ಮುಂಬಯಿ: ಸೃಜನಾತ್ಮ ಕಲೆಗಳಲ್ಲಿ ಗಮಕ ಕಲೆಯೂ ಇದೆ. ಆದಿ ಗಮಕಿಗಳಾಗಿ ಲವ-ಕುಶರು ಗುರುತಿಸಲ್ಪಡುತ್ತಿದ್ದು, ಈ ಗಮಕ ಕಲೆ ಪ್ರಾಚೀನ ಕಾಲದಿಂದ ಕಿವಿಯಿಂದ ಕಿವಿಗೆ ಸಾಗುತ್ತ ಬಂದಿದೆ. ಅದೂ ಈಗಲೂ ತನ್ನ ಮಹತ್ವವನ್ನು ಉಳಿಸಿಕೊಂಡಿದೆ. ಮೊಟ್ಟ ಮೊದಲ ಗಮಕ ಸಮ್ಮೇಳನ ಮುಂಬಯಿಯಲ್ಲಿ ಜರಗಿದ್ದು, ಮುಂಬಯಿ ಕನ್ನಡಿಗರಿಗೆ ತುಂಬ ಹೆಮ್ಮೆಯ ಸಂಗತಿ. ಗಮಕ ವಾಚನ ಮಾಡುವಾಗ ರಾಗಗಳ ಬಳಕೆಯನ್ನು ಬಹು ಎಚ್ಚರಿಕೆಯಿಂದ ಉಪಯೋಗಿಸಬೇಕು. ಹಾವಭಾವಗಳು ಹಿತಮಿತವಾಗಿರಬೇಕು. ಹೀಗೆ ಕುಮಾರವ್ಯಾಸನ, ಪಂಪರನ್ನು, ವಾಲ್ಮೀಕಿಯ ಕಾವ್ಯಗಳನ್ನು ಎತ್ತಿಕೊಂಡು ಹಾವಭಾವ, ರಾಗಗಳಿಂದ ಸುಶ್ರಾವ್ಯವಾಗಿ ಗಮಕ ವಾಚಿಸಿದಾಗ ಪ್ರೇಕ್ಷಕರನ್ನು ಮಂತ್ರ ಮುಗ್ಧಗೊಳಿಸಬಹುದು ಎಂದು ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ, ಪ್ರಸಿದ್ಧ ಗಮಕಿ ಡಾ| ಎಂ. ಎ. ಜಯರಾಮ ರಾವ್ ತಿಳಿಸಿದರು.
ಫೆ. 24 ರಂದು ಸಂಜೆ ಮಾಟುಂಗಾ ಪೂರ್ವ ಮೈಸೂರು ಅಸೋಸಿಯೇಶನ್‌ನ ಕಿರು ಸಭಾಗೃಹದಲ್ಲಿ ಮೈಸೂರು ಅಸೋಸಿಯೇಶನ್ ಮುಂಬಯಿ ಮತ್ತು ಮುಂಬಯಿ ವಿವಿ ಕನ್ನಡ ವಿಭಾಗದ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿದ್ದ ಮೈಸೂರು ಅಸೋಸಿಯೇಶನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ-2018 ರಲ್ಲಿ “ಸೃಜನಶೀಲತೆಯನ್ನು ಬೆಳೆಸುವ ಪರಿ’ ವಿಚಾರವಾಗಿ ಅವರು ಉಪನ್ಯಾಸ ನೀಡಿದರು.
ಮುಂಬಯಿ ವಿವಿ ಕನ್ನಡ ವಿಭಾಗದ ಮುಖ್ಯಸ್ಥ ಡಾ| ಜಿ. ಎನ್. ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಮುಂಬಯಿಯಲ್ಲಿ ಕನ್ನಡ ಸೇವೆಯಲ್ಲಿ ತೊಡಗಿರುವ ಸಂಘಟನೆಗಳಲ್ಲಿ ಮೈಸೂರು ಅಸೋಸಿಯೇಶನ್ ಸಂಸ್ಥೆಯೂ ಒಂದು. ಈ ಸಂಸ್ಥೆ ಅನೇಕ ಕನ್ನಡದ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಕನ್ನಡಪ್ರೇಮ ಬಿಂಬಿಸುತ್ತಿದೆ. ಗಮಕಿ ವಿದ್ವಾಂಸ ಜಯರಾಮರ ಮಹಾಭಾರತದ ಕರ್ಣ ಕೃತಿ ಬಿಡುಗಡೆ ಹಾಗೂ ಅವರಿಂದ ಸೃಜನಶೀಲತೆ ಬೆಳೆಸುವ ಪರಿ ಕುರಿತು ಉಪನ್ಯಾಸ ಕೇಳುವುದೇ ನಮ್ಮ-ನಿಮ್ಮೆಲ್ಲರವ ಭಾಗ್ಯ. ಕನ್ನಡದ ಫೌÅಡ ಕಾರ್ಯಗಳನ್ನು ಜನ ಸಾಮಾನ್ಯರಿಗೆ ತಲುಪುವಂತೆ ಶ್ರಮಿಸಿದ ಗಮಕಿ ವಿದ್ವಾಂಸರಲ್ಲಿ ಜಯರಾಮರೂ ಒಬ್ಬರು ಎಂದರು.
ಮೈಸೂರು ಅಸೋಸಿಯೇಶನ್‌ನ ಅಧ್ಯಕ್ಷೆ ಕು| ಕಮಲಾ ಕಾಂತರಾಜ್ ಸ್ವಾಗತಿಸಿ ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ ಸದಸ್ಯ, ಪ್ರಸಿದ್ಧ ಗಮಕಿ ಡಾ| ಎಂ. ಎ. ಜಯರಾಮ ರಾವ್ ರಚಿತ “ಮಹಾಭಾರತದ ಕರ್ಣ’ ಕೃತಿ ಬಿಡುಗಡೆಗೊಳಿಸಿ ಉಪನ್ಯಾಸಕರನ್ನು ಗೌರವಿಸಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಡಾ| ಕೆ. ರಘುನಾಥ್, ನಾಗರತ್ನ ಎಸ್. ಮಂಡ್ಯ, ರುದ್ರಮೂರ್ತಿ ಪ್ರಭು, ಸೌಮ್ಯಾ ಕೆ. ಪ್ರಸಾದ್, ಕೆ. ಗೋವಿಂದ ಭಟ್, ದಿನಕರ ಎನ್. ಚಂದನ್, ಅಹಲ್ಯಾ ಬಲ್ಲಾಳ್, ಡಾ| ಹಾ. ಸು. ಶ್ರೀನಿವಾಸ್, ಜಿ. ಎಚ್. ರಂಗನಾಥ್ ರಾವ್, ಮಂಹು ದೇವಾಡಿಗ, ಡಾ| ಅಂಬರೀಶ್ ಪಾಟೀಲ, ಪದ್ಮಜಾ ಪಿ. ಮಣ್ಣೂರ್, ಶಕುಂತಳಾ ಆರ್. ಪ್ರಭು, ದುರ್ಗಪ್ಪ ಯು. ಕೋಟಿಯವರ್, ರಮಾ ಉಡುಪ, ಮೈಸೂರು ಅಸೋಸಿಯೇಶನ್‌ನ ಪ್ರಬಂಧಕ ಬಿ. ಕೆ. ಮಧುಸೂದನ್ ಸೇರಿದಂತೆ ಅನೇಕ ಸಾಹಿತ್ಯಾಭಿಮಾನಿಗಳು ಮತ್ತು ಗಮಕಾಭಿಮಾನಿಗಳು ಉಪಸ್ಥಿತರಿದ್ದರು. ಮುಂಬಯಿ ಕನ್ನಡ ವಿಭಾಗದ ವೈ. ಮಧುಸೂದನ ರಾವ್ ಕಾರ್ಯಕ್ರಮ ನಿರ್ವಹಿಸಿದರು.
ಮೈಸೂರು ಅಸೋಸಿಯೇಶನ್‌ನ ಪ್ರಧಾನ ಕಾರ್ಯದರ್ಶಿ ಡಾ| ಗಣಪತಿ ಎಸ್. ಶಂಕರಲಿಂಗ ವಂದಿಸಿದರು.
ಚಿತ್ರ-ವರದಿ : ರೋನ್ಸ್ ಬಂಟ್ವಾಳ್