ಮೈಸೂರು: ಕಳೆದ 3 ತಿಂಗಳಿಂದ ಸ್ತಬ್ಧವಾಗಿದ್ದ ಮೈಸೂರು ಆನ್‌ಲಾಕ್ ನಿಂದ ಸೋಮವಾರ ಜನಜೀವನ ಸಹಜಸ್ಥಿತಿಗೆ ಮರಳಿತು. ಜಿಲ್ಲೆಯ ಪ್ರವಾಸಿ ತಾಣ, ಮಾರುಕಟ್ಟೆ, ಪ್ರಮುಖ ರಸ್ತೆ, ಧಾರ್ಮಿಕ ಕೇಂದ್ರಗಳಲ್ಲಿ ಸಾರ್ವಜನಿಕರ ಓಡಾಟ ಕಂಡುಬಂದಿತು.
ಸೋಮವಾರ ಬೆಳಗ್ಗೆಯಿಂದ ಹೋಟೆಲ್, ಮಾಲ್, ಧಾರ್ಮಿಕಕೇಂದ್ರಗಳು ಸೇರಿದಂತೆ ಪ್ರವಾಸಿತಾಣಗಳು ಸಾರ್ವಜನಿಕರ ಪ್ರವೇಶಕ್ಕೆ ತೆರೆದು ಕೊಂಡವು. ಜೊತೆಗೆ ಎಪಿಎಂಸಿ ಹಾಗೂ ವಾಣಿಜ್ಯ ಕೇಂದ್ರಗಳಲ್ಲಿ ವ್ಯಾಪಾರ ವಹಿವಾಟು ಗರಿಗೆದರಿದರೆ, ಜನಸಂಚಾರ ಎಂದಿನಂತೆ ಇದ್ದಿದ್ದರಿಂದ ನಗರ ದಲ್ಲಿ ವಾಹನ ದಟ್ಟಣೆಕಂಡುಬಂದಿತು. ಪ್ರವಾಸಿಗರು ವಿರಳ: ಆನ್‌ಲಾಕ್ ಆದ ಮೊದಲ ದಿನವಾದ ಸೋಮವಾರ ಮೈಸೂರಿನಲ್ಲಿ ಅಷ್ಟಾಗಿ ಪ್ರವಾಸಿಗರು ಕಂಡುಬರಲಿಲ್ಲ. ಅರಮನೆ,
ಮೃಗಾಲಯ, ಚಾಮುಂಡಿ ಬೆಟ್ಟದಲ್ಲಿ ನಿರೀಕ್ಷಿತ ಪ್ರಮಾಣದ ಪ್ರವಾಸಿಗರಿರಲಿಲ್ಲ. ಅರಮನೆಗೆ 450 ಮಂದಿ ಪ್ರವಾಸಿಗರು ಆಗಮಿಸಿ ಅರಮನೆ ವೀಕ್ಷಿಸಿದರೆ,ಚಾಮುಂಡಿ ಬೆಟ್ಟಕ್ಕೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡಹಾಗೂ ಶಾಸಕ ಯತ್ನಾಳ್ ಸೇರಿದಂತೆ 2ಸಾವಿರ ಭಕ್ತರು ಮತ್ತು ಪ್ರವಾಸಿಗರುಭೇಟಿ ನೀಡಿ ದೇವಿ ದರ್ಶನ ಪಡೆದರು. ಮೃಗಾಲಯಕ್ಕೆ 650 ಪ್ರವಾಸಿಗರು ಆಗಮಿಸಿದ್ದರು.
ದೇವರಾಜ ಮಾರುಕಟ್ಟೆ ತೆರೆಯಲು ಮನವಿ: ದೇವರಾಜ ಮಾರುಕಟ್ಟೆಯಲ್ಲಿ ವ್ಯಾಪಾರಕ್ಕೆ ಅವಕಾಶ ಕಲ್ಪಿಸುವಂತೆ ನಗರಪಾಲಿಕೆ ಸದಸ್ಯೆ ಪ್ರಮೀಳಾ ಭಾರತ್‌ನೇತೃತ್ವದಲ್ಲಿ 50ಕ್ಕೂ ಹೆಚ್ಚು ಮಂದಿವ್ಯಾಪಾರಿಗಳು ನಗರದ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಬಳಿಕ ಜಿಲ್ಲಾಧಿಕಾರಿಗಳ ಒಪ್ಪಿಗೆ ಮೇರೆಗೆ ಮಂಗಳವಾರ ನಗರಪಾಲಿಕೆಆಯುಕ್ತರೇ ಸ್ಥಳಕ್ಕೆ ಭೇಟಿ ನೀಡಿ ಅಲ್ಲಿನ ಸ್ವಚ್ಛತೆ ಹಾಗೂ ಗ್ರಾಹಕರ ಸಾಮಾಜಿಕ ಅಂತರ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೈಗೊಂಡಿರುವ ಮುಂಜಾಗ್ರತಾ ಕ್ರಮಗಳನ್ನು ಪರಿಶೀಲಿಸಿ ಅನಂತರ ತೆರೆಯಲು ಅವಕಾಶ ನೀಡುವುದಾಗಿ ಸ್ಪಷ್ಟಪಡಿಸಿದರು