Advertisement

ಮೈಸೂರು ಮಹಾನಗರ ಪಾಲಿಕೆ ಮೇಯರ್‌ ಚುನಾವಣೆ ಇಂದು 

06:20 AM Nov 17, 2018 | Team Udayavani |

ಬೆಂಗಳೂರು/ಮೈಸೂರು: ದೋಸ್ತಿ ಪಕ್ಷಗಳ ನಡುವೆ ತೀವ್ರ ಪೈಪೋಟಿಗೆ ಕಾರಣವಾಗಿದ್ದ ಮೈಸೂರು ಮಹಾನಗರ ಪಾಲಿಕೆಯ ಮೇಯರ್‌ ಸ್ಥಾನ ಕಡೆಗೂ “ಕೈ’ ವಶವಾಗಿದ್ದು, ಇದರೊಂದಿಗೆ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿಯೊಂದಿಗೆ ಮೇಯರ್‌ ಸ್ಥಾನಕ್ಕೇರಲು ಕಾಂಗ್ರೆಸ್‌ ಸಜ್ಜಾಗಿದೆ.

Advertisement

ಈ ಬಾರಿಯ ನಗರಪಾಲಿಕೆ ಮೇಯರ್‌ ಸ್ಥಾನ ಸಾಮಾನ್ಯ ಮಹಿಳೆ ಹಾಗೂ ಉಪ ಮೇಯರ್‌ ಸ್ಥಾನ ಬಿಸಿಎಗೆ ಮೀಸಲಾಗಿದೆ. ಹೀಗಾಗಿ, ಎರಡು ಪಕ್ಷಗಳೂ ಮೇಯರ್‌ ಸ್ಥಾನ ಪಡೆಯಲು ತಂತ್ರ-ಪ್ರತಿತಂತ್ರ ರೂಪಿಸಿದ್ದವು. ಜೆಡಿಎಸ್‌, ತನ್ನ ಸದಸ್ಯರನ್ನು ಈಗಲ್‌ಟನ್‌ ರೆಸಾರ್ಟ್‌ನಲ್ಲಿ ಇರಿಸಿದರೆ, ಚುನಾವಣೆಯಲ್ಲಿ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದ ಕೆ.ವಿ.ಶ್ರೀಧರ್‌, ಸಿದ್ದರಾಮಯ್ಯ ನಿವಾಸದಲ್ಲಿ ಕಾಣಿಸಿಕೊಂಡು, “ಕೈ’ಗೆ ಬೆಂಬಲ ನೀಡುವುದಾಗಿ ಹೇಳಿದರು. ಈ ಮಧ್ಯೆ, ಶುಕ್ರವಾರ ಬೆಳಗ್ಗೆ ಸಚಿವ ಸಾ.ರಾ.ಮಹೇಶ್‌ ಕಚೇರಿಗೆ ಆಗಮಿಸಿದ ಶಾಸಕ ತನ್ವೀರ್‌ ಸೇs…, ಮೇಯರ್‌ ಸ್ಥಾನದ ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮಾತುಕತೆ ನಡೆಸಿದರು. ಇದೇ ವೇಳೆ, ಕೆಪಿಸಿಸಿ ಅಧ್ಯಕ್ಷ ದಿನೇಶ್‌ ಗುಂಡುರಾವ್‌ ಮತ್ತು ಸಚಿವ ಕೃಷ್ಣ ಭೈರೇಗೌಡ ಅವರು ಪ್ರವಾಸೋದ್ಯಮ ಸಚಿವ ಸಾ.ರಾ.ಮಹೇಶ್‌ ಅವರೊಂದಿಗೆ ಮಾತುಕತೆ ನಡೆಸಿದರು.

ಅಂತಿಮವಾಗಿ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರೊಂದಿಗೆ ಮಾಜಿ ಸಿಎಂ ಸಿದ್ದರಾಮಯ್ಯ ನಡೆಸಿದ ಮಾತುಕತೆ ಯಶಸ್ವಿಯಾಗಿದ್ದು, ಸಿದ್ದರಾಮಯ್ಯ ಅವರ ಮನವಿಯಂತೆ ಮೇಯರ್‌ ಸ್ಥಾನ ಬಿಟ್ಟು ಕೊಡಲು ಜೆಡಿಎಸ್‌ ವರಿಷ್ಠರು ಒಪ್ಪಿಗೆ ನೀಡಿದ್ದಾರೆ. ಇದರೊಂದಿಗೆ 5 ವರ್ಷಗಳ ನಂತರ ಕಾಂಗ್ರೆಸ್‌ ಮೇಯರ್‌ ಸ್ಥಾನ ಅಲಂಕರಿಸಲಿದ್ದು, ಮಾಜಿ ಉಪ ಮೇಯರ್‌ ಶಾಂತಕುಮಾರಿ ಅಥವಾ ಶೋಭಾ ಸುನೀಲ್‌ ಮೇಯರ್‌ ಆಗುವ ಸಾಧ್ಯತೆಯಿದೆ.

ಗೌಡರ ಸೂಚನೆ:
ಇದೇ ವೇಳೆ, ಮೈಸೂರು ಮಹಾನಗರ ಪಾಲಿಕೆ ಮೇಯರ್‌-ಉಪ ಮೇಯರ್‌ ಚುನಾವಣೆ ವಿಚಾರದಲ್ಲಿ ಗೊಂದಲ ಅಥವಾ ಸಂಘರ್ಷ ಮಾಡಿಕೊಳ್ಳದಂತೆ ದೇವೇಗೌಡರು ಮೈಸೂರು ಜಿಲ್ಲೆಯ ನಾಯಕರಿಗೆ ಸೂಚಿಸಿದ್ದಾರೆ. ಸಾ.ರಾ.ಮಹೇಶ್‌ ಹಾಗೂ ಜಿ.ಟಿ.ದೇವೇಗೌಡ ಅವರಿಗೆ ದೂರವಾಣಿ ಮೂಲಕ ಮಾತನಾಡಿರುವ ದೇವೇಗೌಡರು, ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಮಾಡಿಕೊಳ್ಳಲು ತೀರ್ಮಾನಿಸಿರುವುದರಿಂದ ಕೊಡು-ಕೊಳ್ಳುವಿಕೆಯನ್ನು ಸುಸೂತ್ರವಾಗಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸೂಚಿಸಿದ್ದಾರೆಂದು ತಿಳಿದು ಬಂದಿದೆ.

ಮೇಯರ್‌ ಆಯ್ಕೆ ವಿಚಾರದಲ್ಲಿ ತಲೆ ಹಾಕುವುದಿಲ್ಲ. ಈ ವಿಷಯವನ್ನು ಕೆಪಿಸಿಸಿ ಅಧ್ಯಕ್ಷರಿಗೆ ತಿಳಿಸಿದ್ದೇನೆ. ಮೈಸೂರಿನಲ್ಲಿ ಇಬ್ಬರೂ ಸಚಿವರು ಜೆಡಿಎಸ್‌ ಪಕ್ಷದವರೇ ಆದ ಕಾರಣ ಕಾಂಗ್ರೆಸ್‌ಗೆ ಒಂದು ವಾಯ್ಸ ಇರಬೇಕು ಎಂದು ಮೇಯರ್‌ ಸ್ಥಾನ ಕೇಳುತ್ತಿದ್ದೇವೆ. ರಾಜ್ಯದಲ್ಲಿ ಜೆಡಿಎಸ್‌-ಕಾಂಗ್ರೆಸ್‌ ಮೈತ್ರಿ ಸರ್ಕಾರ ಅಧಿಕಾರದಲ್ಲಿದ್ದು, ಮೈಸೂರಿನಲ್ಲೂ ಮೈತ್ರಿ ಆಡಳಿತದಲ್ಲಿ ಮೇಯರ್‌ ಆಗುತ್ತಾರೆ.
– ಸಿದ್ದರಾಮಯ್ಯ, ಮಾಜಿ ಸಿಎಂ.

Advertisement
Advertisement

Udayavani is now on Telegram. Click here to join our channel and stay updated with the latest news.

Next