ಹೊಸದಿಲ್ಲಿ: ಕೌಟುಂಬಿಕ ದೌರ್ಜನ್ಯ ಪ್ರಕರಣದಲ್ಲಿ ಮಹಿಳೆಗೆ ಪರಿಹಾರ ಮೊತ್ತ ನೀಡುವಂತೆ ಮೈದುನನಿಗೂ ಆದೇಶಿಸ ಬಹುದು ಎಂದು ಸುಪ್ರೀಂಕೋರ್ಟ್ ಆದೇಶಿಸಿದೆ. ಕುಟುಂಬದಲ್ಲಿ ಯಾವುದೇ ಪ್ರಾಪ್ತ ವಯಸ್ಕ ಪುರುಷರು ಕೃತ್ಯದಲ್ಲಿ ಭಾಗಿಯಾಗಿದ್ದರೆ ಯಾರಿಗೂ ರಕ್ಷಣೆ ಇಲ್ಲ. ಇದಕ್ಕೆ ಕೌಟುಂಬಿಕ ದೌರ್ಜನ್ಯ ಕಾಯ್ದೆಯಲ್ಲಿ ಅವಕಾಶವಿದೆ ಎಂದು ನ್ಯಾಯಮೂರ್ತಿ ಡಿ.ವೈ. ಚಂದ್ರ ಚೂಡ್ ನೇತೃತ್ವದ ಪೀಠ ಅಭಿಪ್ರಾಯಪಟ್ಟಿದೆ. ಒಂದೇ ಕುಟುಂಬದಲ್ಲಿ ವಾಸಿಸುತ್ತಿದ್ದು, ಮಹಿಳೆಯ ಮೇಲೆ ಯಾವುದೇ ಪುರುಷ ದೌರ್ಜನ್ಯ ನಡೆಸಿದರೂ ಪರಿಹಾರ ಮೊತ್ತ ನೀಡುವಂತೆ ಅವರಿಗೆ ಆದೇಶ ನೀಡಬಹುದು ಎಂದು ಕೋರ್ಟ್ ಹೇಳಿದೆ. ಅಲ್ಲದೆ, ಹರಿಯಾಣ ಹೈಕೋರ್ಟ್ ಈ ಹಿಂದೆ ಆದೇಶಿಸಿದಂತೆ ಮೈದುನನೂ ಮಾಸಿಕ 4 ಸಾವಿರ ರೂ. ಪರಿಹಾರ ಮೊತ್ತ ಪಾವತಿಸುವಂತೆ ಸೂಚಿಸಿದೆ. ತನ್ನ ಸೋದರ ಸಾವನ್ನಪ್ಪಿದ್ದು, ಅತ್ತಿಗೆಗೆ ಪರಿಹಾರ ನೀಡುವುದು ಕಾನೂನಿನ ಪ್ರಕಾರ ಸಾಧ್ಯವಿಲ್ಲ ಎಂದು ದೂರಲಾಗಿತ್ತು. ಆದರೆ ಕಾನೂನಿನಲ್ಲಿ ಇದಕ್ಕೆ ಅವಕಾಶವಿದೆ ಎಂಬ ಕಾರಣ ನೀಡಿ , ಹರ್ಯಾಣ ಕೋರ್ಟ್ ಆದೇಶದ ವಿರುದ್ಧ ಸಲ್ಲಿಸಿದ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ತಳ್ಳಿಹಾಕಿದೆ.