ಬೆಂಗಳೂರು: “ಸಾರ್ ನನ್ನ ಹೆಂಡತಿ ಮತ್ತು ಮಗಳ ಮೇಲೆ ಯಾರೋ ಪಾಪಿಗಳು ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ. ನನಗೆ ದಿಕ್ಕೇ ತೋಚುತ್ತಿಲ್ಲ. ತುಂಬಾ ಭಯ ಆಗ್ತಿದೆ ದಯವಿಟ್ಟು ಬಂದು ನನ್ನನ್ನು ಕಾಪಾಡಿ’ ಎಂದು ವ್ಯಕ್ತಿಯೊಬ್ಬ ದೂರವಾಣಿ ಮೂಲಕ ಆಡಿದ ಮಾತು ಕೇಳಿ ಎದ್ದೆವೋ ಬಿದ್ದೆವೋ ಎಂದು ಸ್ಥಳಕ್ಕೆ ಹೋದ ಪೊಲೀಸರಿಗೆ ಕಾದಿದ್ದುದು ನಿರಾಸೆ.
ಆ ಕ್ಷಣಕ್ಕೆ ಪೊಲೀಸರು ತಾಳ್ಮೆ ತಂದುಕೊಳ್ಳದಿದ್ದರೆ ಅದೇನಾಗುತ್ತಿತ್ತೋ ದೇವರೇ ಬಲ್ಲ! ಹುಸಿ ಬಾಂಬ್ ಬೆದರಿಕೆ ಕರೆ ಹಾಗೂ ಅಪಹರಿಸಿ ಹಣಕ್ಕೆ ಬೇಡಿಕೆಯಿಟ್ಟಿರುವ ಬಗ್ಗೆ ಪೊಲೀಸ್ ಠಾಣೆಗೆ ಹುಸಿ ಕರೆಗಳು ಬರುವುದು ಸಾಮಾನ್ಯ. ಆದರೆ, ಇಲ್ಲೊಬ್ಬ ವ್ಯಕ್ತಿ “ಯಾರೋ ತನ್ನ ಪತ್ನಿ ಮತ್ತು ಮಗಳ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾರೆ’ ಎಂದು ಪೊಲೀಸರಿಗೆ ಹುಸಿ ಕರೆ ಮಾಡಿದ ವಿಲಕ್ಷಣ ಘಟನೆ ಯಲಹಂಕದಲ್ಲಿ ಭಾನುವಾರ ನಡೆದಿದೆ.
ಕರೆ ಆಲಿಸಿ ಸ್ಥಳಕ್ಕೆ ತೆರಳಿದಾಗ, ತಮಗೆ ಕರೆ ಮಾಡಿದ್ದು ಒಬ್ಬ ಮಾನಸಿಕ ಅಸ್ವಸ್ಥ ಎಂದು ತಿಳಿದ ಪೊಲೀಸರಿಗೆ ಕೈ ಹಿಸುಕಿಕೊಳ್ಳದೆ ವಿಧಿಯಿರಲಿಲ್ಲ. “ನಮ್ಮ-100′ ಮತ್ತು ಯಲಹಂಕ ಪೊಲೀಸ್ ಠಾಣೆಗೆ ಒಂದೇ ಸಮಯಕ್ಕೆ ಬಂದ ಕರೆಯಿಂದ ತಕ್ಷಣ ಸ್ಥಳಕ್ಕೆ ಹೋದ ಪೊಲೀಸರಿಗೆ ಅಚ್ಚರಿ ಕಾದಿತ್ತು. ಕರೆ ಮಾಡಿದ್ದ ವ್ಯಕ್ತಿಯ ಪತ್ನಿ ಹಾಗೂ ಮಗಳು ಮನೆಯಲ್ಲೇ ಇದ್ದು ಆ ರೀತಿಯ ಘಟನೆಯೇನೂ ನಡೆದಿಲ್ಲ ಎಂದು ಹೇಳಿದರು.
ಯಲಹಂಕದ ಸುರಭಿ ಲೇಔಟ್‌ನ ನಿವಾಸಿ, ಮಾನಸಿಕ ಅಸ್ವಸ್ಥ ರಾಮಕೃಷ್ಣ (45) ಎಂಬಾತ ಭಾನುವಾರ ಬೆಳಗ್ಗೆ 9 ಗಂಟೆಗೆ “ನಮ್ಮ-100′ ಮತ್ತು ಯಲಹಂಕ ಠಾಣೆಗೆ ಕರೆ ಮಾಡಿ, ನಾನು ಸುರಭಿ ಲೇಔಟ್ ನಿವಾಸಿ ಭಾನುವಾರ ಬೆಳಗ್ಗೆ ಅಪರಿಚಿತರು ತನ್ನ ಪತ್ನಿ, ಮಗಳನ್ನು ಅತ್ಯಾಚಾರ ಮಾಡಿ ಕೊಲೆಗೈದು ಪರಾರಿಯಾಗಿದ್ದಾರೆ ಎಂದು ಕರೆ ಸ್ಥಗಿತಗೊಳಿಸಿದ್ದಾನೆ.
“ನಮ್ಮ-100′ ಸಿಬ್ಬಂದಿ ಕೂಡಲೇ ಯಲಹಂಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಷ್ಟರಲ್ಲಿ ಠಾಣೆ ಸಿಬ್ಬಂದಿ ಮೊಬೈಲ್ ಟ್ರ್ಯಾಪ್ ಮಾಡಿಕೊಂಡು ರಾಮಕೃಷ್ಣನ ಪತ್ತೆಗಾಗಿ, ಎರಡು ತಂಡಗಳಾಗಿ ಕಾರ್ಯಾಚರಣೆಗೆ ಇಳಿದಿದ್ದರು. ಒಂದು ತಂಡ ಸುರಭಿ ಲೇಔಟ್‌ನ ತನ್ನ ಜಮೀನಿನಲ್ಲಿ ಕುಳಿತಿದ್ದ ರಾಮಕೃಷ್ಣನನ್ನು ಪತ್ತೆ ಹಚ್ಚಿದರೆ, ಮತ್ತೂಂದು ತಂಡ ಸ್ಥಳೀಯರಿಂದ ರಾಮಕೃಷ್ಣನ ಮನೆ ಪತ್ತೆ ಮಾಡಿ ಸ್ಥಳಕ್ಕೆ ಧಾವಿಸಿತ್ತು.
ಮನೆಯಲ್ಲಿ ಟಿವಿ ವೀಕ್ಷಣೆ ಮಾಡುತ್ತಿದ್ದ ರಾಮಕೃಷ್ಣನ ಪತ್ನಿ ಸಾವಿತ್ರಿ ಹಾಗೂ ಮಗಳಿಗೆ ಪೊಲೀಸರು ಕೇಳಿದ ಪ್ರಶ್ನೆಗೆ ಇಬ್ಬರು ಒಂದು ಕ್ಷಣ ಕಂಗಲಾದರು. ಇದೇ ವೇಳೆ ಮತ್ತೂಂದು ತಂಡ ರಾಮಕೃಷ್ಣನನ್ನು ಮನೆಗೆ ಕರೆತಂದಿತ್ತು. ಬಳಿಕ ಇಬ್ಬರನ್ನು ವಿಚಾರಿಸಿದಾಗ ರಾಮಕೃಷ್ಣ ಮಾನಸಿಕ ಅಸ್ವಸ್ಥ ಎಂಬುದು ಗೊತ್ತಾಯಿತು. ಪತಿ ನಮ್ಮ ಸಂಬಂಧಿಕರು ಹಾಗೂ ಪರಿಚಯಸ್ಥರಿಗೂ ಇದೇ ರೀತಿ ಕರೆ ಮಾಡಿ ಸುಳ್ಳು ಹೇಳುತ್ತಾರೆ.
ಅವರ ಪರವಾಗಿ ನಾವು ಕ್ಷಮೆ ಕೇಳುತ್ತೇನೆ. ಅವರು ಕೆಲ ವರ್ಷಗಳಿಂದ ಮಾನಸಿಕ ಖನ್ನತೆಗೊಳಗಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ನಾನು ಕೂಲಿ ಕೆಲಸ ಮಾಡಿಕೊಂಡು, ಒಬ್ಬಳೇ ಮಗಳನ್ನು ಓದಿಸುತ್ತಿದ್ದೇನೆ. ಮುಂದೆ ಈ ತರಹದ ಘಟನೆ ನಡೆಯದಂತೆ ಎಚ್ಚರ ವಹಿಸುತ್ತೇವೆ ಎಂದು ಪೊಲೀಸರಲ್ಲಿ ಮನವಿ ಮಾಡಿದರು. ವಿಷಯ ತಿಳಿದು ನಿಟ್ಟುಸಿರು ಬಿಟ್ಟ ಪೊಲೀಸರು ರಾಮಕೃಷ್ಣನಿಗೆ ಎಚ್ಚರಿಕೆ ನೀಡಿ ಸ್ಥಳದಿಂದ ತೆರಳಿದರು.