ್ನು ಅಗಲುವಾಗ ಕಾಲು ಜಗ್ಗುವುದು, ಹೃದಯ ಭಾರವಾಗುವುದು. ಅದಕ್ಕೇ ಈ ನೆಲವನ್ನು ಬಿಟ್ಟು ಕುವೆಂಪುವನ್ನು ನಾನು ಮಲೆನಾಡಿಗೆ ಮರಳಲು ಬಿಡಲಿಲ್ಲ. ಇಲ್ಲೇ ಇದ್ದು ಅವರಾಳದಲ್ಲಿ “ಮಲೆಗಳಲ್ಲಿ ಮದುಮಗಳು’ ಅಚ್ಚೊತ್ತಿಬಿಟ್ಟೆ. ಪೀಂಚಲು, ನಾಯಿಗುತ್ತಿಯನ್ನು ಮೈಸೂರಿಗೆ ಕರೆದುತಂದೆ. ಅಲ್ಲೆಲ್ಲೋ ಗುಜರಾತಿನ ವಿವಿಯೊಂದರಲ್ಲಿ ಉನ್ನತ ಹುದ್ದೆಯ ಅವಕಾಶ ಚೆಲ್ಲಿ, ಇಲ್ಲಿಗೆ ಬಂದು ಕೂರಲು ಭೈರಪ್ಪನವರಿಗೆ ತಪಸ್ವಿಯ ಮನಸ್ಸು ಕೊಟ್ಟೆ. ಬೇಕಾದರೆ, “ಕುಸುಮಬಾಲೆ’ಯ ಜೋಗಿತಿಯರನ್ನೇ ಕೇಳಿ ನೋಡಿ, ದೇವನೂರ ಮಹಾದೇವ ಅವರು ಮೈಸೂರು ತೊರೆದು ಬೇರೆಲ್ಲಾದರೂ ಬರುತ್ತಾರಾ ಕೇಳಿನೋಡಿ? ಊಹೂnಂ!

ಆದರೆ, ಈ ಸಲ ನಿಮ್ಮನ್ನು ಬೀಳ್ಕೊಡುವಾಗ, ನಾನು ಬಿಕ್ಕಲಿಲ್ಲ. ಅಯ್ಯೋ, ಬಂದ ಅತಿಥಿ ಹೊರಡುತ್ತಿದ್ದಾರಲ್ಲ ಎನ್ನುತ್ತಾ, ನರಸಿಂಹಸ್ವಾಮಿ ಯವರ “ತಿಂಗಳಾಯಿತೆ?’ ಪದ್ಯವನ್ನೂ ನೆನಪಿಗೆ ತಂದುಕೊಳ್ಳಲಿಲ್ಲ. ನಿಮ್ಮ ಮೇಲೆ ಮುನಿದಿದ್ದೆ ಅಂತಲ್ಲ. “ಪ್ರೀತಿಯಿಲ್ಲದೆ ನಾನು ಏನನ್ನೂ ಮಾಡಲಾರೆ, ದ್ವೇಷವನ್ನು ಕೂಡ’ ಎಂಬ ನಿಮ್ಮ ಮಾತಿನಂತೆಯೇ ನಾನು ಕೂಡ. ನನ್ನ ನೆಲದಲ್ಲಿ ಐದನೇ ಸಮ್ಮೇಳನ ನಡೆಯುತ್ತಿದೆಯೆಂದಾಗ, ಅಲ್ಲೊಂದು ಸಾಹಿತ್ಯ- ಸಾಂಸ್ಕೃತಿಕ ಗತವೈಭವ ತೆರೆದುಕೊಳ್ಳುತ್ತದೆಂದು ಹಿಗ್ಗಿದ್ದೆ. ಚಂಪಾ ಅಧ್ಯಕ್ಷರೆಂದ ಕೂಡಲೇ ಆ ಸಂತಸ ಇನ್ನಷ್ಟು ಹೊಳಪೇರಿತ್ತು. ಆದರೆ, ನಾನು ಕಟ್ಟಿದ ನಿರೀಕ್ಷೆಗಳೆಲ್ಲ ಒಂದೊಂದೇ ಉರುಳಿಬಿದ್ದವು. ಹೊರಗಿನವರೆಲ್ಲ ಬಂದರು ಬಿಟ್ಟರೆ, ನನ್ನ ಮೈಸೂರಿನ ಬಹುತೇಕರು ಮನೆ ಬಿಟ್ಟು ಹೊರಗೆ ಬರಲೇ ಇಲ್ಲ.

Advertisement

ನೀವು ಯಾವುದೇ ಪೇಟ ತೊಡುವುದಿಲ್ಲ ಎಂಬುದು ನನಗೆ ಮೊದಲಿಂದಲೂ ಗೊತ್ತು. ಆ ಕಾರಣ ಮೈಸೂರು ಪೇಟ ತೊಡಲಿಲ್ಲವೆಂಬ ಬೇಸರ ನನಗೇನೂ ಇಲ್ಲ. ಆದರೆ, ಆ ಪೇಟದ ಹಿಂದೆ ಒಂದು ಸಾಂಸ್ಕೃತಿಕ ನಂಟಿತ್ತು. ಪರಂಪರೆಯ ಪರಿಮಳವಿತ್ತು. ಆ ಭಾವವನ್ನು ಅರಿಯುವ ಕೆಲಸವನ್ನು ನೀವು ಮಾಡಬೇಕಿತ್ತು. ಅರಮನೆ ಆವರಣದಲ್ಲಿನ ಭುವನೇಶ್ವರಿ ದೇಗುಲಕ್ಕೂ ನೀವು ಬರಲಿಲ್ಲ. ನಿಮ್ಮ ನಾಸ್ತಿಕವಾದವನ್ನು ನಾನು ಗೌರವಿಸುವೆ. ಎಲ್ಲರಿಗೂ ಅವರವರ ಸಿದ್ಧಾಂತ ಪ್ರಕಟಿಸಲು ಬಿಟ್ಟಿರುವ ನೆಲ ನನ್ನದು. ನಿಮ್ಮನ್ನು ಒಪ್ಪದೇ ಇರಲು ಹೇಗಾದೀತು?

ಸಮ್ಮೇಳನದ ಗೋಷ್ಠಿಯ ಮಾತುಗಳೆಲ್ಲ ನನ್ನ ಕಿವಿಗೂ ಬಿದ್ದವು. ಅಲ್ಲಿ ನಾಸ್ತಿಕವಾದದ ಪ್ರತಿಧ್ವನಿಗಳಿದ್ದವು. ಆದರೆ, ಹಾಗೆ ಕೇಳಿಸಿಕೊಂಡವರೆಲ್ಲ, ನಿಮ್ಮನ್ನು ಅನುಸರಿಸಿದರೆ? ಇಲ್ಲ… ಗೋಷ್ಠಿ ಮುಗಿದ ಕೂಡಲೇ ಅದರಲ್ಲಿ ಬಹುತೇಕರು ಬಂದಿದ್ದು ಚಾಮುಂಡಿ ಬೆಟ್ಟಕ್ಕೆ! ಇದೇ ನನ್ನ ನೆಲದ ವೈಶಿಷ್ಟé! ಇದೇ ಇಲ್ಲಿನವರ ನೆಲದ ಪ್ರೀತಿ! ವೈಚಾರಿಕವಾಗಿ ಇಲ್ಲೇನೇ ಕಹಳೆ ಮೊಳಗಿದರೂ, ಬಂಧುಗಳು ಬಂದಾಗ- ದಸರೆಯಲ್ಲಿ ಆ ಧ್ವನಿಗಳೆಲ್ಲ ಒಂದಾಗುವುದಿದೆಯಲ್ಲ, ಅದೇ ನನ್ನ ಭಾವೈಕ್ಯ ಉಸಿರು. ಅದೇ ಮೈಸೂರು.

ಸಮ್ಮೇಳನದ ಗೋಷ್ಠಿಗಳಲ್ಲಿ ವಿನಾಕಾರಣ ಕುವೆಂಪು ನಾಸ್ತಿಕವಾದಕ್ಕೆ ತಳುಕು ಹಾಕುವ ಧ್ವನಿಗಳೂ ಕಿವಿಗೆ ಬಿದ್ದವು. ಕುವೆಂಪುವೇನು ಹಾಗಿದ್ದರಾ? ಕವಿ- ಕಾವ್ಯದಾಚೆಗೆ ಅವರು ದೊಡ್ಡ ಅಧ್ಯಾತ್ಮಜೀವಿ ಅಲ್ಲವೇ? ಈಗಿನ ರಾಮಕೃಷ್ಣರಿಂದ ಆಗಿನ ರಾಮನ ವರೆಗೂ ಅವರು ಭಾವುಕರಾಗಿ ಬರೆದಿದ್ದಕ್ಕೆ ಸಾಕ್ಷ್ಯಗಳೆಷ್ಟು ಬೇಕು? ಒಡೆಯರೇ ಕಟ್ಟಿದ ಕಸಾಪಕ್ಕೆ ಒಡೆಯರೇ ನೆನಪಾಗದೇ ಹೋಯಿತಲ್ಲ. ಇದು ಒಡೆದ ಮನಸ್ಸಿನ ಸಮ್ಮೇಳನ ಆಯಿತಲ್ಲವೆಂಬ ಬೇಸರ ನಿಮ್ಮೊಳಗೂ ಮೂಡಿದೆಯಲ್ಲವೇ? ಆದರೆ, ನೀವದನ್ನು ಹೇಳಿಕೊಳ್ಳುವುದಿಲ್ಲ.

ಸಾಹಿತ್ಯ ಪಸರಿಸಬೇಕಾದ ಜಾಗದಲ್ಲಿ ರಾಜಕಾರಣ ಕೇಳಿಬಂತು. ಐದನೇ ಮೈಸೂರು ಕದನ ಆಗಿಹೋಯಿತೇನೋ ಎಂದೂ ದಿಗಿಲುಗೊಂಡೆ. ಕಾಯ್ಕಿಣಿಯೆದುರಿನ ಕವಿಗೋಷ್ಠಿಯಲ್ಲೂ ಜಿಎಸ್‌ಟಿ, ಕಪ್ಪುಹಣದ ಧ್ವನಿಗಳೆದ್ದು, ಕಾಯ್ಕಿಣಿ ಅವರ ಭಾವಾಶಯದ ವಿರುದ್ಧ ಅಲ್ಲಿ ಭಾವಕಂಪನಗಳು ಎದ್ದಿದ್ದವು. ಕುವೆಂಪು ನನ್ನ ನೆಲದಲ್ಲೇ ಕಟ್ಟಿದ ರಸವತ್ತಾದ ಕಾವ್ಯಕ್ಕೂ, ಈ ಬಂಡಾಯ ಕವಿತೆಗಳಿಗೂ ಒಮ್ಮೆ ಹೋಲಿಸಿ, ಬೆವರಿಬಿಟ್ಟೆ. ಕಾವ್ಯದಲ್ಲೂ ರಾಜಕಾರಣದ ರೋಷಾವೇಶ ಬೆರೆಯಿತೇಕೆ? ಇವನ್ನೆಲ್ಲ ಸಹಿಸಿಕೊಳ್ಳುವುದು ಕಷ್ಟವೆಂದೇ ಬಹುಶಃ ಅನೇಕರು ಬಂದಿರಲಿಕ್ಕಿಲ್ಲ. ಎಸ್‌.ಎಲ್‌. ಭೈರಪ್ಪ ಊರಿನಲ್ಲೇ ಇರಲಿಲ್ಲ. ದೇವನೂರ ಮಹಾದೇವರು ಸಮ್ಮೇಳನದತ್ತ ಸುಳಿಯಲೇ ಇಲ್ಲ. ಅವರೆಲ್ಲರೂ ನಿಮ್ಮೊಟ್ಟಿಗಿದ್ದಿದ್ದರೆ, ಸಮ್ಮೇಳನದ ಸೌಂದರ್ಯ ಹೇಗಿರುತ್ತಿತ್ತು?

ಅವರೆಲ್ಲರ ಬೇಸರವೂ ನನ್ನ ಬೇಸರವೇ. ಈ ಸಮ್ಮೇಳನ ಯಾವಾಗ ಮುಗಿಯುತ್ತದೋ ಎಂದು ಕಾದು ಕುಳಿತೆ. ಕಡೇಪಕ್ಷ ನಿಮಗೆ ಮೈಸೂರು ಪಾಕ ಬಡಿಸಲೂ ನನ್ನಿಂದಾಗಲಿಲ್ಲವೆಂಬ ಮತ್ತೂಂದು ಬೇಸರವನ್ನೂ ಇಲ್ಲಿ ಹೇಳಿಕೊಳ್ಳುತ್ತಿರುವೆ. ಇಷ್ಟೆಲ್ಲ ಮನಸ್ಸುಗಳಿಗಾದ ನೋವುಗಳ ನಡುವೆ, ನೀವು “ಹೊಂಟೀನಿ’ ಅಂದಾಗ, ಯಾಕೋ ನಿಮ್ಮ ಕಾಲು ಜಗ್ಗಲು ಮನಸ್ಸಾಗಲಿಲ್ಲ. ಕುವೆಂಪುರಂತೆ, ಭೈರಪ್ಪರಂತೆ, ಇಲ್ಲೇ ಇದ್ದುಬಿಡಿ ಎನ್ನಲೂ ಮಾತು ಬಾರದೇಹೋಯಿತು. ಕೆಎಸ್‌ನ ಕಾವ್ಯವೂ ಅದಕ್ಕೇ ನನಗೆ ನೆನಪಾಗಲಿಲ್ಲ.

ಕ್ಷಮಿಸಿ, ಚಂಪಾರವರೇ. ಆದರೆ, ನೀವು ಮತ್ತೆ ಬನ್ನಿ. ನಗು ನಗುತ್ತಾ ಬನ್ನಿ. ಮೈಸೂರು ಪಾಕ ಸವಿಯಲು…
ಇತಿ ನಿಮ್ಮ ಮೈಸೂರು

 ಕೀರ್ತಿ ಕೋಲ್ಗಾರ್‌

Advertisement

Udayavani is now on Telegram. Click here to join our channel and stay updated with the latest news.

Next