ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಗ್ಯಾಂಗ್ ರೇಪ್ ಪ್ರಕರಣ ಮಾಸುವ ಮುನ್ನವೇ ಮತ್ತೊಂದು ಹೇಯ ಕೃತ್ಯ ನಡೆದಿದೆ. ವ್ಯಕ್ತಿಯೊಬ್ಬ ಸ್ವಂತ ತಂಗಿಯ ಮೇಲೇ ಅತ್ಯಾಚಾರವೆಸಗಿದ ಘಟನೆ ನಡೆದಿದ್ದು, ಪಾಪಿ ಸಹೋದರನೀಗ ಪೊಲೀಸರ ಅತಿಥಿಯಾಗಿದ್ದಾನೆ.
ಮೈಸೂರಿನ ಗಿರಿದರ್ಶಿನಿ ನಗರದಲ್ಲಿ ಅಮಾನುಷ ಘಟನೆ ನಡೆದಿದೆ. ಅಪ್ರಾಪ್ತ ತಂಗಿಯ ಮೇಲೆ ಅತ್ಯಾಚಾರವೆಸಗಿದ ವಿನಯ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ.
ಚಿಕ್ಕವಯಸ್ಸಿನಲ್ಲೇ ತಂದೆ ತಾಯಿಯನ್ನು ಕಳೆದುಕೊಂಡಿದ್ದ 16 ವರ್ಷದ ಬಾಲಿ ಅಣ್ಣನ ಆಶ್ರಯ ಪಡೆದಿದ್ದಳು. ಇಬ್ಬರು ಅಣ್ಣಂದಿರು ಹಾಗೂ ಇಬ್ಬರು ಅಕ್ಕಂದಿರೊಂದಿಗೆ ಬೆಳೆದ ಬಾಲಕಿ, ಕಾಮುಕ ಅಣ್ಣನ ಕಾಮಾಂಧತೆಗೆ ಬಲಿಯಾಗಿದ್ದಾಳೆ.
ಅಕ್ಕಂದಿರಿಗೆ ವಿವಾಹವಾದ ಕಾರಣ ಸಂತ್ರಸ್ಥೆ ಬಾಲಕಿ ಇಬ್ಬರು ಅಣ್ಣಂದಿರ ಜೊತೆ ಆಶ್ರಯ ಪಡೆದಿದ್ದಳು. ಕುಡಿತದ ಚಟಕ್ಕೆ ಬಲಿಯಾಗಿದ್ದ ಸಹೋದರ ವಿನಯ್ ಕುಮಾರ್ ಪಾನಮತ್ತನಾದ ಸಮಯದಲ್ಲಿ ಸ್ವಂತ ತಂಗಿಯ ಮೇಲೆ ಅತ್ಯಾಚಾರವೆಸಗಿದ್ದಾನೆ. ಕಳೆದ ಮೂರು ತಿಂಗಳಿಂದ ಅತ್ಯಾಚಾರವೆಸಗಿರುವುದಾಗಿ ವಿಚಾರಣೆ ವೇಳೆ ತಿಳಿಸಿದ್ದಾನೆ.
ಇದನ್ನೂ ಓದಿ:ಬಸ್ ಮತ್ತು ಕಾರಿನ ನಡುವೆ ಅಪಘಾತ: ಕಾರು ಚಾಲಕ ಸಾವು, ಇಬ್ಬರಿಗೆ ಗಾಯ
ಸ್ವಂತ ಅಣ್ಣನ ಹೇಯ ಕೃತ್ಯಕ್ಕೆ ಅಮಾಯಕ ತಂಗಿ ಗರ್ಭಿಣಿಯಾಗಿದ್ದಾಳೆ. ಶುಕ್ರವಾರ ಈ ಘಟನೆ ಬೆಳಕಿಗೆ ಬಂದಿದ್ದು, ಆಲನಹಳ್ಳಿ ಪೊಲೀಸ್ ಠಾಣೆಯಲ್ಲಿ ವಿನಯ್ ಕುಮಾರ್ ಮೇಲೆ ಅತ್ಯಾಚಾರ ಪ್ರಕರಣ ದಾಖಲಾಗಿದೆ.
ಮೈಸೂರಿನ ಚೆಲುವಾಂಬ ಆಸ್ಪತ್ರೆಯಲ್ಲಿ ಅಪ್ರಾಪ್ತೆಯನ್ನ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.