Advertisement

ಮೈ ಮರೆತರೆ ಸಂವಿಧಾನ ಬದಲಾವಣೆ: ಸಿದ್ದರಾಮಯ್ಯ

01:17 AM Jul 03, 2019 | Lakshmi GovindaRaj |

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ಸತತ ಎರಡನೇ ಬಾರಿಗೆ ಪ್ರಧಾನಿ ಗದ್ದುಗೆ ಏರಿರುವುದು. ನಾನು ಈ ಹಿಂದೆ ಮುಖ್ಯಮಂತ್ರಿಯಾಗಿ ಆಡಳಿತ ನಡೆಸಿರುವುದು ಸಂವಿಧಾನ ಶಿಲ್ಪಿ ಅಂಬೇಡ್ಕರ್‌ ಅವರು ನೀಡಿದ ಸಂವಿಧಾನದಿಂದಲೇ ಎಂಬುವುದನ್ನು ಸಂವಿಧಾನ ಬದಲಾವಣೆ ಬಗ್ಗೆ ಮಾತನಾಡುವವರು ಮರೆಯಬಾರದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.

Advertisement

ರಾಜ್ಯ ಎಸ್ಸಿ,ಎಸ್ಟಿ ಗುತ್ತಿಗೇದಾರರ ಸಂಘ ಮಂಗಳವಾರ ಪುರಭವನದಲ್ಲಿ ಹಮ್ಮಿಕೊಂಡಿದ್ದ “ರಾಜ್ಯಮಟ್ಟದ ಸಮಾವೇಶ ‘ಹಾಗೂ “ಮಿಲ್ಲರ್‌ ಕಮಿಷನ್‌ ವರದಿಯ ಶತಮಾನೋತ್ಸವ’ ಸಮಾರಂಭದಲ್ಲಿ ಮಾತನಾಡಿದ ಅವರು, ನಾವೆಲ್ಲಾ ಮೈಮರೆತು ಕುಳಿತರೆ, ಕೆಲವರು ಸದ್ದಿಲ್ಲದೆ ಸಂವಿಧಾನವನ್ನು ಬದಲಾವಣೆ ಮಾಡಿಬಿಡುತ್ತಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದರು.

ಸಂವಿಧಾನದಲ್ಲಿ ನ್ಯೂನತೆಗಳು ಇದ್ದರೆ ಎದನ್ನು ಎತ್ತಿತೋರಿಸಲಿ. ಅದನ್ನು ಬಿಟ್ಟು ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡುವುದು ಎಷ್ಟು ಸರಿ?. ಕೆಲವು ಸಮಾಜಘಾತುಕ ಶಕ್ತಿಗಳಿಗೆ ಸಮಾಜದ ಬದಲಾವಣೆ ಬೇಕಾಗಿಲ್ಲ. ಬಡವರು ಬಡವರಾಗಿಯೇ ಉಳಿಯಬೇಕು ಎಂಬುವುದೇ ಅವರ ಉದ್ದೇಶವಾಗಿದೆ ಎಂದು ಹೇಳಿದರು.

ಸಂವಿಧಾನದ ಬದಲಾವಣೆ ಬಗ್ಗೆ ಮಾತನಾಡುತ್ತಿದ್ದಾರೆ. ಈ ದೃಷ್ಟಿಯಿಂದಲೇ ನಾನು, ಈ ಹಿಂದೆ ಸಂವಿಧಾನ ಬದಲಾವಣೆಗೆ ಕೈ ಹಾಕಿದರೆ ಈ ದೇಶದಲ್ಲಿ ರಕ್ತಪಾತವಾಗುತ್ತದೆ ಎಂದು ಹೇಳಿದ್ದೆ ಎಂದರು. ಬುದ್ಧ, ಬಸವ ಹಾಗೂ ಅಂಬೇಡ್ಕರ್‌ ಅವರುಗಳು ಸಮಾನತೆಗಾಗಿ ಹೋರಾಟ ನಡೆಸಿದರು. ಎಲ್ಲಾ ವರ್ಗದ ಏಳ್ಗೆಯ ಕನಸು ಕಂಡರು. ಆದರೆ ಇಂದಿಗೂ ಜಾತಿ ವ್ಯವಸ್ಥೆ ಹಾಗೆಯೇ ಇದೆ. ರಾಜಕೀಯ, ಆರ್ಥಿಕ ಹಾಗೂ ಸಾಮಾಜಿಕ ಸ್ವಾತಂತ್ರ್ಯ ದೊರೆಯದೆ ಇದ್ದರೆ ಜಾತಿ ವ್ಯವಸ್ಥೆ ಆಳಿಯುವುದಿಲ್ಲ ಎಂದು ತಿಳಿಸಿದರು.

ಈ ಹಿಂದೆ ಸುಪ್ರೀಂ ಕೋರ್ಟ್‌ ಪವಿತ್ರಾ ಪ್ರಕರಣದ ಸಂಬಂಧ ತೀರ್ಪು ನೀಡಿದಾಗ ಹಲವರು ಹಿಂಬಡ್ತಿಗೆ ಒಳಗಾದರು. ಆ ಹಿನ್ನೆಲೆಯಲ್ಲಿ ಸಾಮಾಜಿಕ ನ್ಯಾಯ ಕಾಪಾಡಲು ನಾನು ಮುಂದಾದೆ. ಕಾನೂನಿನ ಬಗ್ಗೆ ಅರಿವಿದ್ದ ಹಿನ್ನೆಲೆಯಲ್ಲಿ ಈ ಬಗ್ಗೆ ಸಂವಿಧಾನ ಬದ್ಧವಾದ ಕಾನೂನು ರೂಪಿಸಿದೆ. ಇದನ್ನು ಸುಪ್ರೀಂ ಕೋರ್ಟ್‌ ಕೂಡ ಎತ್ತಿಹಿಡಿಯಿತು. ಇಂತಹ ಕಾನೂನನ್ನು ಯಾವ ರಾಜ್ಯಗಳು ಕೂಡ ರೂಪಿಸಿ ಜಾರಿಗೆ ತಂದಿಲ್ಲ. ಇದು ನಮ್ಮ ಸರ್ಕಾರದ ಕೊಡುಗೆ ಎಂದು ಹೇಳಿದರು.

Advertisement

ಆಗ್ರಹ: ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಈ ವರ್ಗದವರ ಕಲ್ಯಾಣಕ್ಕಾಗಿಯೆ ಸರ್ಕಾರ ಸುಮಾರು 30 ಸಾವಿರ ಕೋಟಿ.ರೂ. ಮೀಸಲಿಟ್ಟಿದೆ. ಆದರೆ ಕೇಂದ್ರ ಸರ್ಕಾರ ಈ ವರ್ಗಕ್ಕೆ ಕೇವಲ 50 ಸಾವಿರ ಕೋಟಿ ರೂ. ಅಷ್ಟೇ ತೆಗೆದಿಟ್ಟಿದೆ.

ಇದಕ್ಕೆ ಹೋಲಿಕೆ ಮಾಡಿ ನೋಡಿದಾಗ ರಾಜ್ಯ ಸರ್ಕಾರ ಕೊಡುಗೆ ಸ್ಮರಿಸಿಕೊಳ್ಳುವಂತಹದ್ದು ಎಂದು ಹೇಳಿದರು. ಮಾಜಿ ಸಚಿವ ಎಚ್‌.ಆಂಜನೇಯ, ಮಾಜಿ ಸಂಸದರಾದ ಆರ್‌.ದ್ರುವನಾರಾಯಣ್‌, ಚಂದ್ರಪ್ಪ, ರಾಜ್ಯ ಎಸ್ಸಿ,ಎಸ್ಟಿ ಗುತ್ತೆದಾರರ ಸಂಘದ ಅಧ್ಯಕ್ಷ ಮಹಾದೇವ ಸ್ವಾಮಿ ಉಪಸ್ಥಿತರಿದ್ದರು.

1 ಕೋಟಿ ರೂ.ಗೆ ಏರಿಕೆ ಭರವಸೆ: ನಾನು, ಈ ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಪರಿಶಿಷ್ಟ ಜಾತಿ ಮತ್ತು ಪಂಗಡದ ಗುತ್ತಿಗೆದಾರರಿಗೆ ಕೆಟಿಪಿಪಿ ಕಾಯಿದೆ ಅನ್ವಯ ನೀಡುವ ಗುತ್ತಿಗೆ ಮಿತಿಯನ್ನು 50 ಲಕ್ಷ ರೂ.ನಿಂದ 1 ಕೋಟಿ ರೂ.ಗೆ ಏರಿಕೆ ಮಾಡುವ ತೀರ್ಮಾನ ಕೈಗೊಳ್ಳಲಾಗಿತ್ತು. ಆದರೆ ಅದು ಇನ್ನೂ ಜಾರಿಗೆ ಬಂದಿಲ್ಲ. ಈ ಬಗ್ಗೆ ಸಂಬಂಧಪಟ್ಟವರೊಂದಿಗೆ ಮಾತನಾಡಿ, ಕಾಯಿದೆ ಜಾರಿಗೊಳಿಸುವುದಾಗಿ ಇದೇ ವೇಳೆ ಸಿದ್ದರಾಮಯ್ಯ ಅವರು ಭರವಸೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next