ನಿನ್ನನ್ನು ಯಾವಾಗಲೂ ಆ ಫಂಕಿ ಫಂಕಿ ಜೀನ್ಸ್ ಪ್ಯಾಂಟ್ ಟಿ-ಶರ್ಟ್‌ನಲ್ಲಿ ಒಳ್ಳೆ ಚೈನಿಸ್ ಕೋತಿಥರ ನೋಡಿ ಬೋರಾಗಿತ್ತು. ಆದರೆ, ಅವತ್ತು ನಿನ್ನನ್ನು ಪಂಚೆಯಲ್ಲಿ ನೋಡಿ ಇವನೆ, ಇವನೇ ನನ್ನಪ್ಪನ ಅಳಿಯ ಅಂತ ನಿರ್ಧರಿಸಿ ಬಿಟ್ಟೆ.
ನೀನು ನನ್ನ ಬಾಲ್ಯದ ಗೆಳೆಯ. ಆದರೆ, ಹರೆಯ ಆವರಿಸುವ ಸಂದರ್ಭದಲ್ಲಿ ನೀನು ನನ್ನ ಪ್ರೇಮಿಯಾಗುತ್ತೀಯ ಎಂದು ನಾನೆಂದೂ ಅಂದುಕೊಂಡಿರಲಿಲ್ಲ. ಹರೆಯದ ಆಟವೋ, ಹುಚ್ಚುಖೋಡಿ ಮನಸ್ಸಿನ ಉನ್ಮಾದವೋ ಗೊತ್ತಿಲ್ಲ. ಪ್ರಸ್ತುತ ನೀ ನನ್ನ ಮನದರಸ. ನೀನು ಗೆಳೆಯನಿಂದ ಪ್ರೇಮಿಯ ಸ್ಥಾನಕ್ಕೆ ನಿಧಾನವಾಗಿ ಬಡ್ತಿ ಪಡೆದೆ. ಸಿನಿಮೀಯ ರೀತಿಯಲ್ಲೇ ಬಾಲ್ಯದ ಗೆಳೆಯ ಬಾಳ ಇನಿಯನಾಗಿದ್ದು ನನ್ನ ಪಾಲಿಗೆ ಸಂಭ್ರಮ ಮತ್ತು ಸಡಗರ.
ಮೊದಲ ಬಾರಿಗೆ ನೀನು ಪ್ರೇಮನಿವೇದನೆ ಮಾಡಿದಾಗ,ನಾನು ನಿನ್ನ ಕಿವಿ ಹಿಂಡಿ “ನಿನ್ನೆ ರಾತ್ರಿ ಯಾವ್ ಸಿನಿಮಾ ನೋಡಿದ್ದಿ’ ಅಂತ ಕಿಚಾಯಿಸಿದ್ದೆ. ಅದಾದ ಮೇಲೆ ಸುಮಾರು ದಿನಗಳ ಕಾಲ ನಮ್ಮ ನಡುವೆ ಪ್ರೀತಿಯ ಸ್ವರ ಎದ್ದಿರಲಿಲ್ಲ. ನಮ್ಮ ಸಲುಗೆಯಿಂದಾಗಿ ನಾವಿಬ್ಬರೂ ಕಾಲೇಜಲ್ಲಿ ಅಘೋಷಿತ ಪ್ರೇಮಿಗಳೇ ಆಗಿದ್ವಿ. ಪ್ರೇಮಿಗಳಲ್ಲ ಗೆಳೆಯರು ಅಂತ ಹೇಳಿದ್ರು ಕೂಡ ಯಾರೂ ನಂಬುವಂತಿರಲಿಲ್ಲ . ನಮ್ಮ ನಡುವೆ ಪ್ರೇಮ ಉಲ್ಬಣಿಸಲು ಇದೇ ಕಾರಣವಾಯ್ತಾ ಗೊತ್ತಿಲ್ಲ ಮರಯ. ಆದರೆ, ನೀನು ನನಗೆ ಮಾಡಿದ ಪ್ರೇಮನಿವೇದನೆಯನ್ನು ಅಫಿಶಿಯಲ್ ಆಗಿ ಒಪ್ಪಿಕೊಂಡದ್ದು ನಮ್ಮ ಕಾಲೇಜ್‌ನ ಟ್ರೆಡೀಷನಲ್ ಡೇ ದಿನ. ನಿನ್ನನ್ನು ಯಾವಾಗಲೂ ಆ ಫಂಕಿ ಫಂಕಿ ಜೀನ್ಸ್ ಪ್ಯಾಂಟ್ ಟಿ-ಶರ್ಟ್‌ನಲ್ಲಿ ಒಳ್ಳೆ ಚೈನಿಸ್ ಕೋತಿಥರ ನೋಡಿ ಬೋರಾಗಿತ್ತು. ಆದರೆ, ಅವತ್ತು ನಿನ್ನನ್ನು ಪಂಚೆಯಲ್ಲಿ ನೋಡಿ ಇವನೆ, ಇವನೇ ನನ್ನಪ್ಪನ ಅಳಿಯ ಅಂತ ನಿರ್ಧರಿಸಿ ಬಿಟ್ಟೆ. ನೀನೂ ಅಷ್ಟೇ ಒಳ್ಳೆ ಮಹಾಲಕ್ಷ್ಮೀ ತರ ಕಾಣ್‌ತಿದ್ದೀಯ. ನಮ್ಮನೆ ತುಳಸಿ ಕಟ್ಟೆಗೆ ನೀರ್ ಹಾಕೋಳ್ ನೀನೆ ಕಣೇ.. ಐ ಲವ್ ಯು’ ಅಂದು ಬಿಟ್ಟೆಯಲ್ಲ… ಅಬ್ಟಾ, ನಿನ್ನ ಧೈರ್ಯವೇ…
ಆಗ ನನಗೆ ಅದೇನಾಯಿತೋ ಗೊತ್ತಿಲ್ಲ. ನಿನ್ನ ಕೆನ್ನೆ ಹಿಂಡಿ, ಐ ಲವ್ ಯು ಟೂ ಅಂದೇ ಬಿಟ್ಟೆ. ಅಲ್ಲಿಂದ ಮುಂದೆ ನಡೆದದ್ದೆಲ್ಲವನ್ನೂ ನೆನಪ ಬುತ್ತಿಯಲ್ಲಿಟ್ಟುಕೊಂಡು ಮುನ್ನಡೆಯುತ್ತಿದ್ದೇನೆ. ನನ್ನೆಲ್ಲಾ ಪ್ರೀತಿ, ಕೋಪ, ಜಗಳ, ಕಾಯುವಿಕೆಗೆ ನೀನೇ ಉತ್ತರ. ಈ ಅನುಭೂತಿ ಮುಂದೆಯೂ ಆವಿಯಾಗದೇ ಅನುರಣಿಸಲಿ ಎನ್ನುವುದೊಂದೇ ನನ್ನ ಆಸೆ.
ಶ್ರೀರಕ್ಷ ರಾವ್ ಪುನರೂರು