ಯಶಸ್ಸಿನ ಹಾದಿ ತುಳಿದ ಎಲ್ಲರ ಹಿಂದೆಯೂ ಒಬ್ಬರಲ್ಲ, ಒಬ್ಬರು ಶಿಕ್ಷಕರ ಪ್ರಭಾವ ಇದ್ದೆ ಇರುತ್ತದೆ. ನಾನು ಸಹ ಇಂದು ಶಿಕ್ಷಕಿಯಾಗಿ ಸೇವೆ ಸಲ್ಲಿಸಲು ಒಬ್ಬರು ಮಹಾನ್ ಗುರುಗಳ ಪಾತ್ರ ದೊಡ್ಡದಿದೆ. ಶಿಕ್ಷಕರ ದಿನಾಚರಣೆಯ ಈ ಸುದಿನದಂದು ನಾನು ಅವರ ಬಗ್ಗೆ ಬರೆಯುತ್ತಿದ್ದೇನೆ. ಶಿಕ್ಷಕ ವೃತ್ತಿಗೆ ದಾರಿದೀಪವಾದ ನನ್ನ ನೆಚ್ಚಿನ ಗುರುಗಳಾದ ಸೀತಾರಾಮ್ ಮಧ್ಯಸ್ತರ ಬಗ್ಗೆ.
ಬಾಲ್ಯದಿಂದಲೂ ಶಿಕ್ಷಕಿಯಾಗುವ ಬಯಕೆ ಹೊತ್ತಿದ್ದ ನನಗೆ ಸರಕಾರಿ ಕೋಟಾದಡಿ ಆಯ್ಕೆಯಾಗಿದ್ದರೂ ಡಿ. ಎಡ್ ಮಾಡಲು ಹಣದ ಅವಶ್ಯಕತೆ ತುಂಬಾ ಇತ್ತು. ಆಗಷ್ಟೇ ದ್ವೀತೀಯ ಪಿಯುಸಿ ಫಲಿತಾಂಶ ಬಂದು ಕೆಲವು ದಿನಗಳು ಕಳೆದಿದ್ದವು ನಾನು ಬ್ಯಾಂಕಿನಲ್ಲಿ ಎಜುಕೇಶನ್ ಲೋನ್ ಬಗ್ಗೆ ವಿಚಾರಿಸಲು ಅಮ್ಮನೊಂದಿಗೆ ಹೋಗಿದ್ದೆ. ಆಗ ಬ್ಯಾಂಕ್ ಮ್ಯಾನೇಜರ್ ನಾವು ಏನಿದ್ದರೂ ಎಂಜಿನಿಯರಿಂಗ್, ಮೆಡಿಕಲ್ ಮಾಡುವವರಿಗೆ ಮಾತ್ರ ಲೋನ್ ಕೊಡುತ್ತೇವೆ. ಡಿ. ಎಡ್ ಮಾಡುವವರಿಗೆಲ್ಲ ಕೊಡುವುದಿಲ್ಲ ಎಂದು ಸಾರಾಸಗಟಾಗಿ ಹೇಳಿಬಿಟ್ಟರು. ಅವರ ಆ ಮಾತನ್ನು ಕೇಳಿ ನನ್ನ ಕಣ್ಣಾಲಿಗಳು ತುಂಬಿ ಹೋಗಿದ್ದವು. ಭಾರವಾದ ಮನಸ್ಸನ್ನು ಹೊತ್ತು ನನ್ನ ಅಮ್ಮನೊಂದಿಗೆ ನನ್ನ ಕಾಲೇಜಿನತ್ತ ಹೆಜ್ಜೆ ಹಾಕಿದೆ ನಾನು ಪಿಯುಸಿಯಲ್ಲಿದ್ದಾಗ ಒಂದು ಇತಿಹಾಸದ ಪರೀಕ್ಷೆಯನ್ನು ಬರೆದಿದ್ದೆ ಅದರ ಅಂಕಪಟ್ಟಿ ಕಾಲೇಜಿಗೆ ಬಂದಿತ್ತು. ಅದನ್ನು ತರಲು ನನಗೇಕೋ ಮನಸಾಗಲಿಲ್ಲ.
ಅಮ್ಮನ ಬಳಿ ನಾನು ಈ ಗೇಟಿನ ಹತ್ತಿರ ನಿಲ್ಲುತ್ತೇನೆ ನೀನು ಹೋಗಿ ನನ್ನ ಅಂಕ ಪಟ್ಟಿ ತೆಗೆದುಕೊಂಡು ಬಾ ಎಂದು ಅಮ್ಮನ ಬಳಿ ಹೇಳಿದೆ. ಅಮ್ಮ ಪ್ರಾಂಶುಪಾಲರಾದ ಸೀತಾರಾಮ್ ಮಧ್ಯಸ್ತ ಅವರ ಬಳಿ ಹೋದಾಗ ಅವರು ನಿಮ್ಮ ಮಗಳು ಏಕೆ ಬಂದಿಲ್ಲ ಎಂದು ಕೇಳಿದರಂತೆ ಆಗ ಅಮ್ಮ ನಡೆದ ವಿಚಾರವನ್ನೆಲ್ಲ ವಿವರಿಸಿ ಹೇಳಿದಾಗ ಆ ನನ್ನ ಗುರುಗಳು ನಾನಿರುವಲ್ಲಿಗೆ ಬಂದು ಹೇಳಿದ ಒಂದೇ ಒಂದು ಮಾತು ನಾನಿರುವವರೆಗೂ ನೀನೆಂದು ಹೆದರಬೇಡ ಮಗು ನಿನಗೆ ಎಜುಕೇಶನ್ ಲೋನ್ ನಾನು ಕೊಡಿಸುತ್ತೇನೆ ಎಂದು ಹೇಳಿ ಮಾರನೆಯ ದಿನ ಬ್ಯಾಂಕ್ ಗೆನನ್ನನ್ನು ಕರೆದುಕೊಂಡು ಹೋಗಿ ನನಗೆ ಲೋನ್ ಕೊಡಿಸಿದರು.
ಬ್ಯಾಂಕ್ ಮ್ಯಾನೇಜರ್ ಶೂರಿಟಿಯ ಬಗ್ಗೆ ಕೇಳಿದಾಗ ನನ್ನ ಗುರುಗಳು ಹೇಳಿದ ಮಾತು “ನನ್ನ ವಿದ್ಯಾರ್ಥಿಯ ಬಗ್ಗೆ ನನಗೆ. ಸಂಪೂರ್ಣ ನಂಬಿಕೆ ಇದೆ ಅವಳ ಸಾಲಕ್ಕೆ ನಾನು ಹೊಣೆ” ಎಂದು ಸಹಿ ಹಾಕಿದರು. ಅವರ ಮಾರ್ಗದರ್ಶನ ಹಾಗೂ ಹಾರೈಕೆ ಯಿಂದ ನಾನು ಛಲಬಿಡದೆ ಓದಿ ಈಗ ಶಿಕ್ಷಕಿಯಾಗಿದ್ದೇನೆ ವಿದ್ಯಾರ್ಥಿಗಳ ಬಗ್ಗೆ ಇಂತಹ ಬದ್ಧತೆಯನ್ನು ಹೊಂದಿದ ನಮ್ಮ ಸೀತಾರಾಮ್ ಮದ್ಯಸ್ತರಂಥಹ ಶಿಕ್ಷಕರು ನಮ್ಮ ಸಮಾಜಕ್ಕೊಂದು ಮಾದರಿ. ಆ ದೇವರು ಅವರಿಗೆ ಒಳ್ಳೆಯ ಆಯಸ್ಸು ಆರೋಗ್ಯವನ್ನು ಕೊಟ್ಟು ಕಾಪಾಡಲಿ ಶಿಕ್ಷಕರ ದಿನಾಚರಣೆಯ ಈ ಸುಸಂದರ್ಭದಲ್ಲಿ ನನ್ನ ಗುರುವಿಗೊಂದು ನಮನ.
ಪೂರ್ಣಿಮಾ ಶೆಟ್ಟಿ
ಕೋಟೇಶ್ವರ, ಕುಂದಾಪುರ