ನ್ಯೆಪಿಡೊ : ಮ್ಯಾನ್ಮಾರ್‌ನ ವಿವಿಧೆಡೆ ವಾಟರ್ ಫೆಸ್ಟಿವಲ್ ಸಂಭ್ರಮಾಚರಣೆ ವೇಳೆ ದುರಂತಗಳ ಸರಮಾಲೆಯೆ ಸಂಭವಿಸಿದ್ದು , ಅವಘಡಗಳಲ್ಲಿ 285 ಜನ ಪ್ರಾಣ ಕಳೆದುಕೊಂಡಿದ್ದು,1,073 ಮಂದಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ಕಳೆದ ವರ್ಷವೂ ದುರಂತಗಳು ನಡೆದಿದ್ದು, ಈ ವರ್ಷ ಮೃತರ ಸಂಖ್ಯೆ ಈಗಾಗಲೇ 13 ಹೆಚ್ಚಾಗಿದೆ. ವಿವಿಧೆಡೆ 1,200 ಕ್ರಿಮಿನಲ್ ಕೇಸುಗಳನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಗಾಯಾಳುಗಳ ಪೈಕಿ ಹಲವರ ಸ್ಥಿತಿ ಚಿಂತಾಜನಕವಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಎಲ್ಲಾ ಲಕ್ಷಣಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ರಾಜಧಾನಿ ನ್ಯಾಪಿಡೋದಲ್ಲಿ 10 ಮಂದಿ, ಯಾಂಗೋನ್‌ನಲ್ಲಿ 44,ಮಂಡಾಲೇಯಲ್ಲಿ 36, ಸಾಗೇಂಗ್‌ನಲ್ಲಿ 26 ತನಿಂತಾರ್‌ಯಿನಲ್ಲಿ 11 , ಬಗೋನಲ್ಲಿ 37,ಮಾಗ್‌ವೇನಲ್ಲಿ 20,ಮೋನ್ ರಾಜ್ಯದಲ್ಲಿ 17, ರಖೀನೆಯಲ್ಲಿ 29 ಮತ್ತು ಶಾನ್ ಪ್ರಾಂತ್ಯದಲ್ಲಿ 28 ಮಂದಿ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.
ಮ್ಯಾನ್ಮಾರ್ ಸೇರಿದಂತೆ ಎಷ್ಯಾದ ಕೆಲ ರಾಷ್ಟ್ರಗಳಲ್ಲಿ ಹೊಸವರ್ಷಾಚರಣೆ ಸಂಭ್ರಮದ ವೇಳೆ ವಾಟರ್ ಫೆಸ್ಟಿವಲ್ ನಡೆಸುವುದು ವಾಡಿಕೆ . ಅದರಂತೆ ಜನರು ನೀರಿಗಿಳಿದು ಆಟವಾಡುತ್ತಾ ಪರಸ್ಪರ ನೀರು ಚೆಲ್ಲುವ ಮೂಲಕ, ನೀರಿನಲ್ಲಿ ಮುಳುಗಿಸುವ ಮೂಲಕ ಸಂಭ್ರಮಿಸುತ್ತಾರೆ. ಈ ವೇಳೆ ಹಿಂಸಾಚಾರ , ಅಪಘಾತ, ಕಳ್ಳತನ, ದೊಂಬಿಗಳು, ಹತ್ಯೆಗಳು ಮತ್ತು ಕಾಲ್ತುಳಿತ ಪ್ರಕರಣಗಳು ಪ್ರತೀ ವರ್ಷವೂ ಸಂಭವಿಸುವುದು ಸಹಜ.
ತಿಂಗ್ಯಾನ್ ಪ್ರಾತ್ಯದಲ್ಲಿ 4 ದಿನಗಳ ಕಾಲ ವಾಟರ್ ಫೆಸ್ಟಿವಲ್ ಸಂಭ್ರಮಾಚರಣೆ ನಡೆಯುತ್ತದೆ.