ಮೈಸೂರು: ಬೆಂಗಳೂರು – ಮೈಸೂರು ದಶಪಥ ರಸ್ತೆ ಮಾಡಿಸಿದ್ದು ನಾವು. ಬೇರೆಯವರು ಕ್ರೆಡಿಟ್ ತೆಗೆದುಕೊಳ್ಳುವುದಕ್ಕೆ ಹೋಗುತ್ತಾರೆ. ಸುಳ್ಳು ಹೇಳುವವರು ಸಮಾಜಕ್ಕೆ ಅಪಾಯ. ಸುಮ್ಮನೆ ಬುರುಡೆ ಬಿಡುವವರ ನಂಬಬೇಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ಕಿದ್ವಾಯಿ ಆಸ್ಪತ್ರೆಗೆ ಶಂಕು ಸ್ಥಾಪನೆ ನೆರವೇರಿಸಿ ಮಾತನಾಡಿದ ಅವರು, ನಮ್ಮ ಸರ್ಕಾರ ಹೋದ ಮೇಲೆ ಮೈಸೂರು ನಗರಕ್ಕೆ ಒಂದೇ ಒಂದು ಕೆಲಸ ಆಗಲಿಲ್ಲ. ಈಗ ಮತ್ತೆ ನಮ್ಮ ಸರಕಾರ ಬಂದಿದೆ. ಮೈಸೂರಿಗೆ ಎಲ್ಲಾ ಅಭಿವೃದ್ಧಿ ಕೆಲಸ ಮಾಡುತ್ತೇವೆ. ಮೈಸೂರು ನಗರ ಇನ್ನೂ ಕೆಟ್ಟಿಲ್ಲ. ಇಲ್ಲಿ ನಿವೃತ್ತರು ಉಳಿದು ಕೊಳ್ಳಲು ಇಷ್ಟಪಡುತ್ತಾರೆ. ಈ ಊರಿನಲ್ಲಿ ಎಲ್ಲಾ ವ್ಯವಸ್ಥೆ ಮಾಡುವುದು ನಮ್ಮ ಕರ್ತವ್ಯ. ಮೈಸೂರಿನ ಜನರ ಋಣ ತೀರಿಸುವ ಕೆಲಸ ಮಾಡುತ್ತೇನೆ. ನಿಮ್ಮ ಆಶೀರ್ವಾದ ಇರಲಿ ಎಂದರು.
ಜಯದೇವ ಆಸ್ಪತ್ರೆಯಲ್ಲಿ ಒಳ್ಳೆಯ ಚಿಕಿತ್ಸೆ ಸಿಗುತ್ತದೆಂದು ಕೇಳಿದ್ದೇನೆ. ನಾನು ಯಾವತ್ತೂ ಅಲ್ಲಿಗೆ ಹೋಗಿಲ್ಲ. ಜಯದೇವ ಆಸ್ಪತ್ರೆಯಲ್ಲಿ ಸಿಗುವ ಒಳ್ಳೆಯ ಚಿಕಿತ್ಸೆ ವ್ಯವಸ್ಥೆ ಬೇರೆ ಸರ್ಕಾರಿ ಆಸ್ಪತ್ರೆಯಲ್ಲಿ ಯಾಕೆ ಸಾಧ್ಯವಿಲ್ಲ? ನಾನು ಸಿಎಂ ಆಗುವವರೆಗೂ ಮೈಸೂರಲ್ಲಿ ಒಂದು ಜಿಲ್ಲಾಸ್ಪತ್ರೆ ಇರಲಿಲ್ಲ. ಹಿಂದಿನ ಸರ್ಕಾರ ಕಿದ್ವಾಯಿ ಮಾಡಿರಬಹುದು. ಆದರೆ ದುಡ್ಡು ಕೊಡಲಿಲ್ಲ. ನಾನು ದುಡ್ಡು ಕೊಟ್ಟಿದ್ದೇನೆ. ಮೈಸೂರಿನಲ್ಲಿ ಜಯದೇವ ಆಸ್ಪತ್ರೆ ಆರಂಭಿಸಿದ್ದು ನಾನು. ವೈದ್ಯರಿಗೆ ಮನುಷ್ಯತ್ವ ಇರಬೇಕು. ಮನುಷ್ಯತ್ವ ಇಟ್ಟು ಕೊಂಡು ಕೆಲಸ ಮಾಡಬೇಕು ಎಂದರು.
ನನಗೆ ಡಾಕ್ಟರ್ ಆಗಬೇಕೆಂದು ಆಸೆಯಿತ್ತು. ಅದರೆ ಮಾರ್ಕ್ಸ್ ಬರಲಿಲ್ಲ. ಆಗ ಮಾರ್ಕ್ಸ್ ಬಾರದೆ ಮೆಡಿಕಲ್ ಸೀಟ್ ಸಿಗದೆ ಇರುವುದು ಒಳ್ಳೆಯದಾಯಿತು. ನಾನು ಡಾಕ್ಟರ್ ಆಗದೆ ಇರುವುದೇ ಒಳ್ಳೆಯಾದಯಿತು. ಈಗ ಸಿಎಂ ಆಗಿ ಜನಸೇವೆ ಮಾಡಲು ಅವಕಾಶ ಸಿಕ್ಕಿತು ಎಂದರು.
ನಾನು ಓದುತ್ತಿದ್ದ ಕಾಲೇಜಿನ ಬಳಿಯೆ ಮೈಸೂರು ಮೆಡಿಕಲ್ ಕಾಲೇಜ್ ಇತ್ತು. ಕಾಲೇಜ್ ಬಳಿ ಒಂದು ಕ್ಯಾಟೀನ್ ಇತ್ತು. ಅಲ್ಲಿ ದೋಸೆ ತಿನ್ನಲು ಹೋಗುತ್ತಿದ್ದೆ. ಆಗ 19 ಪೈಸೆ ಗೆ ಒಂದು ಮಸಾಲೆ ದೋಸೆ. ಸೆಟ್ ದೋಸೆ 12 ಪೈಸೆ. 12 ಪೈಸೆಗೆ 4 ನಾಲ್ಕು ದೋಸೆ. ನಾನು ಕಾಫಿ ಕುಡಿಯೋದು ಬಿಟ್ಟು ಎರಡು ಸೆಟ್ ದೋಸೆ ತಿನ್ನುತ್ತಿದೆ ಎಂದು ಸಿದ್ದರಾಮಯ್ಯ ಹಳೆಯ ನೆನಪುಗಳ ಮೆಲುಕು ಹಾಕಿದರು.