Advertisement

ಮೈಸೂರು:ರಿಂಗ್‌ ರಸ್ತೆಯಲ್ತಿ ಮತ್ತೆ ಬೆಳಗಲಿವೆ ವಿದ್ಯುತ್‌ ದೀಪ

06:03 PM Dec 02, 2022 | Team Udayavani |

ಮೈಸೂರು: ಕೆಲ ವರ್ಷಗಳಿಂದ ಕಗ್ಗತ್ತಲಿನಲ್ಲಿ ಮುಳುಗಿದ್ದ ನಗರದ ವರ್ತುಲ ರಸ್ತೆಯಲ್ಲಿ ವಿದ್ಯುತ್‌ ದೀಪಗಳು ಬೆಳಗಲಿದ್ದು, ಬೀದಿ ದೀಪಗಳ ನಿರ್ವಹಣೆಗೆ ಒಂದು ವರ್ಷದವರೆಗೆ ಗುತ್ತಿಗೆ ನೀಡಲಾಗಿದೆ.

Advertisement

ರಿಂಗ್‌ ರಸ್ತೆಯಲ್ಲಿ ಬೀದಿ ದೀಪಗಳ ಸಮಸ್ಯೆ ಕುರಿತು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಗುರುವಾರ ನಡೆದ ಅಧಿಕಾರಿಗಳ ಸಭೆಯಲ್ಲಿ ಸಂಸದ ಪ್ರತಾಪ್‌ ಸಿಂಹ ಮಾತನಾಡಿ, ಕಳೆದ ಹಲವಾರು ವರ್ಷಗಳಿಂದ ವರ್ತುಲ ರಸ್ತೆಯಲ್ಲಿ ವಿದ್ಯುತ್‌ ದೀಪಗಳು ಇರಲಿಲ್ಲ. ಇದರಿಂದ ಪ್ರಯಾಣಿಕರಿಗೆ ಹಾಗೂ ರಾತ್ರಿ ವೇಳೆ ಸಂಚರಿಸುವ ಸಾರ್ವಜನಿಕ ರಿಗೆ ತೊಂದರೆಯಾಗುತ್ತಿತ್ತು.

ಈ ಹಿಂದೆ ವಿದ್ಯುತ್‌ ದೀಪದ ಬಿಲ್‌ ಕೂಡ 1.19 ಕೋಟಿ ಬಾಕಿ ಇತ್ತು. ಇದರಿಂದ ಕೂಡ ಬೀದಿ ದೀಪ ಬೆಳಗಿಸಲು ಸಾಧ್ಯವಾಗಿರಲಿಲ್ಲ. ಈ ಹಿನ್ನೆಲೆ ಕಳೆದ 6 ತಿಂಗಳಿಂದ ಮುಡಾ ಹಾಗೂ ನಗರಪಾಲಿಕೆ ಅಧಿಕಾರಿಗಳ ಸತತ ಸಭೆಗಳನ್ನು ನಡೆಸಿ ಸಮಸ್ಯೆ ಬಗೆಹರಿಸಲು ಪ್ರಮಾಣಿಕ ಪ್ರಯತ್ನ ನಡೆಸಲಾಗಿತ್ತು. ಅದರಂತೆ ಸೆಸ್ಕ್ಗೆ ಬಾಕಿ ಪಾವತಿಸಬೇಕಿದ್ದ 1.19 ಕೋಟಿ ರೂ.ಗಳನ್ನು ಮುಡಾ ವತಿಯಿಂದ ನೀಡಲಾಗಿದೆ. ಬೀದಿ ದೀಪಗಳ ದುರಸ್ತಿಗಾಗಿ 12 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗುತ್ತಿದ್ದು, ಈ ಹಣವನ್ನು ಮುಡಾ ಭರಿಸಲಿದೆ ಎಂದರು.

ಬೀದಿ ದೀಪಗಳ ನಿರ್ವಹಣೆಗೆ ಒಂದು ವರ್ಷದವರೆಗೆ ಗುತ್ತಿಗೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ವಿದ್ಯುತ್‌ ಬಿಲ್‌ ಪಾವತಿ ಹಾಗೂ ನಿರ್ವಹಣೆ ಯನ್ನು ನಗರಪಾಲಿಕೆ ಮಾಡಲಿದೆ ಎಂದು ತಿಳಿಸಿದರು.

10 ದಿನಗಳಲ್ಲಿ ವಿದ್ಯುತ್‌ ದೀಪ ಬೆಳಗಲಿದೆ: ನಗರಪಾಲಿಕೆ ಆಯುಕ್ತ ಲಕ್ಷ್ಮೀಕಾಂತ್‌ ರೆಡ್ಡಿ ಮಾತನಾಡಿ, ವರ್ತುಲ ರಸ್ತೆ 45 ಕಿ.ಮೀ. ಸುತ್ತಳತೆ ಹೊಂದಿದ್ದು, ಎರಡು ಬದಿಯಲ್ಲಿ ವಿದ್ಯುತ್‌ ದೀಪ ಅಳವಡಿಸುವ ಕಾರಣ 86 ಕಿ.ಮೀ. ಕೇಬಲ್‌ ಅಳವಡಿಸಲಾಗಿದೆ. ಇದೀಗ ಮಣಿಪಾಲ್‌ ಆಸ್ಪತ್ರೆ ವೃತ್ತದಿಂದ ನಂಜನಗೂಡು ಜಂಕ್ಷನ್‌ ವರೆಗೆ ಇಂದಿನಿಂದ ವಿದ್ಯುತ್‌ ದೀಪಗಳು ಬೆಳಗಲಿವೆ. ವರ್ತುಲ ರಸ್ತೆಯ ಸುತ್ತಾ ಒಟ್ಟು 4550 ಎಲ್‌ ಇಡಿ ಬಲ್ಬ್ ಗಳನ್ನು ಅಳವಡಿಸಬೇಕಾಗಿದ್ದು, ಈಗಾಗಲೇ 3550 ಬಲ್ಬ್ ಗಳನ್ನು ಅಳವಡಿಸಲಾಗಿದೆ.

Advertisement

ಮುಂದಿನ 10 ದಿನಗಳಲ್ಲಿ ಬಲ್ಬ್ ಹಾಗೂಕೇಬಲ್‌ ಅಳವಡಿಕೆ ಕಾರ್ಯ ಪೂರ್ಣಗೊಳ್ಳಲಿದೆ. ಇದರಲ್ಲಿ ವಿವಿಧ ಸ್ಥಳಗಳಲ್ಲಿ20 ಹೈ ಮಾಂಡ್ ದೀಪಗಳನ್ನು ಅಳವಡಿಸಲಾಗಿದೆ. 80 ವಿದ್ಯುತ್‌ ಕಂಬಗಳನ್ನು ಬದಲಿಸಲಾಗಿದೆ. ಉಳಿದಂತೆ ಮಣಿಪಾಲ್‌ ಆಸ್ಪತ್ರೆಯಿಂದ ದಟ್ಟಗಳ್ಳಿ ಮಾರ್ಗವಾಗಿ ನಂಜನಗೂಡು ಜಂಕ್ಷನ್‌ ವರೆಗೆ ಮುಂದಿನ 10 ದಿನಗಳಲ್ಲಿ ವಿದ್ಯುತ್‌ ದೀಪ ಬೆಳಗಲಿದೆ ಎಂದು ವಿವರಿಸಿದರು.

ಸಿಸಿ ಕ್ಯಾಮೆರಾ ಅಳವಡಿಕೆ: ಈ ಹಿಂದೆ ವರ್ತುಲ ರಸ್ತೆಯ ಸುತ್ತಾ ವಿವಿಧ ಸ್ಥಳಗಳಲ್ಲಿ ವಿದ್ಯುತ್‌ ಕೇಬಲ್, ಕಂಬ, ಬಲ್ಬ್ ಗಳ ಕಳವು ಪ್ರಕರಣಗಳು ವರದಿಯಾಗಿದ್ದವು. ಈ ಹಿನ್ನೆಲೆಯಲ್ಲಿ ಸುರಕ್ಷತೆಗೆ ಆದ್ಯತೆ ನೀಡಲಾಗಿದ್ದು, ವರ್ತುಲ ರಸ್ತೆಯ ಪ್ರತಿ 2 ಕಿ.ಮೀ.ನಲ್ಲಿ ಸಿಸಿ ಕ್ಯಾಮೆರಾ ಅಳವಡಿಸಲು ಚಿಂತನೆ ನಡೆಸಲಾಗಿದೆ. ಅಲ್ಲಿಯವರೆಗೆ ಆಯಾ ಪೊಲೀಸ್‌ ಠಾಣೆ ಪೊಲೀಸರು ತಮ್ಮ ವ್ಯಾಪ್ತಿಯಲ್ಲಿ ಎರಡು ಸುತ್ತು ಗಸ್ತು ತಿರುಗುವಂತೆ ಆಯುಕ್ತರಿಗೆ ಮನವಿ ಮಾಡಲಾಗುವುದು ಎಂದು ಸಂಸದ ಪ್ರತಾಪಸಿಂಹ ತಿಳಿಸಿದರು. ಸಭೆಯಲ್ಲಿ ಪಾಲಿಕೆ ಅಧೀಕ್ಷಕ ಅಭಿಯಂತರ ಮಹೇಶ್‌, ಅಭಿವೃದ್ಧಿ ಅಧಿಕಾರಿ ಸತ್ಯಮೂರ್ತಿ, ಸೆಸ್ಕ್ನ ಎಸ್‌ ಇ ನಾಗೇಶ್‌ ಇನ್ನಿತರರು ಹಾಜರಿದ್ದರು.

ಶೀಘ್ರದಲ್ಲೇ ತ್ಯಾಜ್ಯವಿಲೇವಾರಿ ಆರಂಭ: ಸಂಸದ ನಗರದ ವಿದ್ಯಾರಣ್ಯಪುರಂನ ಸೀವೇಜ್‌ ಫಾರಂನಲ್ಲಿ 6.5 ಲಕ್ಷ ಟನ್‌ ಕಸ ಸಂಗ್ರಹವಾಗಿದ್ದು, ಇದರ ವಿಲೇವಾರಿ ಸವಾಲಾಗಿತ್ತು. ಈ ಹಿನ್ನೆಲೆಯಲ್ಲಿ 57 ಕೋಟಿ ರೂ. ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿಗೆ ಮುಹೂರ್ತ ನಿಗಧಿಪಡಿಸಲಾಗಿದೆ. ಈ ಸಂಬಂಧ ಆದಷ್ಟು ಶೀಘ್ರವಾಗಿ ಟೆಂರ್ಡ ಪ್ರಕ್ರಿಯೆ ಪ್ರಾರಂಭವಾಗಲಿದೆ. ಸಂಗ್ರಹವಾಗಿರುವ ತ್ಯಾಜ್ಯದಲ್ಲಿ ಡಾಂಬರ್‌, ಸಿಮೆಂಟ್‌ಗೆ ಬೇಕಾದ ಕಚ್ಚಾ ವಸ್ತುಗಳನ್ನು ಬೇರ್ಪಡಿಸಿ ಉಳಿದ ಕಸವನ್ನು ಗೊಬ್ಬರವಾಗಿ ಪರಿವರ್ತಿಸಲಾಗುತ್ತದೆ ಎಂದು ಸಂಸ ದ ಪ್ರತಾಪಸಿಂಹ ಹೇಳಿದರು. ನಗರದಲ್ಲಿ ಉತ್ಪತ್ತಿಯಾಗುವ ಕಸವನ್ನು ಸದ್ಯ ವಿದ್ಯಾರಣ್ಯ ಪುರಂನಲ್ಲಿರುವ ಸೀವೇ ಜ್‌ ಫಾರಂನಲ್ಲಿ ಸುರಿಯಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೆಸರೆ, ರಾಯನಕೆರೆ ಹಾಗೂ ವಿದ್ಯಾರಣ್ಯಪುರಂನಲ್ಲಿ ತ್ಯಾಜ್ಯ ಸಂಗ್ರಹ ಘಟಕಗಳನ್ನು ಆರಂಭಿಸಲಾಗಿತ್ತದೆ. ಕೆಸರೆಯಲ್ಲಿ 200 ಟನ್‌ ತ್ಯಾಜ್ಯ ಸಂಗ್ರಹ ಸಾಮರ್ಥ್ಯ, ರಾಯನಕೆರೆಯಲ್ಲಿ 150 ಟನ್‌, ವಿದ್ಯಾರಣ್ಯಪುರಂನಲ್ಲಿ 250 ಟನ್‌ ಸಾಮರ್ಥ್ಯದ ಕಸ ಸಂಗ್ರಹ ಸ್ಥಾಪಿಸಲಾಗುತ್ತದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next