Advertisement

ಮೈಸೂರು- ಬೆಂಗಳೂರು ಹೆದ್ದಾರಿ ಕಾಮಗಾರಿ ಶೀಘ್ರ

08:51 AM Jan 30, 2018 | |

ಬೆಂಗಳೂರು: ಬೆಂಗಳೂರು- ಮೈಸೂರು ಹೆದ್ದಾರಿಯ ಗರಿಷ್ಠ ಸಾಮರ್ಥಯದ ಎರಡು ಪಟ್ಟು ವಾಹನಗಳು ಸಂಚರಿಸುತ್ತಿದ್ದು, ದಟ್ಟಣೆ ಹೆಚ್ಚಾಗಿದೆ. ಈಗಾಗಲೇ ಈ ಮಾರ್ಗ ರಾಷ್ಟ್ರೀಯ ಹೆದ್ದಾರಿ ಮಾನ್ಯತೆ ಪಡೆದಿದ್ದು, ಶೀಘ್ರವೇ ಕಾಮಗಾರಿ ಆರಂಭವಾಗುವ ನಿರೀಕ್ಷೆಯಿದೆ ಎಂದು ಲೋಕೋಪಯೋಗಿ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು.

Advertisement

ಕರ್ನಾಟಕ ಕೈಗಾರಿಕಾ ಮತ್ತು ವಾಣಿಜ್ಯ ಮಹಾಸಂಸ್ಥೆ ಹಮ್ಮಿಕೊಂಡಿದ್ದ ಸಂವಾದದಲ್ಲಿ ಮಾತನಾಡಿದ ಅವರು, “ಹಾಲಿ ಬೆಂಗಳೂರು- ಮೈಸೂರು ರಾಜ್ಯ ಹೆದ್ದಾರಿಯು ಗಂಟೆಗೆ ಗರಿಷ್ಠ 35,000 ವಾಹನ ಸಂಚಾರ ತಡೆದುಕೊಳ್ಳುವ ಸಾಮರ್ಥಯ ಹೊಂದಿದೆ. ಆದರೆ ವಾರಾಂತ್ಯಗಳಲ್ಲಿ 70,000ದಿಂದ 80,000 ವಾಹನಗಳು ಸಂಚರಿಸುತ್ತವೆ. ಕೆಲವೊಮ್ಮೆ ವಾಹನ ಸಂಖ್ಯೆ ಲಕ್ಷ ತಲುಪಿದ್ದು, ದಟ್ಟಣೆ ಉಂಟಾಗುತ್ತಿದೆ ಎಂದರು.

ಕೇಂದ್ರ ಸರ್ಕಾರವು ಈ ಮಾರ್ಗವನ್ನು ರಾಷ್ಟ್ರೀಯ ಹೆದ್ದಾರಿಯಾಗಿ ಗುರುತಿಸಿದ್ದು, ಡಿಪಿಆರ್‌ ಸಿದ್ಧವಾಗಿದೆ. ಭೂಸ್ವಾಧೀನ ಪ್ರಕ್ರಿಯೆಯೂ ಶೇ.70ರಷ್ಟು ಪೂರ್ಣಗೊಂಡಿದ್ದು, ಯಾವುದೇ ಸಂದರ್ಭದಲ್ಲಿ ಕಾಮಗಾರಿ ಆರಂಭವಾಗಬಹುದು. ಇನ್ನೊಂದೆಡೆ ಬೆಂಗಳೂರಿನಿಂದ ಕನಕಪುರ, ಮಳವಳ್ಳಿ ಮಾರ್ಗವಾಗಿ ಮೈಸೂರು ಸಂಪರ್ಕಿಸುವ ರಸ್ತೆ ವಿಸ್ತರಣೆಗೆ ಆದ್ಯತೆ ನೀಡಲಾಗಿದ್ದು, ಬೆಂಗಳೂರಿನಿಂದ ಕನಕಪುರ ನಡುವಿನ ಮಾರ್ಗದ ವಿಸ್ತರಣೆ ಕಾಮಗಾರಿ ಭರದಿಂದ ಸಾಗಿದೆ ಎಂದರು. ಹಿಂದೆಲ್ಲ ಲೋಕೋಪಯೋಗಿ ಇಲಾಖೆ ವಿರುದ್ಧ
ಆರೋಪ ಕೇಳಿಬರುತ್ತಿದ್ದವು. ಆದರೆ ಕಳೆದ 4 ವರ್ಷ 8 ತಿಂಗಳ ಅವಧಿಯಲ್ಲಿ ಇಲಾಖೆ ಬಗ್ಗೆ ಇಂತಹ ಆರೋಪ ಕೇಳಿ ಬಂದಿಲ್ಲ. ರಾಜ್ಯದಲ್ಲಿ 19,000 ಕಿ.ಮೀ. ಉದ್ದದ ರಾಜ್ಯ ಹೆದ್ದಾರಿಯಿದ್ದು, 12,000 ಕಿ.ಮೀ. ಮಾರ್ಗವನ್ನು ಸರ್ಕಾರ ಅಭಿವೃದ್ಧಿ ಪಡಿಸಿದೆ. ಹಾಗೆಯೇ 49,000 ಕಿ.ಮೀ. ಉದ್ದದ ಜಿಲ್ಲಾ ಹೆದ್ದಾರಿಯಿದ್ದು, 20,000 ಕಿ.ಮೀ. ಮಾರ್ಗದ ಅಭಿವೃದ್ಧಿಯಾಗಿದೆ. 24,000 ಕಿ.ಮೀ. ಉದ್ದದ ಮಾರ್ಗ ಪರೀಕ್ಷಿಸಲಾಗಿದೆ. ಗುಣಮಟ್ಟದ ರಸ್ತೆ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ ಎಂದು ಹೇಳಿದರು. ಎಫ್ಕೆಸಿಸಿಐ ಅಧ್ಯಕ್ಷ ಕೆ.ರವಿ, ಎಫ್ ಕೆಸಿಸಿಐ ಪ್ರವಾಸೋದ್ಯಮ ಸಮಿತಿ ಅಧ್ಯಕ್ಷ ಪ್ರಕಾಶ್‌ ಮಂಡೋತ್‌ ಇತರರು ಉಪಸ್ಥಿತರಿದ್ದರು.

ಶಿರಾಡಿ ಘಾಟ್‌ ರಸ್ತೆ ಅಭಿವೃದ್ಧಿಗೆ ಆದ್ಯತೆ:
ಬೆಂಗಳೂರು- ಮಂಗಳೂರು ಹೆದ್ದಾರಿ ನಡುವಿನ ಶಿರಾಡಿ ಘಾಟ್‌ ಬಳಿಯ 26 ಕಿ.ಮೀ. ಉದ್ದದ ಮಾರ್ಗದ ವಿಸ್ತರಣೆ ಅಭಿವೃದ್ಧಿ ಕಾರ್ಯ ಭರದಿಂದ ಸಾಗಿದ್ದು, ಮೇ ವೇಳೆಗೆ ಮುಕ್ತಾಯವಾಗುವ ನಿರೀಕ್ಷೆ ಇದೆ ಎಂದು ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಹೇಳಿದರು. ಭಾರಿ ವಾಹನಗಳು ಸಂಚರಿಸುವ ಹಾಗೂ ಭಾರಿ ಮಳೆ ಸುರಿಯುವ ಪ್ರದೇಶದಲ್ಲಿ ಸರ್ವಋತು ಗಳಿಗೂ ಹೊಂದುವ ರಸ್ತೆಯನ್ನು ಚೆನ್ನೈನ ತಾಂತ್ರಿಕ ತಜ್ಞರ ಸಲಹೆ ಪಡೆದು ನಿರ್ಮಿಸಲಾಗುತ್ತಿದೆ. ರಸ್ತೆ ಯುದ್ದಕ್ಕೂ ಸುರಕ್ಷತಾ ತಡೆಯನ್ನೂ ಅಳವಡಿಸಲಾಗುವುದು. ಮೇ ವೇಳೆಗೆ ಕಾಮಗಾರಿ ಪೂರ್ಣ ಗೊಂಡು ರಸ್ತೆಯನ್ನು ಸಂಚಾರಕ್ಕೆ ಮುಕ್ತಗೊಳಿಸಲು ಚಿಂತಿಸಲಾಗಿದೆ ಎಂದು ತಿಳಿಸಿದರು.

ಜಪಾನ್‌ಗೆ ಭೇಟಿ ನೀಡಿ ಸುರಂಗ ಮಾರ್ಗದ ಯೋಜನೆಗಳನ್ನು ಪರಿಶೀಲಿಸಲಾಗಿದೆ. ಹಾಗೆಯೇ ಶಿರಾಡಿ ಘಾಟ್‌ ಮಾರ್ಗದಲ್ಲಿ ಸುರಂಗ ನಿರ್ಮಾಣಕ್ಕೆ  ಡಿಪಿಆರ್‌ ಕೂಡ ಸಿದ್ಧವಾಗುತ್ತಿದೆ. ಪರಿಸರ ಇಲಾಖೆಯಿಂದ ಅನುಮತಿ ಸಿಕ್ಕರೆ ಯೋಜನೆ ಮುಂದುವರಿಸಲು ಅನುಕೂಲವಾಗಲಿದೆ ಎಂದು ಹೇಳಿದರು. ಮಂಗಳೂರು ವಿಮಾನನಿಲ್ದಾಣಕ್ಕೆ ಸಂಪರ್ಕಿಸುವ 2.4 ಕಿ.ಮೀ. ಉದ್ದದ ರಸ್ತೆ
ಅಭಿವೃದ್ಧಿಗೂ ಗಮನ ನೀಡಲಾಗಿದೆ ಎಂದು ತಿಳಿಸಿದರು. 

Advertisement
Advertisement

Udayavani is now on Telegram. Click here to join our channel and stay updated with the latest news.

Next