Advertisement
10 ದಿನ ನಡೆಯುವ ಮೈಸೂರು ದಸರೆ: ನಾಡ ಅದಿದೇವತೆ ದೇವಿ ಚಾಮುಂಡೇಶ್ವರಿ ಅಗ್ರಪೂಜೆಯೊಂದಿಗೆ ಈ ವರ್ಷದ ದಸರಾ ಮಹೋತ್ಸವಕ್ಕೆ ಹಿರಿಯ ಸಾಹಿತಿ ನಾಡೋಜ ಡಾ. ಹಂಪ ನಾಗರಾಜಯ್ಯ ಅವರಿಂದ ಚಾಲನೆ ಸಿಕ್ಕಿದ್ದು, 10 ದಿನಗಳ ಕಾಲ ನಡೆಯುವ ಮೈಸೂರು ದಸರೆಯನ್ನು ಕಣ್ತುಂಬಿಕೊಳ್ಳಲು ದೇಶ-ವಿದೇಶಗಳಿಂದ ಲಕ್ಷಾಂತರ ಪ್ರವಾಸಿಗರು ಆಗಮಿಸುತ್ತಾರೆ. ಹೀಗಾಗಿಯೇ ನಾಡಿನ ಎಲ್ಲಾ ರಸ್ತೆಗಳು ಮೈಸೂರಿನತ್ತ ಮುಖಮಾಡುತ್ತವೆ. ಮೈಸೂರಿಗೆ ಬರುವವರು-ಹೋಗುವವರ ಗಿಜಿಗಿಜಿಯಲ್ಲಿ ನಗರದ ಇಡೀ ರಸ್ತೆಗಳು, ಪ್ರವಾಸಿ ತಾಣಗಳಲ್ಲಿ ಎಲ್ಲಿ ನೋಡಿ ದರೂ ಜನವೋ ಜನ.
Related Articles
Advertisement
ಹಾಗೆಯೇ ನಗರದ ಹೃದಯ ಭಾಗದ ಪ್ರಮುಖ ರಸ್ತೆಗಳು ಮಾತ್ರವಲ್ಲದೆ, ದೊಡ್ಡಕೆರೆ ಮೈದಾನ, ಕೆ.ಆರ್. ವೃತ್ತ, ಚಾಮರಾಜ ವೃತ್ತ, ಜಯಚಾಮರಾಜ ವೃತ್ತ(ಹಾರ್ಡಿಂಜ್), ರಾಮಸ್ವಾಮಿ ವೃತ್ತ, ರೈಲ್ವೆ ನಿಲ್ದಾಣ ಸಮೀಪ, ಗನ್‌ಹೌಸ್, ಎಲ್‌ಐಸಿ ವೃತ್ತ ಸೇರಿದಂತೆ 100 ವೃತ್ತಗಳಲ್ಲಿ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಭುವನೇಶ್ವರಿ ದೇವಿ, ಸೋಮನಾಥೇಶ್ವರ ದೇವಾಲಯ, ಮೈಸೂರು ರಾಜಮನೆತನದ ಪ್ರಮುಖರು ಸೇರಿದಂತೆ 65 ಪ್ರತಿಕೃತಿಗಳನ್ನು ಸ್ಥಾಪಿಸಲಾಗಿದೆ. ಒಟ್ಟಾರೆ, ಮೈಸೂರಿನ ದಸರೆ ವಿದ್ಯುತ್ ದೀಪಾಲಂಕಾರಕ್ಕೆ 2 ಲಕ್ಷದ 42 ಸಾವಿರದ 12 ಯೂನಿಟ್ ಬಳಕೆಯಾಗಲಿದೆ. ಇದೇ ಮೊದಲ ಬಾರಿಗೆ ದಸರಾ ವಿದ್ಯುತ್ ದೀಪಾಲಂಕಾರ ಉಪಸಮಿತಿಯಿಂದ ಆಯೋಜಿಸಿರುವ ಡ್ರೋನ್ ಶೋ ನವರಾತ್ರಿ ಹಬ್ಬಕ್ಕೆ ಮತ್ತಷ್ಟು ಮೆರುಗು ನೀಡಿದೆ. ದಸರಾ ದಿನಗಳಲ್ಲಿ ರಾತ್ರಿ ವೇಳೆಯಲ್ಲಿ ದೀಪಾಲಂಕಾರ ವ್ಯವಸ್ಥೆಯನ್ನು ವೀಕ್ಷಿಸಲು ದೇಶ- ವಿದೇಶಗಳಿಂದ ಪ್ರವಾಸಿಗರು ಮೈಸೂರಿಗೆ ಆಗಮಿಸುತ್ತಾರೆ. ರಾತ್ರಿ ಹೊತ್ತು ಅರಮನೆಯ, ಮೈಸೂರು ಬೀದಿಗಳ ಫೋಟೊಗ್ರಫಿ ಮಾಡುವ ದೃಶ್ಯಗಳು ಇಲ್ಲಿ ಸಾಮಾನ್ಯ.
– ಸತೀಶ್ ದೇಪುರ