Advertisement
ಕೊರೊನಾ ಸೋಂಕು ಹಿನ್ನೆಲೆ ಕಳೆದ ಎರಡು ವರ್ಷಗಳ ಕಾಲ ಅರಮನೆಗಷ್ಟೇ ಸೀಮಿತವಾಗಿದ್ದ ನಾಡಹಬ್ಬ ಮೈಸೂರು ದಸರಾ, ಈ ಬಾರಿ ವಿಜೃಂಭಣೆಯಿಂದ ನಡೆಯುತ್ತಿದೆ. ಚಾಮುಂಡೇಶ್ವರಿಯ ಅಗ್ರಪೂಜೆಯೊಡನೆ ಆರಂಭವಾಗಿದ್ದ ದಶ ದಿನಗಳ ದಸರಾ ಉತ್ಸವಕ್ಕೆ ಜಂಬೂಸವಾರಿ ಮತ್ತು ಪಂಜಿನ ಕವಾಯತಿನೊಂದಿಗೆ ತೆರೆ ಬೀಳಲಿದೆ. ಜಂಬೂ ಸವಾರಿ ವೀಕ್ಷಿಸಲು ದೇಶ-ವಿದೇಶದ ಲಕ್ಷಾಂತರ ಪ್ರವಾಸಿಗರು ಆಗಮಿಸುವುದರಿಂದ ಅರಮನೆ ಆವರಣ ಸೇರಿದಂತೆ ಜಂಬೂ ಸವಾರಿ ಸಾಗುವ ರಾಜಮಾರ್ಗದಲ್ಲಿ ಆಸನದ ವ್ಯವಸ್ಥೆ ಸೇರಿ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ.
Related Articles
Advertisement
ವಿಶ್ವವಿಖ್ಯಾತ ಜಂಬೂ ಸವಾರಿ ವೀಕ್ಷಣೆಗೆ ಅರಮನೆ ಆವರಣದಲ್ಲಿ 20 ಸಾವಿರ ಮಂದಿಗೆ ಆಸನ ವ್ಯವಸ್ಥೆ ಮಾಡಲಾಗಿದೆ. ಅಲ್ಲದೆ, ಜಂಬೂ ಸವಾರಿ ಸಾಗುವ ಮಾರ್ಗದಲ್ಲಿ ರಸ್ತೆಯ ಇಕ್ಕೆಲಗಳಲ್ಲಿ ಪೆಂಡಾಲ್ ಹಾಕಿ ಆಸನದ ವ್ಯವಸ್ಥೆ ಮಾಡಲಾಗಿದೆ. ಗೋಲ್ಡ್ ಕಾರ್ಡ್, ವಿವಿಐಪಿ, ವಿಐಪಿ ಪಾಸ್‌ವುಳ್ಳವರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ.
ಅಂತಿಮ ತಾಲೀಮು: ಜಂಬೂ ಸವಾರಿಯಲ್ಲಿ ಭಾಗವಹಿಸಲು ಕಾಡಿನಿಂದ ನಾಡಿಗೆ ಆಗಮಿಸಿ 55 ದಿನದಿಂದ ವಿವಿಧ ಹಂತದ ತಾಲೀಮು ನಡೆಸಿದ್ದ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಗಜಪಡೆ ಸೋಮವಾರ ಅಂತಿಮ ಹಂತದ ತಾಲೀಮು ನಡೆಸಿತು.
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂತ್ರಿಗೂ ಅವಕಾಶ
ಅರಮನೆ ಅಂಗಳದಲ್ಲಿ ಅಂಬಾರಿ ಆನೆಯ ಮೇಲಿನ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾದ ದೇವಿ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡುವ ವೇಳೆ ಶಿಷ್ಟಾಚಾರದ ಪ್ರಕಾರ ಮುಖ್ಯಮಂತ್ರಿ, ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ, ಜಿಲ್ಲಾ ಉಸ್ತುವಾರಿ ಸಚಿವರು, ಮೇಯರ್, ಜಿಲ್ಲಾಧಿಕಾರಿ, ನಗರ ಪೊಲೀಸ್ ಆಯುಕ್ತರು ಹಾಗೂ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಿಗೆ ವೇದಿಕೆ ಏರಲು ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಇದೇ ಮೊದಲ ಬಾರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಿಗೂ ಅವಕಾಶ ಕಲ್ಪಿಸಲಾಗಿದ್ದು, ಅವರೂ ಅಂಬಾರಿಯಲ್ಲಿ ಆಸೀನಳಾದ ಚಾಮುಂಡೇಶ್ವರಿಗೆ ಪುಷ್ಪಾರ್ಚನೆ ಮಾಡಲಿದ್ದಾರೆ.
ಪಂಜಿನ ಕವಾಯತಿಗೆ ಸಕಲ ಸಿದ್ಧತೆ
ಚಾಮುಂಡಿಬೆಟ್ಟದಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ಚಾಮುಂಡೇಶ್ವರಿಗೆ ಅಗ್ರ ಪೂಜೆ ಹಾಗೂ ಪುಷ್ಪಾರ್ಚನೆ ಮೂಲಕ ಆರಂಭವಾಗಿದ್ದ ನವರಾತ್ರಿ ಉತ್ಸವ ಜಂಬೂಸವಾರಿ ಹಾಗೂ ಬನ್ನಿಮಂಟಪದ ಮೈದಾನದಲ್ಲಿ ನಡೆಯುವ ಪಂಜಿನ ಕವಾಯತಿನ ಮೂಲಕ ದಸರೆಗೆ ತೆರೆ ಬೀಳಲಿದೆ.
ವಿಜಯ ದಶಮಿಯಂದು ರಾತ್ರಿ ನಡೆಯುವ ಪಂಜಿನ ಪವಾಯತಿಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು, ಅ.5ರಂದು ರಾತ್ರಿ 7.30ರಿಂದ ಪಂಜಿನ ಕವಾಯತು(ಟಾರ್ಚ್‌ಲೈಟ್ ಪೆರೇಡ್) ಆರಂಭವಾಗಲಿದ್ದು, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಕವಾಯತು ವೀಕ್ಷಿಸಿ ಗೌರವ ವಂದನೆ ಸ್ವೀಕರಿಸುವರು. ನಾಡಗೀತೆ ಬಳಿಕ ಎರಡು ಗಂಟೆ ಪೊಲೀಸ್ ಸಿಬ್ಬಂದಿ ಸಾಹಸಮಯ ಪ್ರದರ್ಶನ ನೀಡಲಿದ್ದು, ಮೈನವಿರೇಳಿಸುವ ಬೈಕ್, ಅಶ್ವಾರೋಹಿ ಪಡೆಗಳ ಸಾಹಸ ಪ್ರದರ್ಶನ ಮಾಡಲಿದ್ದಾರೆ. ಕೊನೆಗೆ ಪಂಜಿನ ಕವಾಯತಿನ ಮೂಲಕ ಹತ್ತು ದಿನಗಳ ನವರಾತ್ರಿ ಉತ್ಸವಕ್ಕೆ ತೆರೆ ಬೀಳಲಿದೆ.
ಸತೀಶ್ ದೇಪುರ