ಮೈಸೂರು: ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಅಧಿಕಾರಕ್ಕಾಗಿ ಮೈತ್ರಿಗೆ ಸಿದ್ಧವಾಗಿರುವ ಕಾಂಗ್ರೆಸ್‌ನ್ನು ಜೆಡಿಎಸ್‌ನ ಸ್ಥಳೀಯ ನಾಯಕರು ಒಲ್ಲೆ ಎನ್ನುತ್ತಿರು ವುದು, ಬಿಜೆಪಿ ಪಾಲಿಗೆ ವರದಾನವಾಗಿ ಪರಿಣಿಮಿಸಿದೆ.
49 ಸದಸ್ಯ ಬಲದ ಮೈಸೂರು ಜಿಲ್ಲಾ ಪಂಚಾಯ್ತಿಯಲ್ಲಿ ಯಾವುದೇ ಪಕ್ಷಕ್ಕೂ ಬಹುಮತ ವಿಲ್ಲ. ಕಾಂಗ್ರೆಸ್ 23, ಜೆಡಿಎಸ್ 17, ಬಿಜೆಪಿ 8 ಹಾಗೂ ಓರ್ವ ಪಕ್ಷೇತರ ಸದಸ್ಯರಿದ್ದಾರೆ. ಕಳೆದ ಅವಧಿ ಯಿಂದಲೂ ಜಿಪಂನಲ್ಲಿ ಜೆಡಿಎಸ್-ಬಿಜೆಪಿ ಜೊತೆಗೆ ಅಧಿಕಾರ ಹಂಚಿಕೊಂಡಿದೆ. 23 ಸದಸ್ಯರನ್ನು ಹೊಂದಿರುವ ಕಾಂಗ್ರೆಸ್, ಅತಿದೊಡ್ಡ ಪಕ್ಷವಾಗಿದ್ದರೂ ವಿರೋಧ ಪಕ್ಷದ ಸ್ಥಾನದಲ್ಲಿ ಕೂರಬೇಕಾಗಿ ಬಂದಿದೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ ದ್ದಾಗಲೂ ಮೈಸೂರು ಜಿಪಂನಲ್ಲಿ ಕಾಂಗ್ರೆಸ್ ಅಧಿಕಾರ ದಿಂದ ಹೊರಗಿತ್ತು. ಈಗ ರಾಜ್ಯದಲ್ಲಿ ಜೆಡಿಎಸ್- ಕಾಂಗ್ರೆಸ್ ಹೊಂದಾಣಿಕೆ ಮಾಡಿಕೊಂಡು ಆಡಳಿತ ನಡೆಸುತ್ತಿರುವುದರಿಂದ ಬಿಬಿಎಂಪಿ ಮಾದರಿಯಲ್ಲಿ ಮೈಸೂರು ಜಿಪಂನಲ್ಲೂ ಕಾಂಗ್ರೆಸ್-ಜೆಡಿಎಸ್ ಅಧಿಕಾರ ಹಂಚಿಕೊಳ್ಳಬೇಕೆಂಬುದು ಜಿಪಂನ ಕಾಂಗ್ರೆಸ್ ಸದಸ್ಯರ ವಾದ. ಆದರೆ, ಜೆಡಿಎಸ್ ಸದಸ್ಯರು ಮಾತ್ರ ರಾಜ್ಯಮಟ್ಟದ ಹೊಂದಾಣಿಕೆ ತೀರ್ಮಾನವೇ ಬೇರೆ, ಸ್ಥಳೀಯ ಮಟ್ಟದಲ್ಲಿನ ತೀರ್ಮಾನವೇ ಬೇರೆ, ಯಾವುದೇ ಕಾರಣಕ್ಕೂ ಕಾಂಗ್ರೆಸ್ ಜೊತೆಗೆ ಹೊಂದಾಣಿಕೆ ಬೇಡ, ಬಿಜೆಪಿ ಜೊತೆಗಿನ ಮೈತ್ರಿ ಮುಂದುವರಿಸೋಣ ಎನ್ನುತ್ತಿದ್ದಾರೆ.ಆದರೆ, ಕಾಂಗ್ರೆಸ್‌ನ ಸದಸ್ಯರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರಿಗೆ ಜೆಡಿಎಸ್ ನಾಯಕರನ್ನು ಮೈತ್ರಿಗೆ ಒಪ್ಪಿಸುವಂತೆ ಒತ್ತಡ ಹೇರುತ್ತಿದ್ದಾರೆ.
ಅಧಿಕಾರ ತಪ್ಪಿಸಿದ ಅಸಮಾಧಾನ: ಜಿಪಂ ಚುನಾವಣೆ ನಡೆದ ನಂತರ ಅಧ್ಯಕ್ಷ-ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲಾತಿ ಪ್ರಕಟಿಸುವಾಗ ಸರ್ಕಾರ ಮೊದಲಿಗೆ ಅಧ್ಯಕ್ಷ ಸ್ಥಾನದ ಮೀಸಲಾತಿಯನ್ನು ಬಿಸಿಎಂ-ಎ ವರ್ಗಕ್ಕೆ ಕಲ್ಪಿಸಿತ್ತು. ಅಂದು ಶಾಸಕರಾಗಿದ್ದ ಜಿ.ಟಿ.ದೇವೇಗೌಡರ ಕಟ್ಟಾ ಬೆಂಬಲಿಗ ಜೆಡಿಎಸ್‌ನ ಬೀರಿಹುಂಡಿ ಬಸವಣ್ಣ ಸಹಜವಾಗಿ ಅಧ್ಯಕ್ಷ ಸ್ಥಾನದ ಪ್ರಬಲ ಆಕಾಂಕ್ಷಿಯಾಗಿದ್ದರು. ಆದರೆ, ತಾವು ಅಧ್ಯಕ್ಷರಾಗುವುದನ್ನು ತಪ್ಪಿಸಲು ಸ್ಥಳೀಯ ಕಾಂಗ್ರೆಸ್ ಮುಖಂಡರ ಮಾತು ಕೇಳಿ ಅಂದು ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ಅವರು ಮೀಸಲಾತಿಯನ್ನು ಬದಲಾಯಿಸಿದರು. ಇದರಿಂದ ಸುಲಭದಲ್ಲಿ ದಕ್ಕುತ್ತಿದ್ದ ಅಧ್ಯಕ್ಷ ಸ್ಥಾನ ಕೈತಪ್ಪಿತು ಎಂಬುದು ಬೀರಿಹುಂಡಿ ಬಸವಣ್ಣ ಸೇರಿದಂತೆ ಜೆಡಿಎಸ್‌ನ ಹಿರಿಯ ಸದಸ್ಯರ ಸಮಾಧಾನಕ್ಕೆ ಕಾರಣವಾಗಿದೆ.
ಆಂತರಿಕ ಒಪ್ಪಂದ: ಬಿಸಿಎಂ-ಎ ಮಹಿಳೆಗೆ ಮೀಸಲಾತಿ ಕಲ್ಪಿಸಿದ್ದರಿಂದ ಜೆಡಿಎಸ್‌ನ ನಯಿಮಾ ಸುಲ್ತಾನ 20 ತಿಂಗಳು ಹಾಗೂ ಪರಿಮಳಾ ಶ್ಯಾಂ 40 ತಿಂಗಳು ಅಧ್ಯಕ್ಷ ಸ್ಥಾನ ನೀಡಲು ಜೆಡಿಎಸ್ ನಾಯಕರು ಆಂತರಿಕ ಒಪ್ಪಂದದಂತೆ ಮೊದಲಿಗೆ ಅಧಿಕಾರವಹಿಸಿಕೊಂಡ ನಯಿಮಾಸುಲ್ತಾನ 30 ತಿಂಗಳಾದರೂ ಅಧಿಕಾರ ಬಿಟ್ಟುಕೊಡದ ಕಾರಣ, ಸ್ವಪಕ್ಷೀಯರ ಕೆಂಗಣ್ಣಿಗೆ ಗುರಿಯಾಗಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ಪಂಚಾಯತ್ ರಾಜ್ ನಿಯಮಾವಳಿಯಂತೆ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷರಾಗಿರುವ ಸಚಿವ ಸಾ.ರಾ.ಮಹೇಶ್ ಸಹೋದರ ಸಾ.ರಾ.ನಂದೀಶ್ ಹಂಗಾಮಿ ಅಧ್ಯಕ್ಷರಾಗಿದ್ದಾರೆ. ನಯಿಮಾ ಸುಲ್ತಾನ ರಾಜೀನಾಮೆ ನೀಡಿದ ದಿನವೇ ಉಪಾಧ್ಯಕ್ಷ ಸ್ಥಾನಕ್ಕೆ ಬಿಜೆಪಿಯ ಜಿ.ನಟರಾಜ್ ರಾಜೀನಾಮೆ ನೀಡಿದ್ದಾರೆ.ಹೀಗಾಗಿ ತೆರವಾಗಿರುವ ಅಧ್ಯಕ್ಷ – ಉಪಾಧ್ಯಕ್ಷ ಸ್ಥಾನಗಳಿಗೆ ಫೆ.6ರಂದು ಚುನಾವಣೆ ನಿಗದಿಯಾಗಿದೆ. ಅಷ್ಟರಲ್ಲಿ ಯಾವ್ಯಾವ ರೀತಿಯ ರಾಜಕೀಯ ಪ್ರಹಸನಗಳು ನಡೆಯುತ್ತವೆ ಎಂಬುದನ್ನು ಕಾದು ನೋಡಬೇಕಿದೆ.
● ಗಿರೀಶ್ ಹುಣಸೂರು