Advertisement

ಮೈಲಾರ ಮಹಾದೇವಪ್ಪ ಸ್ಮಾರಕ ನಿರ್ಲಕ್ಷ್ಯ

09:55 AM Jul 26, 2019 | Suhan S |

ಬ್ಯಾಡಗಿ: ಮೋಟೆಬೆನ್ನೂರ ಗ್ರಾಮ ಪಂಚಾಯತ್‌ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕುಡುಕರ ಹಾವಳಿಗೆ ತುತ್ತಾಗಿರುವ ಸ್ವಾತಂತ್ರ್ಯ ಹೋರಾಟಗಾರ ಹುತಾತ್ಮ ಮೈಲಾರ ಮಹದೇವ ಸ್ಮಾರಕ ಭವನ ಅನೈತಿಕ ಚಟುವಟಿಕೆಗಳ ತಾಣವಾಗಿ ಪರಿವರ್ತನೆಗೊಂಡಿದ್ದು, ದೇಶದ ಸ್ವಾತಂತ್ರ್ಯಕ್ಕಾಗಿ ಪ್ರಾಣತ್ಯಾಗ ಮಾಡಿದವರ ಬಗ್ಗೆ ಕಾಳಜಿ ವಹಿಸಬೇಕಿದೆ.

Advertisement

ಸ್ವಾತಂತ್ರ್ಯಕ್ಕಾಗಿ ಮಡಿದ ಹುತಾತ್ಮರು ಸೇರಿದಂತೆ ದಾರ್ಶನಿಕರು, ಸಾಧಕರು ಇನ್ನಿತರ ಸಮಾಜಮುಖೀ ಸಾಧನೆ ಮಾಡದ ವ್ಯಕ್ತಿಗಳ ಸ್ಮರಣೆಗೋಸ್ಕರ ಸ್ಮಾರಕ ಭವನ ನಿರ್ಮಿಸುವುದು ವಿಶ್ವದೆಲ್ಲೆಡೆ ಪ್ರಚಲಿತದಲ್ಲಿದೆ. ಅಂತೆಯೇ ಬ್ರಿಟಿಷರ ಗುಂಡಿಗೆ ಬಲಿಯಾದ ಮೋಟೆಬೆನ್ನೂರಿನ ಮೈಲಾರ ಮಹದೇವಪ್ಪನವರ ಸ್ಮರಣೆಗೆ ಕೋಟಿಗಟ್ಟಲೇ ಹಣವ್ಯಯಿಸಿ ಗ್ರಾಪಂ ಆವರಣದ ಕೂಗಳತೆ ದೂರದಲ್ಲಿ ಸ್ಮಾರಕ ಭವನ ನಿರ್ಮಿಸಲಾಗಿದೆ. ಸದರಿ ಸ್ಥಳ ನಿರ್ಜನವಾಗಿದ್ದು ಕುಡುಕರ ಆಟಾಟೋಗಳಿಗೆ ಹೇಳಿ ಮಾಡಿಸಿದಂತಿದೆ.

ಗ್ರಾಮದ ಹೆಸರು ಇಂದಿಗೂ ಅತೀಹೆಚ್ಚು ಪ್ರಚಲಿತದಲ್ಲಿರುವುದು ಹುತಾತ್ಮ ಮೈಲಾರ ಮಹದೇವ ಎಂಬ ಹೆಸರಿನೊಂದಿಗೆ ಎಂಬುದು ಸತ್ಯ. ಇಲ್ಲಿನ ಎಲ್ಲ ಜನಾಂಗದಲ್ಲೂ ಮೈಲಾರರ ಸ್ಮರಣೆಗಾಗಿ ತಮ್ಮ ಮಕ್ಕಳಿಗೂ ಅದೇ ಹೆಸರನ್ನೂ ಇಟ್ಟಿದ್ದು ಸ್ವಾತಂತ್ರ್ಯ ಹೋರಾಟಗಾರರ ಮೇಲಿನ ಗೌರವ ಸೂಚಿಸುತ್ತದೆ. ವಿಪರ್ಯಾಸ ಎಂದರೆ ಅಂಥ ಮಹಾನುಭಾವರ ಹೆಸರಿನಲ್ಲಿ ನಿರ್ಮಾಣವಾಗಿರುವ ಭವನಕ್ಕೆ ಮಸಿ ಬಳಿಯುಂತಹ ಕೆಲಸ ಗ್ರಾಮದ ಕೆಲ ದುಷ್ಟ ಶಕ್ತಿಗಳು ಮಾಡುತ್ತಿರುವುದು ದುರದೃಷ್ಟಕರ ಸಂಗತಿ.

ಕುಳಿತಲ್ಲಿಯೆ ಗುಟ್ಕಾ ಉಗುಳುವುದು, ಬೀಡಿ, ಸಿಗರೇಟ್ ಸೇದಿ ಬೀಡಿ ತುಂಡು ಎಸೆಯುವುದು, ಮೂತ್ರ ಮಾಡುವುದು ಸೇರಿದಂತೆ ಸ್ಮಾರಕ ಭವನಕ್ಕೆ ತೆರಳಿದರೆ ಗಬ್ಬು ವಾಸನೆ ಬೀರುವಂತೆ ಮಾಡುತ್ತಿರುವುದು ಖೇದಕರ ಸಂಗತಿ.

ಸ್ಮಾರಕ ಭವನ ಗ್ರಾಪಂ ಕಚೇರಿಯ ಕೂಗಳತೆ ದೂರದಲ್ಲಿದ್ದರೂ ಅಧಿಕಾರಿಗಳು ಮಾತ್ರ ಕಣ್ತೆರೆದು ನೋಡದಿರುವುದು ಕುಡುಕರಿಗೆ ಅಪ್ರತ್ಯಕ್ಷವಾಗಿ ಉತ್ತೇಜನ ನೀಡುತ್ತಿದೆ. ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಕುಟುಂಬವನ್ನೇ ಅರ್ಪಿಸಿದ ಮಹಾತ್ಮನ ಬಗ್ಗೆ ಗ್ರಾಪಂ ತೋರುತ್ತಿರುವ ನಿರ್ಲಕ್ಷ್ಯತನಕ್ಕೆ ಸಾಮಾಜಿಕ ಜಾಲತಾಣದಲ್ಲಿ ಜನತೆ ಇಲ್ಲಿನ ಸ್ಥಿತಿ ಕುರಿತ ಫೋಟೋ ಹರಿಬಿಟ್ಟು ಗ್ರಾಪಂ ಅಧಿಕಾರಿಗಳ ಕಾರ್ಯ ವೈಖರಿ ಬಗ್ಗೆ ಬೇಸರ ವ್ಯಕ್ತಪಡಿಸುತ್ತಿದ್ದಾರೆ.

Advertisement

ಸದರಿ ಸ್ಮಾರಕ ಭವನ ನಿರ್ಮಿಸಿದ ನಂತರ ನಿತ್ಯವೂ ಒಂದಿಲ್ಲೊಂದು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುವಂತೆ ನೋಡಿಕೊಳ್ಳಬೇಕಾಗಿತ್ತು. ಆದರೆ, ಹಾಗಾಗದೇ ಆಗೊಂದು ಈಗೊಂದು ಕಾರ್ಯಕ್ರಮ ನಡೆಸಿ ಇನ್ನುಳಿದ ದಿನಗಳಲ್ಲಿ ಬೀಗ ಹಾಕಿ ಬಿಡುತ್ತಾರೆ. ಪರಿಣಾಮ ಪುಂಡರ ಹಾವಳಿ ಹೆಚ್ಚಾಗುವಂತಾಗಿದೆ. ಕೂಡಲೇ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸಬೇಕು. ಇಲ್ಲದಿದ್ದರೇ ಪ್ರತಿಭಟನೆ ಅನಿವಾರ್ಯ ಎಂಬ ಮಾತುಗಳೂ ಸ್ಥಳೀಯರಿಂದ ಕೇಳಿ ಬರುತ್ತಿವೆ.

ಮಹಾನ್‌ ಸಾಧಕ ದಂಪತಿ ಕುರಿತು ಪುಸ್ತಕ ಬರೆದು ಚಲನಚಿತ್ರ ನಿರ್ಮಿಸಿ ಬಿಡುಗಡೆಗೊಳಿಸಿದ್ದೇನೆ. ಅನೈತಿಕ ಚಟುವಟಿಕೆ ನಡೆಯುತ್ತಿರುವ ಸುದ್ದಿ ತಿಳಿದು ಬೇಸರವಾಗುತ್ತಿದೆ. ಶಾಸಕರ ನೇತೃತ್ವದಲ್ಲಿ ಗ್ರಾಪಂ ಸದಸ್ಯರು ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಭೆ ಕರೆದು ನಿರ್ಲಕ್ಷ್ಯವಹಿಸಿದ ಅಧಿಕಾರಿಗಳ ಮೇಲೆ ಕ್ರಮ ತೆಗೆದುಕೊಳ್ಳಬೇಕು.•ಸಂಕಮ್ಮ ಸಂಕಣ್ಣನವರ, ಸಾಹಿತಿ, ನಟಿ

ಸ್ಮಾರಕ ಭವನ ಸದ್ಭಳಕೆ ವಿಷಯದಲ್ಲಿ ನಾವೆಲ್ಲರೂ ತಪ್ಪಿದ್ದು, ಇದೀಗ ಅರಿವಾಗಿದೆ. ಸ್ವಾರಕದ ಬಗ್ಗೆ ಋಣಾತ್ಮಕ ಸುದ್ದಿಗಳು ಹೊರ ಬರುವ ಮುನ್ನವೇ ಅದಕ್ಕೆ ಆಸ್ಪದ ಕೊಡದಂತೆ, ಸರ್ಕಾರವು ಕೂಡಲೇ ಭವನದಲ್ಲೊಂದು ಗ್ರಂಥಾಲಯ ಆರಂಭಿಸುವ ಮೂಲಕ ಎಲ್ಲರಿಗೂ ಅನುಕೂಲ ಕಲ್ಪಿಸುವ ಕೆಲಸವಾಗಬೇಕು.•ಡಾ| ಪಿ.ಟಿ. ಲಕ್ಕಣ್ಣನವರ, ನಿವೃತ್ತ ಪ್ರಾಧ್ಯಾಪಕರು

ನಿಷ್ಟುರತೆ ಎದುರಿಸಲಾಗದೆ ಗ್ರಾಪಂ ಅಧಿಕಾರಿಗಳು ಹಾಗೂ ಸದಸ್ಯರಿಗೂ ಬಗ್ಗದಂತಹ ವಾತಾವರಣ ನಿರ್ಮಾಣವಾಗಿದೆ. ಕೂಡಲೇ ಪೊಲೀಸ್‌ರನ್ನು ನಿಯೋಜನೆ ಮಾಡಿ, ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಿಕೊಳ್ಳುವ ಮೂಲಕ ಪುಂಡರ ಮಟ್ಟ ಹಾಕುವ ಕೆಲಸವಾಗಬೇಕು.•ಶಿವಕುಮಾರ ಪಾಟೀಲ, ಗ್ರಾಪಂ ಸದಸ್ಯ

Advertisement

Udayavani is now on Telegram. Click here to join our channel and stay updated with the latest news.

Next