Advertisement
ನಾನು ಹೆದರಿ ಗಡಗಡ ನಡುಗುತ್ತ ಮೂಲೆಯಲ್ಲಿನ ಕಂಬದ ಹಿಂದೆ ಜೀವ ಉಳಿಸಿಕೊಳ್ಳಲು ನಿಂತಿದ್ದೆ. ಈ ಮೂವರ ಉಗ್ರರು ನನ್ನತ್ತ ಬಂದೂಕು ನೆಟ್ಟಿದ್ದರು. ಇನ್ನೇನು ಅವರ ಗುಂಡೇಟಿಗೆ ನಾನು ಹೆಣವಾಗುತ್ತೇನೆ ಎಂದುಕೊಂಡಾಗ ಉಪಾಯವೊಂದು ಮಿಂಚಿನಂತೆ ಹೊಳೆದಿತ್ತು. ನಿರಾಯುಧನಾದ ನಾನು ಯಾವುದೇ ಫೈಟಿಂಗ್ ಮಾಡದೆ, ತತ್‌ಕ್ಷಣ ಭಯೋತ್ಪಾದಕರನ್ನು ಕೊಂದು ಹಾಕಿದೆ.
Related Articles
Advertisement
ನನ್ನ ಮೌನ ಕಂಡು ಮನದೊಡತಿಯು ಯಾಕೆ ಇಷ್ಟು ಗಂಭೀರವಾಗಿದ್ದೀರಿ? ಏನಾಯ್ತು ಎಂದು ಕೇಳಿದಾಗಲೇ ನಾನು ಇಹಲೋಕಕ್ಕೆ ಇಳಿದೆ.
ಏನಿಲ್ಲ ಕಣೆ. ಇವತ್ತು ಮುಂಜಾನೆ ಒಂದು ಕನಸು ಕಂಡೆ ಎನ್ನುತ್ತ ನಾನು ಕಂಡ ಕನಸನ್ನೆಲ್ಲ ನನ್ನ ಹೆಂಡತಿಗೆ ದೀರ್ಘವಾಗಿ ಎಳೆಎಳೆಯಾಗಿ ಬಿಡಿಸಿ ಹೇಳಿದೆ. ಕೊನೆಗೆ ನಾನು ನನ್ನ ಕನಸಿನಲ್ಲಿ ಆ ಮೂವರು ಭಯೋತ್ಪಾದಕರನ್ನು ಹೇಗೆ ಕೊಂದೆ ಎಂಬುದು ಮಾತ್ರ ನೆನಪಿಗೆ ಬರುತ್ತಿಲ್ಲ ಎಂದೆ. ನಿನಗಾದರೂ ಸುಳಿವು ಸಿಕ್ಕಿತಾ ಎಂದು ಆಕೆಯತ್ತ ಪ್ರಶ್ನಾರ್ಥಕವಾಗಿ ನೋಡಿದಾಗ ಮುಗುಳ್ನಕ್ಕ ಆಕೆ, ಹೌದು ರೀ. ಗೊತ್ತು. ನೀವು ಆ ಮೂವರು ಭಯೋತ್ಪಾದಕರನ್ನು ಹೇಗೆ ಕೊಂದಿದ್ದೀರಿ ಎನ್ನುವುದು ನನಗೆ ಚೆನ್ನಾಗಿ ಅರ್ಥವಾಯಿತು ಎಂದಳು.
ಅರೆ, ಹೌದಾ. ಹಾಗಾದ್ರೆ ನೀನೇ ಹೇಳು ಎಂದು ನಾನು ಅಚ್ಚರಿ ಮತ್ತು ಕುತೂಹಲದಿಂದ ಬೇಡಿಕೊಂಡೆ.
ನೀವು ಆ ಮೂವರು ಭಯೋತ್ಪಾದಕರಿಗೆ ಯಾವುದಾದರೊ ಒಂದು ಡಬ್ಟಾ ಜೋಕು ಅಥವಾ ಕೆಟ್ಟದಾದ ಚುಟುಕನ್ನು ಹೇಳಿರಬೇಕು. ಅದನ್ನು ಕೇಳಿ ಅವರಿಗೆ ಅವರೇ ಗುಂಡು ಹೊಡೆದು ಆತ್ಮಹತ್ಯೆ ಮಾಡಿಕೊಂಡ್ರು ಎಂದು ತಾನು ಕಂಡಂತೆ ಸ್ಪಷ್ಟವಾಗಿ ಹೇಳಿಬಿಟ್ಟಳು. ಕೂಡಲೇ ತನ್ನಿಂದೇನೋ ತಪ್ಪಾಯಿತು ಎಂದು ಕೊಂಡು ಗಂಭೀರ ವದನಳಾದ ಅವಳನ್ನು ನೋಡಿ ನನಗೆ ನಗು ತಡೆಯಲಾಗಲಿಲ್ಲ. ಇಬ್ಬರೂ ಮನತುಂಬಿ ನಕ್ಕು ಸಂತೋಷಪಟ್ಟೆವು.
ಕಳೆದ ಒಂದು ವಾರದಿಂದ ಸಾಮಾಜಿಕ ಜಾಲತಾಣ, ಟಿವಿ, ದಿನಪತ್ರಿಕೆಗಳು, ಕ್ಲಬ್ ಹೌಸ್… ಹೀಗೆ ಎಲ್ಲಿ ನೋಡಿದರಲ್ಲಿ ಬರೀ ದಿ ಕಾಶ್ಮೀರ್ ಫೈಲ್ಸ… ಸಿನೆಮಾದ ಬಗ್ಗೆಯೇ ಚರ್ಚೆ, ವಿಮರ್ಶೆ. ಸಾಕಷ್ಟು ಓದಿ, ಕೇಳಿದರೂ ಸಿನೆಮಾ ನೋಡುವ ಕುತೂಹಲಕ್ಕೊಂದು ಕೊನೆ ಸಿಗಲಿಲ್ಲ. ಕೊನೆಗೆ ಎಲ್ಲರಂತೆ ನಾನೂ ಅಮೆರಿಕದ ಅಲ್ಬನಿಯಲ್ಲಿರುವ ರೀಗಲ್ ಥಿಯೇಟರ್‌ನಲ್ಲಿ ದಿ ಕಾಶ್ಮೀರ್ ಫೈಲ್ಸ್ ಸಿನೆಮಾ ನೋಡಿಕೊಂಡು ಬಂದು ಸಂತುಷ್ಟನಾದೆ. ನನ್ನ ಜತೆ ಸಿನೆಮಾ ನೋಡಿದ ಗೆಳೆಯನೊಬ್ಬ ಇಲ್ಲಿಯ ಘಟನೆಗಳು ಬರೀ ಕಾಲ್ಪನಿಕ ಎಂದು ವಾದಿಸಿದ. ಇದಕ್ಕೆ ಪ್ರತಿಯಾಗಿ ಅವನಿಗೆ ನಾನು ಈ ಸಿನೆಮಾದಲ್ಲಿ ಕಾಶ್ಮೀರಿ ಪಂಡಿತರ ಮೇಲೆ ನಡೆದ ಪ್ರತಿಯೊಂದು ಅಮಾನವೀಯ, ಕ್ರೌರ್ಯದ ಘಟನೆಯೂ ಸತ್ಯ ಘಟನೆ ಎಂದು ಹೇಳಿ, ಅದಕ್ಕೆ ಸಂಬಂಧಪಟ್ಟ ಆಧಾರ ಮತ್ತು ಸಾಕ್ಷಿಗಳನ್ನು ಹುಡುಕಿ ಕೊಡುವುದರಲ್ಲಿ ಸಾಕಾಗಿ ಹೋಯಿತು. ಹಗಲಿರುಳು ದಿ ಕಾಶ್ಮೀರ್ ಫೈಲ್ಸ್ ಸಿನೆಮಾದ ಬಗ್ಗೆ ಯೋಚಿಸುತ್ತಿದ್ದ ನನಗೆ ಆ ದಿನ ರವಿವಾರ ಬೆಳಗಿನ ಜಾವ ಕನಸೊಂದು ಬಿದ್ದಿತು.
-ಬೆಂಕಿ ಬಸಣ್ಣ, ನ್ಯೂಯಾರ್ಕ್