ಮೈಸೂರು: ಸತತ 2 ಬಾರಿ ದೇಶದ ನಂಬರ್ ಒನ್ ಸ್ವಚ್ಛನಗರಿ ಪ್ರಶಸ್ತಿಗೆ ಭಾಜನವಾಗಿ, ಹ್ಯಾಟ್ರಿಕ್ ಹಾದಿಯಲ್ಲಿ ಎಡವಿದ ಮೈಸೂರು ಮಹಾ ನಗರಪಾಲಿಕೆ ಈ ಬಾರಿ ಪ್ರಥಮ ಸ್ಥಾನವನ್ನು ತನ್ನದಾಗಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ನಡೆಸಿದೆ. 2018ರ ಜ.1ರಿಂದ ಸ್ವಚ್ಛ ಸರ್ವೇಕ್ಷಣಾ ಕಾರ್ಯ ಆರಂಭವಾಗಲಿರುವುದರಿಂದ ನಗರದ ಸಾರ್ವಜನಿಕರು, ಸಂಘಸಂಸ್ಥೆಗಳನ್ನು ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದಕ್ಕೆ ಪಾಲಿಕೆ ಮುಂದಾಗಿದೆ.
ಸ್ವಚ್ಛ ಸರ್ವೇಕ್ಷಣೆ ಮಾರ್ಗಸೂಚಿ ಪ್ರಕಾರ ಬಯಲು ಮಲವಿಸರ್ಜನೆ ನಿರ್ಮೂಲನೆ, ನವೀನ ಮಾದರಿ ಘನತ್ಯಾಜ್ಯ ವಸ್ತು ವಿಲೇವಾರಿ, ಸಾರ್ವಜನಿಕರಲ್ಲಿ ಆರೋಗ್ಯ ಮತ್ತು ಸ್ವಚ್ಛತೆ ಕುರಿತು ಅರಿವು ಮೂಡಿಸುವುದು, ಶೌಚಾಲಯ, ಸಮುದಾಯ ಶೌಚಾಲಯ ನಿರ್ಮಾಣ, ಅವೈಜಾnನಿಕ ಶೌಚಾಲಯಗಳನ್ನು ವೈಜಾnನಿಕ ಶೌಚಾಲಯಗಳನ್ನಾಗಿ ಪರಿವರ್ತಿಸುವ ಗುರಿ ಹೊಂದಲಾಗಿದೆ.
ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯ ಈ ಬಾರಿ ನಡೆಸಲಿರುವ ಸ್ವಚ್ಛ ಸರ್ವೇಕ್ಷಣೆಯಲ್ಲಿ ದೇಶದ 4041 ನಗರ ಸ್ಥಳೀಯ ಸಂಸ್ಥೆಗಳು ಭಾಗವಹಿಸಲಿದೆ. ಸರ್ವೇಕ್ಷಣೆಯ ವಿಧಾನಗಳನ್ನು 3 ವಿಭಾಗಗಳಾಗಿ ವಿಂಗಡಿಸಿದ್ದು, ನಗರ ಸ್ಥಳೀಯ ಸಂಸ್ಥೆಯಿಂದ ಮಾಹಿತಿ ಸಂಗ್ರಹಣೆಗೆ 1400 ಅಂಕ, ಸ್ಥಳ ಪರಿಶೀಲನೆ ಮಾಹಿತಿ ಸಂಗ್ರಹಣೆಗೆ 1200 ಅಂಕ, ಸಾರ್ವಜನಿಕರ ಪ್ರತಿಕ್ರಿಯೆಗೆ 1400 ಅಂಕ ಸೇರಿದಂತೆ ಪ್ರಶಸ್ತಿಗೆ 4000 ಅಂಕ ನಿಗದಿಪಡಿಸಲಾಗಿದೆ.
ಗುತ್ತಿಗೆ ಪದ್ಧತಿ ರದ್ದು: ಡಿ.1 ರಿಂದ ಪೌರಕಾರ್ಮಿಕರ ಗುತ್ತಿಗೆ ಪದ್ಧತಿ ರದ್ದುಪಡಿಸಲಿದ್ದು, ಪಾಲಿಕೆಯಡಿ ಕಾರ್ಯನಿರ್ವಹಿಸಲಿದ್ದಾರೆ ಎಂದು ಪಾಲಿಕೆ ಆಯುಕ್ತ ಜಿ. ಜಗದೀಶ್ ತಿಳಿಸಿದರು. ನಗರ ಪಾಲಿಕೆ ಹಳೆಯ ಕೌನ್ಸಲಿಂಗ್ ಸಭಾಂಗಣದಲ್ಲಿ ಸೋಮವಾರ ನಡೆದ ಸ್ವಚ್ಛತಾ ಸರ್ವೇಕ್ಷಣೆ ಸಭೆಯಲ್ಲಿ ಮಾತನಾಡಿದರು.
ರಾಜ್ಯ ಸರ್ಕಾರದ ಆದೇಶದಂತೆ ಡಿಸೆಂಬರ್‌ನಲ್ಲಿ ಪೌರಕಾರ್ಮಿಕರ ಗುತ್ತಿಗೆ ಪದ್ಧತಿ ತೆಗೆದು ಹಾಕಲಾಗುವುದು. ಈ ಸಂಬಂಧ ಗುತ್ತಿಗೆಗಳನ್ನು ರದ್ದುಗೊಳಿಸಿ, ಪೌರಕಾರ್ಮಿಕರಿಗೆ ಪಾಲಿಕೆಯಿಂದಲೇ ವೇತನ ಹಾಗೂ ಇನ್ನಿತರ ಸೌಲಭ್ಯ ಒದಗಿಸಲಾಗುವುದು ಎಂದು ಹೇಳಿದರು.
ಸ್ವಚ್ಛತಾ ಆ್ಯಪ್ ಡೌನ್‌ಲೋಡ್ ಮಾಡಿಕೊಂಡು ದೂರು ಕಳುಹಿಸಿ 10 ಗಂಟೆಯೊಳಗೆ ಸಮಸ್ಯೆ ಪರಿಹರಿಸಿ, ಸ್ವಚ್ಛಗೊಳಿಸಿರುವ ಸ್ಥಳದ ಫೋಟೋ ಅಪ್‌ಲೋಡ್ ಮಾಡಲಾಗುತ್ತದೆ. ಇದನ್ನು ಜನ ಸದುಪಯೋಗಪಡಿಸಿಕೊಳ್ಳಬೇಕು ಎಂದು ಮೇಯರ್ ಎಂ.ಜೆ.ರವಿಕುಮಾರ್ ಮನವಿ ಮಾಡಿದರು.