ಅಫಜಲಪುರ: ಪಂಜಾಬ್ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಭದ್ರತಾ ವೈಫಲ್ಯದಿಂದಾಗಿ ನಡು ರಸ್ತೆಯಲ್ಲಿ ನಿಲ್ಲುವಂತಾಗಿದ್ದು ಭಾರಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ ಅವರ ಆರೋಗ್ಯಕ್ಕಾಗಿ ಮೃತ್ಯುಂಜಯ ಹೋಮ ಮಾಡಿಸಿದ್ದೇವೆ ಎಂದು ಬಿಜೆಪಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಅರುಣ ಭಿನ್ನಾಡಿ ತಿಳಿಸಿದರು.
ತಾಲೂಕಿನ ದೇವಲ ಗಾಣಗಾಪುರದ ದತ್ತಾತ್ರೇಯ ದೇವಸ್ಥಾನದಲ್ಲಿ ಮೃತ್ಯುಂಜಯ ಹೋಮ ನಡೆಸಿದ ಬಳಿಕ ಮಾತನಾಡಿದ ಅವರು, ದೇಶ ಕಂಡ ಅಪ್ರತಿಮ ವ್ಯಕ್ತಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡಾ ಒಬ್ಬರು. 70 ವರ್ಷದ ಬಳಿಕ ಬಲಿಷ್ಠ ನಾಯಕರೊಬ್ಬರು ಸಿಕ್ಕಿದ್ದಾರೆ. ಕಾಂಗ್ರೆಸ್ಸಿಗರಿಗೆ ಇದನ್ನು ಸಹಿಸಿಕೊಳ್ಳಲಾಗುತ್ತಿಲ್ಲ. ಹೀಗಾಗಿ ಅವರು ಹೋಗುವ ಮಾರ್ಗದಲ್ಲಿ ದೊಂಬಿ ಎಬ್ಬಿಸಿ ಅವಮಾನಿಸಿದ್ದಾರೆ. ಇದು ನಿಜಕ್ಕೂ ಅಕ್ಷಮ್ಯ ಅಪರಾಧವಾಗಿದೆ ಎಂದರು. ಕೋಟ್ಯಂತರ ಭಾರತೀಯರು ಮೋದಿ ಜೊತೆಗಿದ್ದೇವೆ.
ದೇವರ ಆಶೀರ್ವಾದ ಮೋದಿ ಅವರ ಮೇಲಿರುವ ತನಕ ಯಾರೇ ಷಡ್ಯಂತ್ರ ನಡೆಸಿದರೂ ಅವರಿಗೆ ಏನೂ ಆಗುವುದಿಲ್ಲ. ಆದರೂ ನಾವೆಲ್ಲ ದೇವರ ಆಶೀರ್ವಾದ ಅವರ ಮೇಲಿರಲಿ ಎನ್ನುವ ಕಾರಣಕ್ಕಾಗಿ ಮƒತ್ಯುಂಜಯ ಹೋಮ ನಡೆಸಿದ್ದೇವೆ ಎಂದರು.
ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅಶೋಕ ಬಗಲಿ, ಮುಖಂಡರಾದ ಸಂಜಯ ಮಿಸ್ಕಿನ್, ಭೀಮರಾವ್ ಕಲಶೆಟ್ಟಿ, ನಂದಕುಮಾರ ಭಟ್ಟ, ಶರಣು ಪದಕಿ, ಚಂದಮ್ಮ ಪಾಟೀಲ, ಭಾಗೀರಥಿ ಗುನ್ನಾಪುರ, ಪ್ರಭಾವತಿ ಮೇತ್ರಿ, ಸುರೇಖಾ ಪದಕಿ, ಅನಿತಾ ಮ್ಯಾಕೇರಿ, ಗುರುದತ್ತ ಕರಮಕರ್, ಮಹಾದೇವ ಬಳಗುಂಪಿ, ಭೀರಣ್ಣ ಕಲ್ಲೂರ, ಮಲ್ಲು ಗೊಳಸಾರ, ಸುಜ್ಞಾನಿ ಪೋದ್ದಾರ, ಕವಿತಾ ಚವ್ಹಾಣ, ರಾಣಿ ಬುಕ್ಕೇಗಾರ, ಪ್ರತಿಭಾ ಮಹಿಂದ್ರಕರ್ ಹಾಗೂ ದೇವಸ್ಥಾನದ ಅರ್ಚಕರು ಇದ್ದರು.