ಗುಂಡ್ಲುಪೇಟೆ: ತಾಲೂಕಿನ ಬಂಡೀಪುರ ರಾಷ್ಟ್ರೀಯ ಉದ್ಯಾನವನದ ವಿವಿಧ ವಲಯಗಳಲ್ಲಿ ಎರಡನೇ ದಿನದ ಪಕ್ಷಿಗಣತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.
77 ಮಂದಿಯನ್ನು ಒಳಗೊಂಡ ಸ್ವಯಂ ಸೇವಕರ ತಂಡ ಬಂಡೀಪುರ ಉದ್ಯಾನವನ ವ್ಯಾಪ್ತಿಯ 13 ವಲಯಗಳಲ್ಲಿ ಶನಿವಾರ ಬೆಳಗ್ಗೆ ಮತ್ತು ಸಂಜೆ ಎರಡು ಸಮಯದಲ್ಲಿ ಪಕ್ಷಿಗಣತಿಯನ್ನು ಮಾಡಿದರು.
ಉತ್ತಮ ಅನುಭವ: ಮದ್ದೂರು ವಲಯದಲ್ಲಿ ಪಕ್ಷಿಗಣತಿಯಲ್ಲಿ ಭಾಗವಹಿಸಿರುವ ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ವನ್ಯಜೀವಿ ಛಾಯಾಗ್ರಾಹಕ ಆರ್.ಕೆ.ಮಧು, ಎರಡು ದಿನದ ತಮ್ಮ ಅನುಭವ ಹಾಗೂ ತೆಗೆದ ಪಕ್ಷಿ ಚಿತ್ರಗಳನ್ನು ಉದಯವಾಣಿಯೊಂದಿಗೆ ಹಂಚಿಕೊಂಡರು. ಈ ಹಿಂದೆ ಆನೆಗಣತಿ ಮತ್ತು ಹುಲಿ ಗಣತಿಯಲ್ಲಿ ಭಾಗವಹಿಸಿದ್ದೆ. ಈಗ ಪಕ್ಷಿ ಗಣತಿಯನ್ನು ನನಗೆ ಅವಕಾಶ ಸಿಕ್ಕಿದೆ. ಇದೊಂದು ಉತ್ತಮ ಅನುಭವ. ಮುಂಜೆ ಹಾಗೂ ಸಂಜೆ ಕಾಡಿನಲ್ಲಿ ವಿವಿಧ ಪಕ್ಷಿಗಳನ್ನು ನೋಡುವುದು ಹಾಗೂ ಅದರ ಧ್ವನಿಗಳನ್ನು ಕೇಳುವುದು ಕರ್ಣಾನಂಧ ವಾಗಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮೊದಲ ದಿನ 43 ವಿಧದ ಪಕ್ಷಿಗಳು ಕಂಡು ಬಂದಿದ್ದು ಇದರಲ್ಲಿ ಅಪರೂಪದ ಗೋಲ್ಡ ನ್ ಓರಿಯೋಲ್, ರೋಜ್ ಪಿಂಚ್, ಉತ್ತರ ಭಾರತದಿಂದ ವಲಸೆ ಬಂದಿರುವ ಜೇನು ಬಣ್ಣದ ಬಾಲದ ಮೈನಾ, ರಾಕೆಟ್ ಬಾಲದ ಕಾಜಾಣ ಮುಂತಾದ ಅಪರೂಪದ ಹಕ್ಕಿಗಳೂ ಇವೆ. ಇವೆಲ್ಲವೂ ಗಾತ್ರದಲ್ಲಿ ಚಿಕ್ಕದಾಗಿದೆ. ಎರಡನೇ ದಿನವಾದ ಶನಿವಾರ ಸುಮಾರು 18 ಜಾತಿಯ ವಿಧದ ಹಕ್ಕಿಗಳು ಕಂಡುಬಂದಿವೆ. ಕಂಚುಗಾರಹಕ್ಕಿ, ಚೀನಾದಿಂದ ವಲಸೆ ಬಂದಿರುವ ಬೂಟೆಡ್ ವಾಬ್ಲಿರ್ ಕಂಡುಬಂದಿದೆ ಎಂದು ಆರ್.ಕೆ.ಮಧು ತಿಳಿಸಿದರು.
ಇದನ್ನೂ ಓದಿ :ಗೆಣಸು ಪಾರಂಪರಿಕ ಆಹಾರ ಉತ್ಪನ್ನವಾಗಲಿ
ಹೆಡಿಯಾಲ ಅರಣ್ಯ ವಿಭಾಗದಲ್ಲಿ ಎಸಿಎಫ್ ಪರಮೇಶ್ ನೇತೃತ್ವದ ತಂಡ ಪಕ್ಷಿಗಣತಿಯಲ್ಲಿ ಸ್ವಯಂ ಸೇವಕರೊಂದಿಗೆ ಭಾಗವಹಿಸಿ ಸೂಕ್ತ ಮಾರ್ಗದರ್ಶನ ನೀಡಿತು. ಕಡೆ ದಿನವಾದ ಭಾನುವಾರ ಕೂಡ ಸಮೀಕ್ಷೆ ನಡೆಯಲಿದೆ.