ರಾಣಿಬೆನ್ನೂರ: ಕಬ್ಬು ನಾಟಿ ಮಾಡುವ ಸಮಯದಲ್ಲಿ ರೈತರನ್ನು ಪ್ರೇರೇಪಿಸಿ ಬೆಳೆದ ಕಬ್ಬನ್ನು ತೆಗೆದುಕೊಳ್ಳುವ ಪರವಾನಗಿ ನೀಡದೆ ಸತಾಯಿಸುತ್ತಿರುವ ಮೈಲಾರದ ದಿ ಮೈಲಾರ ಶುಗರ್ ಕಂಪನಿಯವರು ಆಮೇಗತಿಯಲ್ಲಿ ಪರವಾನಗಿ ನೀಡುವ ಮೂಲಕ ರೈತರನ್ನು ಶೋಷಣೆ ಮಾಡುತ್ತಿದೆ ಎಂದು ರೈತ ಸಂಘದ ರಾಜ್ಯ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಆರೋಪಿಸಿದರು.
ಮಂಗಳವಾರ ಇಲ್ಲಿನ ಪ್ರವಾಸಿ ಮಂದಿರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಬ್ಬು ನಾಟಿ ಮಾಡುವಾಗ 10 ತಿಂಗಳಿಗೆ ಕಟಾವು ಮಾಡಲು ಪರವಾನಗಿ ನೀಡುತ್ತೇವೆಂದು ಒಪ್ಪಂದ ಮಾಡಿಕೊಂಡಿರುವ ಕಂಪನಿಯವರು, 15 ತಿಂಗಳು ಗತಿಸಿದರೂ ಇನ್ನು ಪರವಾನಗಿ ನೀಡದೇ ವಿಳಂಬ ನೀತಿಯನ್ನು ಅನುಸರಿಸುತ್ತಿವೆ. ಈ ಮೂಲಕ ಕಬ್ಬು ಒಣಗಿ ತೂಕ ಕಡಿಮೆಯಾಗುವಂತೆ ಮಾಡುವ ಮೂಲಕ ತಾಲೂಕಿನ ಅನೇಕ ಗ್ರಾಮದ ರೈತರಿಗೆ ಮೋಸ ಎಸಗುತ್ತಿದ್ದಾರೆ ಎಂದು ದೂರಿದರು.
ಸಮಯಕ್ಕೆ ಸರಿಯಾಗಿ ಕಬ್ಬು ಕಟಾವು ಮಾಡಿ ಸಕ್ಕರೆ ಕಂಪನಿಗೆ ನೀಡಿದಲ್ಲಿ ಪ್ರತೀ ಎಕರೆಗೆ 80 ಟನ್ ಬರುವ ಅಂದಾಜು ರೈತರಲ್ಲಿ ಇರುತ್ತಿದ್ದು, ಪ್ರಸ್ತುತ ಅವರ ವಿಳಂಬ ನೀತಿಯಿಂದಾಗಿ 15 ತಿಂಗಳ ನಂತರ ಕಟಾವು ಆದಲ್ಲಿ ಪ್ರತಿ ಎಕರೆಗೆ 30 ರಿಂದ 40 ಟನ್ ಬರುತ್ತದೆ. ಇದರಿಂದ ರೈತರ ಲಾಭ ಕುಸಿತಗೊಂಡು ಸಾಲದ ಸುಳಿಯಲ್ಲಿ ಸಿಲುಕುವಂತಾಗುತ್ತಿದೆ ಎಂದರು. ಒಂದೆಡೆ ಪ್ರಕೃತಿಯ ವಿಕೋಪದಿಂದ ರೈತರು ನಷ್ಟ ಅನುಭವಿಸಿದರೆ ಇನ್ನು ಮಾರುಕಟ್ಟೆಯಲ್ಲಿ ವೈಜ್ಞಾನಿಕ ಬೆಲೆಯೂ ಸಿಗದೇ ಹಾಗೂ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಕೃಷಿ ನೀತಿಯಿಂದ ಮತ್ತು ಇಂತಹ ಸಕ್ಕರೆ ಕಾರ್ಖಾನೆಗಳು ಸಹ ರೈತರಿಗೆ ಅನ್ಯಾಯ ಮಾಡುವುರಿಂದ ರೈತರ ಕಷ್ಟ ತೊಟ್ಟಿಲಲ್ಲಿ ಅಳುವ ಕೂಸಿನಂತಾಗಿದೆ. ಕೂಸು ಏಕೆ ಅಳುತ್ತಿದೆ ಎಂದು ತಾಯಿ ಅರಿಯದೇ ತೂಗುತ್ತಿರುವುದು ಮತ್ತು ತಾಯಿಗೆ ತೊಟ್ಟಿಲಲ್ಲಿ ಕಡಿಯುವ ತಗಣಿಯ ವಿಚಾರವನ್ನು ತಿಳಿಸಲಾರದೇ ತಾಯಿ ಮತ್ತು ಮಗುವಿನ ಮಧ್ಯ ಕೂಸಿನ ರೋಧನೆಯಂತಾಗಿದೆ ರೈತರ ಬದುಕು ಎಂದು ವಿಷಾಧ ವ್ಯಕ್ತ ಪಡಿಸಿದರು.
ದಿ ಮೈಲಾರ ಶುಗರ್ ಕಂಪನಿಯವರು ತಾಲೂಕಿನ ಎಲ್ಲ ಗ್ರಾಮಗಳ ರೈತರ ಕಬ್ಬುಗಳನ್ನು ಶರವೇಗದ ಗತಿಯಲ್ಲಿ ಕಟಾವು ಮಾಡಲು ಜ.3ರ ಒಳಗೆ ಕಟಾವಿಗೆ ಪರವಾನಗಿ ನೀಡದಿದ್ದಲ್ಲಿ ಜ. 4 ರಂದು ಶುಗರ್ ಕಂಪನಿಯ ಮುಂಭಾಗದಲ್ಲಿ ಅಮರಣ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇಂತಹ ಸಂದರ್ಭಕ್ಕೆ ಅವಕಾಶ ನೀಡದಂತೆ ಹಾವೇರಿ ಜಿಲ್ಲಾಧಿ ಕಾರಿಗಳು ಈ ಸಮಯದೊಳಗೆ ಮಧ್ಯ ಪ್ರವೇಶಿಸಿ ಕಂಪನಿಯವರೊಂದಿಗೆ ಮಾತುಕತೆ ನಡೆಸಬೇಕು. ರೈತರ ಆತ್ಮಹತ್ಯೆ ತಡೆಗೆ ಹಾಗೂ ಅವರ ಸಂಕಷ್ಟಕ್ಕೆ ನೆರವಾಗಬೇಕೆಂದು ರವೀಂದ್ರಗೌಡ ಪಾಟೀಲ ಮನವಿ ಮಾಡಿದರು.
ಚಂದ್ರಣ್ಣ ಬೇಡರ, ಹರಿಹರಗೌಡ ಪಾಟೀಲ, ಬಸವರಡ್ಡಿ ರಡ್ಡೇರ, ಮಾರುತಿ ಕುದರಿಹಾಳ, ಹನುಮಂತಪ್ಪ ಹರನಗಿರಿ, ಯಲ್ಲಪ್ಪ ಬೆಳವಿಗಿ, ಬಾಬು ಕುಪ್ಪೇಲೂರ, ಹನುಮಂತಪ್ಪ ಚಪ್ಪರದ, ಚನ್ನಬಸಪ್ಪ ಗುಗ್ಗರಿ, ಮಂಜಪ್ಪ ಆನ್ವೇರಿ ಸೇರಿದಂತೆ ರೈತರು ಸುದ್ದಿಗೋಷ್ಠಿಯಲ್ಲಿ ಇದ್ದರು.