Advertisement

ಹಳಿಗೆ ಮರಳದ ಮೈಷುಗರ್‌ ಕಾರ್ಖಾನೆ

03:38 PM Oct 24, 2022 | Team Udayavani |

ಮಂಡ್ಯ: ಎರಡು ತಿಂಗಳು ಸಮೀಪಿಸುತ್ತಿದ್ದರೂ ಮೈಷುಗರ್‌ ಕಾರ್ಖಾನೆ ಇನ್ನೂ ಮೊದಲಿನ ಹಳಿಗೆ ಮರಳಲು ಸಾಧ್ಯವಾಗಿಲ್ಲ. ಪ್ರತಿದಿನ ವಿವಿಧ ಕಾರಣಗಳಿಂದ ನಿಂತು ನಿಂತು ಓಡುತ್ತಿದೆ. 3 ತಿಂಗಳ ಕಾಲ ಕಾರ್ಖಾನೆ ಯಂತ್ರಗಳ ದುರಸ್ತಿಗೆ ಸಮಯ ತೆಗೆದುಕೊಳ್ಳಲಾಗಿತ್ತು. ಆದರೂ, ಇನ್ನೂ ಯಂತ್ರಗಳು ಸಮರ್ಪಕವಾಗಿ ಕೆಲಸ ನಿರ್ವಹಿಸುತ್ತಿಲ್ಲ. ಇದರಿಂದ ಸಾಕಷ್ಟು ಲೋಪದೋಷ ಕಂಡು ಬರುತ್ತಿವೆ.

Advertisement

30 ಸಾವಿರ ಟನ್‌ ಕಬ್ಬು ಅರೆದ ಕಾರ್ಖಾನೆ: ಕಳೆದ 2 ತಿಂಗಳಿನಿಂದ ಇದುವರೆಗೂ ಕೇವಲ 30 ಸಾವಿರ ಟನ್‌ ಕಬ್ಬು ಅರೆಯಲಾಗಿದೆ. ಇದ ರಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೈಷುಗರ್‌ ಕಾರ್ಖಾನೆ ಆರಂಭವಾಗಲಿದೆ ಎಂಬ ನಿಟ್ಟಿನಲ್ಲಿ ರೈತರು ಸುಮಾರು 4 ಲಕ್ಷ ಟನ್‌ನಷ್ಟು ಕಬ್ಬು ಒಪ್ಪಿಗೆ ಮಾಡಿಕೊಂಡಿದ್ದರು. ಆದರೆ, ಕಾರ್ಖಾನೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ಪ್ರತಿದಿನ ನಿಗದಿತ ಟನ್‌ ಕಬ್ಬು ಅರೆಯಲು ಸಾಧ್ಯವಾಗುತ್ತಿಲ್ಲ.

ರೈತರಿಂದ ಗಲಾಟೆ: ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ರೈತರು ಕಬ್ಬು ಅರೆಯುವಂತೆ ಕಾರ್ಖಾನೆ ಅಧಿಕಾರಿಗಳ ವಿರುದ್ಧ ಗಲಾಟೆ ಮಾಡುತ್ತಿದ್ದಾರೆ. ಕಳೆದ 3-4 ದಿನಗಳಿಂದ ರೈತರು ಕಬ್ಬು ಅರೆಯುವಂತೆ ಗಲಾಟೆ ಮಾಡುತ್ತಿರುವುದರಿಂದ ಅಧಿಕಾರಿಗಳು ಕಾಟಾಚಾರಕ್ಕೆ ಮಾತ್ರ ಕಬ್ಬು ಅರೆಯುತ್ತಿದ್ದಾರೆ. ಈಗಾಗಲೇ ಸಾಕಷ್ಟು ಕಬ್ಬು ಕಾರ್ಖಾನೆ ಯಾರ್ಡ್‌ನಲ್ಲಿ ಎತ್ತಿನಗಾಡಿ, ಟ್ರ್ಯಾಕ್ಟರ್‌, ಲಾರಿಗಳಲ್ಲಿ ಬಂದು ನಿಂತಿದೆ.

ಖಾಸಗಿ ಕಂಪನಿಯಿಂದ ನಿರ್ಲಕ್ಷ್ಯ: ಕಬ್ಬು ಅರೆಯುವಿಕೆಯನ್ನು ಖಾಸಗಿ ಕಂಪನಿಗೆ ವಹಿಸಲಾಗಿದೆ. ಟನ್‌ ಕಬ್ಬು ಅರೆದರೆ ಇಂತಿಷ್ಟು ಹಣ ಎಂದು ನಿಗದಿಪಡಿಸಲಾಗಿದ್ದು, ಒಪ್ಪಂದ ಮಾಡಿಕೊಳ್ಳಲಾಗಿದೆ. ಆದರೆ, ಖಾಸಗಿ ಕಂಪನಿಯವರು ನಿಗದಿತ ಕಬ್ಬು ಅರೆಯುತ್ತಿಲ್ಲ. ನಿರ್ಲಕ್ಷ್ಯ ವಹಿಸಿದ್ದು, ಕೇವಲ ಕಾಟಾಚಾರಕ್ಕಾಗಿ ಕಬ್ಬು ಅರೆಯುವ ನಾಟಕವಾಡುತ್ತಿದ್ದಾರೆ ಎಂದು ರೈತರೊಬ್ಬರು ಆರೋಪಿಸಿದರು.

1.50 ಲಕ್ಷ ಟನ್‌ ಕಬ್ಬು ಅರೆಯಬೇಕಿತ್ತು: 2 ತಿಂಗಳೊಳಗೆ ಸುಮಾರು 1.50 ಲಕ್ಷ ಟನ್‌ ಕಬ್ಬು ಅರೆಯಬೇಕಿತ್ತು. ಆದರೆ, ಕಾರ್ಖಾನೆ ಅಧಿಕಾರಿಗಳು, ಖಾಸಗಿ ಕಂಪನಿ ನಿರ್ಲಕ್ಷ್ಯದಿಂದ ನಿಗದಿತ ಗುರಿ ತಲುಪಲು ಸಾಧ್ಯವಾಗಿಲ್ಲ. ಅಲ್ಲದೆ, ಟರ್ಬೈನ್‌ ಕೂಡ ಇನ್ನೂ ಆರಂಭಿಸದಿರುವುದು ಖಾಸಗಿ ಕಂಪನಿಯವರ ನಿರ್ಲಕ್ಷ್ಯಕ್ಕೆ ಕಾರಣವಾಗಿದೆ ಎಂದು ಹೇಳಲಾಗುತ್ತಿದೆ.

Advertisement

ಕಳಪೆ ಸಕ್ಕರೆ ಉತ್ಪಾದನೆ: ಇದುವರೆಗೂ ಅರೆದಿರುವ ಕಬ್ಬಿನಲ್ಲಿ ಸಕ್ಕರೆ ಉತ್ಪಾದಿಸಲಾಗಿದೆ. ಆದರೆ, ಗುಣಮಟ್ಟದ ಸಕ್ಕರೆ ಉತ್ಪಾದಿಸಲು ಸಾಧ್ಯವಾಗಿಲ್ಲ. ಉತ್ಪಾದಿಸಿರುವ ಸಕ್ಕರೆಯೂ ಕಂದು ಬಣ್ಣದಿಂದ ಕೂಡಿದೆ. ಅದನ್ನು ಮತ್ತೆ ಮರು ಉತ್ಪಾದನೆ ಮಾಡಲು ಸಾಧ್ಯವಿದ್ದರೂ ಕಾರ್ಖಾನೆ ಅಧಿಕಾರಿಗಳು, ಖಾಸಗಿ ಕಂಪನಿ ನಿರ್ಲಕ್ಷ್ಯಕ್ಕೆ ಹಿಡಿದ ಕನ್ನಡಿಯಾಗಿದೆ.

ಕೇವಲ ಪ್ರಾಯೋಗಿಕ ಚಾಲನೆಯೇ?: ಕಳೆದ 2ತಿಂಗಳಿನಿಂದ ಕೇವಲ ಪ್ರಾಯೋಗಿಕ ಚಾಲನೆಯಾಗಿದೆಯೇ ಎಂಬ ಅನುಮಾನ ಕಾಡುತ್ತಿವೆ. ಸರ್ಕಾರ ಕಾರ್ಖಾನೆಯನ್ನು 2 ವರ್ಷಗಳ ಅವ ಧಿಗೆ ಪ್ರಾಯೋಗಿಕವಾಗಿ ಸರ್ಕಾರಿ ಸ್ವಾಮ್ಯದಲ್ಲಿಯೇ ನಡೆಸಲಾಗುವುದು ಎಂದು ತಿಳಿಸಿತ್ತು. ಆದರೆ, ಈಗಿನ ಕಾರ್ಖಾನೆ ಪರಿಸ್ಥಿತಿ ನೋಡಿದರೆ ಕೇವಲ ಪ್ರಾಯೋಗಿ ಕವಾಗಿ ನಡೆಸುವ ಮೂಲಕ ವರ್ಷ ಪೂರೈಸಲಿದೆಯೇ ಎಂಬ ಅನುಮಾನ ಕಾಡುತ್ತಿವೆ. ಚುನಾವಣೆ ಹತ್ತಿರವಾಗುತ್ತಿದ್ದು, ಅಲ್ಲಿಯವರೆಗೂ ಪ್ರಾಯೋಗಿಕ ವಾಗಿ ಕಾರ್ಖಾನೆ ನಡೆಸಲಿದೆಯೇ ಎಂಬ ಚರ್ಚೆಗಳೂ ಕೇಳಿ ಬರುತ್ತಿವೆ.

2 ತಿಂಗಳಿನಿಂದ ವೇತನವಿಲ್ಲ: ಕಳೆದ ಎರಡು ತಿಂಗಳಿನಿಂದಲೂ ಕಾರ್ಖಾನೆ ನೌಕರರಿಗೆ ವೇತನ ನೀಡಿಲ್ಲ. ಕಾರ್ಖಾನೆ ಅಧಿ ಕಾರಿಗಳಿಗೆ ಲಕ್ಷಾಂತರ ರೂ. ವೇತನ ನೀಡಲಾಗುತ್ತಿದೆ. ಪ್ರತಿ ತಿಂಗಳು ತಪ್ಪದೇ ಅವರಿಗೆ ವೇತನ ಬರುತ್ತಿದೆ. ಆದರೆ, ಕಾರ್ಮಿಕರಿಗೆ, ಸಿಬ್ಬಂದಿಗೆ ಸಮರ್ಪಕವಾಗಿ ವೇತನ ಪಾವತಿಸು ತ್ತಿಲ್ಲ. ಈಗಾಗಲೇ 2 ತಿಂಗಳಿನಿಂದ ವೇತನ ನೀಡಿಲ್ಲ ಎಂದು ಹೆಸರು ಹೇಳದ ಸಿಬ್ಬಂದಿ ಯೊಬ್ಬರು ಅಳಲು ತೋಡಿಕೊಂಡರು. ರೈ

ತರಿಗೆ ಹೆಚ್ಚಿದ ಸಂಕಷ್ಟ: ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಲು ಒಪ್ಪಂದ ಮಾಡಿಕೊಂಡಿರುವ ರೈತರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಪ್ರತಿ ದಿನ ಅಧಿಕಾರಿ ಗಳೊಂದಿಗೆ ಗಲಾಟೆ ಮಾಡುವ ಮೂಲಕ ಕಬ್ಬು ಅರೆಯಲು ಒತ್ತಡ ಹೇರಬೇಕಾದ ಪರಿ ಸ್ಥಿತಿ ಬಂದೊದಗಿದೆ. ಇತ್ತ ಸರಿಯಾಗಿ ಕಬ್ಬು ಅರೆಯುತ್ತಿಲ್ಲ. ಅತ್ತ, ಬೇರೆ ಕಾರ್ಖಾನೆಗೂ ಕಬ್ಬು ಸಾಗಿಸುವಂತಿಲ್ಲ ಎಂಬಂತಾಗಿದೆ.

-ಎಚ್‌.ಶಿವರಾಜು

Advertisement

Udayavani is now on Telegram. Click here to join our channel and stay updated with the latest news.

Next