Advertisement

ಮ್ಯಾನ್‌ಹೋಲ್‌ ದುರಂತ: ರಾಜಧಾನಿ ನಂ.1

07:45 AM Mar 08, 2017 | |

ಬೆಂಗಳೂರು: ರಾಜ್ಯದಲ್ಲಿ ಮ್ಯಾನ್‌ಹೋಲ್‌ ದುರಸ್ತಿ ವೇಳೆ ಸಂಭವಿಸಿದ ಸಾವು-ನೋವುಗಳ ಪೈಕಿ ಅರ್ಧದಷ್ಟು ಕಾರ್ಮಿಕರನ್ನು
ಬೆಂಗಳೂರಿನ ಮ್ಯಾನ್‌ಹೋಲ್‌ಗ‌ಳೇ ಆಹುತಿ ಪಡೆದಿವೆ. ಕಳೆದ ಒಂದು ದಶಕದಲ್ಲಿ ರಾಜ್ಯದಲ್ಲಿ ವಿವಿಧ ಮ್ಯನ್‌ಹೋಲ್‌ಗಳ ದುರಸ್ತಿ ವೇಳೆ 56 ಕಾರ್ಮಿಕರು ಸಾವನ್ನಪ್ಪಿದ್ದಾರೆ. ಈ ಪೈಕಿ 28 ಕಾರ್ಮಿಕರು ಬೆಂಗಳೂರಿನ ಮ್ಯಾನ್‌ಹೋಲ್‌ಗ‌ಳಲ್ಲೇ ಉಸಿರುಗಟ್ಟಿ
ಸಾವನ್ನಪ್ಪಿದ್ದಾರೆ. ಅದರಲ್ಲೂ ಕೇವಲ 3 ತಿಂಗಳ ಅಂತರದಲ್ಲಿ ಐವರು ಕಾರ್ಮಿಕರು ಬಲಿಯಾಗಿದ್ದಾರೆ.

Advertisement

2008-09 ರಿಂದ 2017ರ ಮಾರ್ಚ್‌ 7ರ ವರೆಗೆ ರಾಜ್ಯದಲ್ಲಿ 56 ಮ್ಯಾನ್‌ಹೋಲ್‌ ಸಾವಿನ ಪ್ರಕರಣಗಳು ದಾಖಲಾಗಿವೆ. ಈ
ಪೈಕಿ ಬಿಬಿಎಂಪಿ ವ್ಯಾಪ್ತಿಯಲ್ಲಿ 26 ಸಾವುಗಳು ಸಂಭವಿಸಿವೆ. 2016ರ ಅಕ್ಟೋಬರ್‌ನಲ್ಲಿ ತುಮಕೂರು ರಸ್ತೆಯ ಯಶವಂತಪುರದಲ್ಲಿ
ನಡೆದ ದುರಂತದಲ್ಲಿ ಇಬ್ಬರು ಮೃತಪಟ್ಟಿದ್ದು, ಇದು ಬಿಬಿಎಂಪಿ ವ್ಯಾಪ್ತಿಗೆ ಬರುವುದಿಲ್ಲ. ಆದರೆ, ಒಟ್ಟಾರೆ ಬೆಂಗಳೂರು ನಗರದಲ್ಲಿ
28 ಪ್ರಕರಣಗಳು ದಾಖಲಾಗಿವೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗ ತಿಳಿಸಿದೆ. ನಗರದಲ್ಲಿ ಹೆಚ್ಚು ಜನಸಂಖ್ಯೆ
ಹಾಗೂ ಅದಕ್ಕೆ ತಕ್ಕಂತೆ ಮ್ಯಾನ್‌ಹೋಲ್‌ಗ‌ಳೂ ಅಧಿಕ. ಹಾಗಾಗಿ, ಮ್ಯಾನ್‌ಹೋಲ್‌ ಸಮಸ್ಯೆ ಹೆಚ್ಚು. ಅಲ್ಲದೆ, ಪಟ್ಟಣ ಮತ್ತು
ಗ್ರಾಮೀಣ ಪ್ರದೇಶಗಳಲ್ಲಿ ಸಾವು-ನೋವುಗಳು ಸಂಭವಿಸಿರುತ್ತವೆ. 

ಮ್ಯಾನ್‌ಹೋಲ್‌ಗೆ ವ್ಯಕ್ತಿ ಇಳಿದು ಶೌಚ ಸ್ವತ್ಛಗೊಳಿಸುವುದು ಕಾನೂನು ಬಾಹಿರ. ಆದಾಗ್ಯೂ ಇದಕ್ಕೆ ಮುಂದಾಗುವ ಗುತ್ತಿಗೆದಾರರ ವಿರುದ್ಧ ಮಲಹೊರುವ ಪದ್ಧತಿ ನಿಷೇಧ ಕಾಯ್ದೆ-2013 ಸೆಕ್ಷನ್‌ 6, 7ರ ಅಡಿ ಕೇಸು ದಾಖಲಿಸಲು ಅವಕಾಶ ಇದೆ. ಇದರಡಿ ಐದು ಲಕ್ಷ ದಂಡ ಹಾಗೂ ಜಾಮೀನು ರಹಿತ ವಾರಂಟ್‌ ಜಾರಿಗೊಳಿಸಬಹುದು. ಈ ಬಗ್ಗೆ ಕಾರ್ಮಿಕರಿಗೂ ಜಾಗೃತಿ ಮೂಡಿಸುವ ಪ್ರಕ್ರಿಯೆ ನಿರಂತರವಾಗಿ ನಡೆಯುತ್ತಲೇ ಇರುತ್ತದೆ. ಆಗಾಗ್ಗೆ ಇಂತಹ ಪ್ರಕರಣಗಳು ಸಂಭವಿಸುತ್ತಲೇ ಇವೆ ಎಂದು ರಾಜ್ಯ ಸಫಾಯಿ ಕರ್ಮಚಾರಿಗಳ ಆಯೋಗದ ಸಂಶೋಧನಾಧಿಕಾರಿ ಮಂಜುನಾಥ್‌ ತಿಳಿಸುತ್ತಾರೆ. 

10 ಲಕ್ಷ ರೂ. ಪರಿಹಾರ
ಮ್ಯಾನ್‌ಹೋಲ್‌ ಸ್ವತ್ಛ ಮಾಡುವ ವೇಳೆ ಉಸಿರುಗಟ್ಟಿ ಸಾವನ್ನಪ್ಪಿದ ಒಬ್ಬ ಎಂಜಿನಿಯರ್‌ ಹಾಗೂ ಇಬ್ಬರು ಕಾರ್ಮಿಕರು ಸೇರಿದಂತೆ
ಮೂವರ ಕುಟುಂಬಗಳಿಗೆ ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್‌ ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ. ಮ್ಯಾನ್‌ಹೋಲ್‌ ಸಾವು ಪ್ರಕರಣದ ಘಟನೆ ನಡೆದ ಕಗ್ಗದಾಸಪುರಕ್ಕೆ ಮಂಗಳವಾರ ಭೇಟಿ ನೀಡಿ ಮಾತನಾಡಿ, ಮೃತರ ಕುಟುಂಬಗಳಿಗೆ ತಲಾ ಹತ್ತು ಲಕ್ಷ ರೂ. ಪರಿಹಾರ ಘೋಷಿಸಿದರು. ಕಾನೂನು ಉಲ್ಲಂ ಸಿ ದುರಸ್ತಿ ಮಾಡಿದ್ದರ ವಿರುದ್ಧ ತನಿಖೆ ನಡೆಸಿ, ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ಗುತ್ತಿಗೆದಾರನ ಬೇಜವಾಬ್ದಾರಿ; ಕ್ರಮ ಅಗತ್ಯ: ಮೇಯರ್‌
ಜಿ. ಪದ್ಮಾವತಿ ಮಾತನಾಡಿ, 2 ವರ್ಷಗಳಿಂದ ಸಿ.ವಿ. ರಾಮನ್‌ ನಗರದಲ್ಲಿ ಮ್ಯಾನ್‌ಹೋಲ್‌ ದುರಸ್ತಿ ಕಾಮಗಾರಿ ಪಡೆದಿದ್ದ ರಾಮ್‌ಕಿ ಸಂಸ್ಥೆಯ ಗುತ್ತಿಗೆದಾರರು ಸ್ಥಳದಲ್ಲಿದ್ದು ಭದ್ರತಾ ನಿಯಮಗಳ ಉಸ್ತುವಾರಿ ವಹಿಸಿಕೊಳ್ಳಬೇಕಿತ್ತು. ಅವರ ಬೇಜವಾಬ್ದಾರಿತನದಿಂದಲೇ ಈ ದುರ್ಘ‌ಟನೆ ಸಂಭವಿಸಿದೆ. ಗುತ್ತಿದಾರನ ವಿರುದ್ದ ಕ್ರಮ ಕೈಗೊಳ್ಳುವಂತೆ ಸೂಚಿಸಿದರು.

Advertisement

ಜೆಟ್ಟಿಂಗ್‌, ಸಕ್ಕಿಂಗ್‌ಯಂತ್ರ ಕೊರತೆ?
ಬೆಂಗಳೂರು: ರಾಜಧಾನಿಯಲ್ಲಿ ಸರಿಸುಮಾರು 2 ಲಕ್ಷ ಮ್ಯಾನ್‌ಹೋಲ್‌ಗ‌ಳಿವೆ. ಇವುಗಳ ದುರಸ್ತಿಗಾಗಿ ಇರುವ ಜೆಟ್ಟಿಂಗ್‌ ಯಂತ್ರಗಳ ಸಂಖ್ಯೆ 120. ಪ್ರಸ್ತುತ ಕಾರ್ಯನಿರ್ವಹಿಸುತ್ತಿರುವ ಯಂತ್ರಗಳು 108 ಮಾತ್ರ. ಈ ಅಂಕಿ-ಅಂಶಗಳು ನಗರದ ಮ್ಯಾನ್‌ಹೋಲ್‌ಗ‌ಳ ದುರಸ್ತಿಗೆ ಯಂತ್ರಗಳ ಕೊರತೆ ಸೂಚಿಸುತ್ತವೆ. ನಗರದಲ್ಲಿ ವಿವಿಧ ಪ್ರಕಾರದ ಒಟ್ಟಾರೆ ಎರಡು ಲಕ್ಷ ಮ್ಯಾನ್‌ಹೋಲ್‌ ಗಳಿದ್ದು, ನಿತ್ಯ ದುರಸ್ತಿಗೆ ಸಂಬಂಧಿಸಿದಂತೆ ಸರಾಸರಿ 350 ರಿಂದ 400 ದೂರುಗಳು ಬರುತ್ತವೆ. ಈ ಕಾಮಗಾರಿ ಕೈಗೆತ್ತಿಕೊಳ್ಳಲು 108 ಜೆಟ್ಟಿಂಗ್‌ ಮತ್ತು ಸಕ್ಕಿಂಗ್‌ ಯಂತ್ರಗಳಿವೆ. ಆದರೆ, ಈ ಯಂತ್ರಗಳು ಸಾಕಾಗುತ್ತಿಲ್ಲ ಎಂಬ ಕೂಗು ಕೇಳಿಬರುತ್ತಿದೆ.

ಕಗ್ಗದಾಸಪುರದಲ್ಲಿ ನಡೆದ ಮ್ಯಾನ್‌ಹೋಲ್‌ ಸಾವು ಪ್ರಕರಣದ ಬೆನ್ನಲ್ಲೇ ಯಂತ್ರಗಳ ಕೊರತೆಯ ಕೂಗು ಕೇಳಿಬಂದಿದೆ. ಒಂದು ಯಂತ್ರವು ಒಂದು ಮ್ಯಾನ್‌ಹೋಲ್‌ ದುರಸ್ತಿಗೆ ಕನಿಷ್ಠ 4 ರಿಂದ 6 ತಾಸು ತೆಗೆದುಕೊಳ್ಳುತ್ತದೆ. ಅಲ್ಲದೆ, ಬೆಂಗಳೂರಿನಂತಹ
ವಾಹನದಟ್ಟಣೆ ಇರುವ ನಗರದಲ್ಲಿ ಒಂದು ಕಡೆಯಿಂದ ಮತ್ತೂಂದು ಕಡೆಗೆ ಈ ಯಂತ್ರ ತೆಗೆದುಕೊಂಡು ಹೋಗಲು ಸಾಕಷ್ಟು ಸಮಯ ಹಿಡಿಯುತ್ತದೆ. ಅಲ್ಲದೆ, ಒಂದು ಯಂತ್ರಕ್ಕೆ ಒಂದರಿಂದ ಎರಡು ಕೋಟಿ ರೂ. ತಗಲುತ್ತದೆ. ಇದೆಲ್ಲವೂ ಪರೋಕ್ಷವಾಗಿ ಮ್ಯಾನ್ಯುವಲ್‌
ಮೂಲಕ ದುರಸ್ತಿ ಕಾರ್ಯಕ್ಕೆ ಕಾರಣವಾಗುತ್ತಿದೆ ಎಂಬ ಆರೋಪ ಕೇಳಿಬಂದಿದೆ. 

ಕೊರತೆ ಇಲ್ಲ; ಜಲಮಂಡಳಿ: ಆದರೆ, ಇದನ್ನು ಬೆಂಗಳೂರು ಜಲಮಂಡಳಿ ಅಧಿಕಾರಿಗಳು ಅಲ್ಲಗಳೆದಿದ್ದಾರೆ. ಎಲ್ಲ 108 ಜೆಟ್ಟಿಂಗ್‌-ಸಕ್ಕಿಂಗ್‌ ಯಂತ್ರಗಳು ಒಂದೇ ಕಡೆ ಇರುವುದಿಲ್ಲ. ಒಂದೊಂದು ವಿಭಾಗಕ್ಕೆ ಬೇಡಿಕೆ ಹಾಗೂ ಮ್ಯಾನ್‌ ಹೋಲ್‌ಗ‌ಳು ಮತ್ತು ದೂರುಗಳಿಗೆ ಅನುಗುಣವಾಗಿ ಹಂಚಿಕೆ ಮಾಡಲಾಗಿದೆ. ಈಗಿರುವ ಯಂತ್ರಗಳು ಸಾಕಾಗುತ್ತವೆ ಎಂದು ಜಲಮಂಡಳಿ ಪ್ರಧಾನ ಎಂಜಿನಿಯರ್‌ ಕೆಂಪರಾಮಯ್ಯ ಸ್ಪಷ್ಟಪಡಿಸುತ್ತಾರೆ. ಅಷ್ಟಕ್ಕೂ ಮ್ಯಾನ್‌ಹೋಲ್‌ಗ‌ಳಲ್ಲಿ ಸರಾಗವಾಗಿ ನೀರುಹರಿಯದೆ ಕಟ್ಟಿಕೊಳ್ಳುವ ಸಮಸ್ಯೆ ಯಂತ್ರಗಳಿಂದ ಬಗೆಹರಿಯುವುದಿಲ್ಲ. ಜನರಲ್ಲಿ ಜಾಗೃತಿ ಮುಖ್ಯ. ಬೇಕಾಬಿಟ್ಟಿ ಕಸ ಸುರಿಯುವುದು ಸೇರಿದಂತೆ ಅಸಮರ್ಪಕ
ನಿರ್ವಹಣೆಯಿಂದ ಸಮಸ್ಯೆ ಉದ್ಭವಿಸುತ್ತದೆ ಎಂದು ಹೇಳುತ್ತಾರೆ.

ಸಚಿವ ಆಂಜನೇಯ ಭೇಟಿ
ಮ್ಯಾನ್‌ಹೋಲ್‌ಗಿಳಿದು ಮೃತಪಟ್ಟಿರುವ ಕಾರ್ಮಿಕರ ಮೃತ ದೇಹ ಇಡಲಾಗಿರುವ ಬೌರಿಂಗ್‌ ಆಸ್ಪತ್ರೆಗೆ ಸಮಾಜ ಕಲ್ಯಾಣ ಸಚಿವ ಎಚ್‌. ಆಂಜನೇಯ ಭೇಟಿ ನೀಡಿದ್ದರು. ಅಲ್ಲದೆ, ಪ್ರಕರಣ ಸಂಬಂಧ ನಾಗರಿಕ ಹಕ್ಕುಗಳ ಜಾರಿ ದಳದ ಮುಖ್ಯಸ್ಥರ ನೇತೃತ್ವದಲ್ಲಿ ತನಿಖೆ ನಡೆಸುವಂತೆ ಆದೇಶಿಸಿದರು. ಇನ್ನು ಮುಂದೆ ಮ್ಯಾನ್‌ಹೋಲ್‌ಗೆ ಇಳಿಯುವುದಿಲ್ಲ ಎಂದು ಪ್ರತಿಯೊಬ್ಬ ಕಾರ್ಮಿಕ ಪ್ರತಿಜ್ಞೆ ಮಾಡಬೇಕು. ಆಗ ಮಾತ್ರ ಅಮಾಯಕರ ಜೀವ ಉಳಿಯುತ್ತವೆ ಎಂದರು. 

ಇತ್ತೀಚೆಗೆ ನಡೆದ ಪ್ರಕರಣಗಳು 
2008ರ ಜು. 5 ಎಲೆಕ್ಟ್ರಾನಿಕ್‌ ಸಿಟಿಯಲ್ಲಿ 2 ಸಾವು
2009ರ ನ. 14ಯಲಹಂಕ ನ್ಯೂಟೌನ್‌ಡೈರಿ ವೃತ್ತದಲ್ಲಿ 3 ಸಾವು
2010ರ ಮೇ 9ಪೀಣ್ಯ 2ನೇ ಹಂತದ ಕರೀಂಸಾಬ್‌ ಲೇಔಟ್‌ನಲ್ಲಿ  3 ಸಾವು
2012 ರ ಜು.14 ಬನ್ನೇರುಘಟ್ಟ ರಸ್ತೆಯ ಅರಕೆರೆಯಲ್ಲಿ 2 ಸಾವು
2013ರ ಅ. 25 ಪೀಣ್ಯದಲ್ಲಿ 2 ಸಾವು
2014ರ ಜ. 18 ಕೆ.ಪಿ. ಅಗ್ರಹಾರದಲ್ಲಿ 1 ಸಾವು
2014ರ ಆ. 30 ಮಹದೇವಪುರದಲ್ಲಿ 1 ಸಾವು
2014ರ ಸೆ. 242 ಸಾವು
2015ರ ಜುಲೈ 5 ಯಲಹಂಕದಲ್ಲಿ 2 ಸಾವು
2015ರ ಆ. 18 ಜಯಮಹಲ್‌ನಲ್ಲಿ 2 ಸಾವು
2016ರ ಅ. 18 ಯಶವಂತಪುರದಲ್ಲಿ 2 ಸಾವು
2016ರ ಡಿ.14 ಚಿಕ್ಕಬೇಗೂರಿನಲ್ಲಿ 3 ಸಾವು
2017ರ ಫೆ. 6 ಕಗ್ಗದಾಸಪುರದಲ್ಲಿ 3 ಸಾವು

Advertisement

Udayavani is now on Telegram. Click here to join our channel and stay updated with the latest news.

Next