Advertisement
ನಾನು ಹುಟ್ಟಿ, ಬೆಳೆದ ಮನೆ, ನಮ್ಮ ಗಿಳಿಯಾರು ಗ್ರಾಮದಲ್ಲಿ ಅತಿ ದೊಡ್ಡ ಮನೆ ಎಂದು ಹೆಸರುವಾಸಿಯಾಗಿತ್ತು. ನಮ್ಮ ಅಜ್ಜ, ನಾಗಪ್ಪ ಐತಾಳರು ನಮ್ಮ ಮನೆಯ ಈಗಿರುವ ಒರಳು ಕೊಟ್ಟಿಗೆ ಇರುವ ಸ್ಥಳದಲ್ಲಿ ಮನೆ ಮಾಡಿದ್ದರಂತೆ. ಅವರು ತೀರಿಕೊಂಡ ಮೇಲೆ, ನಮ್ಮ ತಂದೆಯವರು ದೊಡ್ಡ, ವಿಶಾಲವಾದ ಮನೆಯನ್ನು ನೂರು ವರ್ಷಗಳಿಗೂ ಮುಂಚೆ ಕಟ್ಟಿಸಿದರಂತೆ. ಅದನ್ನು ಕಟ್ಟಿಸಿದ ವರ್ಷ ನನಗೆ ತಿಳಿದಿಲ್ಲ.
ಪಡುಚಾವಡಿಯ ಉತ್ತರಭಾಗದಲ್ಲೊಂದು ಬಾಗಿಲಿದ್ದು, ಅದರ ಹೊರಗೆ ನಮ್ಮ ಚಿಕ್ಕಪ್ಪನ ಬೈಠಕ್ ಸ್ಥಳವಿದ್ದಿತ್ತು. ಇದನ್ನು ನಾವೆಲ್ಲ ಮುಖಾರಿ ಎಂದು ಕರೆಯುತ್ತಿದ್ದೆವು. ಅದಕ್ಕೆ ತಗಲಿಕೊಂಡು, ಉತ್ತರದಲ್ಲೊಂದು ಕೋಣೆ, ದಕ್ಷಿಣದಲ್ಲೊಂದು ಕೋಣೆ. ದಕ್ಷಿಣದ ಕೋಣೆಯನ್ನು ಚಿಕ್ಕಪ್ಪ ಮಲಗುವ ಕೋಣೆಯನ್ನಾಗಿ ಉಪಯೋಗಿಸುತ್ತಿದ್ದರು. ಮುಖಾರಿಯ ಮುಂದೆ ಒಂದು ಸಣ್ಣ ಅಂಗಳ. ಅಲ್ಲಿನ ಪಾಗಾರದಾಚೆಗೆ ಕೆಲವು ಬಳೆಗಾರರ ಮನೆಗಳಿದ್ದುದು ನೆನಪಾಗುತ್ತಿದೆ. ಆದರೆ, ಈ ಮನೆಗಳನ್ನು ಮುಂದೆ ಅಮೃತೇಶ್ವರಿ ದೇವಸ್ಥಾನದ ಬಳಿಗೆ ವರ್ಗಾಯಿಸಿ, ಅಂಗಳವನ್ನು ವಿಸ್ತರಿಸಿದ್ದರು. ಬಳೆಗಾರರ ಮನೆಗಳನ್ನು ಬೇರ್ಪಡಿಸಿದ್ದ ಪಾಗಾರಕ್ಕೆ ತಗುಲಿ, ಸ್ವಲ್ಪ ದಕ್ಷಿಣದಲ್ಲೊಂದು ಹಲಸಿನ ಮರವಿದ್ದ ಜ್ಞಾಪಕವಾಗುತ್ತಿದೆ. ಮುಖಾರಿಯ ತೀರ ದಕ್ಷಿಣದಲ್ಲಿ ಮಾವಿನ ಮರಗಳ ಸಾಲಿದ್ದುದು ನೆನಪಾಗುತ್ತಿದೆ. ಅಲ್ಲಿನ ಮಾವಿನಹಣ್ಣುಗಳು ರುಚಿಕರವಾಗಿದ್ದುವು. ಈಗ, ಮುಖಾರಿ ಮಾಯವಾಗಿದೆ. ಅಲ್ಲದೆ, ವಿಸ್ತರಿಸಿದ ಆ ಅಂಗಳದಲ್ಲಿ ನಮ್ಮ ಕಸಿನ್ ಕುಪ್ಪಣ್ಣಯ್ಯನ ಮನೆಯಿದೆ. ಅವನ ಮನೆಯ ಮುಂದೆ, ಉತ್ತರದಲ್ಲಿ ಒಂದು ಹೆಬ್ಟಾಗಿಲಿದ್ದಿತ್ತು.
Related Articles
Advertisement
ಚಾವಡಿಯ ಗೋಡೆಯಲ್ಲೆರಡು ಕಪಾಟುಗಳು. ಪಡುಬದಿಯ ಕಪಾಟಿನಲ್ಲಿ ನಮ್ಮ ತಂದೆಯವರು ಕೆಲವು ಪುಸ್ತಕಗಳನ್ನಿಡುತ್ತಿದ್ದರು. ಅವುಗಳಲ್ಲೊಂದು , ನಮ್ಮ ತಂದೆಯವರು ಆಗಾಗ ಉಪಯೋಗಿಸುತ್ತಿದ್ದ ಹಳೆಯ ಇಂಗ್ಲಿಷ್-ಕನ್ನಡ ನಿಘಂಟು ಎಂದು ನನ್ನ ನೆನಪು. ತಮ್ಮ ತಂದೆಯವರಿಗೆ ನಸ್ಯ ಸೇದುವ ಒಂದು ಅಭ್ಯಾಸವಿದ್ದಿತ್ತು. ಅವರ ನಸ್ಯದ ಡಬ್ಬವನ್ನು ಈ ಕಪಾಟಿನ ಮೇಲಿನ ಶೆಲ್ಫಿನಲ್ಲಿಡುತ್ತಿದ್ದುದು ನನ್ನ ಸ್ಮರಣೆಯಲ್ಲಿಂದೂ ಉಳಿದಿದೆ. ಕೆಳಗಿನ ಎರಡು ಶೆಲ#… ನಮಗೆ, ಶಾಲಾ ಪುಸ್ತಕಗಳನ್ನಿಡುವ ಜಾಗ. ಚಾವಡಿಯ ಎಡಭಾಗದಲ್ಲೊಂದು ಕೋಣೆ. ಆ ಕೋಣೆಗೆ ಕಿಟಿಕಿಗಳಿಲ್ಲ. ಅದರಲ್ಲಿ ಬೆಲ್ಲ, ಮೆಣಸು ಮುಂತಾದ ಮನೆಗೆ ಉಪಯೋಗವಾಗುವ ಸಾಮಗ್ರಿಗಳನ್ನು ಶೇಖರಿಸುತ್ತಿದ್ದರು. ಅಲ್ಲೊಂದು ಅಗಾಧ ಗಾತ್ರದ ಪತ್ತಾಸು. ಅದರಲ್ಲಿ ಏನಿರುತ್ತಿತ್ತೋ ನನಗೆ ತಿಳಿದಿಲ್ಲ. ಆ ಪತ್ತಾಸು ಎಷ್ಟು ದೊಡ್ಡ ಗಾತ್ರವಾಗಿತ್ತು ಎಂದರೆ, ಪತ್ತಾಸು ಇಟ್ಟ ಮೇಲೆಯೇ ಕೋಣೆಯ ಬಾಗಿಲುಗಳನ್ನು ನಿರ್ಮಿಸಿದ್ದುದು ಎಂದು ಹಿರಿಯರು ಹೇಳಿದುದನ್ನು ನಾನು ಕೇಳಿರುತ್ತೇನೆ. ಚಾವಡಿಯ ಕೆಳಗೆ ಜಗುಲಿ, ಪಾತಾಳಂಕಣ ಉದ್ದಕ್ಕೂ ಹರಡಿದೆ. ಅಲ್ಲಿಂದ ಕೆಳಕ್ಕೆ ವಿಶಾಲ ಅಂಗಳ. ಅಲ್ಲಿಂದ ಚಾವಡಿಗೆ ಬರಲು ನಾಲ್ಕು ಮೆಟ್ಟಲುಗಳು. ಆ ಮೆಟ್ಟಲುಗಳನ್ನು ಆವರಿಸಿ, ಆಚೀಚೆ ಬದಿಗಳಲ್ಲೆರಡು ಅಲಂಕೃತ ದಂಡೆಗಳು. ಆ ದಂಡೆಗಳ ತುದಿಯಲ್ಲಿ ಕುಂಬಳಕಾಯಿಯನ್ನು ಕೆತ್ತಿದ್ದರು. ಚಿಕ್ಕಂದಿನಲ್ಲಿ ಆ ದಂಡೆಯ ಮೇಲೆ ಕುಳಿತು, ತಮ್ಮಂದಿರೊಡನೆ ಕುದುರೆ ಓಡಿಸುವ ಪಂದ್ಯವಾಡಿದ್ದುದರ ಜ್ಞಾಪಕ ಮರುಕಳಿಸುತ್ತಿದೆ.
ಚಾವಡಿಯಿಂದ ಪಡಸಾಲೆಗೆ ಬಂದಲ್ಲಿ, ಪೂರ್ವದಲ್ಲಿ ದೇವರ ಮಂಟಪವಿಟ್ಟ ಒಂದು ಸಾಕಷ್ಟು ದೊಡ್ಡ ಗಾತ್ರದ ದೇವರಗೂಡು. ಅಲ್ಲಿ ನಮ್ಮ ಮನೆ ದೇವರು, ಅಮೃತೇಶ್ವರಿ ಅಮ್ಮನವರ ಬೆಳ್ಳಿಯ ಮುಖವಾಡ ಎದ್ದು ಕಾಣುತ್ತಿತ್ತು. ಈ ಮಂಟಪವನ್ನು ಸ್ನಾನ ಮಾಡಿ, ಮಡಿ ಮಾಡಿಕೊಂಡೇ ಮುಟ್ಟ ಬೇಕು, ವಿನಾ ಎಲ್ಲ ಸಮಯದಲ್ಲೂ ಮುಟ್ಟುವಂತಿಲ್ಲ. ಅಲ್ಲಿರುವ ದೇವರ ವಿಗ್ರಹಗಳಲ್ಲಿ, ಈಶ್ವರ ಲಿಂಗ, ಸಾಲಿಗ್ರಾಮ ಮುಖ್ಯವಾದವು. ಈ ಈಶ್ವರ ಲಿಂಗ, ಮಲಯಾಳದಿಂದ ಬಂದ ಒಬ್ಬ ಯಾತ್ರಿಕ ಕೊಟ್ಟುದು. ಇದರ ಬಗ್ಗೆ ಹಿರಿಯರು ಹೇಳುತ್ತಿದ್ದ ಒಂದು ಸಂಗತಿ ಸ್ವಾರಸ್ಯಕರವಾಗಿದೆ. ಮೊದಲನೆಯ ವಿಶ್ವಯುದ್ಧದ ಸಮಯದಲ್ಲಿ, ಅಕ್ಕಿಯ ಬೆಲೆ ಕುಸಿದು ಹೋಗಿ, ನಮ್ಮ ಹಿರಿಯರು ತುಂಬಾ ಸಾಲಕ್ಕೊಳಗಾಗಿದ್ದರಂತೆ. ಆ ಸಂದರ್ಭದಲ್ಲಿ ಈ ಮಲಯಾಳಿ ಯಾತ್ರಿಕ, ನಮಗೆ ಈ ಶಿವ ಲಿಂಗವನ್ನು ಕೊಟ್ಟಿದ್ದಂತೆ. ಹೆಚ್ಚುಕಡಿಮೆ ಅದೇ ಸಮಯದಲ್ಲಿರಬೇಕು, ಬೇರೊಬ್ಬ (?) ಒಂದು ಬಲಮೂತಿಯ ಒಂದು ಅಪರೂಪದ ಶಂಖವನ್ನೂ ಕೊಟ್ಟಿದ್ದ. ಇವೆರಡೂ ನಮ್ಮ ಮನೆಗೆ ಬಂದಮೇಲೆ, ಅಕ್ಕಿಯ ಬೆಲೆ ಏರಿ, ನಾವು ಸಾಲದಿಂದ ಮುಕ್ತರಾಗಿ, ಪುನಃ ತಲೆ ಎತ್ತುವಂತಾಗಿತ್ತಂತೆ. ಈ ನಂಬಿಕೆಯ ಕಾರಣದಿಂದ ಇವೆರಡೂ ನಮಗೆ ತುಂಬಾ ಅಮೂಲ್ಯವಾದ ನಿಧಿಗಳಾಗಿವೆ. ದೇವರ ಮಂಟಪದ ಗೂಡಿನ ಹೊರಗೆ ಸದಾ ಬೆಳಗುತ್ತಿರುವ ದೊಡ್ಡದೊಂದು ಕಾಲುದೀಪ ಇದೆ. ಆದರೆ, ಅದು ಈಗ ಕೆಲವೇ ಕಾಲ ಬೆಳಗುವ ಚಿಕ್ಕ ಕಾಲುದೀಪವಾಗಿದೆ. ಪಡಸಾಲೆಯ ಉತ್ತರ ದಿಕ್ಕಿನ ಗೋಡೆಯುದ್ದಕ್ಕೂ ನಾಗಂದಿಗೆ ಇದೆ. ಅಲ್ಲಿ, ಎರಡು ಜಾಗಂಟೆ, ಒಂದು ಜೊತೆ ತಾಳ, ಎರಡು ಶಂಖಗಳನ್ನು ಶೇಖರಿಸುತ್ತಿದ್ದರು. ದೇವರ ಮಂಟಪದ ಮುಂದೆ ಎರಡು ದೊಡ್ಡ ಗಂಟೆಗಳನ್ನು ತೂಗಿಸಿದ್ದರು. ದೇವರಪೂಜೆಯಾದ ಮೇಲೆ ಮಂಗಳಾರತಿಯ ಸಮಯದಲ್ಲೂ, ವಿಶೇಷ ದಿನಗಳ- ನವರಾತ್ರಿ, ಕಾರ್ತೀಕ ಸೋಮವಾರ- ಇತ್ಯಾದಿ ಪೂಜೆಯ ಮಹಾಮಂಗಳಾರತಿಯ ಸಮಯದಲ್ಲೂ, ಗಂಟೆ, ಜಾಗಟೆ, ಶಂಖನಾದಗಳು ಮೊಳಗುತ್ತಿರುವಾಗ ಆ ಶಬ್ದ ಊರಿಗೆಲ್ಲ ಕೇಳುತ್ತಿದ್ದಿತ್ತು. ಇವೆಲ್ಲ ಈಗ ಮರೆಯಾಗಿವೆ. ಕಾಲ ಬದಲಾಗಿದೆ. ದೇವರ ಮೇಲಿನ ಭಕ್ತಿ ಮಾಸಿದೆಯೇ ಎಂಬ ಅನುಮಾನ ನನ್ನನ್ನೀಗ ಕಾಡುತ್ತಿದೆ. ಈಗ ನಮ್ಮಲ್ಲಿ, ಒಬ್ಬರು ಪೂಜಾರಿ ಬಂದು ಸದ್ದುಗದ್ದಲಗಳಿಲ್ಲದೆ ಪೂಜೆ ಮುಗಿಸಿ ಹೋಗುತ್ತಾರೆ. ಮೊದಲಿನ ಶಂಖಜಾಗಂಟೆಗಳ ಮೊಳಗು ಈಗಿಲ್ಲ. ನವರಾತ್ರಿ, ಕಾರ್ತೀಕ ಸೋಮವಾರಗಳ ಪೂಜೆಯೂ ಮಾಯವಾಗಿಯೋ ಅಥವಾ ಕಡಿಮೆ ಪ್ರಮಾಣದಲ್ಲಿ ನಡೆಯುತ್ತವೆ. ಬಾಲ್ಯದಲ್ಲಿ ನಾ ಕಂಡ ಆ ಸಂಭ್ರಮವನ್ನು ಎಣಿಸಿಕೊಂಡಾಗ ಮನಸ್ಸು ಅರಳಿದರೂ, ಈಗ ಅವೆಲ್ಲಾ ಮಾಯವಾದುದು ಮನಸ್ಸನ್ನು ಕುಗ್ಗಿಸುತ್ತದೆ.
ಪುಟ್ಟಮ್ಮನ ಕೋಣೆಚಾವಡಿಯಿಂದ ಪಡಸಾಲೆಗೆ ಬರುವ ಕೆತ್ತನೆ ತುಂಬಿದ ದಾರಂದದ ಹೊಸ್ತಿಲು ಸಾಮಾನ್ಯ ಹೊಸ್ತಿಲುಗಳಿಗಿಂತಲೂ ಎತ್ತರವಾಗಿದೆ. ಅದು ಮನೆಯ ಮುಖ್ಯ ಹೊಸ್ತಿಲಾಗಿದ್ದು, ಬೆಳಿಗ್ಗೆ ನನ್ನ ತಾಯಿ ಅದನ್ನು ಶುದ್ಧ ಮಾಡಿ, ರಂಗೋಲೆ ಹಚ್ಚಿ, ಹೊಸ್ತಿಲು ನಮಸ್ಕಾರ ಮಾಡುತ್ತಿದ್ದ ದೃಶ್ಯ ಈಗಲೂ ನನ್ನ ಕಣ್ಮುಂದೆ ಕಟ್ಟುತ್ತಿದೆ. ಅವಳು ಹೇಳುತ್ತಿದ್ದಳು, “ಬೆಳಿಗ್ಗೆ ಭಾಗ್ಯ ಲಕ್ಷ್ಮಿಯನ್ನು ಮನೆಗೆ ಸ್ವಾಗತಿಸುವುದು ನಮ್ಮ ಕರ್ತವ್ಯ. ಅದಕ್ಕಾಗಿಯೇ ನಾವು ಈ ಹೊಸ್ತಿಲು ನಮಸ್ಕಾರ ಕೈಗೊಳ್ಳ ಬೇಕಾದುದು’ ಎಂದು. ನಂಬಿಕೆ ಎನ್ನುವುದು ತುಂಬಾ ವಿಶಿಷ್ಟವಲ್ಲವೆ? ನನ್ನ ತಾಯಿಯಂತೆ ಎಲ್ಲ ತಾಯಂದಿರ ಈ ನಂಬಿಕೆ ನಿಜಕ್ಕೂ ವಿಶೇಷವಾದುದು! ಪಡಸಾಲೆಯ ಪಡುಭಾಗದಲ್ಲೊಂದು ಕೋಣೆ. ಅಲ್ಲಿ ನಮ್ಮ ತಾಯಿ ಬಟ್ಟೆಬರೆಗಳನ್ನು ಶೇಖರಿಸುತ್ತಿದ್ದಳು. ಅಲ್ಲೊಂದು ಕನ್ನಡಿ ಕಪಾಟು ಇರುತ್ತಿತ್ತು. ಪಡಸಾಲೆಯ ಪೂರ್ವಕ್ಕೆ ಒಂದು ಕೋಣೆ. ಅದರ ಪ್ರವೇಶದ ಬಾಗಿಲಿನ ದಾರಂದ ಬಹಳ ತಗ್ಗು. ಆ ಕಾರಣದಿಂದಾಗಿ, ಅದನ್ನು ಪ್ರವೇಶಿಸಬೇಕಾದರೆ, ನಾವೆಲ್ಲರೂ ತಲೆತಗ್ಗಿಸಿಯೇ ಹೋಗಬೇಕಾಗಿತ್ತು. ಎಷ್ಟೋ ಬಾರಿ, ಬಾಗಿಲಿನ ದಾರಂದಕ್ಕೆ ತಲೆ ತಾಗಿ, ಗಾಯ ಮಾಡಿಕೊಂಡ ಅನುಭವಗಳ ನೆನಪಾಗುತ್ತಿದೆ. ಈ ಕೋಣೆಯನ್ನು ಎಲ್ಲರೂ ಪುಟ್ಟಮ್ಮನ ಕೋಣೆ (ಅಥವಾ ಪುಟ್ಟಮ್ಮನ ಒಳಗೆ) ಎಂದು ಕರೆಯುತ್ತಿದ್ದೆವು. ನಮ್ಮಲ್ಲಿ ಅಡುಗೆಗೆ ಸಹಾಯ ಮಾಡಲೆಂದು ಗುಜ್ಜಾಡಿಯಿಂದ ಒಬ್ಬ ಪುಟ್ಟಮ್ಮ ಎಂಬ ಹೆಸರಿನ ಹೆಂಗಸು ಅಲ್ಲಿ ರಾತ್ರಿ ಮಲಗಿಕೊಳ್ಳುತ್ತಿದ್ದುದರ ಕಾರಣ, ಆ ಕೋಣೆಗೆ ಪುಟ್ಟಮ್ಮನ ಒಳಗೆ ಎಂಬ ಹೆಸರು ಬಂದಿತ್ತು. ಈ ಪುಟ್ಟಮ್ಮ ನಮ್ಮ ಮನೆಯಲ್ಲಿ ಕೆಲಸಕ್ಕೆ ಸೇರುವ ಮೊದಲು ಆ ಕೋಣೆಯನ್ನು ಏನಂತ ಕರೆಯುತ್ತಿದ್ದರೋ ತಿಳಿಯೆ. ಅಲ್ಲಿ ಗೋಡೆಯಲ್ಲಿ ನಾಲ್ಕಾರು ಪುಟ್ಟ ಗೂಡುಗಳಿದ್ದುದು ನೆನಪಾಗುತ್ತದೆ. ಆ ಗೂಡೊಂದರಲ್ಲಿ ನಮ್ಮ ತಾಯಿ, ಸ್ನಾನಕ್ಕೆ ತೈಲ ತುಂಬಿದ ಸೀಸೆಯನ್ನೋ, ಕೌಳಿಗೆಯನ್ನೋ ಇಡುತ್ತಿದ್ದುದು ನೆನಪಾಗುತ್ತಿದೆ. ಇಂಥ ಕೌಳಿಗೆಯನ್ನು ಎಣ್ಣೆ ಕೌಳಿಗೆ ಎಂದೇ ಕರೆಯುತ್ತಿದ್ದೆವು. ಕೋಣೆಯ ದಕ್ಷಿಣಭಾಗದಲ್ಲೊಂದು ಕಪಾಟು. ಅದು ನಮ್ಮ ತಾಯಿಯ ಕಪಾಟಾಗಿದ್ದು, ಅದನ್ನು ನಾವೆಲ್ಲರೂ ಚಿಕ್ಕಿ ಕಪಾಟು ಎಂದು ಕರೆಯುತ್ತಿದ್ದೆವು. ನಮ್ಮ ತಾಯಿಯನ್ನು ನಾವೆಲ್ಲ ಚಿಕ್ಕಿ ಎಂದು ಕರೆಯುತ್ತಿದ್ದುದರಿಂದ, ಹೆಚ್ಚಿನವರೆಲ್ಲರೂ ಅವಳನ್ನು ಹಾಗೆಯೇ ಕರೆಯುತ್ತಿದ್ದರು. ಆ ಕಪಾಟಿನಲ್ಲಿ ಚಿಕ್ಕಿ ತನಗೆ ಬೇಕಾದ ಸಾಮಾನುಗಳನ್ನು ಜೋಡಿಸಿಟ್ಟುಕೊಂಡಿರುತ್ತಿದ್ದಳು. ಅದಕ್ಕೆ ಬೀಗವೂ ಇದ್ದಿತ್ತು. ಕಾರಣ, ಅದು ಅವಳು ಚಿಲ್ಲರೆ ಹಣವಿಡುತ್ತಿದ್ದ ತಿಜೋರಿಯೂ ಆಗಿತ್ತೆಂದು ಹೇಳಬಹುದು. ಈಗ ಆ ಕಪಾಟಿನಲ್ಲಿ ಏನಿತ್ತೆಂಬುದನ್ನು ನಾನರಿಯೆ. ಈ ಪುಟ್ಟಮ್ಮನ ಕೋಣೆಯನ್ನು ಎಣಿಸಿಕೊಂಡಾಗಲೆಲ್ಲ ಒಂದು ತಮಾಷೆಯ ಸಂಗತಿ ನೆನಪಿಗೆ ಬರುತ್ತದೆ. ಪುಟ್ಟಮ್ಮ ಒಬ್ಬ ಅರೆ ಸೋಂಕಿನ ಹೆಂಗಸು. ಅಂದರೆ, ಸ್ವಲ್ಪ ಬುದ್ಧಿ ಮಂದ. ನಮ್ಮ ಚಿಕ್ಕಪ್ಪನವರಿಗೆ ಇಂಥ ಅರೆಸೋಂಕಿನವರನ್ನು ಕೆದಕಿ, ಒಂದು ರೀತಿಯ ಮನೋರಂಜನೆ ಪಡೆಯುವುದೆಂದರೆ ಬಲು ಇಷ್ಟ. ಆ ಕಾಲದಲ್ಲಿ ನಮ್ಮ ಚಿಕ್ಕಪ್ಪ ಅಮೃತೇಶ್ವರಿ ದೇವಸ್ಥಾನದ ಮೊಕ್ತೇಸರರಾಗಿದ್ದರು. ಅಮೃತೇಶ್ವರಿ ಯಕ್ಷಗಾನ ಮೇಳದ ವೇಷ-ಭೂಷಣಗಳ ರಿಪೇರಿ ಕೆಲಸ ನಮ್ಮ ಮನೆಯಲ್ಲೇ ನಡೆಯುತ್ತಿದ್ದುವು. ನಮ್ಮ ಚಿಕ್ಕಪ್ಪ ಪುಟ್ಟಮ್ಮನಿಗೆ ಯಕ್ಷಗಾನದ ಉಡುಗೆಗಳನ್ನು ತೊಡಿಸಿ, ಕುಣಿಯಲು ಹೇಳುತ್ತಿದ್ದರು. ಈ ಪುಟ್ಟಮ್ಮ, ನಮ್ಮ ಚಿಕ್ಕಪ್ಪನ ತಮಾಷೆಯನ್ನು ಅರ್ಥಮಾಡಿಕೊಳ್ಳಲಾರದೆ, ಅವರು ಹೇಳಿದಂತೆ ಕುಣಿಯುತ್ತಿದ್ದಾಗ, ಅದು ನಮ್ಮ ಚಿಕ್ಕಪ್ಪನಿಗೆ ತುಂಬಾ ಮನೋರಂಜಕವಾಗುತ್ತಿತ್ತು. ಅದನ್ನು ನೋಡಿ ನಾನು ಬಹಳ ಖುಷಿಪಡುತ್ತಿದ್ದೆ. ಕೆಲವೊಮ್ಮೆ, ನಾನೂ ಹಿರಿಯರು ಎದುರಿಗಿಲ್ಲದಿರುವಾಗ ಪುಟ್ಟಮ್ಮನನ್ನು ಕುರಿತು, “ಪುಟ್ಟಮ್ಮಾ, ಒಂದು ಶೂರ್ಪನಖೀಯ ಕುಣಿತ ಹಾಕಿ’ ಎಂದು ತಮಾಷೆ ಮಾಡುತ್ತಿದ್ದೆ. ಕೆಲವು ಬಾರಿ ಅವರು ಕುಣಿಯುತ್ತಲೂ ಇದ್ದರು. ಈಗ ಅದನ್ನೆಲ್ಲ ಎಣಿಸಿಕೊಂಡಲ್ಲಿ ಪುಟ್ಟಮ್ಮನ ಮೇಲೆ ಕನಿಕರ ಹುಟ್ಟುತ್ತಿದೆ. ಅಡುಗೆ ಕೋಣೆ
ಪುಟ್ಟಮ್ಮನ ಕೋಣೆಯಿಂದ ಪೂರ್ವಕ್ಕೆ ಮೆಟ್ಟಿಲಿಳಿದು ಬಂದರೆ ಸಿಗುವುದು ಅಡುಗೆಮನೆ. ಅದನ್ನು ಈ ಮೊದಲು ಒಂದು ಬದಲಿ ಅಡುಗೆ ಮನೆಯಾಗಿ ಉಪಯೋಗಿಸುತ್ತಿದ್ದರು. ಮುಖ್ಯ ಅಡುಗೆಮನೆ ಅಲ್ಲಿಂದ ಇನ್ನಷ್ಟು ಮೂಡು ದಿಕ್ಕಿನಲ್ಲಿರುತ್ತಿತ್ತು. ಆದರೆ, ಈಗ ಆ ಮುಖ್ಯ ಅಡುಗೆಮನೆಯನ್ನು ಅಳಿದು, ಈ ಬದಲಿ ಅಡುಗೆಮನೆಯನ್ನೇ ಇನ್ನಷ್ಟು ವಿಸ್ತರಿಸಿ, ಅದನ್ನೇ ಮುಖ್ಯ ಅಡುಗೆಮನೆಯನ್ನಾಗಿ ಉಪಯೋಗಿಸುತ್ತಿದ್ದಾರೆ. ನನ್ನ ಬಾಲ್ಯದಲ್ಲಿ ಈ ಬದಲಿ ಅಡುಗೆಮನೆಯಲ್ಲಿ ಕೆಲವು ತಿಂಡಿಪದಾರ್ಥಗಳನ್ನು ತಯಾರಿಸಲು ಮಾತ್ರ ಉಪಯೋಗಿಸುತ್ತಿದ್ದುದರ ನೆನಪಾಗುತ್ತಿದೆ. ಈ ಬದಲಿ ಅಡುಗೆಮನೆಯನ್ನು ನೆನೆದಾಗಲೆಲ್ಲ ನನಗೆ ನನ್ನ ಸೋದರತ್ತೆ, ನಮ್ಮ ತಂದೆಯವರ ಅಕ್ಕ, ಸಿಂಗಾರಮ್ಮನವರ ಜ್ಞಾಪಕವಾಗುತ್ತಿದೆ. ಅವರು ಸೇರಿದ ಅವರ ಗಂಡನ ಮನೆಯ ಊರು, ನಮ್ಮೂರಿಗೆ ಮೂರ್‍ನಾಲ್ಕು ಮೈಲಿ ದೂರದ, ಬಾರಕೂರು. ಹಾಗಾಗಿ, ನಾವೆಲ್ಲ ಅವರನ್ನು ಬಾರಕೂರತ್ತೆ ಎಂತಲೇ ಕರೆಯುತ್ತಿದ್ದೆವು. ಅವರು ನಮ್ಮ ತಂದೆಯವರಿಗಿಂತ 8-10 ವರ್ಷ ದೊಡ್ಡವರು. ತಂದೆಯವರು ಅವರನ್ನು ಅಕ್ಕಯ್ಯ ಎಂದು ಕರೆಯುತ್ತಿದ್ದರು. ಈ ಬಾರಕೂರತ್ತೆ ತವರಿಗೆ ಆಗಾಗ ಬರುತ್ತಿದ್ದು, ಅವರು ಬಂದಾಗಲೆಲ್ಲ ನಾನಂತೂ ತುಂಬಾ ಭಯಪಡುತ್ತಿದ್ದೆ. ಕಾರಣ, ಅವರು ತುಂಬಾ ಶಿಸ್ತಿನವರು. ಅವರ ಮಾತೂ ಏರಿದ ಸ್ವರದಲ್ಲಿದ್ದು, ಅವರು ಏನು ಮಾತಾಡಿದರೂ, ಗದರಿಸುತ್ತಿರುವರೇ ಎಂಬ ಅನುಮಾನ ಬರುತ್ತಿತ್ತು. ಈ ಅಡುಗೆ ಮನೆಯ ಉತ್ತರಭಾಗದ ಮೂಲೆಯಲ್ಲಿ ನಮ್ಮ ಊಟದ ತಟ್ಟೆಗಳನ್ನಿಡುತ್ತಿದ್ದ ಗೂಡೊಂದು ಇದ್ದಿತ್ತು. ಊಟಕ್ಕೆ ನಮ್ಮ ಮನೆಯಲ್ಲಿ ಮನೆಯ ಮಕ್ಕಳೂ ಮತ್ತು ನಮ್ಮಲ್ಲಿ ಊಟಮಾಡಿಕೊಂಡು ಶಾಲೆಗೆ ಹೋಗುತ್ತಿದ್ದ ಹುಡುಗರನ್ನೂ ಸೇರಿಸಿ, ಸುಮಾರು ಡಜನ್ನಿಗೂ ಮಿಕ್ಕಿ ಮಕ್ಕಳಿರುತ್ತಿದ್ದರು. ದಿನಕ್ಕೊಬ್ಬರು ಊಟಕ್ಕೆ ತಟ್ಟೆ ಇಡಬೇಕೆಂಬ ಸಂಪ್ರದಾಯವೊಂದಿತ್ತು. ಒಮ್ಮೆ, ಬೆಳಗಿನ ಗಂಜಿ ಊಟಕ್ಕೆ ತಟ್ಟೆ ಇಡುವ ಸರದಿ ನನ್ನದಾಗಿತ್ತು. ತಟ್ಟೆ ಇಡುವ ಮೊದಲು, “ಊಟಕ್ಕಾಯ್ತು’ ಎಂದು ಕೂಗಿ ಹೇಳಿ, ತಟ್ಟೆಯನ್ನಿಟ್ಟೆ. ನಮ್ಮ ತಾಯಿ, ಹುಡುಗರೆಲ್ಲ ತಟ್ಟೆ ಮುಂದೆ ಕುಳಿತುಕೊಳ್ಳಲು ಸ್ವಲ್ಪ ಸಮಯ ನೀಡಿದ್ದಳು. ಆದರೆ, ಕೆಲವರು ಶಾಲಾ ಹೋಮ್‌ವ ರ್ಕ್ ಮಾಡುವ ತರಾತುರಿಯಲ್ಲೋ, ಅಥವಾ ಆಟದಲ್ಲಿ ನಿರತರಾಗಿರುತ್ತಲೋ ಬಾರದೇ ಹೋಗಿದ್ದರು. ಹಾಗೆ ಸ್ವಲ್ಪ ಹೊತ್ತು ಕಾದು, ಅವರು ಬಾರದಿದ್ದುದನ್ನು ನಮ್ಮ ತಾಯಿ ಗಮನಿಸಿ, ಇದ್ದ ತಟ್ಟೆಗೆಲ್ಲ, ಗಂಜಿ, ಉಪ್ಪಿನಕಾಯಿ, ಮೊಸರನ್ನು ಬಡಿಸಿ, ತನ್ನ ಮುಂದಿನ ಕೆಲಸಕ್ಕೆ ತೊಡಗಿಸಿಕೊಂಡಳು. ನಾನು ಮತ್ತು ಊಟಕ್ಕೆ ಬಂದ ಕೆಲವರು ನಮ್ಮ ಊಟ ಮುಗಿಸಿ, ತಟ್ಟೆ ತೊಳೆದು ಅದನ್ನು ಗೂಡಿನಲ್ಲಿಡುತ್ತಾ, “ಉಂಡಾಯ್ತು…’ ಎಂದು ಅನೌಮಾಡಿದಾಗ, ಸಮಯಕ್ಕೆ ಸರಿಯಾಗಿ ಊಟಕ್ಕೆ ಬಾರದ ಹುಡುಗರು ಓಡೋಡಿ ಬಂದಿದ್ದರು. ನನ್ನ ತಾಯಿ ಆಗ ಆ ಹುಡುಗರನ್ನು ಕುರಿತು, ಸಮಯಕ್ಕೆ ಸರಿಯಾಗಿ ಊಟಕ್ಕೆ ಬರಬೇಕೆಂದು ಬುದ್ಧಿ ಹೇಳಿದ್ದಳು. ಈ ಘಟನೆ ಅದ್ಯಾಕೋ ನನಗೆ ಆ ಊಟದ ತಟ್ಟೆಯ ಗೂಡಿನೊಂದಿಗೆ, ಆಗಾಗೆ ನೆನಪಿಗೆ ಬರುತ್ತಲೇ ಇದೆ. ಈ ಊಟದ ತಟ್ಟೆಯ ಗೂಡಿನ ಪಕ್ಕದಲ್ಲಿ ಪೂರ್ವಕ್ಕೆ ಬಂದಲ್ಲಿ, ಗಂಜಿ ಕೋಣೆ ಸಿಗುತ್ತದೆ. ನಮ್ಮಲ್ಲಿ ಶಾಲಾ ಮಕ್ಕಳಿಗೆಲ್ಲ ಬೆಳಗಿನ ಉಪಹಾರ, ಕುಸುಬಲಕ್ಕಿ ಗಂಜಿ. ಗಂಜಿ ತಯಾರಿಸಲೆಂದೇ ಈ ಕಿರು ಕೋಣೆಯ ನಿರ್ಮಾಣ. ಅಲ್ಲದೆ ಈ ಕೋಣೆಯಲ್ಲೇ ಅಕ್ಕಿ ಹಪ್ಪಳ, ದೊಡ್ಡಣ ಇತ್ಯಾದಿಗಳನ್ನು ತಯಾರಿಸಲು ಉಪಯೋಗಿಸುತ್ತಿದ್ದರು. ಅಲ್ಲದೆ, ನಮಲ್ಲಿನ ಕೆಲವು ವಿಶೇಷ ಸಂರ್ಭಗಳಲ್ಲಿ- ಉದಾಹರಣೆಗೆ, ಶ್ರಾದ್ಧ, ಮಹಾಲಯ ಇತ್ಯಾದಿ- ಅಡುಗೆ ಭಟ್ಟರ ಸಹಾಯಕರು ಸಣ್ಣಪುಟ್ಟ ಕೆಲಸಗಳಿಗಾಗಿ (ಉದಾಹರಣೆಗೆ, ತರಕಾರಿ ಹೆಚ್ಚುವುದು) ಈ ಕೋಣೆಯನ್ನು ಉಪಯೋಗಿಸುತ್ತಿದ್ದರು. ಆ ಕೋಣೆಗೆ ತಗುಲಿ ತೆಂಕು ದಿಕ್ಕಿನಲ್ಲಿ ಬಾವಿಕಟ್ಟೆ ಅದಕ್ಕೆ ತಗುಲಿ ಪಶ್ಚಿಮಕ್ಕೆ ಬಚ್ಚಲು ಮನೆ. ಬಾವಿಕಟ್ಟೆ, ಬಚ್ಚಲು ಮನೆಗೆ, ಗಂಜಿ ಮನೆಯಿಂದ ಮೆಟ್ಟಿಲಿಳಿದು ದಕ್ಷಿಣಕ್ಕೆ ತಿರುಗಬೇಕು. ಬಾವಿಗೆ ನೀರು ಸೇದಲು ರಾಟೆ. ಅದರ ಮುಂದೆ ಒಂದು ವಿಸ್ತಾರವಾದ (ಸುಮಾರು 6.5′ x 10.5′) ಹಾಸುಗಲ್ಲು. ಅಷ್ಟು ದೊಡ್ಡ ಹಾಸುಗಲ್ಲನ್ನು ಪ್ರಾಯಶಃ ನಮ್ಮ ಮನೆಯ ಪೂರ್ವಕ್ಕಿರುವ ಕಲ್ಲಟು ಗುಡ್ಡೆಯಿಂದ ಕಲ್ಲೊಡೆಯುವ ನಿಪುಣರನ್ನು ಉಪಯೋಗಿಸಿ ಪಡೆದು, ಮನೆಗೆ ಸಾಗಿಸಿರ ಬಹುದು. ಬಾವಿಕಟ್ಟೆಯ ಪಶ್ಚಿಮಕ್ಕೆ ಬಚ್ಚಲು ಮನೆ. ಸ್ನಾನ ಮಾಡಲು ಬಚ್ಚಲು ಹೊಂಡವಿದ್ದಿತ್ತು, ಸ್ನಾನಕ್ಕೆ ಬಿಸಿನೀರು ಕಾಯಿಸಲೊಂದು ಬಹಳಷ್ಟು ದೊಡ್ಡ ಗಾತ್ರದ ಹಂಡೆ, ಬಟ್ಟೆ ಬದಲಾಯಿಸಲು ಸಾಕಷ್ಟು ವಿಸ್ತಾರವಾದ ಸ್ಥಳ. ಚಿಕ್ಕಂದಿನಲ್ಲಿ ನಾನು ನನ್ನ ತಮ್ಮಂದಿರನ್ನು ಕೂಡಿಕೊಂಡು ಬಚ್ಚಲು ಒಲೆಯ ಮುಂದೆ ಚಳಿಗಾಲದಲ್ಲಿ ಮೈ ಕಾಯಿಸುತ್ತ, ಹುಲ್ಲು ಕಡ್ಡಿಗಳಿಗೆ ಬೆಂಕಿ ತಗುಲಿಸಿ, ಸಿಗರೇಟು ಸೇದುತ್ತಿದ್ದೇವೆಂಬ ಆಟವಾಡಿದ ದಿನಗಳ ನೆನಪಾಗುತ್ತಿದೆ. ಹಾಗೆ ಹೊಗೆ ಸೇದಿ ಕೆಮ್ಮು ತ್ತಿದ್ದುದೇ ನಮಗೊಂದು ಮಜಾವಾಗಿತ್ತು. ನಾಗ ಐತಾಳ