ಹರಿಯಾಣ : “ಇವರು ಗೋಮಾಂಸ ತಿನ್ನುವವರು; ಇವರ ಮೇಲೆ ದಾಳಿ ಮಾಡಿ ಎಂದು ನನ್ನ ಸ್ನೇಹಿತರು ಹೇಳಿದರು; ನಾನು ಕುಡಿದಿದ್ದೆ, ಅವರಂದಂತೆ ಮಾಡಿದೆ’ ಎಂದು ನಿನ್ನೆ ಗುರುವಾರ ಸಂಜೆ ರೈಲಿನಲ್ಲಿ 16ರ ಹರೆಯದ ಮುಸ್ಲಿಂ ಹುಡುಗನನ್ನು ಚಚ್ಚಿ ಕೊಂದ ಬಂಧಿತ ಆರೋಪಿ ಪೊಲೀಸರಲ್ಲಿ ಹೇಳಿದ್ದಾನೆ.
ಸದರ್ ಬಜಾರ್‌ನಲ್ಲಿ ನಿನ್ನೆ ಗುರುವಾರ ಸಂಜೆ ಈದ್ ಶಾಪಿಂಗ್ ಮುಗಿಸಿ ಹರಿಯಾಣದ ವಲ್ಲಭಗಢದಲ್ಲಿನ ತಮ್ಮ ಮನೆಗೆ ಹೋಗಲು ಮಥುರೆಗೆ ಹೋಗುತ್ತಿದ್ದ ರೈಲಿನಲ್ಲಿ ಪ್ರಯಾಣಿಸುತ್ತಿದ್ದ ವೇಳೆ ಗುಂಪೊಂದು ನಾಲ್ವರು ಮುಸ್ಲಿಂ ಸಹೋದರರ ಮೇಲೆ ಹಲ್ಲೆ ಮಾಡಿತ್ತು. ಅವರ ಪೈಕಿ 16ರ ಹರೆಯದ ಹುಡುಗನನ್ನು ಉದ್ರಿಕ್ತರು ಚಚ್ಚಿ ಕೊಂದಿದ್ದರು.
ಮಥುರೆಗೆ ಹೋಗುತ್ತಿದ್ದ ರೈಲು Okhla ಸ್ಟೇಶನ್ ದಾಟಿದಾಗ ಸೀಟಿಗಾಗಿ ಜಗಳ ನಡೆದಿತ್ತು. ಬೇಗನೆ ಅದು ಕೋಮು ಜಗಳವಾಗಿ ಪರಿವರ್ತಿತವಾಯಿತು. ಆಗ ಉದ್ರಿಕ್ತ ಗುಂಪು ಮುಸ್ಲಿಂ ಸಹೋದರರನ್ನು “ದೇಶ ವಿರೋಧಿಗಳು’, “ಗೋಮಾಂಸ ಭಕ್ಷಕರು’ ಎಂದು ನಿಂದಿಸುವ ಘೋಷಣೆಗಳನ್ನು ಕೂಗಿತು. ಮುಸ್ಲಿಂ ಸಹೋದರರು ತೊಟ್ಟಿದ್ದ ತಲೆ-ಟೋಪಿಯನ್ನು ನೆಲಕ್ಕೆ ಎಸೆದ ಉದ್ರಿಕ್ತರು, ಅವರನ್ನು ಮುಲ್ಲಾ ಎಂದು ಕರೆದು ಪದೇ ಪದೇ ಚೂರಿಯಿಂದ ಇರಿದರು ಎನ್ನಲಾಗಿದೆ.
ಮಾರಣಾಂತಿಕ ಹಲ್ಲೆಗೆ ಗುರಿಯಾಗಿದ್ದ ನಾಲ್ವರು ಮುಸ್ಲಿಂ ಸಹೋದರರ ಪೈಕಿ 16ರ ಹರೆಯದ ಬಾಲಕ ಜುನೇದ್ ಮೃತಪಟ್ಟಿದ್ದ; ಉಳಿದ ಮೂವರಿಗೆ ಗಂಭೀರ ಗಾಯಗಳಾಗಿದ್ದವು. ಈ ಘಟನೆಗೆ ಸಂಬಂಧಿಸಿ ತಾವು ಒಬ್ಟಾತ ಆರೋಪಿಯನ್ನು ಬಂಧಿಸಿದ್ದೇವೆ ಎಂದು ಪೊಲೀಸರು ಹೇಳಿದ್ದಾರೆ.
ಬಾಲಕ ಜುನೇದ್ ಹತನಾದ ಸುದ್ದಿ ಕೇಳಿ ಹರಿಯಾಣದ ಫರೀದಾಬಾದ್ ಜಿಲ್ಲೆಯ ಖದ್ದಾವಲೀ ಗ್ರಾಮದಲ್ಲಿನ ಆತನ ಮನೆಯವರು ತೀವ್ರ ಆಘಾತಗೊಂಡಿದ್ದಾರೆ. ತಮ್ಮ ಮಕ್ಕಳ ಮೇಲೆ ಮಾರಣಾಂತಿಕ ಹಲ್ಲೆಯನ್ನು ನೋಡಿಯೂ ನೋಡದಂತೆ ಮಾಡಿದ ಸಹ ಪ್ರಯಾಣಿಕರ ವರ್ತನೆ ಜುನೇದ್ ಮನೆಯವರಿಗೆ ಇನ್ನಷ್ಟು ಆಘಾತ ಉಂಟುಮಾಡಿದೆ.