ಮೈಸೂರು: ಹೊಸ ವರ್ಷಾಚರಣೆ ಹಿನ್ನೆಲೆಯಲ್ಲಿ ಮೈಸೂರಿನಲ್ಲಿ ರಾತ್ರಿ 1 ಗಂಟೆವರೆಗೆ ಮಾತ್ರ ಸಂಭ್ರಮಾಚರಣೆಗೆ ಅವಕಾಶವಿದೆ. ಸರ್ಕಾರ ನಿಗದಿಪಡಿಸಿರುವ ಸಮಯ ಪಾಲಿಸಬೇಕು. ತಪ್ಪಿದ್ದಲ್ಲಿ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ರಮೇಶ್ ಬಾನೋತ್ ಹೇಳಿದರು.
ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹೋಟೆಲ್, ರೆಸ್ಟೋರೆಂಟ್, ಕ್ಲಬ್, ರೆಸಾರ್ಟ್, ಹೋಂಸ್ಟೇ ಸರ್ವಿಸ್ ಅಪಾರ್ಟ್ಮೆಂಟ್, ಅಪಾರ್ಟ್ಮೆಂಟ್ ಅಸೋಸಿಯೇಷನ್, ಮಾಲ್ಸ್, ಸಂಘ ಸಂಸ್ಥೆಗಳು ರಾತ್ರಿ ಒಂದು ಗಂಟೆಗೆ ಕಾರ್ಯಕ್ರಮ ಮುಗಿಸುವುದು ಕಡ್ಡಾಯ ಎಂದರು.
ಕಾರ್ಯಪಡೆ ರಚನೆ: ಹೊಸ ವರ್ಷದ ನೆಪದಲ್ಲಿ ಅಸಭ್ಯ ವರ್ತನೆ ತಡೆಯಲು 36 ವಿಶೇಷ ಕಾರ್ಯಪಡೆ ತಂಡಗಳ ರಚನೆ ಮಾಡಲಾಗುತ್ತಿದೆ. ಮಹಿಳೆಯರ ರಕ್ಷಣೆಗಾಗಿ 8 ಸುರಕ್ಷತಾ ಪಿಂಕ್ ಗರುಡಾ (ಚಾಮುಂಡಿ ಪಡೆ) ರಚನೆ ಮಾಡಲಾಗಿದೆ. ನಗರದ ಪ್ರಮುಖ ಸ್ಥಳದಲ್ಲಿ ಶ್ವಾನದಳ ಮತ್ತು ವಿಧ್ವಂಸಕ ಕೃತ್ಯ ತಡೆಗಾಗಿ ನಾಲ್ಕು ತಂಡ, ಮೈಸೂರು ನಗರದಲ್ಲಿರುವ 59 ಸಿಸಿ ಟಿವಿ ಜೊತೆಗೆ 275 ಸಿಸಿಟಿವಿ ಅಳವಡಿಕೆ ಮಾಡಲಾಗಿದೆ. ಪೊಲೀಸ್ ಕಂಟ್ರೋಲ್ ರೂಂ ಮೂಲಕ ಕಣ್ಗಾವಲು ಮಾಡಲಾಗುತ್ತದೆ ಎಂದರು.
ಇದನ್ನೂ ಓದಿ:ಧೂಳಿನಿಂದ ಸಂಕಷ್ಟ;ಆಗಾಗ ರಸ್ತೆ ಅಗೆಯುತ್ತಿರುವ ಹಿಂದಿನ ರಹಸ್ಯವೇನು ಎಂದು ಪ್ರಶ್ನಿಸಿದ ಸಿ.ಎಂ.
ವ್ಹೀಲಿಂಗ್, ಸ್ಪೀಡ್, ಕರ್ಕಶ ಶಬ್ದ, ಕುಡಿದು ವಾಹನ ಚಾಲನೆ ತಡೆಗಾಗಿ ಸಂಚಾರ ಪೊಲೀಸರು, ತಜ್ಞರನ್ನೊಳಗೊಂಡ ಕ್ಷಿಪ್ರ ಪಡೆ ರಚನೆ ಮಾಡಲಾಗಿದೆ. ರಿಂಗ್ ರೋಡ್‌ನಲ್ಲಿ 8 ಹೈವೇ ಪೆಟ್ರೋಲ್ ವಾಹನ ನಿಯೋಜನೆ ಮಾಡಲಾಗುತ್ತದೆ. ಒಟ್ಟು 18 ಗರುಡ ವಾಹನಗಳು ಗಸ್ತು ತಿರುಗುತ್ತದೆ. ನಗರದ ಹೊರವಲಯದಲ್ಲಿ 12 ಕಡೆ ಚೆಕ್ ಪೊಸ್ಟ್ ಮಾಡಲಾಗುತ್ತದೆ. ನಗರದ ಒಳ ಭಾಗದಲ್ಲಿ 18 ಕಡೆ ಚೆಕ್ ಪೊಸ್ಟ್ ನಿರ್ಮಿಸಿ ಕಿಡಿಗೇಡಿಗಳ ಮೇಲೆ ನಿಗಾ ಇಡಲಾಗುತ್ತದೆ ಎಂದರು.
ಅನುಮತಿ ಕಡ್ಡಾಯ: ಹೊಸ ವರ್ಷ ಆಚರಣೆಯ ಕಾರ್ಯಕ್ರಮ ಆಯೋಜನೆಗಾಗಿ ನಗರ ಪೊಲೀಸ್ ಆಯಕ್ತರ ಕಚೇರಿಯಲ್ಲಿ ಅನುಮತಿ ಪಡೆಯುವುದು ಕಡ್ಡಾಯ. ಧ್ವನಿವರ್ಧಕ ಅಳವಡಿಸುವುದು ಪ್ರದೇಶಕ್ಕೆ ಮಾತ್ರ ಸೀಮಿತವಾಗಿರಬೇಕು. ಸಾಂಸ್ಕೃತಿಕ ಕಾರ್ಯಕ್ರಮದ ನೆಪದಲ್ಲಿ ಅಶ್ಲೀಲ, ಅರಬೆತ್ತಲೆ ಮಾದಕ ವಸ್ತುಗಳ ಸೇವನೆ ಜೂಜಾಟ ಕಡ್ಡಾಯ ನಿಷೇಧ ಮಾಡಲಾಗಿದೆ ಎಂದು ರಮೇಶ್ ಬಾನೋತ್ ಹೇಳಿದರು.
ಬಂದೋಬಸ್ತ್‌ಗಾಗಿ ಡಿಸಿಪಿ 3, ಎಸಿಪಿ 12, ಪಿಐ 30, ಎಎಸ್ಪಿ 70, ಹೆಚ್‌ಸಿ/ಪಿಸಿ 550, ಸಿಬ್ಬಂದಿ 80. ಸಿಎಆರ್ 12 ತುಕಡಿ, ಕೆಎಸ್ಆರ್ ಪಿ 4 ತಂಡ, ಕಮಾಂಡೋ ಪಡೆ 4, ಶ್ವಾನದಳ 4 ತಂಡ, ಎಎಸ್‌ಸಿ 4 ತಂಡ ಸಶಸ್ತ್ರ ಪಡೆಗಳು ಇರಲಿದೆ ಎಂದರು.
ಬೆಟ್ಟಕ್ಕೆ ಭೇಟಿಯಿಲ್ಲ: ಡಿಸೆಂಬರ್ 31ರಂಉದ ಚಾಮುಂಡಿ ಬೆಟ್ಟಕ್ಕೆ ಸಂಜೆ 7ರವರೆಗೆ ಮಾತ್ರ ಪ್ರವೇಶ ಅವಕಾಶವಿದೆ. ರಾತ್ರಿ 9ಕ್ಕೆ ತಾವರೆಕಟ್ಟೆ ಗೇಟ್ ಬಂದ್ ಮಾಡಲಾಗುತ್ತದೆ. ಚಾಮುಂಡಿ ಬೆಟ್ಟದಲ್ಲಿ ವಾಸಿಸುವ ಜನರಿಗೆ ಇದು ಅನ್ವಯಿಸುವುದಿಲ್ಲ ಎಂದರು.