Advertisement

Mysore, Bangalore Highway: ಬೆಂ-ಮೈ ಹದ್ದಾರಿಯಲ್ಲೇ ನಿಲ್ಲುವ ಲಾರಿಗಳು

03:30 PM Oct 10, 2023 | Team Udayavani |

ಮದ್ದೂರು: ಏಷ್ಯಾ ಖಂಡದಲ್ಲೇ ಅತಿಹೆಚ್ಚು ಎಳನೀರು ವ್ಯಾಪಾರ ವಹಿವಾಟು ನಡೆಯುವ ಮದ್ದೂರು ಎಳನೀರು ಮಾರುಕಟ್ಟೆಯ ಆವರಣದಲ್ಲಿ ಸಂಚಾರ ದಟ್ಟಣೆ ಮಿತಿ ಮೀರಿದ್ದು ಸಾರ್ವಜನಿಕರು, ವಿದ್ಯಾರ್ಥಿಗಳು ಆತಂಕದ ನಡುವೆ ಸಂಚರಿಸ ಬೇಕಾದ ಅನಿವಾರ್ಯತೆ ಕಂಡು ಬಂದಿದೆ.

Advertisement

ಮೈಸೂರು, ಬೆಂಗಳೂರು ಹೆದ್ದಾರಿ ಬದಿಯಲ್ಲಿರುವ ಎಪಿಎಂಸಿ ಎಳನೀರು ಮಾರುಕಟ್ಟೆಗೆ ಪ್ರತಿನಿತ್ಯ ನೂರಾರು ವಾಹನಗಳು ವ್ಯಾಪಾರ ವಹಿವಾಟಿಗೆಂದು ಆಗಮಿಸುವ ವೇಳೆ ರಸ್ತೆಬದಿಯಲ್ಲೇ ನಿಂತು ವರ್ತಕರು ಹಾಗೂ ವ್ಯಾಪಾರಸ್ಥರು ಎಳನೀರು ಖರೀದಿಸುವ ಪರಿಪಾಟ ಪ್ರತಿನಿತ್ಯ ಮುಂದುವರಿದಿದೆ.

ವಾಹನ ಸಂಚಾರಕ್ಕೆ ಅಡಚಣೆ: ಮಾರುಕಟ್ಟೆಯ ಮುಖ್ಯದ್ವಾರದಲ್ಲೇ ವರ್ತಕರು ಎಳನೀರು ಖರೀದಿಸುತ್ತಿದ್ದು ಇಷ್ಟೆಲ್ಲಾ ಅದ್ವಾನಗಳಿಗೆ ಕಾರಣವಾಗಿದೆ. ಎಳನೀರು ತರುವ ವಾಹನಗಳನ್ನು ಮಾರು ಕಟ್ಟೆ ಒಳ ಆವರಣದಲ್ಲಿ ನಿಲ್ಲಿಸಿ ವ್ಯಾಪಾರ ನಡೆಸಲು ಸಾಕಷ್ಟು ಸ್ಥಳಾವಕಾಶ ವಿದ್ದರೂ ಹೆದ್ದಾರಿ ಬದಿಯಲ್ಲೇ ಎಳನೀರು ಖರೀದಿಸಿ ಸಂಚಾರಕ್ಕೆ ತೊಡಕ್ಕುಂಟಾಗುತ್ತಿದೆ ಎಂದು ವಾಹನ ಸವಾರರು ಆರೋಪಿಸಿದ್ದಾರೆ.

ಕ್ರಮ ಕೈಗೊಳ್ಳದ ಅಧಿಕಾರಿಗಳು: ಮುಂಬೈ, ಮಹಾರಾಷ್ಟ್ರ, ಪುಣೆ, ಆಂಧ್ಯಪ್ರದೇಶ, ತಮಿಳುನಾಡು, ಔರಂಗ ಬಾದ್‌ ಇನ್ನಿತರ ಹೊರ ರಾಜ್ಯಗಳಿಂದ ಎಳನೀರು ರವಾನಿಸುವ ಲಾರಿ ಚಾಲಕರು ಪ್ರತಿನಿತ್ಯ ಮೈಸೂರು-ಬೆಂಗಳೂರು ಹೆದ್ದಾರಿ ಎರಡೂ ಬದಿಯಲ್ಲಿ ಸಾಲುಗಟ್ಟಿ ತಮ್ಮ ವಾಹನಗಳನ್ನು ನಿಲ್ಲಿಸುವುದರಿಂದ ಸ್ಥಳೀಯ ಸಾರ್ವಜನಿಕರ ಸಂಚಾರಕ್ಕೂ ತೊಡಕ್ಕೂಂಟಾಗಿದೆ. ಈ ಸಂಬಂಧ ಅಧಿಕಾರಿ ಗಳು ಯಾವುದೇ ಕ್ರಮಕ್ಕೆ ಮುಂದಾಗದಿರುವುದು ಸಾರ್ವಜನಿಕ ಟೀಕೆಗೆ ಕಾರಣವಾಗಿದೆ.

ಅಧಿಕಾರಿಗಳಿಂದ ನಿರ್ಲಕ್ಷ್ಯ ಧೋರಣೆ: ಹೆದ್ದಾರಿ ಮಾರ್ಗದುದ್ಧಕ್ಕೂ ವಾಹನಗಳು ನಿಲ್ಲುವುದರಿಂದ ವಿದ್ಯಾರ್ಥಿಗಳು, ಸಾರ್ವಜನಿಕರು ಗೆಜ್ಜಲಗೆರೆ ಕೈಗಾರಿಕಾ ಪ್ರದೇಶಕ್ಕೆ ತೆರಳುವ ನೂರಾರು ಸಂಖ್ಯೆಯ ಕಾರ್ಮಿಕರು ಜೀವದ ಭಯದಲ್ಲೇ ಸಂಚರಿಸ ಬೇಕಾದ ಅನಿವಾರ್ಯತೆ ಇದೆ. ಈ ಸಂಬಂಧ ಎಪಿಎಂಸಿ ಅಧಿಕಾರಿಗಳಿಗೆ ಹಲವು ಬಾರಿ ದೂರು ನೀಡಿದ್ದರೂ ನಿರ್ಲಕ್ಷ್ಯಧೋರಣೆ ಅನುಸರಿಸಿದ್ದಾರೆ.

Advertisement

ಪೊಲೀಸರು ಅಗತ್ಯ ಕ್ರಮಕ್ಕೆ ಮುಂದಾಗಬೇಕು: ದಶಪಥ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಗಳ ಸಂಚಾರ ನಿಷೇಧ ಮಾಡಿರು ವುದರಿಂದ ಮೈಸೂರು, ಬೆಂಗಳೂರು ಮಾರ್ಗವಾಗಿ ತೆರಳುವ ದ್ವಿಚಕ್ರ ವಾಹನ ಸವಾರರು ಸರ್ವಿಸ್‌ ರಸ್ತೆ ಹಾಗೂ ಹೆದ್ದಾರಿ ಮಾರ್ಗ ವನ್ನೇ ಅವಲಂಭಿಸಿ ಅತಿವೇಗವಾಗಿ ಸಂಚರಿಸುವ ವೇಳೆ ಅಪಘಾತಗಳು ಕಂಡುಬರುತ್ತಿದ್ದು ಸ್ಥಳೀಯ ಪೊಲೀಸರು ಅಗತ್ಯ ಕ್ರಮಕ್ಕೆ ಮುಂದಾಗಬೇಕಿದೆ. ಗ್ರಾಮದ ಸ್ಥಳೀಯರು ರಸ್ತೆ ದಾಟುವುದೇ ದುಸ್ತರ ವಾಗಿದ್ದು ಯಾವ ಮಾರ್ಗದಿಂದ ವಾಹನಗಳು ಮತ್ತು ದ್ವಿಚಕ್ರ ವಾಹನಗಳು ಆಗಮಿಸುತ್ತವೆಂಬುದೇ ಕಾಣಸಿ ಗದಾಗಿದ್ದು ಇದರಿಂದಾಗಿ ಹಲವಾರು ಅಪಘಾತಗಳು ಸಂಭವಿಸಿರುವ ಉದಾಹರಣೆಗಳು ಸಾಕಷ್ಟಿವೆ.

ತಾಲೂಕಿನ ವಳಗೆರೆಹಳ್ಳಿ, ದೇಶಹಳ್ಳಿ, ಬೆಸಗರಹಳ್ಳಿ ಹಾಗೂ ಇನ್ನಿತರ ಗ್ರಾಮಗಳ ಸ್ಥಳೀಯ ನಿವಾಸಿಗಳು ದಿನನಿತ್ಯದ ಕಾರ್ಯ ಚಟುವಟಿಕೆಗಳಿಗೆ ಪಟ್ಟಣಕ್ಕೆ ಆಗಮಿಸಲು ಈ ಮಾರ್ಗವನ್ನೇ ಅವಲಂಭಿಸಿದ್ದು ಎಚ್‌.ಕೆ.ವಿ ನಗರ ತಿರುವಿನಲ್ಲಿ ಸಾಲುಗಟ್ಟಿ ನಿಲ್ಲುವ ಲಾರಿಗಳಿಂದಾಗಿ ರಸ್ತೆಯಲ್ಲಿ ಸಂಚರಿಸಲು ಹರಸಾಹಸ ಪಡಬೇಕಾದ ದುಸ್ಥಿತಿ ಎದುರಾಗಿದೆ. ಪಟ್ಟಣದ ಪ್ರವಾಸಿಮಂದಿರದಿಂದ ಎಚ್‌.ಕೆ.ವಿ ನಗರದವರೆಗೂ ನೂರಾರು ಸಂಖ್ಯೆಯ ವಾಹನಗಳು ಎಲ್ಲೆಂದರಲ್ಲಿ ನಿಂತು ಸಂಚಾರಕ್ಕೆ ತೊಡಕ್ಕುಂಟಾಗುವ ಜತೆಗೆ ಹಲವು ಅದ್ವಾನಗಳಿಗೆ ಕಾರಣವಾಗಿದ್ದು ಎಪಿಎಂಸಿ ಮಾರುಕಟ್ಟೆಯ ಸಿಬ್ಬಂದಿಗಳು ಮಾರುಕಟ್ಟೆ ಆವರಣದಲ್ಲಿರುವ ತ್ಯಾಜ್ಯವನ್ನು ವಿಲೇವಾರಿ ಮಾಡುವ ನೆಪವೊಡ್ಡಿ ಮುಖ್ಯದ್ವಾರಕ್ಕೆ ಬೀಗ ಜಡಿಯುವುದರಿಂದ ಇಷ್ಟೇಲ್ಲಾ ಅವ್ಯವಸ್ಥೆಗಳಿಗೆ ಕಾರಣವಾಗಿದೆ.

ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ನೂರಾರು ಸಂಖ್ಯೆಯ ವಾಹನಗಳು ನಿಲ್ಲಲು ಸ್ಥಳಾವಕಾಶವಿದ್ದರೂ ಅಧಿಕಾರಿಗಳ ಬೇಜವಾಬ್ದಾರಿತನದಿಂದ ಪ್ರತಿನಿತ್ಯ ಬೆಳಗ್ಗೆ 10 ಗಂಟೆ ವರೆವಿಗೂ ಸಾಲುಗಟ್ಟಿ ನಿಲ್ಲುವ ಲಾರಿಗಳ ದಟ್ಟಣೆಯಿಂದಾಗಿ ಸ್ಥಳೀಯರಿಗೆ ಮತ್ತು ವ್ಯಾಪಾರಸ್ಥರಿಗೆ ಅನಾನುಕೂಲ ಕಂಡುಬಂದಿದ್ದು ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಎಪಿಎಂಸಿ ಮಾರುಕಟ್ಟೆ ಒಳ ಆವರಣದಲ್ಲಿ ಲಾರಿಗಳು ನಿಲ್ಲಲು ಪ್ರತ್ಯೇಕ ವ್ಯವಸ್ಥೆ ಕಲ್ಪಿಸಿ ಆಗುತ್ತಿರುವ ಅವ್ಯವಸ್ಥೆಯನ್ನು ಸರಿಪಡಿಸಬೇಕಾಗಿದೆ.

ಲಾರಿಗಳನ್ನು ಪ್ರತ್ಯೇಕ ನಿಲ್ಲಿಸಲು ಸೂಚಿಸಿ: ಎಪಿಎಂಸಿ ಮಾರುಕಟ್ಟೆಯ ಕೂದಲೆಳೆ ಅಂತರದಲ್ಲಿ ಖಾಸಗಿ ಲಾರಿ ನಿಲ್ದಾಣದ ವ್ಯವಸ್ಥೆ ಇದ್ದರೂ ಚಾಲಕರ ಬೇಜವಾಬ್ದಾರಿತನದಿಂದಾಗಿ ಹೆದ್ದಾರಿಯ ಎರಡೂ ಬದಿಯಲ್ಲಿ ತಮ್ಮ ವಾಹನಗಳನ್ನು ಎಲ್ಲೆಂದರಲ್ಲಿ ನಿಲ್ಲಿಸುವುದರಿಂದ ಹೆದ್ದಾರಿಯಲ್ಲಿ ಇತರೆ ವಾಹನಗಳು ಸಂಚರಿಸಲು ದುಸ್ತರವಾಗಿದೆ. ಕೂಡಲೇ ಎಪಿಎಂಸಿ ಅಧಿಕಾರಿಗಳು ಸಿಬ್ಬಂದಿಯನ್ನು ನಿಯೋಜಿಸಿ ರಸ್ತೆ ಬದಿಯಲ್ಲಿ ನಿಲ್ಲುವ ಲಾರಿಗಳನ್ನು ಪ್ರತ್ಯೇಕ ನಿಲ್ದಾಣದಲ್ಲಿ ನಿಲ್ಲಿಸಿ ಆಗುತ್ತಿರುವ ಅನಾನುಕೂ ಲವನ್ನು ತಪ್ಪಿಸಿ ಸಂಚಾರಕ್ಕೆ ಅನುಕೂಲ ಕಲ್ಪಿಸಬೇಕಿದೆ.

ಮೈಸೂರು, ಬೆಂಗಳೂರು ಹೆದ್ದಾರಿಯ ಎರಡೂ ಬದಿಯಲ್ಲಿ ಲಾರಿಗಳು ಎಲ್ಲೆಂದರಲ್ಲಿ ನಿಂತು ಸಂಚಾರಕ್ಕೆ ತೊಡಕ್ಕುಂಟಾಗುತ್ತಿರುವ ಬಗ್ಗೆ ದೂರುಗಳು ತಮ್ಮ ಗಮ ನಕ್ಕೆ ಬಂದಿದೆ. ಈ ಸಂಬಂಧ ಸ್ಥಳೀಯ ಪೊಲೀಸರಿಗೆ ಪತ್ರ ಬರೆದು ಟ್ರಾನ್ಸ್‌ಪೋರ್ಟ್‌ ಮಾಲೀಕರಿಗೆ ಸೂಚಿಸಿ ಪಾರ್ಕಿಂಗ್‌ನಲ್ಲೇ ನಿಲುಗಡೆ ಮಾಡಲುಕ್ರಮ ವಹಿಸಲಾಗುವುದು. -ಕೆ.ಸಿ.ಸಂದೇಶ್‌, ಎಪಿಎಂಸಿ, ಕಾರ್ಯದರ್ಶಿ

ಹೆದ್ದಾರಿಯ ಎರಡೂ ಬದಿಯಲ್ಲಿ ಎಲ್ಲೆಂದರಲ್ಲಿ ನಿಲ್ಲುವ ಲಾರಿಗಳಿಂದಾಗಿ ಸಂಚಾರ ದಟ್ಟಣೆ ಮಿತಿಮೀರಿದ್ದು ಜತೆಗೆ ವಿದ್ಯಾರ್ಥಿಗಳು ಆತಂಕದ ನಡುವೆ ಸಂಚರಿಸಬೇಕಾದ ಅನಿವಾರ್ಯತೆ ಕಂಡು ಬಂದಿದೆ. ಕೂಡಲೇ ಸಂಚಾರಿ ಪೊಲೀಸರು ಹಾಗೂ ಎಪಿಎಂಸಿ ಅಧಿಕಾರಿಗಳು ಲಾರಿಗಳ ನಿಲುಗಡೆಗೆ ಅಗತ್ಯ ಕ್ರಮವಹಿಸಬೇಕಾಗಿದೆ ಸಿ.ಎಸ್‌. ಪ್ರಕಾಶ್‌, ಎಂಪಿಸಿಎಸ್‌ ನಿರ್ದೇಶಕ

-ಎಸ್‌. ಪುಟ್ಟಸ್ವಾಮಿ, ಮದ್ದೂರು

Advertisement

Udayavani is now on Telegram. Click here to join our channel and stay updated with the latest news.

Next