Advertisement

ಅರ್ಜುನ ಸಾರಥ್ಯಕ್ಕೆ ಕಾವಾಡಿ-ಮಾವುತ ಕಾಳಗ

06:00 AM Aug 31, 2018 | |

ಮೈಸೂರು: ನಾಡಹಬ್ಬ ಮೈಸೂರು ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆ ಜಂಬೂಸವಾರಿ ಮೆರವಣಿಗೆಯಲ್ಲಿ 750 ಕೆ.ಜಿ.ತೂಕದ ಚಿನ್ನದ ಅಂಬಾರಿ ಹೊತ್ತು ಸಾಗುವ ದಸರಾ ಗಜಪಡೆಯ ಕ್ಯಾಪ್ಟನ್‌ ಅರ್ಜುನನನ್ನು ಮುನ್ನಡೆಸುವ ಸಲುವಾಗಿ ಮಾವುತ-ಕಾವಾಡಿ ನಡುವೆ ಮುಸುಕಿನ ಗುದ್ದಾಟ ಆರಂಭವಾಗಿದೆ.

Advertisement

ಜಂಬೂಸವಾರಿಯನ್ನು ಕಣ್ತುಂಬಿಕೊಳ್ಳಲು ಬಂದು ಅರಮನೆ ಆವರಣದಿಂದ ಬನ್ನಿಮಂಟಪ ಮೈದಾನದವರೆಗೆ ಸುಮಾರು 4 ಕಿ.ಮೀ ದೂರ ಮೆರವಣಿಗೆ ಸಾಗುವ ಮಾರ್ಗದ ಇಕ್ಕೆಲಗಳಲ್ಲಿ ಜಾಗ ಸಿಕ್ಕ ಕಡೆಗಳಲ್ಲೆಲ್ಲಾ ನಿಂತು ನೋಡುವ ಲಕ್ಷೋಪ ಲಕ್ಷ ಜನರು ಅಂಬಾರಿಯನ್ನು ಹೊತ್ತು ತರುವ ಅರ್ಜುನನನ್ನು ಕಂಡಕೂಡಲೇ ಭಕ್ತಿಭಾವದಿಂದ ಜೈಕಾರ ಕೂಗಿ, ಧನ್ಯತೆ ಮೆರೆಯುತ್ತಾರೆ. ಇಷ್ಟೆಲ್ಲಾ ಗೌಜು-ಗದ್ದಲದ ನಡುವೆ ಗಜ ಗಾಂಭೀರ್ಯದಿಂದ ಸಾಗುವ ಅರ್ಜುನನನ್ನು ಮುನ್ನಡೆಸುವ ಮಾವುತನಿಗೂ ವಿಶೇಷ ಗೌರವ ಸಲ್ಲುತ್ತದೆ. ಇದಕ್ಕಾಗಿಯೇ ಈ ಹಿಂದೆ ಹಲವು ವರ್ಷಗಳ ಕಾಲ ಅರ್ಜುನನ ಮಾವುತನಾಗಿದ್ದ ದೊಡ್ಡಮಾಸ್ತಿ ನಿಧನರಾದ ಬಳಿಕ ಕಳೆದ ಮೂರು ವರ್ಷಗಳಿಂದ ಅರ್ಜುನನನ್ನು ಮುನ್ನಡೆಸುವ ವಿಷಯದಲ್ಲಿ ಮಾವುತ ವಿನು ಮತ್ತು ಕಾವಾಡಿಯಾಗಿರುವ ದೊಡ್ಡಮಾಸ್ತಿಯ ಮಗ ಸಣ್ಣಪ್ಪ (ಮಹೇಶ)ನ ನಡುವೆ ಮುಸುಕಿನ ಗುದ್ದಾಟ ನಡೆಯುತ್ತಿದೆ.

ಮಾವುತ ದೊಡ್ಡಮಾಸ್ತಿ ಜೊತೆಗೆ ಅರ್ಜುನ ಹೊಂದಿಕೊಂಡಿದ್ದರಿಂದ ನಿವೃತ್ತಿ ನಂತರವೂ 2015ರಲ್ಲಿ ದೊಡ್ಡಮಾಸ್ತಿಯನ್ನು ಅರ್ಜುನನನ್ನು ಮುನ್ನಡೆಸಲು ಬಳಸಿಕೊಳ್ಳಲಾಗಿತ್ತು. ದೊಡ್ಡ ಮಾಸ್ತಿ ನಿಧನಾ ನಂತರ 2016ರಲ್ಲಿ ಅರ್ಜುನ ದೊಡ್ಡ ಮಾಸ್ತಿಯ ಕುಟುಂಬದವರ ಜೊತೆಗೆ ಹೊಂದಿಕೊಂಡಿದೆ ಎಂಬ ಕಾರಣಕ್ಕೆ ದೊಡ್ಡ ಮಾಸ್ತಿಯ ಮಗ ಸಣ್ಣಪ್ಪನಿಗೆ ಅಂಬಾರಿ ಆನೆ ಮುನ್ನಡೆಸುವ ಜವಾಬ್ದಾರಿ ನೀಡಲಾಗಿತ್ತು. ಆ ಕಾರ್ಯದಲ್ಲಿ ಸಣ್ಣಪ್ಪ ಯಶಸ್ವಿಯಾಗಿದ್ದ. 2017ರಲ್ಲಿ ಮಾವುತ ಆನೆಯನ್ನು ಮುನ್ನಡೆಸಬೇಕು ಎಂಬ ತೀರ್ಮಾನದಿಂದ ಕಾವಾಡಿ ಸಣ್ಣಪ್ಪನ ಬದಲಿಗೆ ಅರ್ಜುನನ್ನು ಮುನ್ನಡೆಸುವ ಹೊಣೆಯನ್ನು ಮಾವುತ ವಿನುಗೆ ವಹಿಸಲಾಗಿತ್ತು. ವಿನು ಕೂಡ ಅರ್ಜುನನನ್ನು ಮುನ್ನಡೆಸುವಲ್ಲಿ ಯಶಸ್ವಿಯಾಗಿದ್ದ.ಈ ಬೆಳವಣಿಗೆಯಿಂದ ಅಸಮಾಧಾನಗೊಂಡಿರುವ ಸಣ್ಣಪ್ಪ, ಇದೀಗ ಮತ್ತೂಮ್ಮೆ ತನಗೆ ಅರ್ಜುನನ್ನು ಮುನ್ನಡೆಸುವ ಅವಕಾಶ ಕೊಡುವಂತೆ ಅರಣ್ಯ ಇಲಾಖೆ ಅಧಿಕಾರಿಗಳಲ್ಲಿ ಮನವಿ ಮಾಡಿದ್ದಾನೆ. ಈ ಸಂಬಂಧ ಸೆ.2 ರಂದು ಅರಣ್ಯ ಇಲಾಖೆ ಅಧಿಕಾರಿಗಳು ನಿರ್ಧಾರ ಕೈಗೊಳ್ಳಲಿದ್ದಾರೆ.

ಗಜಪಡೆಯ ಕ್ಯಾಪ್ಟನ್‌ ಅರ್ಜುನ
ಅಂದಾಜು 58 ವರ್ಷ ವಯಸ್ಸಿನ ಅರ್ಜುನ ಆನೆಯನ್ನು 1968ರಲ್ಲಿ ಖೆಡ್ಡಾ ವಿಧಾನದಲ್ಲಿ ಕಾಕನಕೋಟೆ ಅರಣ್ಯ ಪ್ರದೇಶದಲ್ಲಿ ಸೆರೆ ಹಿಡಿಯಲಾಗಿದೆ. ಸುಮಾರು 5100 ಕೆ.ಜಿ ತೂಕವಿರುವ ಈ ಆನೆ, 2.95 ಮೀಟರ್‌ ಎತ್ತರವಿದ್ದು, 3.75 ಮೀಟರ್‌ ಉದ್ದವಿದೆ. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಬಳ್ಳೆ ಆನೆ ಶಿಬಿರದಲ್ಲಿ ಮಾವುತ ವಿನು, ಕಾವಾಡಿ ಸಣ್ಣಪ್ಪ (ಮಹೇಶ)ನಿಂದ ವಿಶೇಷ ಆರೈಕೆ ಪಡೆಯುತ್ತಿದೆ.

ಗಜಪಯಣದ ಸಿದ್ಧತೆಯಲ್ಲಿರುವುದರಿಂದ ಸಣ್ಣಪ್ಪ ಮನವಿ ಕೊಟ್ಟಿರುವುದು ಗಮನಕ್ಕೆ ಬಂದಿಲ್ಲ. ಅಧಿಕಾರಿಗಳು ಚರ್ಚಿಸಿ ತೀರ್ಮಾನ ಮಾಡುತ್ತೇವೆ.
– ಸಿದ್ರಾಮಪ್ಪ ಚಳ್ಳಾಪುರೆ, ಮೈಸೂರು ಉಪ ಅರಣ್ಯ ಸಂರಕ್ಷಣಾಧಿಕಾರಿ

Advertisement

– ಗಿರೀಶ್‌ ಹುಣಸೂರು

Advertisement

Udayavani is now on Telegram. Click here to join our channel and stay updated with the latest news.

Next