Advertisement

ನುಡಿಜಾತ್ರೆ ಸೌಂದರ್ಯಕ್ಕೆ ಮೈಸೂರಿನ ಮೆರುಗು

12:03 AM Feb 05, 2020 | Team Udayavani |

ಕಲಬುರಗಿ: ಕನ್ನಡ ಸಾಹಿತ್ಯ ಪರಿಷತ್ತಿಗೂ, ಅರಮನೆ ನಗರಿ ಮೈಸೂರಿಗೂ ಅದೇನೋ ಬಿಡದ ನಂಟು. ಅಂದು ಕೇಂದ್ರ ಕನ್ನಡ ಸಾಹಿತ್ಯ ಪರಿಷತ್ತಿನ ಕಚೇರಿಗಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್‌ ಅವರು ಬೆಂಗಳೂರಿನಲ್ಲಿ ಸ್ಥಳ ನೀಡಿ, ಪೋಷಣೆ ಮಾಡಿದರು. ಮೈಸೂರಿನ ಆಸರೆಯ ನೆರಳು ಈಗಿನ ಗಡಿನಾಡಿನ ಕಲಬುರಗಿ ಸಾಹಿತ್ಯ ಸಮ್ಮೇಳನದವರೆಗೂ ಮುಂದುವರಿದಿದೆ.

Advertisement

ತೊಗರಿ ಕಣಜ ಕಲಬುರಗಿಯಲ್ಲಿ ನಡೆಯಲಿರುವ 85ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನೆರಳು- ಬೆಳಕಿನ ಚಿತ್ತಾರದ ಜತೆಗೆ ವೇದಿಕೆಗೆ ಸೌಂದರ್ಯದ ಮೆರುಗನ್ನು ಕಲ್ಪಿಸಿರುವುದು ಕೂಡ ಮೈಸೂರು ಮೂಲದ ಸಂಸ್ಥೆ! ಅರಮನೆ ನಗರಿ ಮೈಸೂರಿನ ರೆಜೋವೆಟರ್ಸ್‌ ಸಂಸ್ಥೆ ಇಲ್ಲಿ ವೇದಿಕೆ ನಿರ್ಮಾಣ, ಧ್ವನಿವರ್ಧಕ, ಟೆಂಟ್‌ ಸೇರಿದಂತೆ ಹಲವು ಕಾರ್ಯಗಳ ಉಸ್ತುವಾರಿ ವಹಿಸಿಕೊಂಡಿದೆ. ಕಳೆದ ಒಂದು ತಿಂಗಳಿಂದ ಸಾಹಿತ್ಯ ಸಮ್ಮೇಳನಕ್ಕೆ ಅಂದಚೆಂದ ನೀಡುವ ಕೆಲಸದಲ್ಲಿ ನಿರತವಾಗಿದೆ.

ಸಮ್ಮೇಳನದ ಸಭಾಮಂಟಪದ ಸಿಂಗಾರದಲ್ಲಿ ಸುಮಾರು 300 ಜನರ ಶ್ರಮವಿದೆ. ಸಾಂಸ್ಕೃತಿಕ ನಗರಿ ಮೈಸೂರು, ಪೇಡಾನಗರಿ ಹುಬ್ಬಳ್ಳಿ, ಸಿಲಿಕಾನ್‌ ಸಿಟಿ ಬೆಂಗಳೂರು, ಹೈದರಾಬಾದ್‌ ಮತ್ತು ಕಲಬುರಗಿಯವರು ಸೇರಿದಂತೆ ಹಲವು ಭಾಗಗಳ ಜನರು ಹಗಲು ರಾತ್ರಿ ಎನ್ನದೆ ಇಲ್ಲಿ ಒಂದಾಗಿ ಕನ್ನಡ ತಾಯಿಯ ಹಬ್ಬವನ್ನು ಅಂದಗಾಣಿಸುತ್ತಿದ್ದಾರೆ.

ಐದು ಸಮ್ಮೇಳನದಲ್ಲಿ ಕಾಯಕ: “ನಮಗೆ ಇದು ಮೊದಲ ಸಮ್ಮೇಳನವಲ್ಲ. ಮೈಸೂರು, ರಾಯಚೂರು, ಕೊಡಗು, ಧಾರವಾಡ ಸಾಹಿತ್ಯ ಸಮ್ಮೇಳನದಲ್ಲಿ ಕೆಲಸ ಮಾಡಿರುವ ಖುಷಿ ನಮ್ಮ ಸಂಸ್ಥೆಯದ್ದಾಗಿದೆ’ ಎಂದು ರಜೋವೆಟರ್ಸ್‌ ಸಂಸ್ಥೆಯ ಮಾಲಿಕ ಶ್ರೀನಿವಾಸ್‌ ಹೇಳಿದ್ದಾರೆ.

“ಸಾಹಿತ್ಯ ಸಮ್ಮೇಳನದ ಪ್ರಧಾನ ವೇದಿಕೆಯ ಟೆಂಟ್‌, ಲೈಟಿಂಗ್‌, ಧ್ವನಿವರ್ಧಕ, ಎಲ್‌ಇಡಿ ವ್ಯವಸ್ಥೆಗಾಗಿಯೇ ಸುಮಾರು 2 ಕೋಟಿ ರೂ.ವೆಚ್ಚ ಮಾಡಲಾಗುತ್ತಿದೆ. ವಿದ್ಯುತ್‌ ಕೈಕೊಟ್ಟರೆ ಅವ್ಯವಸ್ಥೆ ಆಗದಂತೆ ನೋಡಿಕೊಳ್ಳಲು ಹೈದರಾಬಾದ್‌ನಿಂದ ಜನರೇಟರ್‌ ತರಲಾಗಿದೆ’ ಎಂದರು.

Advertisement

ಎಲ್ಲ ಸಮ್ಮೇಳನಕ್ಕಿಂತಲೂ ದೊಡ್ಡ ವೇದಿಕೆ: ವಿಶೇಷ ಅಂದರೆ ಮೈಸೂರು, ರಾಯಚೂರು, ಕೊಡಗು, ಧಾರವಾಡದಲ್ಲಿ ನಡೆದ ಸಾಹಿತ್ಯ ಸಮ್ಮೇಳನಕ್ಕಿಂತ ದೊಡ್ಡ ವೇದಿಕೆಯನ್ನು ಹಾಕಲಾಗಿದೆ. ಕಳೆದ ಬಾರಿ ಧಾರವಾಡದಲ್ಲಿ 15 ಅಡಿ ಎತ್ತರದ ವೇದಿಕೆ ನಿರ್ಮಿಸಲಾಗಿತ್ತು. ಆದರೆ, ಈ ಬಾರಿ 24 ಅಡಿ ಎತ್ತರದ ವೇದಿಕೆ ಸಿದ್ಧಪಡಿಸಲಾಗಿದೆ. 20 ಸಾವಿರ ಆಸನಗಳನ್ನು ಅಣಿಗೊಳಿಸಲಾಗಿದೆ.

ಬಿಸಿಲಿನ ರಕ್ಷಣೆಗೆ ಜರ್ಮನ್‌ ಟೆಂಟ್‌: ಕಲಬುರಗಿಯ ಬಿಸಿಲಿನ ಝಳ ತಪ್ಪಿಸಲು ಸಮ್ಮೇಳನ ದಲ್ಲಿ ಜರ್ಮನ್‌ ಟೆಂಟ್‌ ನಿರ್ಮಾಣ ಮಾಡಲಾಗಿದೆ. ಬೆಂಗಳೂರಿನಿಂದ ಈ ಟೆಂಟ್‌ನ್ನು ತರಲಾಗಿದೆ. ಹೊರಗೆ ಬಿಸಿಲು 45 ಡಿಗ್ರಿ ಸೆಲ್ಸಿಯಸ್‌ ಇದ್ದರೆ, ಟೆಂಟ್‌ನ ಒಳಗೆ 30 ಡಿಗ್ರಿ ಸೆಲ್ಸಿಯಸ್‌ ಇರುತ್ತದೆ.

ಇದುವರೆಗೂ ಯಾವ ಸಮ್ಮೇಳನಕ್ಕೂ ಇಂಥ ಟೆಂಟ್‌ ಬಳಕೆ ಮಾಡಿಲ್ಲ. ಜಿಲ್ಲಾಧಿಕಾರಿಗಳು ಆಸಕ್ತಿ ವಹಿಸಿ ಈ ಸಮ್ಮೇಳನಕ್ಕೆ ತರಿಸಿದ್ದಾರೆ ಎಂದು ಶ್ರೀನಿವಾಸ್‌ ಮಾಹಿತಿ ನೀಡಿದರು. ಈ ಜರ್ಮನ್‌ ಶೀಟ್‌ಗೆ ಬೆಂಕಿ, ಮಳೆ, ಉರಿ ಬಿಸಿಲನ್ನು ಸಲೀಸಾಗಿ ತಡೆದುಕೊಳ್ಳುವ ಶಕ್ತಿ ಇದೆ. ಜೋರಾಗಿ ಗಾಳಿ ಬೀಸಿದರೂ ಮಂಟಪ ಕಿಂಚಿತ್ತೂ ಅಲುಗಾಡದ ರೀತಿಯಲ್ಲಿ ಮಂಟಪದ ಕಂಬಗಳ ಜೋಡಣೆ ಮಾಡಲಾಗಿದೆ.

* ದೇವೇಶ ಸೂರಗುಪ್ಪ

Advertisement

Udayavani is now on Telegram. Click here to join our channel and stay updated with the latest news.

Next