ಅದು ಅಮವಾಸ್ಯೆಯ ಹಿಂದಿನ ದಿನ. ಹತ್ತು ವರ್ಷಗಳ ನಂತರ ನಾನು ಮೊದಲಸಲ ತವರಿಗೆ ಹೊರಟಿದ್ದೆ. ಬಸ್ ಹೋಗುವುದು ಸ್ವಲ್ಪ ತಡವಾಗಿ ಇಳಿಯುವ ಹೊತ್ತಿಗೆ ಸಂಜೆಯಾಗಿತ್ತು. ಹತ್ತುವರ್ಷಗಳಲ್ಲಿ ಹಲವು ಬದಲಾವಣೆಗಳಾಗಿದ್ದವು. ಅಲ್ಲೊಂದು ಹೊಸದಾಗಿ ಆಟೋ ಸ್ಟ್ಯಾಂಡಿತ್ತು. ಕಾಲು ದಾರಿಯ ಸುತ್ತಮುತ್ತ ಕೆಲಮನೆಗಳಾಗಿದ್ದವು. ಮೊದಲದು ಗೊಂಡಾರಣ್ಯವಾಗಿತ್ತು. ಆದರೆ, ಆಟೋ ಹತ್ತದೇ ನನ್ನಣ್ಣನಿಗೆ ಕಾಲ್ ಮಾಡಿದರೆ ಬಂದು ಕರೆದೊಯ್ತಾನೆ ಅಂತ ಭಾವಿಸಿ ಅಣ್ಣನಿಗೆ ಕಾಲ್ ಮಾಡುತ್ತಲೇ ಆಟೋ ಸ್ಟ್ಯಾಂಡ್ ದಾಟಿ ಮುಂದೆ ಹೋಗತೊಡಗಿದೆ. ಮೂರ್ನಾಲ್ಕು ಸಲ ಪೂರ್ತಿ ರಿಂಗ್ ಆಗಿ ಕಟ್ಟಾದರೂ ಅಣ್ಣ ಕಾಲ್ ಎತ್ತಲಿಲ್ಲ. ಬೇಗ ಬೇಗ ನಡೆಯುತ್ತಾ ಸುಮಾರು ದೂರ ಬಂದಾಗಿತ್ತು. ಆಗ ಸುತ್ತಮುತ್ತ ಗಮನಿಸಿದೆ. ಕಣ್ಣಳತೆಯ ದೂರದಲ್ಲೆಲ್ಲೂ ಮನೆಗಳಿರಲಿಲ್ಲ. ಮುಂಚಿನಂತೆ ಕಾಡು ಹಾಗೇ ಇತ್ತು. ಇದಿರುಗಪ್ಪಾಗ ತೊಡಗಿತ್ತು.. ಕಣ್ಣುಹಿಗ್ಗಲಿಸಿ ನೋಡಿದರೂ ಸರಿಯಾಗಿ ರಸ್ತೆ ಕಾಣಿಸುತ್ತಿರಲಿಲ್ಲ. ಆಗಸದಲ್ಲಿ ಒಂದೇ ಒಂದು ನಕ್ಷತ್ರ ಸಹ ಕಾಣಿಸಲಿಲ್ಲ. ನನ್ನ ಹಿಂಬದಿಗೆ ಒಂದು ಅಪರಿಚಿತ ಯುವಕರ ದಂಡು
ಮಚ್ಚಾ, ಯಾರೋ ಹೆಂಗಸು ಒಬ್ಬಳೇ ಹೋಗ್ತಿದ್ದಾಳೆ ನೋಡೋ..ಊರಿಗೆ ಹೊಸಬಳೆನಿಸುತ್ತದೆ.
ಲೋ, ಬನ್ರೊ ನೋಡೋಣ…
ನನಗೆ ಅವರ ಮಾತು ಕೇಳಿ ಒಮ್ಮೆಲೇ ಭಯವಾಯ್ತು.ಅಳುವೂ ಬಂತು. ಹಿಂತಿರುಗಿ ಆಟೋಸ್ಟ್ಯಾಂಡಿಗೆ ಹೋಗಲೂ ಭಯ. ಮುಂದೆ ಹೋಗಲೂ ಭಯ. ಇದ್ದಬದ್ದ ದೇವರನ್ನೆಲ್ಲಾ ನೆನಪಿಸಿಕೊಂಡು ಬಿರಬಿರನೆ ನಡೆಯಲಾರಂಭಿಸಿದೆ.
ಆಗಲೇ ಒಂದು ಬೈಕ್ ಬಂದು ನನ್ನ ಪಕ್ಕ ನಿಂತಿತು. ಎಲ್ಲಿಗಮ್ಮಾ? ಕೇಳಿದ ಆ ಬೈಕ್ ಸವಾರ. ನನಗೆ ಆತ ಯಾರೆಂದು ತಿಳಿಯಲಿಲ್ಲ. ಹೇ, ನೀವು ಕಾವೇರಮ್ಮನ ಮಗಳಲ್ಲವಾ..? ನಿಮ್ಮಣ್ಣ ಈಗ ತಾನೇ ಕೆಲಸದ ಮೇಲೆ ಬೇರೆ ಊರಿಗೆ ಹೋದ್ರು. ನೀವು ಬರುತ್ತಿರುವ ಸುದ್ದಿ ಮನೆಗೆ ತಿಳಿಸಿರಲಿಲ್ಲವೇ? ಎಂದು ಕೇಳಿದ ಆತ. ನಾನು “ಇಲ್ಲ’ ಎಂದೆ.ಯಾಕೆ ಒಬ್ಬರೇ ಬರೋದಿಕ್ಕೋದ್ರಿ..? ಬನ್ನಿ, ನಾನು ಮನೆ ತನಕ ಬಿಟ್ಟು ಬರ್ತೀನಿ. ನಿಮ್ಮ ಮನೆಯವರೆಲ್ಲಾ ತುಂಬಾ ಪರಿಚಯ ನನಗೆ ಎಂದ.
ಹಿಂದೆ ಬರುತ್ತಿರುವ ಕೇಡಿಗರ ಭಯಕ್ಕೆ ಗಪ್‌ಚುಪ್ ಎನ್ನದೇ ಬೈಕ್ ಏರಿದ್ದೆ. ಆತ ನನ್ನನ್ನು ಸುರಕ್ಷಿತವಾಗಿ ಮನೆಯ ಗೇಟಿನ ತನಕ ಬಿಟ್ಟು ಹೋದ. ಆತನ್ಯಾರೆಂದು ನನಗೆ ತಿಳಿಯಲಿಲ್ಲ. ಗಾಬರಿಯಲ್ಲಿ, ಹೆಸರು ಕೇಳಲೂ ಮರೆತಿದ್ದೆ. ಕತ್ತಲಲ್ಲಿಸ ಮುಖವನ್ನೂ ಸಹ ಸರಿಯಾಗಿ ನೋಡಲಿಕ್ಕಾಗಲಿಲ್ಲ. ಹಾಗಾಗಿ, ತವರಲ್ಲಿ ನಡೆದ ವೃತ್ತಾಂತ ತಿಳಿಸಿದರೂ ಆತನ್ಯಾರೆಂದು ತಿಳಿಯಲಿಲ್ಲ. ಮನದಲ್ಲೇ ಮತ್ತೂಮ್ಮೆ ಆತನಿಗೆ ಧನ್ಯವಾದ ತಿಳಿಸಿದೆ.
-ಗೀತಾ ಎಸ್.ಭಟ್