ಶಿವಮೊಗ್ಗ: ಮೈಸೂರು ದಸರಾದ ಪ್ರಮುಖ ಆಕರ್ಷಣೆಯಾಗಿರುವ ಜಂಬೂಸವಾರಿಗೆ ಈ ಬಾರಿ ಶಿವಮೊಗ್ಗದ ಸಕ್ರೆಬೈಲು ಆನೆ ಬಿಡಾರದಿಂದಲೂ ಆನೆಗಳನ್ನು ಕರೆದುಕೊಂಡು ಹೋಗಲು ಸಿದ್ಧತೆ ನಡೆಯುತ್ತಿದೆ.
ಪ್ರತಿ ವರ್ಷ ಆನೆಗಳನ್ನು ಕರೆತರಲು ಎರಡು ತಿಂಗಳು ಮೊದಲೆ ಸಿದ್ಧೆತೆ ಆರಂಭವಾಗುತ್ತದೆ. ಪ್ರತಿ ಬಾರಿ ಕೊಡಗಿನ ದುಬಾರೆ, ಚಾಮರಾಜನಗರದ ಕೆ.ಗುಡಿ, ಬಂಡೀಪುರದ ರಾಮಾಪುರ, ನಾಗರಹೊಳೆಯ ಮತ್ತಿಗೋಡು, ಬಳ್ಳೆ ಶಿಬಿರಗಳಿಗೆ ಅರಣ್ಯಾಧಿಕಾರಿ, ವನ್ಯಜೀವಿ ವೈದ್ಯಾಧಿಕಾರಿ ಹಾಗೂ ಸಿಬ್ಬಂದಿ ತೆರಳಿ ಆನೆಗಳ ಆರೋಗ್ಯ, ದೈಹಿಕ ಸ್ಥಿತಿಗತಿ ಪರಿಶೀಲಿಸಿ ಆಯ್ಕೆ ಮಾಡಲಾಗುತ್ತದೆ.
ಇದನ್ನೂ ಓದಿ:Funding; Congress-ಚೀನಾದ್ದು”ಹೊಕ್ಕುಳಬಳ್ಳಿಯ ಸಂಬಂಧ”: ಅನುರಾಗ್ ಠಾಕೂರ್
ಈ ಬಾರಿ ಸಕ್ರೆಬೈಲಿನಲ್ಲೂ ಆನೆಗಳ ಪರಿಶೀಲನೆ ನಡೆಸಲಾಗುತ್ತಿದೆ. ಎಲ್ಲ ಬಿಡಾರಗಳಿಂದ 20ರಿಂದ 25 ಆನೆಗಳ ಪಟ್ಟಿಯನ್ನು ಮಾಡಿ 14 ಆನೆಗಳನ್ನು ಅಂತಿಮಗೊಳಿಸಲಾಗುತ್ತದೆ. ಸೋಮವಾರ ಶಿವಮೊಗ್ಗದ ವನ್ಯಜೀವಿ ವಲಯ ಅಧಿಕಾರಿಗಳು, ಮೈಸೂರು ವನ್ಯಜೀವಿ ವಲಯದ ಅಧಿಕಾರಿಗಳು ಬಿಡಾರಕ್ಕೆ ಭೇಟಿ ಆನೆಗಳ ಪರಿಶೀಲನೆ ನಡೆಸಿದ್ದಾರೆ. ಒಂದು ಅಥವಾ ಎರಡು ಆನೆಗಳನ್ನು ಮೈಸೂರು ದಸರಾಗೆ ಕರೆದೊಯ್ಯುವ ಸಾಧ್ಯತೆ ಇದೆ.
ನಾಲ್ಕೈದು ಆನೆ ಇದೆ: ಪ್ರತಿ ವರ್ಷ ಮೈಸೂರಿನಂತೆ ಶಿವಮೊಗ್ಗದಲ್ಲೂ ದಸರಾ ಜಂಬೂ ಸವಾರಿ ನಡೆಯುತ್ತಿದೆ. ಚಾಮುಂಡೇಶ್ವರಿ ವಿಗ್ರಹವುಳ್ಳ ಬೆಳ್ಳಿ ಅಂಬಾರಿಯನ್ನು ಸಾಗರ ಆನೆ ಹೊರುತ್ತದೆ. ಆಲೆ, ಹೇಮಾವತಿ, ಭಾನುಮತಿ ಆನೆಗಳು ಸಾಥ್ ನೀಡುತ್ತವೆ. ಇವುಗಳು ಮೆರವಣಿಗೆಯಲ್ಲಿ ಪಾಲ್ಗೊಳ್ಳುವ ಅಭ್ಯಾಸ ಇರುವುದರಿಂದ ಇದೇ ಆನೆಗಳನ್ನು ಅವರು ಆಯ್ಕೆ ಮಾಡುವ ಸಾಧ್ಯತೆ ಸಹ ಇದೆ. ಮೈಸೂರಿಗೆ ಆನೆಗಳನ್ನು ಕಳುಹಿಸಿದರೆ ಶಿವಮೊಗ್ಗ ದಸರಾಕ್ಕೆ ತೊಂದರೆಯಾಗುವ ಸಾಧ್ಯತೆ ಇದ್ದು ಇದನ್ನು ಅಧಿಕಾರಿಗಳು ಗಮನಕ್ಕೆ ತಂದಿದ್ದಾರೆ.