Advertisement

ಮೈಸೂರು ಪ್ರಕರಣ: ಪಕ್ಕಾ ಪ್ಲ್ಯಾನ್ ಮಾಡಿ ಅತ್ಯಾಚಾರ ನಡೆಸಿದ್ದರು ಹೆದ್ದಾರಿ ದರೋಡೆಕೋರರು

11:54 AM Aug 28, 2021 | Team Udayavani |

ಮೈಸೂರು: ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿ ಮಂಗಳವಾರ ಸಂಜೆ ನಡೆದಿದ್ದ ವಿದ್ಯಾರ್ಥಿನಿ ಮೇಲಿನ ಸಾಮೂಹಿಕ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ಐವರು ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ತಮಿಳುನಾಡಿನ ಸತ್ಯಮಂಗಲದಲ್ಲಿ ಐವರು ಆರೋಪಿಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದರು.

Advertisement

ಆರೋಪಿಗಳಲ್ಲಿ ನಾಲ್ವರು ತಮಿಳುನಾಡು ಮೂಲದವರಾದರೆ, ಓರ್ವ ಚಾಮರಾಜನಗರದವನು ಎಂದು ವರದಿಯಾಗಿದೆ. ಆರೋಪಿಗಳು ಮೈಸೂರು ಎಪಿಎಂಸಿಯಲ್ಲಿ ಕೂಲಿ ಕಾರ್ಮಿಕರಾಗಿದ್ದರು. ಈ ಹಿಂದೆಯೂ ಹಲವು ಹೆದ್ದಾರಿ ದರೋಡೆ ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ವರದಿಯಾಗಿದೆ.

ಬಂದಿದ್ದು ದರೋಡೆಗೆ: ಬಂಧಿತ ತಂಡ ಈಗಾಗಲೇ ಮೈಸೂರಿನಲ್ಲಿ ಹಲವು ಪ್ರಕರಣಗಳಲ್ಲಿ ಭಾಗಿಯಾಗಿತ್ತು. ಇದಕ್ಕೂ ಮುನ್ನ ಎರಡು ಮೂರು ಕಡೆಗಳಲ್ಲಿ ಈ ರೀತಿಯ ಕೃತ್ಯಕ್ಕೆ ಕೈಹಾಕಿತ್ತು. ಮಂಗಳವಾರವೂ ದರೋಡೆ ಮಾಡಲು ಹೊಂಚು ಹಾಕಿ ಹೋದವರಿಗೆ ವಿದ್ಯಾರ್ಥಿನಿ ಮತ್ತು ಆಕೆಯ ಸ್ನೇಹಿತ ಸಿಕ್ಕಿಬಿದ್ದಿದ್ದರು.

ಕೃತ್ಯ ನಡೆದ ಸ್ಥಳದಲ್ಲಿ ಈ ಆರೋಪಿಗಳು ನಿರಂತರವಾಗಿ ಓಡಾಡುತ್ತಿದ್ದರು. ಇತ್ತ ಯುವಕ ಹಾಗೂ ಯುವತಿ ಮೂರು ದಿನ ಅದೇ ಸ್ಥಳದಲ್ಲಿ ಕುಳಿತುಕೊಂಡು ಮಾತನಾಡುತ್ತಿರುವುದನ್ನು ಗಮನಿಸಿದ್ದ ತಂಡ ನಾಲ್ಕನೇ ದಿನ ಕೃತ್ಯ ಎಸಗಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Advertisement

ಇದನ್ನೂ ಓದಿ:ಮೈಸೂರು ಘಟನೆ: ತಮಿಳುನಾಡಿನಲ್ಲಿ ಐವರನ್ನು ವಶಕ್ಕೆ ಪಡೆದ ಪೊಲೀಸರು, ಇನ್ನೂ ದೂರು ನೀಡದ ಯುವತಿ

ಸದ್ಯ ಸತ್ಯಮಂಗಲ ಕಾಡಿನಲ್ಲಿ ಸೆರೆ ಹಿಡಿದಿರುವ ಆರೋಪಿಗಳನ್ನು ಪೊಲಿಸರು ಮೈಸೂರಿಗೆ ಕರೆತಂದಿದ್ದಾರೆ. ಅಜ್ಞಾತ ಸ್ಥಳವೊಂದರಲ್ಲಿರಿಸಿ ವಿಚಾರಣೆ ನಡೆಸುತ್ತಿದ್ದಾರೆ.

ವಾಟ್ಸಪ್ ನಲ್ಲೇ ಫೋಟೋ ಗುರುತಿಸುವಿಕೆ: ಪ್ರಕರಣದ ಸಂತ್ರಸ್ತೆ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿ ಪೋಷಕರೊಂದಿಗೆ ಮುಂಬೈಗೆ ಮರಳಿದ್ದಾರೆ. ಪ್ರಕರಣದ ಸಂಬಂಧ ಯಾವುದೇ ಹೇಳಿಕೆ ಕೊಡದೆ ಹೋಗಿರುವ ಕಾರಣ ಪೊಲೀಸರು ಆರೋಪಿಗಳ ಫೋಟೋವನ್ನು ವಾಟ್ಸಪ್ ನಲ್ಲಿ ಕಳುಹಿಸಿ ಗುರುತಿಸಲು ಹೇಳಿದ್ದಾರೆ. ಆಕೆಯ ಸ್ನೇಹಿತನಿಗೂ ಫೋಟೋ ತೋರಿಸಿರುವ ಪೊಲೀಸರು ಆರೋಪಿಗಳ‌ ಬಗ್ಗೆ ಖಾತ್ರಿ ಮಾಡಿಕೊಂಡಿದ್ದಾರೆ.

ಪ್ರವೀಣ್ ಸೂದ್ ಸುದ್ದಿಗೋಷ್ಠಿ: ಪ್ರಕರಣ ಸಂಬಂಧ ಶನಿವಾರ ಮಧ್ಯಾಹ್ನ12. 30 ಕ್ಕೆ ಡಿಜಿಐಜಿಪಿ ಪ್ರವೀಣ್ ಸೂದ್ ಸುದ್ದಿಗೋಷ್ಠಿ ನಡೆಸಲಿದ್ದಾರೆ. ಐವರು ಆರೋಪಿಗಳ ಬಂಧನದ ಬಗ್ಗೆ ಪ್ರವೀಣ್ ಸೂದ್ ಅವರು ಮಾಹಿತಿ ನೀಡಲಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next