ಮೈಸೂರು: ಮೈಸೂರು-ಬೆಂಗಳೂರು ದಶಪಥ ಹೆದ್ದಾರಿ ನಿರ್ಮಾಣದಲ್ಲಿ ತಾಂತ್ರಿಕ ದೋಷವಿರುವುದು ತಮ್ಮ ಇಲಾಖೆಯ ಗಮನಕ್ಕೆ ಬಂದಿದ್ದು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಜೊತೆಗೂಡಿ ಈ ದೋಷವನ್ನು ಸರಿಪಡಿಸುತ್ತೇವೆಂದು ಲೋಕೋಪಯೋಗಿ ಇಲಾಖೆ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಶುಕ್ರವಾರ ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಈ ದಶಪಥ ಹೆದ್ದಾರಿ ನಿರ್ಮಾಣವಾದ ನಂತರ ಕಡಿಮೆ ಅವಧಿಯಲ್ಲಿ ಅತಿ ಹೆಚ್ಚು ಅಪಘಾತ ಆಗಿವೆ. ಸಾವು, ನೋವು ಸಂಭವಿಸಿದೆ. ಹೆದ್ದಾರಿ ನಿರ್ಮಾಣದಲ್ಲಿ ತಾಂತ್ರಿಕ ದೋಷ ಆಗಿರಬಹುದು. ಇದು ನಮ್ಮ ಇಲಾಖೆಯ ಗಮನಕ್ಕೆ ಬಂದಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರಕ್ಕೆ ಈ ದಶಪಥ ರಸ್ತೆ ವಹಿಸಲಾಗಿದೆ. ಅವರ ಜೊತೆ ಸೇರಿಕೊಂಡು ತಾಂತ್ರಿಕ ದೋಷವನ್ನು ಸರಿಪಡಿಸುತ್ತೇವೆ ಎಂದರು.
ಈ ದಶಪಥ ಹೆದ್ದಾರಿಯಲ್ಲಿ ಅಪಘಾತ ತಡೆಗಟ್ಟಲು ರಸ್ತೆಯನ್ನು ವೈಜ್ಞಾನಿಕವಾಗಿ ಅಭಿವೃದ್ಧಿ ಪಡಿಸಲು ಕ್ರಮ ಕೈಗೊಳ್ಳಲಾಗುವುದು. ಈ ಹೆದ್ದಾರಿಯಲ್ಲಿ ಟೋಲ್ ಹೆಚ್ಚಳ ಕೂಡ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಈ ಬಗ್ಗೆಯೂ ಸಂಬಂಧಪಟ್ಟವರ ಜೊತೆ ಚರ್ಚಿಸಿ ಟೋಲ್ ದರ ಇಳಿಕೆಗೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.
ಬೆಂಗಳೂರು-ಮೈಸೂರು ಹೆದ್ದಾರಿ ಕಾಮಗಾರಿ ಅವೈಜ್ಞಾನಿಕ ಎಂಬುದರಲ್ಲಿ ಸ್ವಲ್ಪ ಸತ್ಯಾಂಶವಿದೆ. ಇವತ್ತಿಗೂ ಟೋಲ್ ವ್ಯವಸ್ಥೆ ಸರಿಯಿಲ್ಲ. ಪ್ರವೇಶ, ನಿರ್ಗಮನ ಸರಿಯಾಗಿ ಮಾಡಲು ಆಗಿಲ್ಲ. ಎಲ್ಲವನ್ನೂ ಕೇಂದ್ರ ಸಚಿವ ನಿತಿನ್ ಗಡ್ಕರಿ ಗಮನಕ್ಕೆ ತಂದಿದ್ದೇವೆ. ಸಮಗ್ರ ಅಧ್ಯಯನ ಮಾಡಿ ಸರಿಪಡಿಸುವಂತೆ ಒತ್ತಾಯಿಸಿದ್ದೇವೆ. ಹೆದ್ದಾರಿ ಸರಿ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ.
-ಡಿ.ವಿ.ಸದಾನಂದಗೌಡ, ಸಂಸದ