ಮೈಸೂರು: ದೂರದ ಯಾವುದೋ ಶಿಬಿರದಿಂದ ಹೊಸದಾಗಿ ಬಂದ ಎಳೆ ವಯಸ್ಸಿನ ಭೀಮನನ್ನು ಕಂಡ ಅರ್ಜುನ ಸೋಂಡಿಲಿನಿಂದ ತನ್ನತ್ತ ಬರಸೆಳೆದು ಮುದ್ದಿಸುತ್ತ ತನ್ನದೇ ಹಾವಾಭಾವದ ಮೂಲಕ ಕುಶಲೋಪರಿ ವಿಚಾರಿಸಿದ ಶೈಲಿ ನೋಡುಗರನ್ನು ಚಕಿತಗೊಳಿಸಿತು.
2022ರ ಸಾಲಿನ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳಲು ಭಾನುವಾರ ಮೈಸೂರಿಗೆ ಆಗಮಿಸಿ ನಗರದ ಅರಣ್ಯ ಭವನದಲ್ಲಿ ಬೀಡುಬಿಟ್ಟಿರುವ ಗಜಪಡೆ ಸೋಮವಾರ ಮಾವುತ, ಕಾವಾಡಿಗರ ಜೊತೆಗೆ ವಿಶ್ರಾಂತಿಯಲ್ಲಿದ್ದವು. ಈ ಸಂದರ್ಭ ಮತ್ತಿಗೋಡು ಆನೆ ಶಿಬಿರದಿಂದ ಆಗಮಿಸಿದ್ದ ಅತಿ ಚಿಕ್ಕ ವಯಸ್ಸಿನ ಭೀಮ(22) ಆನೆಯನ್ನು ಕಂಡ ಬಳ್ಳೆ ಆನೆ ಶಿಬಿರದ ಅರ್ಜುನ (63) ಭೀಮನ ಬಳಿ ತೆರಳಿ ತನ್ನ ಸೊಂಡಿಲಿನಿಂದ ಸ್ಪರ್ಶಿಸಿ, ಅಲ್ಲಿಯೇ ಪಕ್ಕದಲ್ಲಿದ್ದ ಆಲದ ಸೊಪ್ಪನ್ನು ತಿನ್ನಿಸುವ ದೃಶ್ಯ ನೋಡುಗರನ್ನು ಆಕರ್ಷಿಸಿತು.
ಇತ್ತ ಭೀಮನೂ ತನ್ನ ಸೋಂಡಿಲಿನ ಮೂಲಕ ಅರ್ಜುನನ ಸೊಂಡಿಲನ್ನು ಬಂಧಿಯಾಗಿಸಿ ಮುತ್ತಿಕ್ಕುವ ಮೂಲಕ ಹಿರಿಯಜ್ಜನ ಪ್ರೀತಿಗೆ ಪಾತ್ರನಾದ. ಹೀಗೆ ಆರೇಳು ನಿಮಿಷಗಳ ಕಾಲ ಎರಡೂ ಆನೆಗಳು ತಮ್ಮದೇ ಹಾವಾಭಾವದ ಮೂಲಕ ಮೌನ ಸಂಭಾಷಣೆಯಲ್ಲಿ ತೊಡಗಿದ್ದು ವಿಶೇಷವಾಗಿತ್ತು.
ರಿಲ್ಯಾಕ್ಸ್ ಮೋಡ್‌ನಲ್ಲಿ ಗಜಪಡೆ: ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಗಜಪಡೆ ಭಾನುವಾರ ಗಜಪಯಣದ ಮೂಲಕ ಮೈಸೂರಿಗೆ ಆಗಮಿಸಿದ್ದು, ಅರಣ್ಯ ಭವನದಲ್ಲಿ ಮಾವುತ, ಕಾವಾಡಿ ಗಳೊಂದಿಗೆ ಬೀಡುಬಿಟ್ಟಿವೆ. ಮೊದಲ ತಂಡದಲ್ಲಿ ಅಂಬಾರಿ ಆನೆ ಸೇರಿದಂತೆ ಒಂಭತ್ತು ಆನೆಗಳು ಆಗಮಿಸಿದ್ದು, ಮಾವುತ, ಕಾವಾಡಿ ಹಾಗೂ ಇಲಾಖೆ ಅಧಿಕಾರಿಗಳ ವಿಶೇಷ ಆರೈಕೆಯಲ್ಲಿ ವಿಶ್ರಾಂತಿಗೆ ಜಾರಿದ್ದವು. ಇತ್ತ ಕೂಬಿಂಗ್ ಸ್ಪೆಷಲಿಸ್ಟ್ ಎಂದೇ ಹೆಸರು ಮಾಡಿರುವ ಅಂಬಾರಿ ಆನೆ ಅಭಿಮನ್ಯು ಲಕ್ಷ್ಮೀ ಮತ್ತು ಚೈತ್ರ ಹೆಸರಿನ ಹಣ್ಣಾನೆಗಳೊಂದಿಗೆ ಪ್ರತ್ಯೇಕ ಸ್ಥಳದಲ್ಲಿ ವಿಶ್ರಾಂತಿಗೆ ಜಾರಿದ್ದ.
ಕುತೂಹಲ ತಣಿಸಿಕೊಂಡ ಜನತೆ: ಆನೆ, ಅವುಗಳ ಗಾತ್ರ ಮತ್ತು ವರ್ತನೆಯ ಬಗ್ಗೆ ಕುತೂಹಲ ಇರಿಸಿಕೊಂಡಿದ್ದ ನಗರದ ವಿವಿಧ ಬಡಾವಣೆಯ ಜನರು, ಮಕ್ಕಳು ಹಾಗೂ ಕಾಲೇಜು ವಿದ್ಯಾರ್ಥಿಗಳು ಅರಣ್ಯ ಭವನಕ್ಕೆ ತೆರಳಿ ದಸರಾ ಆನೆಗಳನ್ನು ವೀಕ್ಷಿಸಿ ತಮ್ಮ ಕುತೂಹಲ ತಣಿಸಿಕೊಂಡರು. ಹಾಗೆಯೇ ತಮ್ಮ ಮೊಬೈಲ್‌ಗಳಲ್ಲಿ ಆನೆಗಳ ಚಿತ್ರ ಸೆರೆ ಹಿಡಿಯುವ ಜತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು.
ನಾಳೆ ಅರಮನೆ ಪ್ರವೇಶ : ನಾಳೆ (ಆ.10) ಗಜಪಡೆ ಅರಮನೆ ಪ್ರವೇಶಿಸಲಿದ್ದು, ಬೆಳಗ್ಗೆ 7ಗಂಟೆಗೆ ಎಲ್ಲಾ ಆನೆಗಳು ಅರಣ್ಯ ಭ ವನದಿಂದ ಹೊರಟು ಕಾಲ್ನಡಿಗೆ ಮೂಲಕ ಅರಮನೆ ಜಯಮಾರ್ತಾಂಡ ದ್ವಾರದ ಬಳಿ ತೆರಲಿವೆ. ಬಳಿಕ 9.20ರಿಂದ 10ಗಂಟೆಯ ಒಳಗೆ ಸಲ್ಲುವ ಕನ್ಯಾ ಲಗ್ನದಲ್ಲಿ ಆನೆಗಳಿಗೆ ವಿಶೇಷ ಪೂಜೆ ಸಲ್ಲಿಸುವ ಮೂಲಕ ಅರಮನೆ ಆವರಣಕ್ಕೆ ಸ್ವಾಗತಿಸಲಾಗುತ್ತದೆ. ನಂತರ ನಿತ್ಯ ಆನೆಗಳಿಗೆ ಅರಮನೆಯಿಂದ ಬನ್ನಿಮಂಟಪದ ವರೆಗೆ ಕಾಲ್ನಡಿಗೆ ಮೂಲಕ ತಾಲೀಮು, ಒಣ ತಾಲೀಮು ಹಾಗೂ ಭಾರ ಹೊರುವ ತಾಲೀಮು ನಡೆಸಲಾಗುತ್ತದೆ.