Advertisement
ಟೆಂಟ್ ಪೆಗ್ಗಿಂಗ್‌ನ ರೋಚಕತೆಯನ್ನು ತದೇಕಚಿತ್ತವಾಗಿ ನೋಡಿದರು. ಜತೆಗೆ ಡ್ರೋಣ್ ಲೈಟ್ ಶೋನ ದೃಶ್ಯ ವೈಭವದಲ್ಲಿ ಜನ ಸಾಗರ ಮಿಂದೆದ್ದಿತು. 5 ವರ್ಷಗಳ ಬಳಿಕ ದಸರೆ ಅಂಗವಾಗಿ ಕವಾಯತು ಮೈದಾನದಲ್ಲಿ ಮತ್ತೆ ಮೋಟರ್ ಸೈಕಲ್ ಸ್ಟಂಟ್ಸ್ ನೋಡುಗರನ್ನು ಆಕರ್ಷಿಸಿತು. ಮಿಲಿಟರಿ ಪೊಲೀಸ್ ಕೋನರ್ ಮೋಟಾರ್ ಸೈಕಲ್ ತಂಡ “ಶ್ವೇತಾಶ್ವ’ 25 ನಿಮಿಷ ನಡೆಸಿಕೊಟ್ಟ ಬೈಕ್ ಕಸರತ್ತು ನೋಡುಗರ ಎದೆ ಝಲ್ ಎನಿಸುವಂತಿತ್ತು. ಬೈಕಿನಲ್ಲಿ ನಾನಾ ಭಂಗಿಗಳಲ್ಲಿ ಕುಳಿತು, ನಿಂತು ಸಾಹಸ ಮೆರೆದ ಸೈನಿಕರು ವೀಕ್ಷಕರನ್ನು ರೋಮಾಂಚನಗೊಳಿಸಿದರು. ಕರ್ನಾಟಕದವರೆಯಾದ ಈರಪ್ಪ ಸೇರಿದಂತೆ ಮೂವರು ಬೈಕ್ ಮೂಲಕ ಬೆಂಕಿಯ ರಿಂಗ್‌ನಲ್ಲಿ ಹೋದ ದೃಶ್ಯ ಹಾಗೂ ಮಣಿಶೇಖರನ್ ಅವರು ಬೈಕ್ ಮೂಲಕ ಟ್ಯೂಬ್ ಲೈಟ್ ಗಳನ್ನು ಒಡೆದಿದ್ದು ಅಕ್ಷರಶಃ ರೋಮಾಂಚನ ಉಂಟು ಮಾಡಿತು. ಬೈಕಿನ ಮೇಲೆ ನಿಂತು, ವ್ಯಾಯಾಮ ಮಾಡುತ್ತ, ಏಣಿ ಏರುತ್ತ, ಒಂಟಿ ಕಾಲಿನಲ್ಲಿ ಬೈಕ್ ಮೆಲೆ ಕಸರತ್ತು ಪ್ರದರ್ಶಿಸಿದರು.
Related Articles
Advertisement
ಗಮನ ಸೆಳೆದ ಪರೇಡ್: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್ ಅವರು ಕಾರ್ಯಕ್ರಮದಲ್ಲಿ ಅಶ್ವಾರೋಹಿ ಪಡೆಯ ಎರಡು ದಳ, ಕೆಎಸ್‌ಆರ್‌ಪಿ ತುಕಡಿಗಳು, ನಗರ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಗೃಹ ರಕ್ಷಕ ದಳ, ಎನ್ಸಿಸಿಯ ಭೂದಳ, ನೌಕದಳ, ವಾಯುದಳ, ಸ್ಕೌಟ್ಸ್ ಮತ್ತು ಗೈಡ್ಸ್, ರೈಲ್ವೆ ರಕ್ಷಕ ದಳ, ಪೊಲೀಸ್ ಪಬ್ಲಿಕ್ ಸ್ಕೂಲ್, ಭಾರತ ಸೇವಾದಳ ಬಾಲಕ, ಬಾಲಕಿಯರು, ಪೊಲೀಸ್ ಬ್ಯಾಂಡ್ ಸೇರಿದಂತೆ 18 ತುಕಡಿಗಳಿಂದ ಗೌರವ ವಂದನೆ ಸ್ವೀಕರಿಸಿದರು. ಈ ವೇಳೆ ಮೂರು ಸುತ್ತು 27 ಕುಶಾಲತೋಪು ಸಿಡಿಸಲಾಯಿತು. ಸುಮಂತ್ ವಸಿಷ್ಠ ಮತ್ತು ತಂಡದವರು ನಾಡಗೀತೆ ಪ್ರಸ್ತುತಪಡಿಸಿದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಚಿವರಾದ ಕೆ.ವೆಂಕಟೇಶ್ ಮತ್ತು ಶಾಸಕರು, ಅಧಿಕಾರಿಗಳು ಇದ್ದರು.
ಮನಸೂರೆಗೊಂಡ ಪಂಜಿನ ಕವಾಯತು: ಕರ್ನಾಟಕ ಪೊಲೀಸ್ ಇಲಾಖೆಯ ಪಂಜಿನ ಕವಾಯತು ಕಾರ್ಯಕ್ರಮಕ್ಕೆ ಜನ ಫಿದಾ ಆದರು. 300 ಪೊಲೀಸರು, 600 ಪಂಜು ಹಿಡಿದು ಮನಮೋಹಕ ದೃಶ್ಯಗಳು, ಅಕ್ಷರಾಕೃತಿ ರಚಿಸಿದರು. ಪೊಲೀಸ್ ಬ್ಯಾಂಡ್‌ನ ಹಿಮ್ಮೇಳದಲ್ಲಿ ವಿವಿಧ ದೈಹಿಕ ಕಸರತ್ತು ಮಾಡುತ್ತ ವಿವಿಧ ವಿನ್ಯಾಸದ ಆಕೃತಿ ಮೂಡಿಸಿದರು. ಕ್ರಾಸ್ ಕಟ್ ಮೂಲಕ ಬಣ್ಣ ಬಣ್ಣದ ರಂಗೋಲಿ ಮಾದರಿ ನಿರ್ಮಿಸಿ ಚಿತ್ತಾರ ಮೂಡಿಸಿದರು. ರಿಂಗ್ ರೋಟೇಷನ್, ಸುದರ್ಶನ ಚಕ್ರ, ಸ್ವಸ್ತಿಕ್ ಮಾದರಿ ನಿರ್ಮಿಸಿ ಗಮನ ಸೆಳೆದರು. ಈ ಮುನ್ನ ನಡೆದ ಡಿಎನ್‌ಎ ಎಂಟರ್ ಪ್ರೈಸಸ್ ತಂಡದ ಸಾಂಸ್ಕೃತಿಕ ಕಾರ್ಯಕ್ರಮ ಇಡೀ ದಸರಾ ವೈಭವಕ್ಕೆ ಮೆರುಗು ನೀಡಿದವು. ಆರಂಭದಲ್ಲಿ 300ಕ್ಕೂ ಹೆಚ್ಚು ಕಲಾವಿದರು 20 ನಿಮಿಷ ನಾನಾ ಗೀತೆಗೆ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರಿಗೆ ರಸದೌತಣ ನೀಡಿದರು.
“ಐಗಿರಿ ನಂದಿನಿ ನಂದಿತ ಮೇದಿನಿ ವಿಶ್ವ ವಿನೋದಿನಿ’ ಗೀತೆಗೆ ನೃತ್ಯ ಮಾಡಿ ತಾಯಿ ಚಾಮುಂಡೇಶ್ವರಿ ನೆನೆದರು. “ಬಾರಿಸು ಕನ್ನಡ ಡಿಂಡಿಮವ’, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು’ ಗೀತೆಗಳಿಗೆ ನೃತ್ಯ ಮಾಡುವ ಮೂಲಕ ಕನ್ನಡ ಅಭಿಮಾನ ಸಾರಿದರು. ಡ್ಯಾನ್ಸ್ ವಿತ್ ಅಪ್ಪು’ ಗೀತೆಗೆ ಅವರ ಭಾವ ಚಿತ್ರ ಹಿಡಿದು ನೃತ್ಯ ಪ್ರದರ್ಶಿಸುವ ಮೂಲಕ ಪುನೀತ್ರಾಜ್ ಕುಮಾರ್ ನೆನೆದರು. ಶಂಕರ್‌ನಾಗ್ ಅವರ “ಸಂತೋಷಕ್ಕೆ ಈ ಹಾಡು ಸಂತೋಷಕ್ಕೆ’ ಹಾಡಿಗೆ, ಶಿವರಾಜ್ ಕುಮಾರ್ ಅವರ ಭಜರಂಗಿ’ ಗೀತೆಗೆ ಹಾಗೂ ದರ್ಶನ್ ಅವರ ಸಾರಥಿ’ ಸಿನಿಮಾದ ಗೀತೆಗೆ ನೃತ್ಯ ಮಾಡಿ ರಂಜಿಸಿದರು. ನೃತ್ಯದ ಮಧ್ಯ ಪ್ರದರ್ಶನಗೊಂಡ ಮಲ್ಲಕಂಬ ಆಕರ್ಷಿಸಿತು.