Advertisement

ಪ್ರಥಮ ಆಶಾ ಕಿರಣ

01:23 PM Jan 30, 2018 | |

ಆಡಿಕೊಂಡವರ ಮಾತಿಗೆ “ಬ್ರೇಕ್‌’ ಬಿತ್ತು!
ಎಲ್ಲದಕ್ಕೂ ಕಾಲ ಕೂಡಿ ಬರಬೇಕು ಎಂಬ ಮಾತಿಗೆ ನಾನೇ ಉದಾಹರಣೆ. ನನ್ನ ಬಾಲ್ಯದ ಸ್ನೇಹಿತರು, ಜೊತೆ ಓದಿದ ಗೆಳೆಯರೆಲ್ಲರೂ ಸಿಕ್ಕ ಅವಕಾಶವನ್ನು ಬಿಡದೆ ತಮ್ಮ ಕಾಲ ಮೇಲೆ ತಾವು ನಿಂತುಕೊಂಡರು. ನನಗಿಷ್ಟದ ಕೆಲಸ ಸಿಗುವವರೆಗೆ ಸಿಕ್ಕ ಕೆಲಸ ಮಾಡುವುದನ್ನು ಬಿಟ್ಟು, ಸುಮ್ಮನೆ ಮನೆಯಲ್ಲಿ ಕಾಲ ಕಳೆಯುತ್ತಿದ್ದೆ. ಅಮ್ಮ, ಅಣ್ಣ, ಗೆಳೆಯರು, ಸಂಬಂಧಿಕರು ಬೇಕಾದಷ್ಟು ಅವಮಾನ ಮಾಡಿದರು. ಆಗ ಕೆಲವರು, “ನೀನು ಚೆಂದ ಇದ್ದೀಯಾ, ಯಾಕೆ ಮಾಡೆಲ್‌ ಆಗೋದಕ್ಕೆ ಟ್ರೈ  ಮಾಡಬಾರದು?’ ಅಂತ ಕೇಳಿದರು. ಆಗ ನನಗೂ ಹೌದು ಅಂತನ್ನಿಸಿತು. ಪತ್ರಿಕೋದ್ಯಮ ಪದವಿಯನ್ನೂ ಮುಗಿಸಿದ್ದೆ. ತುವåಕೂರಿನಲ್ಲಿಯೇ ಒಂದು ಸ್ಥಳೀಯ ಜಾಹೀರಾತು ತಯಾರಕ ಸಂಸ್ಥೆಯ ಸಂದರ್ಶನಕ್ಕೆ ತೆರಳಿದೆ. 

Advertisement

ಅಲ್ಲಿ ನನ್ನ ಫೋಟೋಗಳನ್ನು, ನಾನು ಬರೆದ ಕೆಲವು ವ್ಯಂಗ್ಯಚಿತ್ರಗಳನ್ನು ನೋಡಿದರು. ಕೊನೆಗೆ ಮ್ಯಾನೇಜರ್‌ “ಓಕೆ’ ಅಂದರು. “ಆದರೆ, ಮಾಡೆಲ್‌ ಆಗಿ ಅಲ್ಲ, ಜಾಹೀರಾತು ತಯಾರಕನಾಗಿ’ ಎಂದರು. ನನಗಂತೂ ಖುಷಿಯೇ ಆಯ್ತು. ಕೆಲಸಕ್ಕೆ ಸೇರಿದ ದಿನದಿಂದ ಹೊಸ ಹೊಸ ವಿಧಾನಗಳಲ್ಲಿ, ಎಲ್ಲರೂ ಮೆಚ್ಚುವಂತೆ ಜಾಹೀರಾತುಗಳನ್ನು ತಯಾರಿಸಿದೆ. ತಿಂಗಳ ಸಂಬಳದ ದಿನ, ಮೊದಲ ಸಂಬಳವಾಗಿ 18 ಸಾವಿರ ರೂಪಾಯಿ ಕೈಗೆ ಬಂತು. ಅಂದು ನಾನು ಏನನ್ನೋ ಸಾಧಿಸಿಬಿಟ್ಟೆ ಎಂಬ ಖುಷಿ. ಮನಸ್ಸಿನಲ್ಲೇ ಕುಣಿದಾಡಿಬಿಟ್ಟಿದ್ದೆ. ನನ್ನನ್ನು ಆಡಿಕೊಂಡವರ ಮಾತಿಗೆ ಬ್ರೇಕ್‌ ಬಿತ್ತು. ಎಲ್ಲರಿಗೂ ಒಂದು ಒಳ್ಳೆಯ ಕಾಲ ಬರುತ್ತದೆ ಎಂಬುದು ನನ್ನ ವಿಷಯದಲ್ಲಂತೂ ನಿಜವಾಯಿತು. 

– ಹರೀಶ್‌ ಮಸ್ಕಲ್‌, ಚಿತ್ರದುರ್ಗ

ಕಸ, ಮುಸುರೆ, ಬೆವರು, ಬೈಗುಳ!
ನನಗೆ ಚೆನ್ನಾಗಿ ಓದಬೇಕೆಂಬ ಹಂಬಲವಿತ್ತು. ಆದರೆ, ಮನೆಯ ಆರ್ಥಿಕ ಪರಿಸ್ಥಿತಿ ಅದಕ್ಕೆ ಪೂರಕವಾಗಿರಲಿಲ್ಲ. ಹತ್ತನೇ ತರಗತಿ ಮುಗಿಸಿದ ಮೇಲೆ ಹುಬ್ಬಳ್ಳಿಗೆ ಹೋದೆ. ಅಲ್ಲಿನ ಹೋಟೆಲ್‌ ಒಂದರಲ್ಲಿ ತಟ್ಟೆ, ಲೋಟ ತೊಳೆಯುವ ಕೆಲಸಕ್ಕೆ ಸೇರಿಕೊಂಡೆ. ಅದುವೇ ನನ್ನ ಜೀವನದ ಮೊದಲ ಕೆಲಸ. ಟೇಬಲ್‌ನಿಂದ ಲೋಟ ತೆಗೆಯುವಾಗ, ತೊಳೆಯುವಾಗ ಕಣ್ಣಿನಲ್ಲಿ ಮುಂದೆ ಓದಬೇಕಂಬ ಹಂಬಲವೇ ಮಿನುಗುತ್ತಿತ್ತು. ಅಲ್ಲಿಂದಲೇ ಜೀವನದ ಪಾಠವೂ ಶುರು ಆಯ್ತು. ಮೊದಲ ತಿಂಗಳಿಗೆ 800 ರೂಪಾಯಿ ಸಂಬಳ. ಸಂಬಳ ಸಿಕ್ಕ ಖುಷಿಯೇನೋ ಆಯ್ತು, ಹಿಂದೆಯೇ ಓದಿದ್ದರೆ ಇದಕ್ಕಿಂತ ಹೆಚ್ಚಿನ ಸಂಬಳ ಪಡೆಯುವ ಕೆಲಸ ಮಾಡಬಹುದಿತ್ತೆಂದು ನೋವಾಯಿತು. 

800 ರೂ. ಚಿಕ್ಕ ಮೊತ್ತವಾಗಿದ್ದರೂ ಅಷ್ಟನ್ನು ಗಳಿಸಲು ಎಷ್ಟೊಂದು ಪರಿಶ್ರಮ ಪಡಬೇಕು ಎಂಬುದು ಆಗಲೇ ಅರ್ಥವಾಗಿದ್ದು. ದಿನವಿಡೀ ಬೆವರು ಸುರಿಸಿ, ಕಸ ಮುಸುರೆ ತೊಳೆದು, ಬೈಗುಳಗಳನ್ನು ತಿಂದು, ಏನೇನೋ ಅನ್ನಿಸಿಕೊಂಡದ್ದಕ್ಕೆಲ್ಲಾ ನನ್ನ ಸಂಬಳ ಸಮನಾಗಿರಲಿಲ್ಲ. ಆದರೆ ಅದುವೇ ದೊಡ್ಡ ಜೀವನಪಾಠ. ಸಂಬಳಕ್ಕೆ ಮಾತ್ರ ದುಡಿಯುವವನು ಯಾವತ್ತೂ ಇದ್ದಲ್ಲೇ ಇರ್ತುತಾನೆ. ಹೀಗಾಗಿ ನಾನು ಕಷ್ಟಪಟ್ಟು ಗಳಿಸಿದ ಮೊದಲ ಸಂಬಳ ಕಲಿಸಿದ ಪಾಠಕ್ಕೆ ನಾನು ಋಣಿ!

Advertisement

 ಸಂತೋಷ್‌ ಶೆಟ್ಟಿ 

Advertisement

Udayavani is now on Telegram. Click here to join our channel and stay updated with the latest news.

Next