Advertisement

Mysore; ಇತಿಹಾಸ ತಿಳಿದರೆ ಮಾತ್ರ ಇತಿಹಾಸ ಸೃಷ್ಟಿಸಲು ಸಾಧ್ಯ: ಡಾ.ಎಚ್.ಸಿ ಮಹದೇವಪ್ಪ

11:03 AM Oct 19, 2023 | Team Udayavani |

ಮೈಸೂರು: ಪಾರಂಪರಿಕ ನಗರಿ ಮೈಸೂರಿನ ಕಟ್ಟಡಗಳು ಎಂದರೆ ನೂರಾರು ವರ್ಷಗಳ ಇತಿಹಾಸವಿದೆ. ಹಾಗಾಗಿ ಇದರ ಇತಿಹಾಸವನ್ನು ತಿಳಿದು ಕಟ್ಟಡಗಳನ್ನು ಉಳಿಸಿಕೊಂಡು ಇತಿಹಾಸ ಸೃಷ್ಟಿಸಬೇಕು ಎಂದು ಸಮಾಜ ಕಲ್ಯಾಣ ಇಲಾಖೆ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ ಮಹದೇವಪ್ಪ  ತಿಳಿಸಿದರು.

Advertisement

ಇಂದು ನಗರದ ಟೌನ್ ಹಾಲ್ ಆವರಣದಲ್ಲಿ ದಸರಾ ಮಹೋತ್ಸವದ ಅಂಗವಾಗಿ ಪುರಾತತ್ವ ಸಂಗ್ರಹಾಲಯಗಳು ಮತ್ತು ಪಾರಂಪರಿಕ ಇಲಾಖೆಯ ವತಿಯಿಂದ ಆಯೋಜಿಸಿದ್ದ ಪಾರಂಪರಿಕ ಟ್ರಿನ್ ಟ್ರಿನ್ ಸೈಕಲ್ ಸವಾರಿ ಕಾರ್ಯಕ್ರಮವನ್ನು ಹಸಿರು ಬಾವುಟ ತೋರಿಸಿ ಸೈಕಲ್ ಸವಾರಿ ಮಾಡುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಅವರು ಪಾರಂಪರಿಕ ಸೈಕಲ್ ಸವಾರಿ ಕಾರ್ಯಕ್ರಮಕ್ಕೆ ಹೆಚ್ಚು ಯುವತಿಯರು ಆಗಮಿಸಿರುವುದು ನನಗೆ ಸಂತಸದ ವಿಷಯ. ಮೈಸೂರಿನಲ್ಲಿ ಅನೇಕ ಪಾರಂಪರಿಕ ಕಟ್ಟಡಗಳಿವೆ ಅವುಗಳನ್ನು ಉಳಿಸಿಕೊಂಡು ಹೋಗುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಮೈಸೂರು ನಗರದ ಪಾರಂಪರಿಕ ಕಟ್ಟಡಗಳು ತನ್ನದೇ ಆದ ಇತಿಹಾಸವನ್ನು ಹೊಂದಿವೆ ವಿಶಿಷ್ಟವಾದ ಆರ್ಕಿಟೆಕ್ಚರ್ ಗಳಿಂದ ನಿರ್ಮಾಣವಾದ ಈ ಈ ಕಟ್ಟಡಗಳು ಮೈಸೂರಿನ ಭವ್ಯ ಇತಿಹಾಸವನ್ನು ತಿಳಿಸುತ್ತವೆ ಎಂದರು.

ದೇಶದಲ್ಲಿ ಪ್ರಥಮ ಬಾರಿಗೆ ನಮ್ಮ ಸರ್ಕಾರವು ಸಂವಿಧಾನದ ಪೀಠಿಕೆಯನ್ನು ಶಾಲಾ ಕಾಲೇಜುಗಳಲ್ಲಿ ಓದಿಸುವಂತಹ ಕಾರ್ಯವನ್ನು ನಡೆಸುತ್ತಿದೆ ಇದರಿಂದ ಭಾರತದ ಸಂವಿಧಾನದ ಇತಿಹಾಸ ಮತ್ತು ಅದರ ಪ್ರಾಮುಖ್ಯತೆ ಎಲ್ಲರಿಗೂ ತಿಳಿಯುತ್ತದೆ. ಮನುಷ್ಯನ ಆಯಸ್ಸನ್ನು ಯಾರೂ ನಿಗದಿ ಮಾಡಲಾಗುವುದಿಲ್ಲ ಅದು ನಮ್ಮ ಆಹಾರ ಪದ್ಧತಿ ಮತ್ತು ಬದುಕಿನ ನಿರ್ವಹಣೆ ಹೇಗೆ ಮಾಡುತ್ತೇವೋ ಎಂಬುದರ ಮೇಲೆ ಆಯಸ್ಸು ನಿರ್ಧಾರವಾಗುತ್ತದೆ. ಅದೇ ರೀತಿಯಾಗಿ ಪಾರಂಪರಿಕ ಕಟ್ಟಡ ನಿರ್ವಹಣೆ ಕಾರ್ಯವು ಸರಿಯಾದ ರೀತಿಯಲ್ಲಿ ನಡೆದರೆ ಮಾತ್ರ ಅವುಗಳು ಕೂಡ ಹೆಚ್ಚು ಕಾಲ ಉಳಿಯಲು ಸಾಧ್ಯವಾಗುತ್ತದೆ. ನನ್ನ ಹುಟ್ಟೂರು ಹದಿನಾರು ಗ್ರಾಮ ಮೈಸೂರಿನ ಇತಿಹಾಸದ ಹಳ್ಳಿಗಳಲ್ಲಿ ಒಂದಾಗಿದೆ ಅಲ್ಲಿಯೂ ಕೂಡ ಅನೇಕ ಮಣ್ಣಿನಿಂದ ಮಾಡಲ್ಪಟ್ಟ ಕಟ್ಟಡಗಳಿವೆ ಈಗಲೂ ಕೂಡ ಉತ್ತಮವಾದ ಸ್ಥಿತಿಯಲ್ಲಿವೆ. ಸಿಮೆಂಟ್ ಕಬ್ಬಿಣ ಇಲ್ಲದೆ ನಿರ್ಮಾಣವಾಗಿರುವ ಅನೇಕ ಕಟ್ಟಡಗಳನ್ನು ನಾವು ಮೈಸೂರಿನಲ್ಲಿ ಗಮನಿಸಬಹುದಾಗಿದೆ. ಈಗಿನ ಅತಿ ಆಧುನಿಕ ತಂತ್ರಜ್ಞಾನಗಳಿಲ್ಲದೆ ಆಗಿನ ಕಾಲದಲ್ಲಿ ದೊಡ್ಡ ದೊಡ್ಡ ಕಟ್ಟಡಗಳನ್ನು ಕರ್ನಾಟಕದಲ್ಲಿ ನಿರ್ಮಾಣ ಮಾಡಲಾಗಿದೆ ಎಂದರು.

ಹಂಪಿ, ಸೋಮನಾಥಪುರ ಇಲ್ಲಿನ ಶಿಲ್ಪಕಲಾ ವೈಭವವು ಕರ್ನಾಟಕದ ಪಾರಂಪರಿಕ ಸಂಪತ್ತನ್ನು ತೋರಿಸುತ್ತದೆ. ಸೈಕಲ್ ಮೂಲಕ ಪಾರಂಪರಿಕ ಕಟ್ಟಡಗಳ ಬಗ್ಗೆ ತಿಳಿದುಕೊಳ್ಳಲು ಆಯೋಜಿಸಿರುವ ಈ ಕಾರ್ಯಕ್ರಮವು ಅರ್ಥಗರ್ಭಿತವಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next