ಮೈಸೂರು: ನಗರದ ನಂಜರಾಜ ಬಹದ್ದೂರ್ ಛತ್ರದಲ್ಲಿ ಆಯೋಜಿಸಿರುವ ಎರಡು ದಿನಗಳ ಗೆಡ್ಡೆ ಗೆಣಸು ಮೇಳಕ್ಕೆ ಭಾನುವಾರ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್ ಚಾಲನೆ ನೀಡಿದರು.
ಸಹಜ ಸಮೃದ್ಧಿ ಮತ್ತು ರೋಟರಿ ಕ್ಲಬ್ ಆಫ್ ಮೈಸೂರು ವೆಸ್ಟ್ ಸಹಯೋಗದಲ್ಲಿ ಆಯೋಜಿಸಿರುವ ಎರಡು ದಿನಗಳ ಗೆಡ್ಡೆ ಗೆಣಸು ಮೇಳಕ್ಕೆ ಮೊದಲ ದಿನವೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಮೇಳ ಉದ್ಘಾಟನೆ ಯಾಗುವ ಮುನ್ನಾ ಗೆಡ್ಡೆ-ಗೆಣಸು ಖರೀದಿಗೆ ಜನರು ಮುಗಿಬಿದ್ದರು. ಮೇಳಕ್ಕೆ ಚಾಲನೆ ನೀಡಿ ಮಾತನಾಡಿದ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಒಡೆಯರ್, ನಾವು ತಿನ್ನುವ ಆಹಾರಕ್ಕೂ, ಆರೋಗ್ಯಕ್ಕೂ ನೇರ ಸಂಬಂಧವಿದೆ. ನಿಸರ್ಗ ದತ್ತವಾಗಿ ಬೆಳೆಯುವ ಗೆಡ್ಡೆ ಗೆಣಸುಗಳ ಸೇವಿಸುವುದರಿಂದ ಆರೋಗ್ಯ ವೃದ್ಧಿಯಾಗಲಿದೆ. ರೋಗ ರುಜಿನುಗಳನ್ನು ಎದುರಿಸಲು ರೋಗ ನಿರೋಧಕ ಶಕ್ತಿ ಹೆಚ್ಚಾಗಲಿದೆ ಎಂದರು.
ಮನುಷ್ಯನ ಕೃಷಿ ಚಟುವಟಿಕೆ ಆರಂಭವಾಗುವ ಮುನ್ನ ಗೆಡ್ಡೆ,ಗೆಣಸು ಮನುಕುಲದ ಆಹಾರವಾಗಿತ್ತು. ಇಂಥ ಗೆಡ್ಡೆ ಗೆಣಸು ಈಗಿನ ಕೃಷಿಯ ಭಾಗಬೇಕು. ಪ್ರಾಕೃತಿಯ ಕೊಂಡಿಗೆಯಾಗಿರುವ ಇವು ರೈತರ ಜೊತೆ ಗ್ರಾಹಕರ ಹಿತಕಾಯಲಿವೆ. ಪುರಾತನ ಮತ್ತು ಪಾರಂಪರಿಕ ಆಹಾರ ಪದ್ಧತಿಯಾಗಿರುವ ಇವುಗಳನ್ನು ಪಾರಂಪರಿಕ ಉತ್ಪನ್ನ ವೆಂದು ಬ್ರಾಂಡಿಂಗ್ ಮಾಡಬೇಕಿದೆ ಎಂದು ತಿಳಿಸಿದರು.
ಬಳಿಕ ನವದೆಹಲಿಯ ಅಗ್ರಿಕಲ್ಚರಲ್ ವರ್ಲ್ಡ್ ಸಂಪಾದಕಿ ಡಾ.ಲಕ್ಷ್ಮೀ ಉನ್ನಿತಾನ್ ಅವರು “ಮರೆತ ಹೋದ ಆಹಾರ’ ಎಂಬ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು. ಗೆಡ್ಡೆ-ಗೆಣಸು ಸಂರಕ್ಷಣೆಯಲ್ಲಿ ಸಾಧನೆ ಮಾಡಿರುವ ಎಚ್.ಡಿ.ಕೋಟೆ ಎಲ್.ಸಿ.ಚೆನ್ನರಾಜು, ಮಜ್ಜನಕುಪ್ಪೆ ಗಿರಿ ಜನ ಹಾಡಿಯ ದೇವಮ್ಮ, ಪಿರಿಯಾಪಟ್ಟಣ ಅಡಗೂರಿನಸುಪ್ರೀತ್ ಮತ್ತು ಕೇರಳದ ಮಾನಂದವಾಡಿಯಲ್ಲಿ ನೂರಾರು ಬಗೆಯ ಗೆಡ್ಡೆ ಗೆಣಸು ಬೆಳೆದು ಪುರಾತನ ತಳಿಗಳ ಸಂರಕ್ಷಣೆ ಮಾಡುತ್ತಿರುವ ಎನ್.ಎಂ.ಶಾಜಿ ಅವರನ್ನು ಸನ್ಮಾನಿಸಲಾಯಿತು.
ಇದನ್ನೂಓದಿ :ಕೆದೂರು: ಹತ್ತು ಎಕರೆ ಜಾಗದಲ್ಲಿ ಅಗ್ನಿ ಅವಘಡ
ಈ ಸಂದರ್ಭದಲ್ಲಿ ರೋಟರಿ ಕ್ಲಬ್ ಮೈಸೂರು ಪಶ್ಚಿಮಅಧ್ಯಕ್ಷ ಡಾ.ರಾಘವೇಂದ್ರ ಪ್ರಸಾದ್, ಡಿ.ಕೆ.ದಿನೇಶ್‌ಕುಮಾರ್, ಸಹಜ ಸಮೃದ್ಧಿಯ ಕೃಷ್ಣಪ್ರಸಾದ್, ಸೀಮಾ ಪ್ರಸಾದ್ ಇತರರಿದ್ದರು.