ಮುಂಬಯಿ: ಮೈಸೂರು ಅಸೋಸಿಯೇಶನ್ ಮುಂಬಯಿ ಇದರ 90ನೇ ಹುಟ್ಟು ಹಬ್ಬದ ನಿಮಿತ್ತವಾಗಿ 2016ರಿಂದ ಆರಂಭಿಸಿದ ನೇಸರು ಜಾಗತಿಕ ಕನ್ನಡ ಕವನ ಸ್ಪರ್ಧೆ’ಯ 2ನೆ ವರ್ಷದ ಕವನ ಸ್ಪರ್ಧೆಯ ಬಹುಮಾನ ವಿತರಣೆ ಸಮಾರಂಭ ಹಾಗೂ ನೇಸರು ವಿಶೇಷ ಸಂಚಿಕೆ ಬಿಡುಗಡೆ ಕಾರ್ಯಕ್ರಮವು ಮಾಟುಂಗ ಪೂರ್ವದ ಮೈಸೂರು ಅಸೋಸಿಯೇಶನ್ ಸಭಾಗೃಹದಲ್ಲಿ ಜೂ. 24 ರಂದು ಸಂಜೆ ನಡೆಯಿತು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಕನ್ನಡ ಸಾಹಿತ್ಯ ಪರಿಷತ್ತು ಬೆಂಗಳೂರು ಇದರ ಅಧ್ಯಕ್ಷ ಮನು ಬಳಿಗಾರ್ ಅವರು ನೇಸರು ವಾರ್ಷಿಕ ವಿಶೇಷ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ವಿಶೇಷ ಅತಿಥಿಯಾಗಿ ಕನ್ನಡದ ಖ್ಯಾತ ಲೇಖಕರಾದ ಡಾ| ಜಯಂತ್ ಕಾಯ್ಕಿಣಿ, ಮುಂಬಯಿಯ ಖ್ಯಾತ ಸಾಹಿತಿ ಡಾ| ಸುನೀತಾ ಶೆಟ್ಟಿ ಉಪಸ್ಥಿತರಿದ್ದರು. ಅಧ್ಯಕ್ಷತೆಯನ್ನು ಮೈಸೂರು ಅಸೋಸಿಯೇಶನ್‌ನ ಅಧ್ಯಕ್ಷೆ ಕೆ. ಕಮಲಾ ವಹಿಸಿದ್ದರು. ಎನ್‌ಕೆಇಎಸ್ ಶಿಕ್ಷಣ ಸಂಸ್ಥೆಯ ಟ್ರಸ್ಟಿ ಮಂಜುನಾಥಯ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿದರು.
ಇದೇ ಸಂದರ್ಭ ಕವನ ಸ್ಪರ್ಧೆಯಲ್ಲಿ ವಿಜೇತ ರಾದ ಗುರುರಾಜ್ ಬೆಂಗಳೂರು, ರೇಣುಕಾ ರಮಾನಂದ್ ಅಂಕೋಲ, ವಿನಾಯಕ ಅರಳಸುರಳಿ ಶಿವಮೊಗ್ಗ, ಶುಭಾ ಎ. ಆರ್. ಬೆಂಗಳೂರು, ಮುಸ್ತಾಫ ಕೆ. ಎಚ್. ಕೊಡಗು, ಜಿ. ಕೆ. ಕುಲಕರ್ಣಿ ತುಮಕೂರು, ಸತ್ಯೇಶ್ ಎನ್. ಬೆಳ್ಳೂರ್ ಬೆಂಗಳೂರು, ಶಾಂತಿ ಶೆಟ್ಟಿ ಡೊಂಬಿವಲಿ ಅವರನ್ನು ಗಣ್ಯರ ಸಮ್ಮುಖದಲ್ಲಿ ಗೌರವಿಸಲಾಯಿತು.
ಬಹುಮಾನ ವಿತರಣಾ ಕಾರ್ಯಕ್ರಮದ ಪ್ರಾರಂಭಕ್ಕೂ ಮುನ್ನ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ಅವರು ಸಂಜೆ 4.30ಕ್ಕೆ ಮುಂಬಯಿಯ ಎಲ್ಲಾ ಕನ್ನಡ ಸಂಸ್ಥೆಗಳ ಪದಾಧಿ ಕಾರಿಗಳೊಂದಿಗೆ ಸಂವಾದದಲ್ಲಿ ಪಾಲ್ಗೊಂಡರು. ಈ ಕಾರ್ಯಕ್ರಮದಲ್ಲಿ ಮುಂಬಯಿಯ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ನಗರದ ಸಾಹಿತಿಗಳು, ಕನ್ನಡಾಭಿಮಾನಿಗಳು, ಮೈಸೂರು ಅಸೋಸಿಯೇಶನ್‌ನ ಪದಾಧಿಕಾರಿಗಳು, ಸರ್ವ ಸದಸ್ಯ ಬಾಂಧವರು ಪಾಲ್ಗೊಂಡಿದ್ದರು. ಸಾಂಸ್ಕೃತಿಕ ಕಾರ್ಯಕ್ರಮವಾಗಿ ವಿದುಷಿ ಶ್ಯಾಮಲಾ ಪ್ರಕಾಶ್ ಅವರಿಂದ ಬಹುಮಾನಿತ ಕವಿತೆಗಳ ರಸಮಂಜರಿ ನಡೆಯಿತು. ಕೊನೆಯಲ್ಲಿ ಭೋಜನದ ವ್ಯವಸ್ಥೆಯನ್ನು ಆಯೋಜಿಸಲಾಗಿತ್ತು.