Advertisement
ನಮಗೆ ವೋಟಿನ ಹಕ್ಕು ಇದ್ದರೂ ಸಮಾನತೆಯಲ್ಲಿ ಮಾತ್ರ ಪುರುಷರು ಹೆಚ್ಚು ಸಮಾನರು ಎಂಬಂತೆ ಇಂಗಿತವಾಯಿತೇಕೆ? ಹಾಗೆ ಕಂಡರೆ ರಾಜಕೀಯದಲ್ಲಿ ಮಹಿಳೆಯರಿಗೆ ಮೀಸಲಾತಿ ಎಂಬ ಶಬ್ದವೇ “ಪುರುಷ ಪ್ರಾಧಾನ್ಯ ಪಿತ್ತ’ದ ಏರುವಿಕೆಗೆ ಒಂದು ಘನ ಉದಾಹರಣೆಯಲ್ಲವೆ! ಅರ್ಥವಾಗಬೇಕಾದರೆ ಇದನ್ನೇ “ರಾಜಕೀಯದಲ್ಲಿ ಪುರುಷರಿಗೆ ಮೀಸಲಾತಿ’ ಎಂದಿಟ್ಟುಕೊಳ್ಳಿ. ಆಗ ತಿಳಿಯುತ್ತದೆ, ಇದು ಎಷ್ಟು ವಿಚಿತ್ರವಾದದ್ದು, ಎಷ್ಟು ಅಬದ್ಧವಾದದ್ದು ಎಂದು. ನಾವು ಮಹಿಳೆಯರು ಪ್ರಜೆಗಳೇ ಆಗಿರುವಾಗ ನಮಗೆ ಮೀಸಲಾತಿಯ ಮಾತನಾಡುವವರು ಯಾವ ದೊಣ್ಣಪ್ಪ ನಾಯಕರು? 30% , 25% ಅಂತೆಲ್ಲ ಚೌಕಾಸಿ ಮಾಡಲು ಅವರು ಯಾರು? ಪ್ರಜೆಗಳಲ್ಲಿ ಹೆಣ್ಣುಗಂಡು ಎಂಬ ಭೇದ ಇಲ್ಲ. ದೇಶ ಎಲ್ಲರಿಗೂ ಸೇರಿದ್ದು ತಾನೆ? ನಮಗೆ ತಿಳಿಯದಂತೆ ನಮ್ಮ ಜಾಗಗಳನ್ನು ಆಕ್ರಮಿಸಿಕೊಂಡವರು, ಅವರು. ಚೌಕಾಶಿಗೆ ಬಂದರೆ ಸರಿ, ಕೇಳಿ, ನಮಗೆ ವಾಸ್ತವವಾಗಿ ಮೂವತ್ತು ಅಲ್ಲ, ಐವತ್ತು ಬೇಕು. ನಾವದಕ್ಕೆ ಬಾಧ್ಯರು. ಅದೇನು, ಭಾರತಾಂಬೆ ಪುರುಷರ ತೊಟ್ಟಿಲನ್ನು ಆಕಾಶದಲ್ಲಿ ಕಟ್ಟಿ ತೂಗಿರುವಳೆ? ಇದನ್ನೆಲ್ಲ ಇನ್ನೂ ತಿಳಿಸಿ ಹೇಳಬೇಕಾದ ಸ್ಥಿತಿ ನಮಗಿದೆಯಲ್ಲ, ಇದು ಶೋಚನೀಯ.
Related Articles
Advertisement
ಇಷ್ಟೆಲ್ಲ ಇದ್ದೂ ನಾವು ಮಹಿಳೆಯರು ಎಂಬ ವರ್ಗ ಇನ್ನೂ ನಮ್ಮ ಜೀವನ ಪ್ರೀತಿಯನ್ನು ನಂದಿಸಿಕೊಳ್ಳದೆ ಮುನ್ನಡೆಯುತ್ತಿದೆ. ಬದುಕನ್ನೇ ಫಿಲಾಸಫಿಯಾಗಿ ಸ್ವೀಕರಿಸಿದ ವಿಶೇಷದವರು ನಾವು. ಗಾಢ ನೋಡಿದರೆ, ಸ್ತ್ರೀಲೋಕವೆಂಬುದೇ ಜೆನ್ ತತ್ವಾಧಾರಿತ. ಬದುಕಿನ ನಾನಾ ಗೊಂದಲ ಜಗಳ ರಾದ್ಧಾಂತಗಳಲ್ಲಿ ಪ್ರೀತಿವಿಶ್ವಾಸದ ಹುಯಿಲಿನಲ್ಲಿ ಬದುಕನ್ನು ಕಡೆಯುವ ವರ್ಗ ನಮ್ಮದು. ಜಗತ್ತು ಸತ್ಯವೋ ಮಿಥ್ಯವೋ, ಅದಲ್ಲ ನಮಗೆ ಮುಖ್ಯ. ನಮ್ಮ ಬದುಕನ್ನಾಗಲೀ ನಮ್ಮ ಭಾವನೆಯನ್ನಾಗಲೀ ಈ ಜಗತ್ತನ್ನಾಗಲೀ ಮಿಥ್ಯವೆನ್ನಲು ಮನಬಾರದೆ, ಸತ್ಯವೆನ್ನಲು ಯಾವ ಗ್ಯಾರಂಟಿಯೂ ಇಲ್ಲದೆ ಬದುಕುವ ನಾವು ನಿತ್ಯಾತ್ಮರು. “ಕೇವಲ ಧ್ಯಾನಕ್ಕಾಗಿ’ ತುಡಿವವರಲ್ಲ. ಬದುಕಿನ ಮೂಲಕ ಕೇವಲ ಧ್ಯಾನಕ್ಕೆ ಸಂದು ಹೋದವರು. ಹಿಮಾಲಯಕ್ಕೆ ಓಡಿ ಹೋಗುವವರಲ್ಲ. (ಹಿಮಾಲಯಕ್ಕೆ ಓಡಿಹೋಗಲು ನಮಗೆ ಭಯವೂ ಇದೆ. ಯಾರ ಭಯ ಅಂದರೆ ಸನ್ಯಾಸಿಗಳ ಭಯ. ಅವರಿಗೆ ಮೇನಕೆಯೇ ಬೇಕೆಂದಿದೆಯೆ? ಇಲ್ಲವಲ್ಲ). ಕೆಲಸ ಕೆಲಸ ಕೆಲಸದ ಮೂಲಕ ಬದುಕಿನ ಧ್ಯಾನ ಮಾಡುವವರು. ಆ ರೀತಿಯಲ್ಲಿ ತುಕಾರಾಮನ ಹೆಂಡತಿಯ ವಂಶಸ್ಥರು. ಕತೆ ಗೊತ್ತಷ್ಟೆ? ತುಕಾರಾಮನನ್ನು ಸ್ವರ್ಗಕ್ಕೆ ಒಯ್ಯಲು ದೇವವಿಮಾನ ಬಂತು. ಆತ ಹೆಂಡತಿಯನ್ನು ಕರೆದ. ಆಕೆ ಹೊರಡಲಿಲ್ಲ. ಮಕ್ಕಳನ್ನು ಬಿಟ್ಟು ಬರಲಾರೆ ಎಂದ ಧೀರೆ ಅವಳು. ಹಾಗೆ, ಎಲ್ಲ ರೀತಿಯಲ್ಲಿಯೂ ನಾವು ಸ್ತ್ರೀಸತ್ವದವರು, ನಿಜವಾಗಿಯೂ ಪ್ರಪಂಚದ ಬೆಟರ್‌ಹಾಫ್!
ನಮ್ಮ ನಾಟಕದ ಸದಾರಮೆ ಮುಂತಾದ ಅನೇಕ ಪಾತ್ರಗಳನ್ನು ಕತೆ ಇತಿಹಾಸ ವರ್ತಮಾನದ ನಿಜಘಟನೆಗಳನ್ನೂ ಓದಿದಾಗ ಕೇಳಿದಾಗೆಲ್ಲ ಮತ್ತೆಮತ್ತೆ ಮನಸ್ಸಿಗೆ ತಟ್ಟುವುದು ಹೆಣ್ಣು ತನ್ನ ಬದುಕನ್ನು ಜಾಣ್ಮೆಯಿಂದ ನಿಭಾಯಿಸುವ ಕ್ರಮವೇ. ಆದರೆ, ಇದು ಎಲ್ಲಿಯವರೆಗೆ? ಇನ್ನೂ ಎಷ್ಟು ಕಾಲ?
ಈಗಲೂ ಮಲ್ಲೀಗೆ ಹೂವೇ ಇಲ್ಯಾಕೆ ನಿಂತಿರುವೆ,
ಇಲ್ಯಾಕೆ ನಿಂತಿರುವೆ, ಒಳಹೋಗು,
ಇಲ್ಯಾಕೆ ನಿಂತಿರುವೆ ಒಳಹೋಗು ಮಗಳೇ,
ಎಲ್ಲಾರ ಕಣ್ಣು ನಿನ ಮ್ಯಾಲೆ…
ಎಂಬುದು ಪೂರ್ತಿ ಮಾಯವಾಗಿಲ್ಲ. ಎಲ್ಲಾರ ಎಂದರೆ ಯಾರ? ಹೇಳಲೇಬೇಕಿಲ್ಲ ತಾನೆ?
ನಾವು ಬರಿಯ ಎಚ್ಚರದಿಂದ ನಿಜವಾದ ಜಾಗೃತಿಯ ಕಡೆಗೆ ಸಾಗುವ ಗಳಿಗೆ ಬಂದೇ ಬಿಟ್ಟಿದೆ.
ಕಾಲ ಬದಲಾಗಿದೆ ಎನ್ನುತ್ತೇವೆ, ಆಗಿದೆಯೇ? ಅಥವಾ ರೂಪಾಂತರಗೊಂಡಿದೆಯೆ?
ವೈಕುಂಠದ ಏಳು ಬಾಗಿಲುಗಳು ತೆರೆಯುವುದೆಂದರೆ ಅರಿವಿನ ಬಾಗಿಲುಗಳು ತೆರೆದುಕೊಳ್ಳುತ್ತ ಹೋದಂತೆ. ಆದರೆ, ಹೋಗಿಹೋಗಿ ನಾವು ಅಲ್ಲಿ ಕಾಣುವುದು ಶಯನದಲ್ಲಿರುವ ವಿಷ್ಣು ಮತ್ತು ಅವನ ಕಾಲು ಒತ್ತುವ ಲಕ್ಷ್ಮೀಯ ಚಿತ್ರವಾದರೆ ! ಆ ಚಿತ್ರವನ್ನು ಬದಲಿಸೋಣ. ಹೇಗೆ? ಆ ಚಿತ್ರ ಹೇಗಿರಬೇಕು? ಜೊತೆಜೊತೆ ಕುಳಿತು ಸಲ್ಲಾಪಿಸುವಂತೆ ಇದ್ದರೆ? ಇನ್ನಾದರೂ ನಮ್ಮ ನಮ್ಮ ಇಂಥ ಇಷ್ಟಗಳ ಅನುಸಾರ ಚಿತ್ರವನ್ನೂ ನಡೆಯನ್ನೂ ನುಡಿಯನ್ನೂ ಬರೆದುಕೊಳ್ಳೋಣ. ವೈದೇಹಿ
ಫೊಟೊ : ಶಮಂತ್ ಪಾಟೀಲ್