Advertisement

Mysore Chalo: “ಬಂಡೆ’ ಬಗ್ಗೆ ಸಿದ್ದರಾಮಯ್ಯ ಎಚ್ಚರದಿಂದಿರಿ: ಎಚ್‌.ಡಿ. ಕುಮಾರಸ್ವಾಮಿ

02:06 AM Aug 11, 2024 | Team Udayavani |

ಮೈಸೂರು: “2018-19ರಲ್ಲಿ ಕುಮಾರ ಸ್ವಾಮಿಗೆ ಈ ಬಂಡೆ ರಕ್ಷಣೆಗೆ ನಿಂತಿದೆ ಎಂದಿದ್ದ ಆ ಬಂಡೆಯೇ ನನ್ನ ತಲೆಯ ಮೇಲೆ ಬಿದ್ದು ಬಿಟ್ಟಿತು. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ರಕ್ಷಣೆಗೆ ಬಂಡೆ ನಿಂತಿದೆ ಎನ್ನುತ್ತಿದ್ದಾರೆ. ಮುಖ್ಯಮಂತ್ರಿ ಕಥೆ ಮುಗಿಯಿತು ಎಂಬುದನ್ನು ತಿಳಿದುಕೊಳ್ಳಬೇಕು’ ಎಂದು ಕೇಂದ್ರ ಸಚಿವ ಎಚ್‌.ಡಿ. ಕುಮಾರಸ್ವಾಮಿ ಅವರು ಡಿಸಿಎಂ ಡಿ.ಕೆ. ಶಿವಕುಮಾರ್‌ ಹೆಸರನ್ನು ಪ್ರಸ್ತಾವಿಸಿದೆ ಪರೋಕ್ಷ ವಾಗಿ ವಾಗ್ಧಾಳಿ ನಡೆಸಿದರು.

Advertisement

ಮಹಾರಾಜ ಕಾಲೇಜು ಮೈದಾನದಲ್ಲಿ ಶನಿವಾರ ಬಿಜೆಪಿ- ಜೆಡಿಎಸ್‌ ವತಿಯಿಂದ ಆಯೋಜಿಸಿದ್ದ “ಮೈಸೂರು ಚಲೋ ಪಾದಯಾತ್ರೆ’ಯ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು. ಮುಖ್ಯಮಂತ್ರಿ ಜತೆ ಬಂಡೆಯಂತೆ ನಿಂತಿರುವ ತನಕವೂ ಸರಕಾರವನ್ನು ತಗೆಯಲು ಸಾಧ್ಯವಿಲ್ಲ ಎನ್ನುತ್ತಾರೆ. ನಿಮ್ಮ ಪಕ್ಷದ ನಾಯಕರಾದ ರಾಜಣ್ಣ, ಜಾರಕಿಹೊಳಿ ಅವರ ಹೇಳಿಕೆಗಳು ಏನು? ಬಂಡೆಯಂತೆ ನಿಂತುಕೊಂಡಿರುವವರು ಸಿದ್ದರಾಮಯ್ಯ ಅವರ ತಲೆಯ ಮೇಲೆ ಬಿದ್ದರೆ ಅವರ ಪರಿಸ್ಥಿತಿ ಏನಾಗಬೇಡ ಎಂದು ಒಗಟಿನಂತೆ ಮಾತನಾಡಿದ ಕುಮಾರಸ್ವಾಮಿ, ಡಿಕೆಶಿ ಅವರು ಮುಖ್ಯಮಂತ್ರಿ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ ಎನ್ನುವುದನ್ನೂ ಸೂಚ್ಯವಾಗಿ ಹೇಳಿದರು.

ನನ್ನ ಮೇಲೆ 50ಕ್ಕೂ ಹೆಚ್ಚು ಡಿನೋಟಿಫೈ ಪ್ರಕರಣಗಳು ಇವೆ, ತನಿಖೆ ಮಾಡಿಸುತ್ತೇನೆ ಎಂದಿದ್ದೀರಿ. ಯಾವ ತನಿಖೆ ಮಾಡಿಸುತ್ತೀರಿ, ಮಾಡಿಸಿ. ಸುಳ್ಳು ಹೇಳುವುದಕ್ಕೂ ಇತಿ ಮಿತಿ ಇರಬೇಕು. ನಿಮ್ಮ ಯೋಗ್ಯತೆಗೆ 15 ತಿಂಗಳಾಗುತ್ತ ಬಂತು, ಚುನಾವಣ ಪೂರ್ವದಲ್ಲಿ ಘೋಷಣೆ ಮಾಡಿದಂತೆ, ಯಾವ ಅಕ್ರಮಗಳನ್ನು ತನಿಖೆ ಮಾಡಿದ್ದೀರಿ? ನಿಮ್ಮ ಯೋಗ್ಯತೆಯೇ ಇಷ್ಟು. ಚಮಚಾಗಿರಿ ಮಾಡುವವರನ್ನು ಸಮಿತಿಗಳಿಗೆ ನೇಮಕ ಮಾಡಿ ಅವರಿಗೆ ಸರಕಾರದಿಂದ ಸಂಬಳ ಕೊಡುತ್ತಿದ್ದೀರಿ. ನೀವು ನನ್ನ ರಾಜೀನಾಮೆ ಕೇಳುತ್ತೀರಾ? ಯಾಕೆ 14 ಸೈಟ್‌ ತೆಗದುಕೊಂಡಿದ್ದೇನೆ ಅಂತಲೇ, ಭೂಮಿ ಲಪಾಟಯಿಸಿದ್ದೇನೆ ಅಂತಲೆ ಎಂದು ಕಿಡಿಕಾರಿದರು.

ಸಿದ್ದರಾಮಯ್ಯ ವಿರುದ್ಧ ಆಕ್ರೋಶ
ಸಿದ್ದರಾಮಯ್ಯ ವಿರುದ್ಧ ವಾಗ್ಧಾಳಿ ಮಾಡಿದ ಎಚ್‌ಡಿಕೆ, ನಿಮ್ಮ ಕಾಲದ ಹಗರಣವನ್ನು ತೆಗೆಯಲೇ? ಕೆಂಪಣ್ಣ ಆಯೋಗದ ವರದಿ ಭಾಗ-1, ಭಾಗ-2 ಏನಾಯಿತು? ರಿಡೂ ಯಾರಿಗೋಸ್ಕರ ಮಾಡಿದಿರಿ, ನಿಮ್ಮ ಮಗನ ಲ್ಯಾಬ್‌ ಹಗರಣ ಏನಾಯಿತು ಎಂದು ಪ್ರಶ್ನೆಗಳ ಸುರಿಮಳೆಗೈದರು.

ಅಧಿಕಾರ ಶಾಶ್ವತ ಅಲ್ಲ. 2008ರಿಂದ 13ರ ತನಕ ವಿಪಕ್ಷದ ನಾಯಕನಾಗಿದ್ದ ನಿಮ್ಮ ಕೈಯಲ್ಲಿ ಒಂದಾದರೂ ಹಗರಣದ ವಿಷಯವನ್ನು ಬಹಿರಂಗ ಪಡಿಸಿ ಹೋರಾಡಲು ಆಗಲಿಲ್ಲ. ಯಾರೋ ಕಟ್ಟಿದ ಹುತ್ತದೊಳಗೆ ಸೇರಿಕೊಂಡು ರಾಜಕೀಯ ಮಾಡುವ ನೀವು ದೇವೇಗೌಡರು ಹಾಗೂ ಬಿಜೆಪಿ ಬಗ್ಗೆ ಮಾತನಾಡುತ್ತೀರಾ? ಸಿಎಂ ಆಗುವ ಹಂಬಲದಿಂದ ಜೆಡಿಎಸ್‌ ಪಕ್ಷವನ್ನು ನಿರ್ನಾಮ ಮಾಡಲು ಹೊರಟ್ಟಿದ್ದೀರಿ. ಆಗ ಪಕ್ಷವನ್ನು ಉಳಿಸಲು ಬಿಜೆಪಿಯವರ ಜತೆ ಸೇರಿ ಸರಕಾರ ರಚನೆ ಮಾಡ ಬೇಕಾಗಿತ್ತು.

Advertisement

ಯಡಿಯೂರಪ್ಪ ಅವರಿಗೆ ಅಧಿಕಾರ ಹಸ್ತಾಂತರ ಮಾಡಲು ಸಿದ್ಧನಿದ್ದೆ. ಆದರೆ ನನ್ನದಲ್ಲದ ತಪ್ಪಿನಿಂದ 15 ವರ್ಷ
ಶಿಕ್ಷೆ ಅನುಭವಿಸಿದ್ದೇನೆ. ಆದರೆ ಯಡಿಯೂರಪ್ಪ ನನ್ನ ಸಂಘರ್ಷದ ವೀಡಿಯೋ ಪ್ರದರ್ಶನ ಮಾಡುವ ಕಾಂಗ್ರೆಸ್‌ ನಾಯಕರು 2013ರಲ್ಲಿ ಅಧಿಕಾರಕ್ಕೆ ಬಂದರು. ಅಧಿಕಾರಕ್ಕೆ ಬರಲು ಕಾರಣರಾದ ಯಡಿಯೂರಪ್ಪ ಅವರ ಫೋಟೋ ಇಟ್ಟು ಕೊಂಡು ನೀವು ಪೂಜೆ ಮಾಡಬೇಕು ಎಂದು ಸಿದ್ದರಾಮಯ್ಯಗೆ ತಿರುಗೇಟು ನೀಡಿದರು. ಸಿದ್ದರಾಮಯ್ಯ ನಿಮ್ಮ ಚಡ್ಡಿಯನ್ನೇ ಕಪ್ಪು ಮಾಡಿಕೊಂಡಿರುವಿರಿ. ಇನ್ನು ಕಪ್ಪು ಚುಕ್ಕೆ ಎಲ್ಲಿ ಬಂತು. ನೀವು ಕೇವಲ ಹಿಂದುಳಿದ ವರ್ಗದ ಮುಖ್ಯಮಂತ್ರಿಯಲ್ಲ. ಆರೂವರೆ ಕೋಟಿ ಜನರನ್ನು ಪ್ರತಿನಿಧಿಸುವವರು ಎಂದರು.

ರಸ್ತೆಯದ್ದಕ್ಕೂ ಜನ ಸಾಗರ
ಮೈಸೂರು: ಮೈತ್ರಿ ಪಕ್ಷಗಳಾದ ಬಿಜೆಪಿ ಮತ್ತು ಜೆಡಿಎಸ್‌ ನಾಯಕ ಮೈಸೂರು ಚಲೋ ಪಾದಯಾತ್ರೆ ಸಾಗಿದ ರಸ್ತೆ ಉದ್ದಕ್ಕೂ ಜನ ಜಾತ್ರೆಯೇ ಸೇರಿತ್ತು. ನಾರಾಯಣ ಶಾಸ್ತ್ರೀ ರಸ್ತೆಯಲ್ಲಿನ ರಾಘವೇಂದ್ರ ಸ್ವಾಮಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭಗೊಂಡಿತು. ಅಲ್ಲಿಂದ ಚಾಮರಾಜ ಜೋಡಿ ರಸ್ತೆ, ರಾಮ ಸ್ವಾಮಿ ವೃತ್ತ, ಏಕಲವ್ಯ ವೃತ್ತ ಪ್ರವೇಶ ಮಾಡಿ ಕೊನೆಗೆ ಕೇವಲ ಮುಕ್ಕಾಲು ಗಂಟೆಯಲ್ಲಿ ಪಾದಯಾತ್ರೆ ಅಂತ್ಯಗೊಂಡಿತು.

ಪಾದಯಾತ್ರೆ ಉದ್ದಕ್ಕೂ ರಸ್ತೆ ಪೂರ್ತಿ ಜನ ಸಾಗರ ನೆರೆದಿತ್ತು. ಪಾದಯಾತ್ರೆ ಮಹಾರಾಜ ಕಾಲೇಜು ತಲುಪಿದ ಕೂಡಲೇ ಬಹುತೇಕರು ವೇದಿಕೆ ಮುಂಭಾಗದ ಆಸನಗಳತ್ತ ತೆರಳಿ ಕುಳಿತುಕೊಂಡರು. ಇನ್ನು ಕೆಲವು ಕಾರ್ಯಕರ್ತರು ವೇದಿಕೆ ಬಳಿಗೆ ತೆರಳದೆ ರಸ್ತೆಯಲ್ಲೇ  ನಿಂತು ಧ್ವನಿವರ್ಧಕಗಳ ಮೂಲಕ ತಮ್ಮ ನಾಯಕರ ಭಾಷಣ ಆಲಿಸಿದರು.

ಭರ್ಜರಿ ನೃತ್ಯ

ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ. ಶಾಸಕ ಎಸ್‌.ಆರ್‌. ವಿಶ್ವನಾಥ್‌, ಮಾಜಿ ಶಾಸಕ ರೇಣುಕಾಚಾರ್ಯ ಸೇರಿದಂತೆ ಇತರ ನಾಯಕರು ಪಾದಯಾತ್ರೆಯಲ್ಲಿ ಕಾರ್ಯಕರ್ತರೊಂದಿಗೆ ಸೇರಿ ನೃತ್ಯ ಮಾಡಿದರು.

ಮುಡಾ ಸೈಟ್‌ ಪಡೆಯಲು 87 ಸಾವಿರಕ್ಕೂ ಹೆಚ್ಚು ಜನರು ಅರ್ಜಿ ಹಾಕಿದರೂ ಅವರಿಗೆ ಸಿಕ್ಕಿಲ್ಲ, ಆದರೆ ಸಿದ್ದರಾಮಯ್ಯ ಅವರಿಗೆ ಹೇಗೆ ಸಿಕ್ಕಿತು? ನಿಮ್ಮ ಚುನಾವಣೆ ಅಫಿದವಿತ್‌ನಲ್ಲಿ ಈ ಬಗ್ಗೆ 2013ರಲ್ಲಿ ಏಕೆ ಹೇಳಲಿಲ್ಲ? ಇವರು ಸಮಾಜವಾದಿ ಅಲ್ಲ, ಮಜಾವಾದಿ. – ಎನ್‌. ರವಿಕುಮಾರ್‌, ವಿಧಾನ ಪರಿಷತ್‌ ಸದಸ್ಯ

“ರಾಜ್ಯದಲ್ಲಿ ಕಾಂಗ್ರೆಸ್‌ ಸರಕಾರ ತೊಲಗಬೇಕು, ಎನ್‌ಡಿಎ ಸರಕಾರದ ಅವಧಿಯಲ್ಲಿ ಹಲವು ಯೋಜನೆ ಜಾರಿಗೆ ತರಲಾಗಿದೆ. ಕಾಂಗ್ರೆಸ್‌ ಸರಕಾರ ಬಂದು 14 ತಿಂಗಳಾದರೂ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿಲ್ಲ. ಸರಕಾರದ ಭ್ರಷ್ಟಾಚಾರದ ವಿರುದ್ಧ ದಿನನಿತ್ಯವೂ ಹೋರಾಟ ನಡೆಯುತ್ತಿದೆ.” – ಜಿ.ಟಿ. ದೇವೇಗೌಡ, ಶಾಸಕ

“ಷಡ್ಯಂತ್ರದಿಂದ ಅಧಿಕಾರದಿಂದ ಇಳಿಸಲು ಹೋರಾಟ ಮಾಡಲಾಗುತ್ತಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಆದರೆ ಅರಸು ಅವರನ್ನು ಅಧಿಕಾರದಿಂದ ಕೆಳಗಿಳಿಸಿದ್ದು ನಿಮ್ಮ ಪಕ್ಷದಲ್ಲಿದ್ದವರೇ. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ದೋಚಿರುವ ಹಣವನ್ನೂ ನಿಗಮಕ್ಕೆ ವಾಪಸ್‌ ಕೊಡಬೇಕು. ಅಲ್ಲಿಯವರೆಗೂ ಹೋರಾಟ ಮಾಡುತ್ತೇವೆ.” – ಬಿ. ಶ್ರೀರಾಮುಲು, ಮಾಜಿ ಸಚಿವ

“ಸಿದ್ದರಾಮಯ್ಯ ಭ್ರಷ್ಟಾಚಾರದಲ್ಲಿ ಮುಳುಗಿ ಹೋಗಿದ್ದು, ಸಂಪೂರ್ಣ ಕಾಗೆ ರೀತಿ ಆಗಿದ್ದಾರೆ . ಭ್ರಷ್ಟಾಚಾರದ ಬಗ್ಗೆ ಸದನದಲ್ಲಿ ಉತ್ತರ ಕೊಡದೆ ಓಡಿ ಹೋದ ನೀವು ಇದಕ್ಕೆ ಉತ್ತರ ಕೊಡಬೇಕಿದೆ. ಸಿದ್ದರಾಮಯ್ಯ ರಾಜೀನಾಮೆ ಕೊಡುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ.” – ಛಲವಾದಿ ನಾರಾಯಣ ಸ್ವಾಮಿ, ವಿಧಾನ ಪರಿಷತ್‌ ವಿಪಕ್ಷ ನಾಯಕ

Advertisement

Udayavani is now on Telegram. Click here to join our channel and stay updated with the latest news.

Next